ಯುವಜನ/ಮಕ್ಕಳು

ಸುದಾಸ

ಆ ಕುಗ್ರಾಮದಲ್ಲಿ ಸುದಾಸ ಎಂಬ ಚಮ್ಮಾರನಿದ್ದ. ಅವನ ಗುಡಿಸಿಲಿನ ಹಿಂಭಾಗದಲ್ಲಿ ಕೊಳ ಇತ್ತು...

ಸುದಾಸ
Published On :

ಆ ಕುಗ್ರಾಮದಲ್ಲಿ ಸುದಾಸ ಎಂಬ ಚಮ್ಮಾರನಿದ್ದ. ಅವನ ಗುಡಿಸಿಲಿನ ಹಿಂಭಾಗದಲ್ಲಿ ಕೊಳ ಇತ್ತು. ಅಲ್ಲೊಂದು ಹೂ ಅರಳಿತ್ತು. ಅದನ್ನು ಕಿತ್ತು, ಮಾರಲು ಸುದಾಸ ಪೇಟೆಗೆ ಹೊರಟ. ಪೇಟೆಯಲ್ಲಿ ಸೇಟು, ಸುದಾಸನನ್ನು ನೋಡಿ 'ಈ ಹೂವು ಅಪರೂಪದ್ದಾಗಿದೆ. ಈ ಋತುವಿನಲ್ಲಿ ಬಿಡುವುದಿಲ್ಲ. ಐದು ನೂರು ಚಿನ್ನದ ನಾಣ್ಯಗಳನ್ನು ಕೊಡುತ್ತೇನೆ, ಕೊಡುವೆಯಾ?' ಕೇಳಿದ. ಅಷ್ಟರಲ್ಲಿ ಸೇನಾಧಿಪತಿಯು ಅಲ್ಲಿಗೆ ಬಂದು, 'ಸೇಟು ಕೊಡುವುದಕ್ಕಿಂತಲೂ 10 ಪಟ್ಟು ಹೆಚ್ಚಿಗೆ ಚಿನ್ನದ ನಾಣ್ಯ ಕೊಡುತ್ತೇನೆ, ನನಗೆ ಕೊಡು' ಎಂದು ಕೇಳುತ್ತಿರುವಷ್ಟರಲ್ಲಿ ರಾಜನ ರಥ ಅಲ್ಲಿಗೆ ಬಂತು. 'ಸೇನಾಧಿಪತಿ ಕೊಡುವುದಕ್ಕಿಂತ 100 ಪಟ್ಟು ಹೆಚ್ಚಿಗೆ ಚಿನ್ನದ ನಾಣ್ಯಗಳನ್ನು ಕೊಡುತ್ತೇನೆ. ಈ ಹೂವನ್ನು ನನಗೇ ಕೊಡು' ಎಂದ ರಾಜ.
ಸುದಾಸನಿಗೆ ಕಂಗಾಲಾದ. 'ಈ ಹೂವಿಗೆ 1 ರು. ಸಿಕ್ಕರೆ ಪುಣ್ಯವೆಂದುಕೊಂಡಿದ್ದೆ. ಆದರೆ, ಇವರೆಲ್ಲ ಏಕೆ ಇಷ್ಟೊಂದು ಬೆಲೆ ತೆರಲು ಸಿದ್ಧರಾಗಿದ್ದಾರೆ?' ಎಂದು ಸೇನಾಧಿಪತಿಗೆ ಕೇಳಿದ. 'ಇಂದು ಗೌತಮ ಬುದ್ಧರು ಆಗಮಿಸುತ್ತಿದ್ದಾರೆ. ಅವರನ್ನು ಸ್ವಾಗತಿಸಲು ನಾವೆಲ್ಲಾ ಹೋಗುತ್ತಿದ್ದೇವೆ. ಕಾಲವಲ್ಲದ ಕಾಲದಲ್ಲಿ ಬಿಟ್ಟಿರುವ ಈ ಹೂವನ್ನು ಅವರಿಗೆ ಅರ್ಪಿಸಿದರೆ ಸಂತೋಷಪಡುತ್ತಾರೆ' ಎಂದ ಸೇನಾಧಿಪತಿ. ಈ ಸಂಗತಿ ತಿಳಿಯುತ್ತಿದ್ದಂತೆಯೇ ಸುದಾಸ 'ಹಾಗಾದರೆ ಈ ಹೂವನ್ನು ನಾನು ಮಾರುವುದಿಲ್ಲ. ನಾನೇ ಬುದ್ಧರ ಚರಣಗಳಿಗೆ ಅರ್ಪಿಸುತ್ತೇನೆ' ಎಂದ.
