ನೀವೂ ಒಂಟಿಯಾ?
ತೀರಾ ಕಾಡುವ ಒಬ್ಬಂಟಿತನವು ರೋಗ ಎಂದು ಬಿಡುತ್ತಾರೆ ವೈದ್ಯರು.

ಏಕಾಂತಪತಿಗಳ ಮಾನಸಲೋಕ
ತೀರಾ ಕಾಡುವ ಒಬ್ಬಂಟಿತನವು ರೋಗ ಎಂದು ಬಿಡುತ್ತಾರೆ ವೈದ್ಯರು. ಅಲ್ಲೊಂದು ಮಾನಸಿಕ ಸಮಸ್ಯೆ ಇರಬೇಕು, ಹಾಗಾಗಿಯೇ ಗುಂಪಿನಲ್ಲಿ ಬೆರೆಯದ ಏಕಂತಾಧಿಪತಿಗಳು ಮನಸಲ್ಲೇ ಮಂಡಿಗೆ ತಿನ್ನುತ್ತಾರೆ ಎಂದು ಬಿಡುತ್ತಾರೆ. ವೈದ್ಯಕೀಯ ಜಗತ್ತು ಹೇಳೋದೇ ಹಾಗೆ. ಕಾಡುವ ಒಬ್ಬಂಟಿತನ ಹಲವು ಮಾನಸಿಕ ರೋಗಗಳಿಗೆ ಕಾರಣವಾಗುತ್ತೆ. ಒತ್ತಡ ಹೆಚ್ಚಿಸುತ್ತೆ, ಚಂಚಲತೆ, ಕ್ಲೇಷ... ಹೀಗೆ ನಾನಾ ರೋಗಗಳಿಗೆ ಕಾರಣವಾಗುತ್ತೆ. ಆದರೆ ಒಬ್ಬಂಟಿತನದಿಂದ ಲಾಭವೂ ಇದೆ ಎನ್ನುತ್ತವೆ ಕೆಲ ಅಧ್ಯಯನಗಳು.
ಏನಿದು ಒಬ್ಬಂಟಿತನ?
ಈ ಸಮಾಜದಲ್ಲಿ ನನ್ನ ಜತೆ ಯಾರೂ ಇಲ್ಲ, ಎಲ್ಲರೂ ದೂರ. ನಾನೊಬ್ಬನೇ. ನನಗೆ ನಾನೇ ಎಂದುಕೊಂಡು ಜೀವನ ಸಾಗಿಸುವುದೇ ಒಬ್ಬಂಟಿತನ. ಇವರು ಗುಂಪಿನಲ್ಲಿ ಬೆರೆಯಲ್ಲ. ಯಾರನ್ನೂ ಮಾತನಾಡಿಸಲ್ಲ. ವೈದ್ಯರ ಪ್ರಕಾರ, ಇವರು ಕೆಲ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಗುಂಪಿನಲ್ಲಿ ಸೇರೋಕೂ ಅವರಿಗೆ ಕೆಲ ಭಯಗಳಿರುತ್ತವೆ. ಹೀಗಾಗಿ ಅವರು ಒಬ್ಬಂಟಿಗಳಾಗಿ ಬಿಡುತ್ತಾರೆ.
ಆತ್ಮಹತ್ಯೆ ಚಿಂತನೆಗಳೂ ಬರುತ್ವೆ
ತೀರಾ ಒಬ್ಬಂಟಿತನ ಕಾಡೋವರೆಗೆ ಬಿಟ್ಟುಕೊಳ್ಳಲೇಬಾರದು. ವಿಕೋಪಕ್ಕೆ ಹೋದರೆ ಆತ್ಮಹತ್ಯೆಯಂಥ ಚಿಂತನೆಗಳೂ ಬರುತ್ತವೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ತೀರಾ ಒಬ್ಬಂಟಿಯಾಗಿರಲೇಬೇಡಿ ಎಂದು ಹೇಳುತ್ತಾರೆ.
