ಯುವಜನ/ಮಕ್ಕಳು

ಹರೆಯ ಅಂದ್ರೆ WORRYಯಾ?

ಆತ ವಿಪರೀತ ನಾಚಿಕೆ ಸ್ವಭಾವದವ. ಆದರೆ, ಪ್ರತಿಭಾವಂತ. ಪಿಯುಸಿ ಎರಡನೇ ವರ್ಷಕ್ಕೆ ಕಾಲಿಡುವವರೆಗೂ ತರಗತಿಯಲ್ಲಿ...

ಹರೆಯ ಅಂದ್ರೆ WORRYಯಾ?
Published On :

ಆತ ವಿಪರೀತ ನಾಚಿಕೆ ಸ್ವಭಾವದವ. ಆದರೆ, ಪ್ರತಿಭಾವಂತ. ಪಿಯುಸಿ ಎರಡನೇ ವರ್ಷಕ್ಕೆ ಕಾಲಿಡುವವರೆಗೂ ತರಗತಿಯಲ್ಲಿ ಆತನೇ ಫಸ್ಟ್. ಮಗನ ಸಾಧನೆ ನೋಡಿ ಮುಗ್ಧ ಪೋಷಕರಿಗೂ ಹೆಮ್ಮೆ. ಇದೇ ಕಾರಣಕ್ಕೆ ಮಗನ ಉತ್ತಮ ಭವಿಷ್ಯಕ್ಕಾಗಿ ಕಷ್ಟಪಟ್ಟು ಪ್ರತಿಷ್ಠಿತ ಕಾಲೇಜೊಂದರಲ್ಲಿ ಸೀಟ್ ಕೊಡಿಸಿದರು. ಜತೆಗೆ ಕೈಯಲ್ಲೊಂದು ಮೊಬೈಲ್ ಇಟ್ಟುಬಿಟ್ಟರು. ಅದೇ ಅವರು ಮಾಡಿದ ಏಕೈಕ ತಪ್ಪು. ಯಾವತ್ತು ಕೈಗೆ ಮೊಬೈಲ್ ಸಿಕ್ತೋ ಅವತ್ತಿನಿಂದಲೇ ಮಗನ ಏಳ್ಗೆಗೆ ಮೂಗುದಾರ ಬಿತ್ತು. ವಯಸ್ಸು, ಹುಮ್ಮಸ್ಸು ಎರಡೂ ಜತೆಯಾಗಿತ್ತು ನೋಡಿ. ಹೇಗೋ ಧೈರ್ಯ ಮಾಡಿ ಮೊಬೈಲ್ ಮೂಲಕವೇ ಪರಿಚಯವಾದ ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿದ. ಆಕೆಯೋ ಈತನ ಪ್ರೀತಿಯನ್ನು 'ಟೇಕ್ ಫಾರ್ ಗ್ರ್ಯಾಂಟೆಡ್‌' ಆಗಿ ತೆಗೆದುಕೊಂಡಳು. ಕೆಲ ತಿಂಗಳ ಬಳಿಕ ಇನ್ನೊಬ್ಬನ ಜತೆ ಸುತ್ತಾಡಲು ಶುರು ಮಾಡಿದಳು. ಅಷ್ಟೇ ಸಾಕಾಯ್ತು. ಪ್ರೇಮ ವೈಫಲ್ಯದ ನೋವು ತಡೆದುಕೊಳ್ಳಲಾಗದೆ ಹುಡುಗ ನೇಣಿಗೆ ಶರಣಾದ.
ಹೀಗೆ ಪ್ರೇಮ ವೈಫಲ್ಯಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ, ಪ್ರಯತ್ನಿಸುವ ಸಾಕಷ್ಟು ಪ್ರಕರಣಗಳು ಪತ್ರಿಕೆಗಳಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಆಕರ್ಷಣೆಯನ್ನೇ ಗಾಢ ಪ್ರೇಮವೆಂದು ಭ್ರಮಿಸುವ ಯುವಜನರು ನಿಜ ಗೊತ್ತಾಗುವ ಹೊತ್ತಿಗೆ ಜೀವನವೇ ಮುಗಿದೇ ಹೋಯ್ತು ಅಂತಾಡುತ್ತಾರೆ. ಹಿಂದೆ ಮುಂದೆ ಯೋಚಿಸದೆ ಸಾವಿನ ನಿರ್ಧಾರಕ್ಕೆ ಬರುತ್ತಾರೆ. ಈ ವೇಳೆ ಕಷ್ಟಪಟ್ಟು ಹೆತ್ತು ಹೊತ್ತು, ತುತ್ತು ತಿನ್ನಿಸಿ ಬೆಳೆಸಿದ ಪೋಷಕರ ನೆನಪಾಗುವುದೇ ಇಲ್ಲ. ಆ ಕ್ಷಣಿಕ ಭಾವನೆಗಳ ಬೆನ್ನತ್ತಿ ಸಾವಿಗೆ ಶರಣಾದಾಗ ಪೋಷಕರು ಅನುಭವಿಸುವ ಯಾತನೆ ಅವರಿಗೆ ಅರ್ಥವಾಗುವುದೇ ಇಲ್ಲ.
ವಿದ್ಯಾರ್ಥಿಗಳ ಈ ಮನಸ್ಥಿತಿಗೆ ಕಾರಣವೂ ಇಲ್ಲದಿಲ್ಲ. ಹೇಳಿಕೇಳಿ ಹದಿಹರೆಯ. ವಯೋಸಹಜ ತಲ್ಲಣಗಳು, ಖಿನ್ನತೆಗಳನ್ನು ನಿಭಾಯಿಸುವಷ್ಟು ಸಾಮರ್ಥ್ಯ ಈ ವಯಸ್ಸಿನ ಬಹುತೇಕರಿಗೆ ಇರುವುದಿಲ್ಲ. ಎಷ್ಟೋ ವೇಳೆ ಇಂಥ ಪರಿಸ್ಥಿತಿಗಳಲ್ಲಿ ಅವರಿಗೆ ಕುಟುಂಬದ ಬೆಂಬಲವೂ ಸಿಗುವುದಿಲ್ಲ. ಕೊನೆಗೆ ಸಮಸ್ಯೆಯಿಂದ ಹೊರಬರಲು ಕಾಣುವುದು ಒಂದೇ ದಾರಿ. ಅದು ಸಾವು.

