ಜಸ್ಟ್ ಟ್ರೈ...
ಪರೀಕ್ಷೆ ಹತ್ತಿರ ಬರುತ್ತಿದೆ. ಓದುವುದು ಇನ್ನೂ ಸಾಕಷ್ಟಿದೆ. ಆದರೆ ಉತ್ತಮ ಅಂಕ ತೆಗೆಯಬೇಕಿದೆ. ನಿದ್ದೆ ಬಿಟ್ಟು ಓದಿದ್ರೆ ಆದೀತಾ ಅಥವಾ...

ಪರೀಕ್ಷೆ ಹತ್ತಿರ ಬರುತ್ತಿದೆ. ಓದುವುದು ಇನ್ನೂ ಸಾಕಷ್ಟಿದೆ. ಆದರೆ ಉತ್ತಮ ಅಂಕ ತೆಗೆಯಬೇಕಿದೆ. ನಿದ್ದೆ ಬಿಟ್ಟು ಓದಿದ್ರೆ ಆದೀತಾ ಅಥವಾ ಮಧ್ಯಾಹ್ನ ಮಲಗಿ ರಾತ್ರಿಯೆಲ್ಲಾ ನಿದ್ದೆಗೆಟ್ಟು ಓದಿದ್ರೆ ಹೇಗೆ? ಪರೀಕ್ಷೆ ಸಮೀಪ ಬಂದಾಗ ವಿದ್ಯಾರ್ಥಿಗಳನ್ನು ಇಂಥ ಗೊಂದಲ ಕಾಡುವುದು ಸಹಜ. ಪರೀಕ್ಷೆ ಒತ್ತಡ ನಿಭಾಯಿಸೋದು ಹೇಗೆನ್ನುವ ಭಯ ಕಾಡಿದಾಗ ವಿದ್ಯಾರ್ಥಿಗಳನ್ನು ಇಂಥ ಗೊಂದಲ ಕಾಡುವುದು ಸ್ವಾಭಾವಿಕ. ಅಂಥ ವಿದ್ಯಾರ್ಥಿಗಳು ಒತ್ತಡ ನಿಭಾಯಿಸೋದು ಹೇಗೆ? ಇಲ್ಲಿವೆ ಒಂದಷ್ಟು ಸರಳ ಉಪಾಯಗಳು. ಟ್ರೈ ಮಾಡಿ ನೋಡಿ...
ಬ್ರೇಕ್‌ಕೆ ಬಾದ್...
ನೀವು ಇಡೀ ದಿನ ಓದಿದ್ದು ಪರೀಕ್ಷೆ ದಿನ ನೆನಪಾಗುವುದೂ ಅಷ್ಟೇ ಮುಖ್ಯ ಅಲ್ವಾ? ಓದಿಗೆ ಏಕಾಗ್ರತೆಯೂ ಮುಖ್ಯ ತಾನೆ? ಹಾಗಿದ್ದ ಮೇಲೆ ಓದಿನ ಮಧ್ಯೆ ಒಂದಷ್ಟು ನಿಮಿಷ ಬ್ರೇಕ್ ತೆಗೆದುಕೊಳ್ಳಿ. ಏಕಾಗ್ರತೆ ತಪ್ಪುತ್ತಿದೆ ಅನ್ನುವಾಗ ಒಂದೆರಡು ನಿಮಿಷ ಎದ್ದು ವಾಕ್ ಮಾಡಿಕೊಂಡು ಬನ್ನಿ. ಯಾವುದಾದರೂ ಹಿತವಾದ ಸಂಗೀತ ಆಲಿಸಿ. ನಂತರ ಓದು ಮುಂದುವರಿಸಿ. ಮನಸ್ಸು, ಮೆದುಳಿನ ಮೇಲೆ ಒತ್ತಡ ಹಾಕಬೇಡಿ. ಹಾಗಂತ ಟೀವಿ ನೋಡುವುದಾಗಲಿ, ರಾಕ್ ಮ್ಯೂಸಿಕ್ ಕೇಳುವುದಾಗಲಿ ಮಾಡಬೇಡಿ.
ನಿದ್ದೆ ಬಿಡಬೇಡಿ
ಪರೀಕ್ಷೆ ಹತ್ತಿರ ಬಂತು ಅಂತ ನಿದ್ದೆಗೆಟ್ಟು ಓದುವ ತಪ್ಪು ಮಾಡಬೇಡಿ. ಯಾಕೆಂದರೆ ನಿಮ್ಮ ಮನಸ್ಸು ಮತ್ತು ದೇಹ ಎಲ್ಲವೂ ಸರಿಯಾಗಿರುತ್ತದೆ. ದೇಹಕ್ಕೂ ರೆಸ್ಟ್ ಬೇಕು ಅನ್ನುವುದು ನೆನಪಿನಲ್ಲಿಟ್ಟುಕೊಳ್ಳಿ. ನಿಯಮಿತವಾಗಿ ಆರರಿಂದ ಏಳು ತಾಸು ನಿದ್ದೆ ಮಾಡಿ. ಯಾವುದೇ ಕಾರಣಕ್ಕೂ ಮಲಗುವ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಡಿ. ಸಾಧ್ಯವಿದ್ದರೆ ರಾತ್ರಿ ಬೇಗ ಮಲಗಿ. ಬೆಳಗ್ಗೆ ಬೇಗ ಏಳಿ. ಮಲಗುವ ಒಂದು ಗಂಟೆ ಮೊದಲೇ ಓದಿಗೆ ಗುಡ್‌ಬೈ ಹೇಳಿ.