ಬುದ್ಧ ಬರುವ ಸ್ಥಳಕ್ಕೆ ಸುದಾಸ ಹೋದ. ಆಗಲೇ ಅಲ್ಲಿಗೆ ಸೇಟು, ಸೇನಾಪತಿ, ರಾಜರಿದ್ದರು. ಅವರು ಇವನ ಬಗ್ಗೆ ಬುದ್ಧರಿಗೆ ನಡೆದ ಘಟನೆಯನ್ನು ವಿವರಿಸಿದ್ದರು. ಬುದ್ಧನಿಗೆ ಅಚ್ಚರಿ. ಸುದಾಸ ನೇರ ಬಂದು ಆ ಹೂವನ್ನು ಬುದ್ಧನಿಗೆ ಅರ್ಪಿಸಿದ. ಆಗ ಬುದ್ಧ, 'ನಿನ್ನ ಬಡತನ ಅಷ್ಟೇ ಅಲ್ಲ. ನಿನ್ನ ಮಕ್ಕಳು, ಮೊಮ್ಮಕ್ಕಳು ಕೂತು ತಿನ್ನುವಷ್ಟು ಶ್ರೀಮಂತಿಕೆ ನಿನ್ನದಾಗುವ ಅವಕಾಶ ದೊರೆತಿದ್ದರೂ ನೀನೇಕೆ ಈ ಹೂವನ್ನು ಮಾರಲಿಲ್ಲ?' ಎಂದು ಕೇಳಿದ. ಆಗ ಸುದಾಸ 'ಪ್ರಭುವೇ, ಪ್ರೇಮಕ್ಕಿಂತಲೂ ಮಿಗಿಲಾದದು ಧನಕನಕವಲ್ಲ. ಕರುಣಾಮೂರ್ತಿಯಾದ ನಿನಗೆ ಈ ಹೂವನ್ನು ಅರ್ಪಿಸಿ ಕೃತಾರ್ಥನಾದೆ' ಎಂದನು.
ಆಗ ಬುದ್ಧ ತನ್ನ ಅನುಯಾಯಿಗಳಿಗೆ 'ಸುದಾಸ ಓದು ಬರಹ ಕಲಿತವನಲ್ಲ. ಆದರೆ, ಅವನು ಸುಸಂಸ್ಕೃತ. ಪ್ರೇಮಕ್ಕಾಗಿ ಅವನು ಧನಕನಕವನ್ನು ನಿರಾಕರಿಸಿದ. ಸುಖಕ್ಕಾಗಿ ಪರಮಾತ್ಮನನ್ನು ಮಾರಿಕೊಳ್ಳಲು ಅವನು ಸಿದ್ಧನಿರಲಿಲ್ಲ. ಹಣ ಸಂಪಾದನೆ ಮಾತ್ರವೇ ಮುಖ್ಯವಲ್ಲ. ಶ್ರೇಷ್ಠ ಮೌಲ್ಯಗಳಿಗಾಗಿ ತುಡಿಯುವುದೇ ಜೀವನ ಎಂದು ತೋರಿಸಿಕೊಟ್ಟಿದ್ದಾನೆ' ಎಂದು ಬೆನ್ನು ತಟ್ಟಿದ.

- ಎಂ.ಎಸ್. ಶಿವಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.