ಯುವಜನ/ಮಕ್ಕಳು

ಫೇಸ್ಬುಕ್ ಫಜೀತಿ

ಫೇಸ್ಬುಕ್ ಫಜೀತಿ
Published On :

'ಏನಾದ್ರೂ ಮಾಡ್ಕೊಂಡ್ ತಿನ್ನೋಕೆ ಏನ್ ರೋಗ? ಹೋಗಿಹೋಗಿ ಆ ಹಾಳು ಮೂಳು ಮ್ಯಾಗಿ ಅದು ಇದು ಅಂತ ಯಾಕ್ ತಿಂತೀಯಾ?'
- ಹೀಗೆ ಒಬ್ರಿಗೆ ಬೈದಿದ್ದೆ.
'ನಿಜ, ರೀ ಮ್ಯಾಗಿ ತುಂಬಾ ರುಚಿ ಆಗಿದೆ. ಹೆಚ್ಚು ಕೆಲ್ಸಾನೆ ಇಲ್ಲ, ನೀರಲ್ಲಿ ಮ್ಯಾಗಿನ ಹುಡಿ ಮಾಡಿ ಪ್ಯಾಕೆಟಲ್ಲೇ ಬರೋ ಮಸಾಲೆನ ಮಿಕ್ಸ್ ಮಾಡಿದ್ರೆ ಆಗೇ ಹೋಯ್ತು!'
- ಹಸಿವಿದ್ರೆ ಎಲ್ಲನೂ ರುಚಿನೇ ಬಿಡಿ!!
- ಜುಂ
ಹೀಗೊಂದು ಸ್ಟೇಟಸ್ ಹಾಕಿ ಕಮೆಂಟ್ಗಳಿಗೆ ಉತ್ತರಿಸ್ತ ಇರೋವಾಗ್ಲೆ ಇದ್ದಕ್ಕಿದ್ದ ಹಾಗೆ ಪೇಜ್ ಕ್ಲೋಸ್. ಏನಾಯ್ತೂಂತ ನೋಡಿದಾಗ ಮತ್ತೊಮ್ಮೆ ಇ-ಮೇಲ್ ಐಡಿ ಹಾಗೂ ಪಾಸ್ವರ್ಡ್ ಹಾಕಬೇಕು ಅಂತ ಮೆಸೇಜು! ಚಾಟಿಂಗ್ನಲ್ಲಿ ಬೇರೆ ಇದ್ದೆ. ಬೇಗ ಬೇಗ ಪಾಸ್ವರ್ಡ್ ಹಾಕಿಬಿಟ್ಟೆ.
ಫೇಸ್ಬುಕ್ ಓಪನ್ ಮಾಡ್ತಿದ್ದಂಗೇ ಒಂದಷ್ಟು ಮೆಸೇಜ್, ಎರಡಂಕಿಯ ನೋಟಿಫಿಕೇಷನ್ಗಳನ್ನೇ ನೋಡಿ ಅಭ್ಯಾಸವಾದವನಿಗೆ ಇಲ್ಲಾಗಿದ್ ನೋಡಿ ಶಾಕ್!
ಮೆಸೇಜೂ ಇಲ್ಲ, ನೋಟಿಫಿಕೇಷನ್ನೂ ಇಲ್ಲ. ಬದಲಾಗಿ ಟೆಂಪರರಿಯಾಗಿ ನಿಮ್ಮ ಅಕೌಂಟ್ ಅನ್ನು ಅಮಾನತುಗೊಳಿಸಲಾಗಿದೆ ಎಂಬ ಎಚ್ಚರಿಕೆ ಸಂದೇಶ! ನೋಡಿ ಹೌಹಾರಿ ಹೋದೆ. ಅಲ್ಲಾ ನಾನೇನ್ ಮಾಡಿದೀನಿ ಅಂತ ಅಮಾನತು ಮಾಡಿದಾರೆ? ಯೋಚಿಸಿದೆ. ಸಿಕ್ಕಿದೋರ್ಗೆಲ್ಲಾ ಸಿಕ್ಕಾಪಟ್ಟೆ ಫ್ರೆಂಡ್ ರಿಕ್ವೆಸ್ಟ್ ಕಳಿಸೋ ಜಾಯಮಾನ ನಂದಲ್ಲ. ತುಂಬಾ ಜನರ ಜೊತೆ ಚಾಟಂತೂ ಮಾಡ್ತೀನಿ. ಅದಕ್ಕೆಲ್ಲಾ ಸಸ್ಪೆಂಡ್ ಮಾಡೋದಾಗಿದ್ರೆ ಫೇಸ್ಬುಕ್ನಲ್ಲಿ ಶೇ.90ರಷ್ಟು ಅಕೌಂಟ್ಗಳು ಮಠಾ ಸೇರ್ಕೊಂಡ್ತಿದ್ವು. ಹುಡ್ಗೀರಂತೂ ಗೋಳೋ... ಅಂತಿದ್ರು!