ಏನು ತಿನ್ಬೇಕು?
ಸಾಕಷ್ಟು ವಿಟಮಿನ್ ಮತ್ತು ಪ್ರೊಟೀನ್ ಅಂಶಗಳಿರುವ ಸೊಪ್ಪು, ತರಕಾರಿ, ತಾಜಾ ಹಣ್ಣುಹಂಪಲು ಸೇವಿಸಿ. ಇದು ನಿಮ್ಮ ಮೆದುಳನ್ನು ಚುರುಕಾಗಿಡಲು ಸಹಾಯ ಮಾಡುತ್ತದೆ. ಸಾಧ್ಯವಾದಷ್ಟು ಹೆಚ್ಚಿನ ಕೊಬ್ಬಿನಾಂಶ ಇರುವ ಆಹಾರದಿಂದ ದೂರ ಇರಿ. ಮಿತಿಗಿಂತ ಹೆಚ್ಚು ಕಾಫಿ, ಟೀ ಬೇಡ. ಪರೀಕ್ಷೆ ಸಮಯದಲ್ಲಿ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.
ಅನಗತ್ಯ ವಿಚಾರಗಳಿಗೆ ತಲೆಕೊಡಬೇಡಿ
ಪರೀಕ್ಷೆ ಹತ್ತಿರ ಬಂತು ಅಂದ್ರೆ ಪಠ್ಯ ವಿಚಾರ ಬಿಟ್ಟು ಉಳಿದ್ಯಾವ ವಿಚಾರಕ್ಕೂ ತಲೆಕೆಡಿಸಿಕೊಳ್ಳಬೇಡಿ. ಓದಿಗೆ ಅಡ್ಡಿ ಮಾಡುವ, ಓದಿನಿಂದ ಗಮನ ಬೇರೆಡೆ ಸೆಳೆಯುವ ಎಲ್ಲಾ ರೀತಿಯ ಚಟುವಟಿಕೆಗಳಿಂದ ದೂರವೇ ಇರಿ.
ಧನಾತ್ಮಕ ಚಿಂತನೆ
ಪರೀಕ್ಷೆ ಸಮಯದಲ್ಲಿ ಧನಾತ್ಮಕವಾಗಿ ಯೋಚಿಸುವ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಋಣಾತ್ಮಕ ವಿಚಾರಗಳನ್ನು ದೂರ ಇಡಿ. ಎಲ್ಲರೂ ಪರೀಕ್ಷೆಗೆ ವ್ಯವಸ್ಥಿತವಾಗಿ ಸಿದ್ಧತೆ ನಡೆಸಿದ್ದಾರೆ, ನಾನಿನ್ನೂ ಓದಬೇಕಾದದ್ದು ಸಾಕಷ್ಟು ಇದೆ ಎನ್ನುವ ಭಾವನೆ ಬೇಡ. ಪರೀಕ್ಷೆಯಲ್ಲಿ ನಾನು ಉತ್ತಮ ಅಂಕಗಳನ್ನು ತೆಗೆಯುತ್ತೇನೆ ಎನ್ನುವ ಮನೋಭಾವ ಬೆಳೆಸಿಕೊಳ್ಳಿ. ಹಿಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ದನ್ನು ನೆನಪು ಮಾಡಿಕೊಳ್ಳಿ.
ಯೋಗ, ಧ್ಯಾನ
ಯೋಗ ಮತ್ತು ಧ್ಯಾನ ಮಾಡಿ. ಇದು ನಿಮ್ಮ ಮನಸ್ಸು ಮತ್ತು ದೇಹವನ್ನು ರಿಲ್ಯಾಕ್ಸ್ ಮೂಡಿನಲ್ಲಿಡುತ್ತದೆ. ಒತ್ತಡ ಕಡಿಮೆ ಮಾಡುತ್ತದೆ. ಓದು ಮುಗಿದ ಬಳಿಕ ಸಣ್ಣದೊಂದು ವಾಕ್ ಮಾಡಿ. ದೇವರಲ್ಲಿ ನಂಬಿಕೆ ಇದ್ದರೆ ಓದಿಗೆ ಮೊದಲು ಪ್ರಾರ್ಥನೆ ಮಾಡಿ. ಇದು ಒತ್ತಡ ನಿವಾರಣೆಗೆ ಸಹಕಾರಿ.
- ಎ.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