ಫೇಸ್‌ಬುಕ್, ಫ್ರೆಂಡ್ಸ್
ಒಬ್ಬಂಟಿತನದ ಮನೋಭಾವದಿಂದ ಹೊರಬರೋದು ಕಷ್ಟ. ಒಬ್ಬಂಟಿತನ ಕಾಡುತ್ತಿದೆ ಎಂದು ಗೊತ್ತಾಗುವಷ್ಟರಲ್ಲೇ ಇದರಿಂದ ಹೊರ ಬರೋದು ವಾಸಿ. ತೀರಾ ಹೆಚ್ಚೇ ಒಬ್ಬಂಟಿತನ ಅನಿಸುತ್ತಿದೆ ಎಂದಾಗ ಒಂದಷ್ಟು ಕಷ್ಟ. ಆದರೆ, ಆರಂಭದಲ್ಲೇ ಜೀವನ ಕ್ರಮ ಬದಲಿಸಿಕೊಂಡರೆ ಸಮಸ್ಯೆ ಇಲ್ಲ. ಇರೋ ಫ್ರೆಂಡ್ಸ್ ಜತೆ ಚಾಟ್, ಮನೆಯವರ ಜತೆ ಮಾತುಕತೆ, ಇಂಟರ್ನೆಟ್‌ನಲ್ಲಿ ಹೊಸ ಫ್ರೆಂಡ್ಸ್ ಹುಡುಕಿಕೊಳ್ಳುವ ಕೆಲಸ ಮಾಡಿದರೆ ಒಬ್ಬಂಟಿತನವನ್ನು ಒದ್ದೋಡಿಸುವುದು, ಅದರಿಂದ ಹೊರ ಬರುವುದು ಕಷ್ಟವೇನಲ್ಲ. ಫೇಸ್‌ಬುಕ್ ಬಂದ ಮೇಲೆ ಒಬ್ಬಂಟಿತನಕ್ಕೆ ಅರ್ಥವೇ ಇಲ್ಲ. ಫೇಸ್‌ಬುಕ್ ಮುಂದೆ ಕುಳಿತುಬಿಟ್ಟರೆ ನಮ್ಮೆದುರು ಸಾವಿರಾರು ಫ್ರೆಂಡ್ಸ್ ಬಂದು ನಿಲ್ಲುತ್ತಾರೆ. ನೀವು ಅವರೊಂದಿಗೆ ಮಾತನಾಡುವ ಜೊತೆಯಲ್ಲೇ ನಿಮ್ಮ ಅನಿಸಿಕೆಗಳನ್ನೂ ಶೇರ್ ಮಾಡಿಕೊಂಡುಬಿಡಬಹುದು.
ವಿದ್ಯಾರ್ಥಿಗಳಿಗೆ ವರ!
ಕೆಲ ಅಧ್ಯಯನಗಳ ಪ್ರಕಾರ ಒಬ್ಬಂಟಿತನ ಕೆಲವೊಮ್ಮೆ ಶಾಪವಾದರೆ, ಕೆಲವೊಮ್ಮೆ ವರವೂ ಹೌದು. ವಿದ್ಯಾರ್ಥಿ ದೆಸೆಯಲ್ಲಿ ಮಾತ್ರ ಈ ಒಬ್ಬಂಟಿತನ ಅನ್ನೋದು ಒಂದಷ್ಟು ದಿನಗಳ ಮಟ್ಟಿಗಾದರೂ ಕಾಡಲೇಬೇಕು. ಅದರಲ್ಲೂ ಪರೀಕ್ಷಾ ಸಂದರ್ಭಗಳಲ್ಲಿ. ಈ ವೇಳೆ ನೀವು ಫ್ರೆಂಡ್ಸ್, ಪಾರ್ಟಿ, ಇಂಟರ್ನೆಟ್ ಅಂತ ಕುಳಿತರೆ ಪುಸ್ತಕ ಮೂಲೆ ಹಿಡಿಯುತ್ತವೆ. ಓದು ಹಾಳಾಗುತ್ತದೆ. ಆಗ ನೀವು ಏಕಾಂತಾಧಿಪತಿ ಆದರೆನೇ ಒಳ್ಳೆಯದು.
ಇದು ಫೆಬ್ರವರಿ ಮುಗಿದು, ಮಾರ್ಚ್ ಆರಂಭದ ಕಾಲ. ಇನ್ನೇನು ಎಲ್ಲಾ ಪರೀಕ್ಷೆಗಳು ಆರಂಭವಾಗುವ ಸಮಯ. ಈ ಸಂದರ್ಭದಲ್ಲಿ ನಿಮ್ಮ ಏಕಾಂತವನ್ನು ಓದುವುದಕ್ಕಾಗಿ ಬಳಸಿಕೊಳ್ಳಿ. ಚಾಟ್ ಚಿತ್ ಮಾಡಿ, ಫೇಸ್‌ಬುಕ್ ಕಡೆ ಮುಖ ಮಾಡಬೇಡಿ. ತುಂಬಾ ಬೇಸರವಾದಾಗ, ಕಾಲೇಜಿನ ಅಥವಾ ಶಾಲೆಯ ಗೆಳೆಯ, ಗೆಳತಿಯರನ್ನೇ ಕರೆದು ಗ್ರೂಪ್ ಡಿಸ್ಕಷನ್ ಮಾಡಿ. ಏಕಾಂತ ಹೊರಟು ಹೋಗುತ್ತೆ. ಮೈಂಡ್ ಕೂಡ ಫ್ರೆಶ್ ಆಗುತ್ತೆ. ಇದಿಷ್ಟೇ ಅಲ್ಲ, ಕೆಲಮೊಮ್ಮೆ ಏಕಾಂಗಿತನ ಒಳ್ಳೊಳ್ಳೆ ಐಡಿಯಾಗಳಿಗೂ ದಾರಿಯಾಗುತ್ತಂತೆ. ಒಬ್ಬನೇ ಕುಳಿತು ಯೋಚಿಸಿದಾಗ ತಲೆಯಲ್ಲಿ ಮೂಡುವ ಚಿಂತನೆಗಳು ಗುಂಪಿನಲ್ಲಿದ್ದಾಗ ಬರೋಲ್ಲ. ಈ ಸಂದರ್ಭಗಳಲ್ಲೂ ಏಕಾಂತವನ್ನು ಸದುಪಯೋಗಪಡಿಸಿಕೊಳ್ಳಬಹುದು ಅಲ್ವೇ?
- ರೋಹಿಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


