ಕೆಲ್ಸ ಖಾಲಿ ಇದೆ!

ಯಾರಿಗೆ ಸಾಲುತ್ತೆ ಸಂಬಳ..?
ಇದು ನಗರದಲ್ಲಿ ಜೀವನ ಸಾಗಿಸುತ್ತಿರುವ ಹಲವರ ಪ್ರಶ್ನೆ.
ಹೌದು. ನಗರದಲ್ಲಿ ಜೀವನ ಸಾಗಿಸುತ್ತಿರುವ ಬಹುತೇಕ ಮಂದಿಗೆ ತಿಂಗಳ ಸಂಬಳ ಯಾವುದಕ್ಕೂ ಸಾಲದು. ತಿಂಗಳ ಮೊದಲ ವಾರದಲ್ಲಿ ಸಂಬಳವೇನೋ ಬಂದಿರುತ್ತದೆ. ಆದರೆ, ಕೈಗೆ ಸಂಬಳ ಬಂದ ಒಂದೇ ವಾರಕ್ಕೆ ಕಿಸೆ ಖಾಲಿಯಾಗುವುದರಿಂದ ಮೂರನೆ ವಾರಕ್ಕೇ 'ಮಂತ್ ಎಂಡ್' ಎಂಬಂತೆ ಅನಿಸತೊಡಗುತ್ತದೆ.
ಪರಿಸ್ಥಿತಿ ಹೀಗಿರುವಾಗ ಬೆಳಗಿನಿಂದ ಸಂಜೆವರೆಗೆ ಎಷ್ಟು ದುಡಿದರೂ ಅಷ್ಟೇ ಎಂಬ ಭಾವನೆ ಮೂಡಿ ಬದುಕೇ ಬೇಸರ ಎಂದೆನಿಸುವುದು ಸಹಜ. ಆದರೆ, ಬದುಕಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಉಳ್ಳವರು ಇದಕ್ಕೆಲ್ಲ ಅಂಜುವುದಿಲ್ಲ. ಈಸಬೇಕು, ಇದ್ದು ಜೈಸಬೇಕು ಎಂದುಕೊಂಡು ಇಂಥ ಪರಿಸ್ಥಿತಿ ನಿಭಾಯಿಸಲು 'ಪರ್ಯಾಯ ಮಾರ್ಗ' ಕಂಡುಹಿಡಿದುಕೊಳ್ಳುತ್ತಾರೆ. ಹಾಗೆ ಇದ್ದ ಕೆಲಸ ಬಿಡದೆ, ಅದರ ಜತೆಗೆ ಮತ್ತೊಂದು ಪಾರ್ಟ್ ಟೈಂ ಕೆಲಸ ನಿಭಾಯಿಸುತ್ತಾ ಬದುಕು ಬಂಗಾರ ಮಾಡಿಕೊಂಡ ಛಲದಂಕಮಲ್ಲರು ಅನೇಕರಿದ್ದಾರೆ. ಅಂತಹ ಛಲ ಉಳ್ಳವರಿಗಾಗಿಯೇ ಒಂದಷ್ಟು ಕೆಲಸಗಳಿವೆ.
ಆರಂಭದಲ್ಲೇ ವ್ಹೈಟ್ ಕಾಲರ್ ಕೆಲಸ, ಐದಂಕಿ ಸಂಬಳ ಸಿಗಬೇಕು ಎಂದು ಚಾತಕಪಕ್ಷಿಯಂತೆ ಕಾಯುತ್ತಾ ಕುಳಿತುಕೊಳ್ಳುವರಿಗೆ ಇವು ಒಪ್ಪಿಗೆಯಾಗದೇ ಇರಬಹುದು. ಆದರೆ, ಬದುಕಿಗೆ ಸರಿಯಾದ ಒಂದು ಚೌಕಟ್ಟು, ನಿರೀಕ್ಷಿತ ನೆಲೆ ಸಿಗುವವರೆಗೂ ನ್ಯಾಯಬದ್ಧವಾದ ಎಂತಹ ಕೆಲಸ ಬೇಕಾದರೂ ಮಾಡಬಲ್ಲೆ ಎಂಬ ಇಚ್ಛಾಶಕ್ತಿ ಉಳ್ಳವರಿಗೆ ಈ ಕೆಲಸಗಳು ನಿಜಕ್ಕೂ ಊರುಗೋಲು.