ಪೋಷಕರು ಏನ್ಮಾಡಬಹುದು?
-    ಹದಿಹರೆಯದ ಮಕ್ಕಳು ಪ್ರೀತಿ, ಪ್ರೇಮ, ಪ್ರಣಯ ಎಂದೆಲ್ಲ ಪರಿತಪಿಸೋದು ಸಹಜ. ಅದು ನಿಮ್ಮ ಗಮನಕ್ಕೆ ಬಂದಲ್ಲಿ ಆಕಾಶವೇ ತಲೆ ಮೇಲೆ ಬಿದ್ದಂತೆ ವರ್ತಿಸಬೇಡಿ. ಪ್ರೀತಿಯಿಂದ ಬುದ್ಧಿಹೇಳಿ.
-    ಗೊಂದಲ, ದ್ವಂದ್ವಗಳಿಂದ ಬಳಲುತ್ತಿರುವ ಮಕ್ಕಳಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಕರಿಸಿ.
-    ಮಗಳು ಪ್ರೀತಿಯ ಬಲೆಗೆ ಬಿದ್ದಳು ಎಂದ ಕೂಡಲೇ ಆಕೆ ನಿಮ್ಮಿಂದ ದೂರವಾಗಿಯೇ ಬಿಟ್ಟಳು ಎಂದರ್ಥವಲ್ಲ. ಆಕರ್ಷಣೆ ಮತ್ತು ನೈಜ ಪ್ರೇಮದ ನಡುವಿನ ವ್ಯತ್ಯಾಸವನ್ನು ತಿಳಿ ಹೇಳಿ.
-ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳನ್ನು ವಿಪರೀತವಾಗಿ ದಂಡಿಸಬೇಡಿ. ಪ್ರೀತಿಯಿಂದ ಬುದ್ಧಿವಾದ ಹೇಳಿ.
-    ಮಕ್ಕಳ ಎದುರು ಜಗಳವಾಡಬೇಡಿ. ಇವು ಅವರಲ್ಲಿ ಅಭದ್ರತಾ ಭಾವನೆ ಬೆಳೆಯಲು ಅವಕಾಶ ಮಾಡಿಕೊಡುತ್ತವೆ.
-    ಬುದ್ಧಿವಾದ ಹೇಳುವಾಗಲೂ ಸಮಯ, ಸಂದರ್ಭ ಹಾಗೂ ಮಕ್ಕಳ ಮನಸ್ಥಿತಿ ಅರಿತು ತಿಳಿಹೇಳಿ. ಇಲ್ಲದೇ ಹೋದಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
-ಮಕ್ಕಳು ಮಾಮೂಲಿಗಿಂತ ಮೌನವಾಗಿದ್ದಲ್ಲಿ, ಇತರೆ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಲ್ಲಿ ಹೆಚ್ಚು ಅಲರ್ಟ್ ಆಗಿ.
-ಆತ್ಮಹತ್ಯೆ ಆಲೋಚನೆಗಳ ಕುರಿತು ಸಣ್ಣ ಸುಳಿವು ಸಿಕ್ಕರೂ ಕೌನ್ಸೆಲರ್ ಬಳಿ ಕರೆದೊಯ್ಯಿರಿ. ಸೂಕ್ತ ಚಿಕಿತ್ಸೆ ಕೊಡಿಸಿ.

-ವಿಜಯ್ ಆರ್. ಹೊಸನಗರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.