ಯುವಜನ/ಮಕ್ಕಳು

ಮಾತೇ ಮುದ್ದು

ಮಾತೇ ಮುದ್ದು
Published On :

ಕಾಲ ಬದಲಾಗಿದೆ. ಮಾತು ಬೆಳ್ಳಿ, ಮೌನ ಬಂಗಾರ ಎನ್ನುವ ನಂಬಿಕೆ ಈಗ ಅರ್ಥ ಕಳೆದುಕೊಂಡಿದೆ. ಈ ಮಾತು ಕ್ಯಾಂಪಸ್ ನೇಮಕಕ್ಕೂ ಅನ್ವಯ ಅಲ್ಲೂ ಸಂವಹನ (ಕಮ್ಯುನಿಕೇಶನ್) ಕೌಶಲಕ್ಕೇ ಹೆಚ್ಚಿನ ಪ್ರಾಧಾನ್ಯತೆ. ವಿದ್ಯೆ, ಅಂಕ ಎಲ್ಲ ಇದ್ದರೂ ಸಂವಹನದಲ್ಲಿ ಚುರುಕುತನ ಇಲ್ಲದಿದ್ದರೆ ವೃತ್ತಿ ಬದುಕಿನಲ್ಲಿ ಹಿಂದುಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಆಡುವ ಮಾತುಗಳಿಗೆ, ಬಳಸುವ ಪದಗಳಿಗೆ ನಿಮ್ಮ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸುವ ಅಥವಾ ಹಾಳುಗೆಡಹುವ ಎರಡೂ ಶಕ್ತಿ ಇರುತ್ತದೆ. ಅದಕ್ಕಾಗಿಯೇ ಸಂವಹನ ಕೌಶಲವಿಲ್ಲದ ಎಷ್ಟೋ ಮಂದಿ ಕ್ಯಾಂಪಸ್ ನೇಮಕದಲ್ಲಿ ಆಯ್ಕೆಯಾಗುವುದು, ಉನ್ನತ ಹುದ್ದೆ ಅಲಂಕರಿಸುವುದು ಕಡಿಮೆ.
ಸಾಮಾನ್ಯವಾಗಿ ಬಾಲ್ಯದಲ್ಲಿ ಬೆಳೆದು ಬಂದ ಪರಿಸರ, ಬೋಧನಾ ಶೈಲಿಯಲ್ಲಿನ ನ್ಯೂನತೆಗಳು, ಮಾರ್ಗದರ್ಶನದ ಕೊರತೆ ಮುಂತಾದ ಕಾರಣಗಳಿಂದ ವ್ಯಕ್ತಿಯಿಂದ ವ್ಯಕ್ತಿಗೆ ಸಂವಹನ ಕೌಶಲದಲ್ಲಿ ವ್ಯತ್ಯಾಸವಿರುತ್ತದೆ. ಕೆಲವರಿಗಂತೂ ಸಾಮಾನ್ಯ ಸನ್ನಿವೇಶದಲ್ಲೂ ಹೇಗೆ ಮಾತಾಡಬೇಕೆನ್ನುವ ಜ್ಞಾನ ಇರುವುದಿಲ್ಲ. ಹೀಗೇ ಮುಂದುವರಿದರೆ ಸ್ಪರ್ಧಾತ್ಮಕ ಪ್ರಪಂಚದಿಂದ ಬಹುಬೇಗ ಹೊರಬೀಳುತ್ತಾರೆ. ಅದಕ್ಕಾಗಿಯೇ ಎಲ್ಲರೂ (ಅದರಲ್ಲೂ ಯುವಜನರು) ವೈಯಕ್ತಿಕ ಮತ್ತು ವೃತ್ತಿಪರ ಬದುಕನ್ನು ಆಕರ್ಷಣೀಯವಾಗಿ ರೂಪಿಸಿಕೊಳ್ಳಲು ಸಂವಹನ ಕೌಶಲ ಉತ್ತಮಪಡಿಸಿಕೊಳ್ಳುವುದು ಅತ್ಯಗತ್ಯ.  ವಿದ್ಯಾರ್ಥಿ ಹಂತದಲ್ಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ವೃತ್ತಿ ಬದುಕಿನಲ್ಲಿ ಯಶಸ್ಸು ಸುಲಭವಾಗುತ್ತದೆ.