ಇಂಥ ಉದ್ಯೋಗಗಳು ದಡ ಸೇರಲು ಬಳಸುವ ತೆಪ್ಪದಂತೆ. ಜೀವನಪರ್ಯಂತ ಈ ಕೆಲಸಗಳನ್ನೇ ನೆಚ್ಚಿಕೊಂಡು ಇರುವುದು ಸಾಧ್ಯವಿಲ್ಲ. ಆದರೆ, ಬದುಕು ದಡ ಸೇರುವವರೆಗೆ ಮನಸ್ಸಿಗೆ ಸ್ವಲ್ಪ ತೆಪ್ಪಗಿರಲು ಹೇಳಿ ಇಂಥವುಗಳನ್ನು ತೆಪ್ಪದ ರೀತಿಯಲ್ಲಿ ಬಳಸಿಕೊಂಡರೆ ತಪ್ಪೇನಲ್ಲ. ಅಂಥ ಕೆಲವು ಉದಾಹರಣೆ ಇಲ್ಲಿವೆ...
ಹೋಟೆಲ್ ಕೆಲಸ
ನಗರದಲ್ಲಿ ಕೆಲಸ ಮಾಡುತ್ತಿರುವ ಅನೇಕರಿಗೆ ಹೋಟೆಲ್ ಪರ್ಯಾಯ ಸಂಪಾದನೆಯ ಮಾರ್ಗ ಆಗುವ ಜತೆಗೆ ಆಶ್ರಯತಾಣವೂ ಆಗಬಲ್ಲದು. ಯಾವುದೇ ಒಬ್ಬ ವ್ಯಕ್ತಿ ಸಾಮಾನ್ಯ ಕಚೇರಿ ಅವಧಿಯಲ್ಲಿ ಅಂದರೆ ಬೆಳಗ್ಗೆ 9 ಅಥವಾ 10 ರಿಂದ ಸಂಜೆ 5 ಅಥವಾ 6ರ ವರಗೆ ಕೆಲಸ ಮಾಡುತ್ತಿದ್ದು, ಇನ್ನೂ ಹೆಚ್ಚು ಹಣ ಗಳಿಸಬೇಕು ಎಂಬ ಬಯಕೆ ಇದ್ದರೆ ಹೋಟೆಲ್ ಅನ್ನು ಆಶ್ರಯಿಸಬಹುದು. ಈಗ ಬಹುತೇಕ ಎಲ್ಲ ಹೋಟೆಲ್‌ಗಳಲ್ಲೂ ಕೆಲಸಗಾರರ ಅಗತ್ಯ ಇದೆ. ಸಂಜೆ ಕಚೇರಿ ಅವಧಿ ಮುಗಿದ ಬಳಿಕ ಯಾವುದಾದರೂ ಹೋಟೆಲ್‌ನಲ್ಲಿ ಕ್ಯಾಶಿಯರ್, ಸುಪರ್‌ವೈಸರ್, ಸಪ್ಲೈಯರ್, ಸ್ಟೋರ್ ಕೀಪರ್, ರಿಸೆಪ್ಷನಿಸ್ಟ್ ಇತ್ಯಾದಿ ಕೆಲಸ ಮಾಡಬಹುದು. ಇಂತಹ ಕೆಲಸದಿಂದ ತಿಂಗಳಿಗೆ ಕನಿಷ್ಠ 3ರಿಂದ ರು. 5 ಸಾವಿರಕ್ಕೂ ಹೆಚ್ಚಿಗೆ ಗಳಿಸಬಹುದು. ಹೋಟೆಲ್‌ನವರ ಬಳಿ ಸ್ವಲ್ವ ವಿಶ್ವಾಸ ಬೆಳೆಸಿಕೊಂಡರೆ ಅಲ್ಲಿಯೇ ಆಶ್ರಯವನ್ನೂ ಪಡೆಯಬಹುದು. ಆಗ ಬಾಡಿಗೆ, ಸ್ವಲ್ಪಮಟ್ಟಿಗೆ ಊಟ-ಕಾಫಿ ಖರ್ಚು ಎರಡೂ ಉಳಿಯುತ್ತದೆ.
ಪೇಪರ್ ಬಾಯ್
ಹೆಚ್ಚಿನ ವಿದ್ಯಾರ್ಹತೆ ಇಲ್ಲದ ವಿದ್ಯಾರ್ಥಿಗಳು ಕೊರಿಯರ್ ಬಾಯ್, ಆಫೀಸ್ ಬಾಯ್ ಇತ್ಯಾದಿಯಾಗಿ ಕೆಲಸ ಮಾಡುತ್ತಿರುತ್ತಾರೆ. ಅಂಥವರು ಬೆಳಗ್ಗೆ ಹೊತ್ತು ಮನೆ ಮನೆಗೆ ದಿನಪತ್ರಿಕೆ ಹಂಚುವ ಕೆಲಸ ಮಾಡಬಹುದು. ಸಾಮಾನ್ಯವಾಗಿ ಬೆಳಗ್ಗೆ 5 ರಿಂದ 7 ಗಂಟೆ ವರೆಗೆ ಮಾತ್ರ ಇರುವಂತಹ ಕೆಲಸವಿದು. ತಿಂಗಳಿಗೆ ಕನಿಷ್ಠ ರು. 500 ರಿಂದ 1 ಸಾವಿರದವರೆಗೆ ಗಳಿಕೆ ಸಿಗುವ ಈ ಕೆಲಸದ ಜತೆಗೆ ಬೆಳಗಿನ ಶುದ್ಧ ಹವೆ, ವ್ಯಾಯಾಮ ಬೋನಸ್.
ಪ್ರೂಫ್ ರೀಡಿಂಗ್
ನಗರ ಪ್ರದೇಶದಲ್ಲಿರುವವರು ಟ್ರೈ ಮಾಡಬಹುದಾದ ಉದ್ಯೋಗ ಇದು. ನಗರದಲ್ಲಿ ಬಹಳಷ್ಟು ಪುಸ್ತಕ ಪ್ರಕಾಶಕರಿದ್ದಾರೆ. ಅವರಿಗೆ ಕರಡು ತಿದ್ದುವವರ ಅಗತ್ಯವಿದೆ. ಸ್ವಲ್ಪ ಸಾಹಿತ್ಯಾಸಕ್ತಿ ಇದ್ದು ಅಕ್ಷರಜ್ಞಾನ ಹಾಗೂ ಕಾಗುಣಿತ ಪ್ರಜ್ಞೆ ಚೆನ್ನಾಗಿದ್ದರೆ ಈ ಕೆಲಸ ಮಾಡಬಹುದು. ಮನೆಯಲ್ಲೇ ಬಿಡುವಾಗಿರುವಾಗ ಮಾಡುವಂತಹ ಕೆಲಸವಾದ್ದರಿಂದ ಇದು ಹೆಚ್ಚು ಅನುಕೂಲಕಾರಿ. ದಿನ ಬೆಳಗ್ಗೆ 1 ಗಂಟೆ ಹಾಗೂ ರಾತ್ರಿ 2 ಗಂಟೆ ಹೊತ್ತು ಈ ಕೆಲಸ ಮಾಡಿದಲ್ಲಿ ದಿನವೊಂದಕ್ಕೆ ನೂರಾರು ರುಪಾಯಿ ಸಂಪಾದಿಸಬಹುದು.
ಇವು ಕೆಲವು ಸ್ಯಾಂಪಲ್‌ಗಳಷ್ಟೇ. ಸ್ವಲ್ಪ ಕುತೂಹಲದಿಂದ ಗಮನಿಸಿದರೆ ಇಂತಹ ಅನೇಕ ಕೆಲಸಗಳುಸುತ್ತಮುತ್ತ ಗೋಚರಿಸುತ್ತವೆ. ನೀವು ಮಾಡುವ ಕೆಲಸ ಸಾಮಾನ್ಯದ್ದಾಗಿದ್ದು, ಬರುವ ವೇತನ ಏನೇನೂ ಸಾಲದು ಎಂಬಂತಿದ್ದರೆ ಇಂತಹ 'ಪರ್ಯಾಯ ಮಾರ್ಗ' ಕಂಡುಕೊಳ್ಳಬಹುದು.
-ರವಿಕಾಂತ್ ಕುಂದಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