ಮುಂದಿನ ಎಚ್ಚರಿಕೆ ಸಾಲುಗಳತ್ತ ಕಣ್ಣು ಹಾಯಿಸ್ದೆ. ಸಸ್ಪೆಂಡ್ ಮಾಡಿರೋದು ಸೆಕ್ಯೂರಿಟಿ ಪರ್ಪಸ್ಗಂತೆ! ಅಷ್ಟಕ್ಕೂ ಆಗಿರೋದ್ ಇಷ್ಟೆ, ಯಾರೋ ಹ್ಯಾಕ್ ಮಾಡೋಕ್ ಟ್ರೈ ಮಾಡಿದ್ರಂತೆ. ಫೇಸ್ಬುಕ್ ಭಾಷೇಲಿ ಫಿಷಿಂಗ್ ಅಂತಾರಂತೆ.
ಇದೊಳ್ಳೆ ಕಥೆ ಆಯ್ತಲ್ಲಾ? ಹುಡ್ಗೀರ್ ಅಕೌಂಟ್ ಹ್ಯಾಕ್ ಮಾಡೋ ಲುಚ್ಚಾಗಳಿದ್ದಾರೆ. ಆದ್ರೆ ಹುಡುಗ್ರ ಅಕೌಂಟ್? ಅಲ್ಲಾ ಫೇಸ್ಬುಕ್ನಲ್ಲಿ ಮೀಸೆ ಬಿಟ್ಟಿರೋ ಫೋಟೋ ಹಾಕಿದಿನಿ. ಅಷ್ಟೂ ಡೌಟಾ? ಫೇಮಸ್ ವ್ಯಕ್ತಿಗಳ ಅಕೌಂಟ್ ಹ್ಯಾಕ್ ಮಾಡೋದೇನೋ ಕೇಳಿದೀನಿ. ನನ್ನಂತಹ ಹುಡುಗನ ಅಕೌಂಟ್ ಹ್ಯಾಕ್ ಮಾಡ್ತಾರಾ? ಮತ್ತೆ ಡೌಟ್!
ಮುಂದೆ ಕಂಟಿನ್ಯೂ ಅಂತಿತ್ತು. ನೋಡೋಣಾಂತ ಕ್ಲಿಕ್ ಮಾಡ್ದೆ. ಈ ಫೇಸ್ಬುಕ್ ಅಕೌಂಟ್ ನಿಮ್ದೇ ಹೌದು ಅಂತಾದ್ರೆ ನಾವ್ ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಅನ್ನೋ ವರಸೆ! ಎಲಾ ಬಡ್ಡಿಮಗನ್ದು. ನನ್ನ ಹೆಂಡತೀನಾ ನನ್ನವಳೇ ಅನ್ನೋಕೆ ಪ್ರೂಫ್ ಕೇಳ್ದಂಗಾಯಿತು! ವಿಧಿ ಇಲ್ದೆ ಅಕೌಂಟ್ ನಂದೇ ಅಂತ ಸಾಬೀತುಪಡಿಸುವ ಚಾಲೆಂಜ್ ಸ್ವೀಕಾರ ಮಾಡ್ದೆ. ವಕ್ರ ವಕ್ರವಾಗಿ ಬರೆದ ಆಂಗ್ಲಾಕ್ಷರಗಳನ್ನ ಗುರುತಿಸಿ ನಮೂದಿಸಿ ಅಂತಿತ್ತು. ಮುಂದುವರಿದಂತೆ 2 ಫೋಟೋ ಕೊಟ್ಟು ಇದನ್ನ ನಿಮಗೆ ಟ್ಯಾಗ್ ಮಾಡಿದವರು ಯಾರು? ನಾನ್ ಹ್ಯಾಗ್ರಿ ಹೇಳ್ಲಿ? ಆ ಮೇಲ್ ಗೊತ್ತಾಯ್ತು ಗೊತ್ತಿಲ್ದೇ ಇರೋರ್ನಾ ಫ್ರೆಂಡ್ಸ್ ಮಾಡ್ಕೊಂಡ್ರೆ ಗುರುತ್ ಹಿಡಿಯೋದು ಕಷ್ಟ ಅಂತ.