ಸಂವಹನ ಕೌಶಲ್ಯ ಏಕೆ ಅಗತ್ಯ?
ಉತ್ತಮ ಸಂವಹನ ಕೌಶಲ ಇಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲವೆ ಎಂದು ಕೆಲವರು ಮೂಗು ಮುರಿಯಬಹುದು. ಆದರೆ, ಬದುಕು ನಾವು ಅಂದುಕೊಂಡಂತೆ ಇರುವುದಿಲ್ಲ. ಅದು ನಾಲ್ವರ ಜೊತೆ ಬೆರೆತು ನಡೆಯುವ ಪ್ರಕ್ರಿಯೆ. ಇಲ್ಲಿ ಎಲ್ಲರೊಂದಿಗೆ ಮತ್ತು ಎಲ್ಲರಿಗಿಂತ ಮುಂದೆ ಸಾಗಬೇಕೆಂದರೆ ಇತರರನ್ನು ಆಕರ್ಷಿಸುವ ಸಂವಹನ ಶೈಲಿ ಇರಬೇಕು. ನಿಜ ಹೇಳಬೇಕೆಂದರೆ ಅದೇ ನಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಬಂಡವಾಳ. ಇತರರನ್ನು ಒಪ್ಪಿಸುವ, ಒತ್ತಾಯಿಸುವ ಮತ್ತು ನಿಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರುವ ಸಂದರ್ಭಗಳಲ್ಲಿ ಸಂವಹನವೇ ನಿಮ್ಮ ಪಾಲಿನ ಶಕ್ತಿ.
ನಾಲ್ಕು ಜನರನ್ನು ನಿಮ್ಮತ್ತ ಸೆಳೆಯಲು, ನೀವು ಹೇಳಿದಂತೆ ಅವರು ನಡೆದುಕೊಳ್ಳುವಂತೆ ಮಾಡಲು ಸಂವಹನ ಪ್ರಕ್ರಿಯೆಯಲ್ಲಿ ನೀವು ಬಳಸುವ ಭಾಷೆ ಮತ್ತು ಅದರ ಧಾಟಿಯ ಪಾತ್ರ ಪ್ರಮುಖ. ಅದರೊಂದಿಗೆ ಏನನ್ನು ಮಾತನಾಡುತ್ತೀರಿ, ಹೇಗೆ ಮಾತನಾಡುತ್ತೀರಿ ಮತ್ತು ಹೇಗೆ ಕಾಣಿಸಿಕೊಳ್ಳುತ್ತೀರಿ ಅನ್ನುವುದೂ ಮುಖ್ಯ. ಮಾತುಗಳು ಒಂದು ಕಿವಿಗೆ ತಟ್ಟಿ ಇನ್ನೊಂದು ಕಿವಿಯಿಂದ ಹಾರಿಹೋಗುವಂತಿರದೆ ಮನಸ್ಸಿನ ಆಳದಲ್ಲಿ ಮನೆ ಮಾಡುವ ತಯಾರಿ ನಡೆಸುವಂತಿರಬೇಕು. ಆಗ ಮಾತ್ರ ನಿಮ್ಮ ಸಂವಹನ ಕ್ರಿಯೆ ಪರಿಣಾಮಕಾರಿಯಾಗಿದೆ ಎಂದರ್ಥ.
ಒಟ್ಟಾರೆ ಇಂದಿನ ಯುಗದಲ್ಲಿ ಮಾತು ಮನೆ ಕೆಡಿಸುವುದಿಲ್ಲ. ಅದು ಸಂಬಂಧಗಳನ್ನು ಬೆಸೆಯುತ್ತದೆ, ಎದುರಿಗಿರುವವರನ್ನು ತನ್ನತ್ತ ಆಕರ್ಷಿಸುತ್ತದೆ. ಮಾತಿನ ಒಡೆಯನನ್ನು ಎಲ್ಲರೂ ಮೆಚ್ಚಿಕೊಂಡು ಉನ್ನತಿಗೆ ತಲುಪುವಂತೆ ಮಾಡುತ್ತದೆ. ಅದಕ್ಕಾಗಿಯೇ ದೊಡ್ಡವರು ಹೇಳಿರುವುದು ಮಾತು ಬಲ್ಲವನಿಗೆ ಜಗಳವಿಲ್ಲ ಎಂದು ಅಲ್ಲವೇ...?

