ಜಾಣ ಗುಂಡ

ನಮ್ಮೂರಲ್ಲಿ ಗುಂಡ ಅಂತ ಒಬ್ಬ ಹುಡುಗ ಇದ್ದ. ಹೆಸರಿಗೆ ತಕ್ಕ ಹಾಗೆ ಗುಂಡುಗುಂಡಾಗಿ ಮೈಕೈ ತುಂಬಿಕೊಂಡು ಬೆಳೆದಿದ್ದ. ಶಾಲೆಗೂ ಹೋಗುತ್ತಿದ್ದ. ಮನೆಗೆಲಸಾನೂ ಮಾಡ್ತಾ ಇದ್ದ. ಅಮ್ಮನಿಗೆ ಮಗನ್ನ ಕಂಡರೆ ಬಹಳ ಪ್ರೀತಿ. ಬುದ್ಧಿವಂತ ಅಂತ ಹೆಮ್ಮೆ.. 'ನಮ್ಮ ಗುಂಡನ ಸಮಾ ಯಾರೂ ಇಲ್ಲ' ಅಂತ ಎಲ್ಲರ ಮುಂದೆ ಜಂಭದಿಂದ ಹೇಳುತ್ತಿದ್ದಳು. ಗುಂಡನ ಗೆಳೆಯರಿಗೆ ಇದರಿಂದ ಬಹಳ ಅವಮಾನ ಆಗುತ್ತಿತ್ತು. ಗುಂಡ ಏನಾದರೂ ತಪ್ಪು ಮಾಡೋದನ್ನೇ ಕಾಯುತ್ತಿದ್ದರು. ಅದನ್ನು ಅವರಮ್ಮನಿಗೆ ತೋರಿಸಿದರೆ ಆಕೆಯ ಜಂಭವೂ ಮುರಿಯುತ್ತದೆ, ಗುಂಡನಿಗೂ ಅವಮಾನವಾಗುತ್ತದೆ ಎಂಬುದು ಅವರ ಲೆಕ್ಕಾಚಾರ.
ಒಂದು ದಿನ ಗೆಳೆಯರೊಡನೆ ಹೊರಗೆ ಗುಂಡ ಚೆಂಡು ಆಡುತ್ತಿದ್ದ. ಒಳಗಿಂದ ಅವರಮ್ಮ ಮಗನ್ನ ಕರೆದು, 'ಗುಂಡ ಸಕ್ಕರೆ ಇಲ್ಲ. ಶೆಟ್ಟಿ ಅಂಗಡಿಗೆ ಹೋಗಿ ಒಂದು ಕಾಲು ಕಿಲೋ ಸಕ್ಕರೆ ತಗೊಂಡು ಬಾ' ಎಂದು ಹತ್ತು ರುಪಾಯಿ ನೋಟು ಕೊಟ್ಟಳು. ಸ್ನೇಹಿತರ ಜತೆ ಮಾತಾಡುತ್ತಾ ಅವನು ಅಂಗಡಿಗೆ ಹೋಗಿ ಕಾಲು ಕಿಲೋ ಸಕ್ಕರೆ ಕಟ್ಟಿಸಿಕೊಂಡು ಚಿಲ್ಲರೆ ಎಣಿಸಿ ಜೇಬಿಗೆ ಹಾಕಿಕೊಂಡು ಕುಣಿಯುತ್ತಾ ಬರುವಾಗ ದಾರಿಯಲ್ಲಿ ಅದ್ಹೇಗೋ ಎಡವಿ ಬಿದ್ದುಬಿಟ್ಟ. ಪಾಪ ಕೈಯಲ್ಲಿನ ಸಕ್ಕರೆ ಪ್ಯಾಕೆಟ್ ಒಡೆದು ರಸ್ತೇಲಿ ಚೆಲ್ಲಾಪಿಲ್ಲಿಯಾಯ್ತು. ಗುಂಡ ಅಳುತ್ತಲೇ ಸಕ್ಕರೆಯನ್ನೆಲ್ಲ ಬಳಕೊಂಡು ಜೇಬಿನಲ್ಲಿದ್ದ ಕರ್ಚೀಫ್‌ನಲ್ಲಿ ಕಟ್ಟಿಕೊಂಡ. ಅವನ ಗೆಳೆಯರಿಗೆಲ್ಲ ಖುಷಿಯೋ ಖುಷಿ. ಓಡುತ್ತಾ ಬಂದು 'ಆಂಟೀ.. ಆಂಟೀ.. ಗುಂಡ ಬಿದ್ದು ಸಕ್ಕರೆಯನ್ನೆಲ್ಲ ಚೆಲ್ಲಿಬಿಟ್ಟ. ದಡ್ಡ ಅಂದರೆ ದಡ್ಡ' ಎಂದು ಹಾಸ್ಯ ಮಾಡಿದರು. ಪಾಪ ಗುಂಡ, ಅಳುತ್ತ ತಾಯಿಮುಂದೆ ತಪ್ಪಿತಸ್ಥನಂತೆ ನಿಂತುಕೊಂಡ. 'ಏಕೋ ಗುಂಡ, ಸಕ್ಕರೆಯೆಲ್ಲ ಹಾಳಾಗಿ ಹೋಯ್ತಲ್ಲೊ' ಎಂದು ಕೇಳಿದರು. ಹುಡುಗರೆಲ್ಲ ಗುಂಡನಿಗೆ ತಕ್ಕ ಶಾಸ್ತಿ ಮಾಡಿದೆವು ಅಂತ ಬೀಗುತ್ತಾ ತಮ್ಮ ತಮ್ಮ ಮನೆಗೆ ಹೋದರು.
ಇತ್ತ ಅವರೆಲ್ಲ ಹೋಗಿದ್ದು ನೋಡಿ ಬಾಗಿಲು ಹಾಕಿದ ಅಮ್ಮ ಗುಂಡನನ್ನು 'ಜಾಣ ಮರಿ. ಏಕೆ ಹೀಗೆ ಮಾಡಿದೆ?' ಎಂದು ಕೇಳಿದಳು. ಮಗ ಏನೇ ಮಾಡಿದರೂ ಅದರಲ್ಲಿ ಲಾಭ ಇರುತ್ತದೆ ಅಂತ ಅವಳಿಗೆ ಚೆನ್ನಾಗಿ ಗೊತ್ತು. ಗುಂಡ ನಗುತ್ತ ಕರ್ಚೀಫ್‌ನಲ್ಲಿ ಕಟ್ಟಿಕೊಂಡ ಸಕ್ಕರೆ ಕೆಳಗೆ ಚೆಲ್ಲಿ ಅದರೊಳಗಿಂದ ಒಂದು ಚಿನ್ನದ ಉಂಗುರ ತೆಗೆದು, 'ದಾರೀಲಿ ಕಾಣಿಸ್ತು. ಯಾರಿಗೂ ಗೊತ್ತಾಗಬಾರದು ಅಂತ ಬಿದ್ದ ಹಾಗೆ ಮಾಡಿ, ಸಕ್ಕರೆ ಚೆಲ್ಲಿ ಮತ್ತೆ ಬಳಿದು ಕಟ್ಟಿಕೊಂಡೆ' ಎಂದು ಅಮ್ಮನಿಗೆ ಕೊಟ್ಟ. ತಾಯಿ ಅದನ್ನು ಕೇಳಿ, ಒಳ್ಳೆ ಕೆಲಸ ಮಾಡಿದೆ. 'ಬಾ ನಿನಗೆ ಒಂದು ಉಂಡಿ ಕೊಡುತ್ತೇನೆ' ಎಂದು ಡಬ್ಬದಿಂದ ಉಂಡಿ ತೆಗೆದು ಕೊಟ್ಟು 'ನನ್ನ ಜಾಣ ಮರಿ' ಎಂದು ಕೊಂಡಾಡಿದಳು.
= ಸತ್ಯಬೋಧ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