ನೋಡೋಣಾಂತ ಸ್ಕಿಪ್ ಮಾಡಿದೆ. ಲಾಗ್ಔಟ್ ಒಂದೇ ಆಪ್ಷನ್ ಇದ್ದಿದ್ದು. ಎರಡ್ ದಿನ ಪೇಚಾಡಿದೆ.
ಆಕಸ್ಮಾತ್ ಹ್ಯಾಕ್ ಮಾಡೋಕೆ ಸಕ್ಸಸ್ ಆಗಿ, ಬೇಡದ್ದೆಲ್ಲಾ ಅಪ್ಲೋಡ್ ಮಾಡಿ, ಗಬ್ಬೆಸಿದ್ರೆ ಅನ್ನೋದೆ ಚಿಂತೆಯಾಗಿತ್ತು. ಅದೃಷ್ಟವಶಾತ್ ದುಷ್ಟ ಹ್ಯಾಕರ್ನ ಅದೃಷ್ಟ ಖುಲಾಯಿಸ್ಲಿಲ್ಲ. ನಮ್ಮ ರೆಸಿಡೆಂನ್ಶಿಯಲ್ ಎಡಿಟರ್ ಬಂದು ನೋಡೋಣಾಂದ್ರು. ಫೇಸ್ಬುಕ್ ಪಾಸ್ವರ್ಡ್ ಚೇಂಜ್ ಮಾಡಿ ಏನೆಲ್ಲಾ ಕಸರತ್ತು ಮಾಡಿದ್ರೂ ಒಂದೇ ಗೋಳು. ಈ ಫೇಸ್ಬುಕ್ ಅಕೌಂಟ್ ನಿಮ್ದು ಹೌದು ಅಂತಾದ್ರೆ ನಾವ್ ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡ್ಬೇಕು. ನಿಮ್ಮ ಉತ್ತರ ಸರಿ ಇದ್ರೆ ಹೊಂದತ್ತೆ ಅಂತಾದ್ರೆ ಮಾತ್ರ ಓಪನ್!
ಶಾಂತಚಿತ್ತನಾಗಿ ಚಾಲೆಂಜ್ನ ಫೇಸ್ ಮಾಡೋಕ್ ಶುರು ಮಾಡಿದೆ. ಫೋಟೋದಲ್ಲಿ ಇರೋರು ಯಾರು? ಈ ಫೋಟೋನಾ ನಿಮಗೆ ಟ್ಯಾಗ್ ಮಾಡಿರೋದು ಯಾರು? ಹೀಗೆ ಐದು ಪ್ರಶ್ನೆ. ಉತ್ತರಗಳನ್ನು ಆರಿಸುವ ಭಾಗ್ಯವೂ ಇತ್ತು.
ಫೇಸ್ಬುಕ್ ಮ್ಯಾನೇಜಿಂಗ್ ಕೇಳೋ ಪ್ರಶ್ನೆಗೆ ತತ್ತರನಾಗದೆ ಉತ್ತರವಿತ್ತೆ. ಪರಿಣಾಮ ಶುಭಕರವಾಗಿತ್ತು. ಫೇಸ್ಬುಕ್ ಓಪನ್ ಆಯ್ತು. ನಾನೇ ಖುದ್ದಾಗಿ ಓಪನ್ ಮಾಡಿದ ಅಕೌಂಟ್, ನನ್ನದು ಅಂತ ಹೇಳಿಕೊಳ್ಳೋಕೆ ಪರೀಕ್ಷೆ ಎದುರಿಸಬೇಕಾದ ಸ್ಥಿತಿ. ಬೆಸ್ತು ಬಿದ್ದರೂ ಫೇಸ್ಬುಕ್ ಸೆಕ್ಯೂರಿಟಿ ವ್ಯವಸ್ಥೆಗೆ ಸುಸ್ತಾಗಿ ಅಸ್ತು ಅಂದಿದ್ದೆ!

- ಮಂಜುನಾಥ .ಎಲ್.ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.