ಅಪ್ಡೇಟ್ ಆಗುತ್ತಿರಿ

  •     ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಉಪನ್ಯಾಸ, ಚರ್ಚೆ, ಸಂವಾದಗಳಲ್ಲಿ ಆಗಿಂದಾಗ್ಗೆ ಸಕ್ರಿಯವಾಗಿ ಭಾಗವಹಿಸಿ ನಿಮ್ಮನ್ನು ನೀವು ಅಪ್ಡೇಟ್ ಮಾಡಿಕೊಳ್ಳಿ.
  •     ಆಧುನಿಕ ಯುಗ ಇ-ಮೇಲ್ಗಳ ಯುಗ. ಮೇಲಾಧಿಕಾರಿಗಳಿಗೆ, ನೌಕರರಿಗೆ, ಸಹೋದ್ಯೋಗಿಗಳಿಗೆ, ಗ್ರಾಹಕರಿಗೆ ಕಳುಹಿಸುವ ಇ- ಸಂದೇಶ ಸಂಕ್ಷಿಪ್ತ ಮತ್ತು ಪರಿಣಾಮಕಾರಿಯಾಗಿ ಇರಲಿ. ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾವಹಾರಿಕ ಸಂವಹನಕ್ಕೆ ಸಂಬಂಧಿಸಿದ ಅಲ್ಪಾವಧಿ ಕೋರ್ಸ್ಗಳೂ ಲಭ್ಯವಿರುವುದರಿಂದ ಆ ತರಬೇತಿಯನ್ನೂ ಪಡೆದುಕೊಳ್ಳಬಹುದು.
ಸಂವಹನ ಹೀಗಿರಲಿ
  •     ನೀವು ಹೇಳ ಹೊರಟಿರುವ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿ.
  •     ಪರಿಣಾಮಕಾರಿ ಸಂವಹನಕ್ಕೆ ಮಾತಿನಷ್ಟೇ ದೇಹ ಭಾಷೆಗೂ ಪ್ರಾಮುಖ್ಯತೆ ಇದೆ. ಹಾಗಾಗಿ  ಕಣ್ಣಿನ ಸಂಪರ್ಕ, ನಿಲುವು, ಹಸ್ತಲಾಘವ, ಧ್ವನಿಯ ಮಟ್ಟ, ಧಾಟಿ, ಶೈಲಿ ಎಲ್ಲದರ ಮೇಲೆ ಗಮನ ಇರಲಿ.
  •     ಮಾತು ನೇರವಾಗಿ, ಸ್ಪಷ್ಟವಾಗಿರಲಿ. ಅವಶ್ಯವಿದ್ದರೆ ಮಾತ್ರ ಪುನರುಚ್ಚರಿಸಿ.
  •     ನಿಮ್ಮ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಹೇರಲು ಪ್ರಯತ್ನಿಸದೆ, ಮನದಟ್ಟು ಮಾಡುವ ಕೌಶಲ ನಿಮ್ಮದಾಗಲಿ.
- ಜಮುನಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.