ಯುವಜನ/ಮಕ್ಕಳು

ರಾಮಿಯ ಮಾದರಿ

ರಾಮಿ ಆರನೇ ತರಗತಿ. ತಂದೆ ಚೆನ್ನಣ್ಣ ಎರಡು ವರ್ಷ ಹಿಂದೆ ಕೊನೆಯುಸಿರೆಳೆದಿದ್ದ....

ರಾಮಿಯ ಮಾದರಿ
Published On :

ರಾಮಿ ಆರನೇ ತರಗತಿ. ತಂದೆ ಚೆನ್ನಣ್ಣ ಎರಡು ವರ್ಷ ಹಿಂದೆ ಕೊನೆಯುಸಿರೆಳೆದಿದ್ದ. ಕಡುಬಡತನದಲ್ಲೂ ತಾಯಿ ನಂಜವ್ವ ಕೂಲಿನಾಲಿ ಮಾಡಿ ಮಗನನ್ನು ಓದಿಸುತ್ತಿದ್ದಳು. ಆಕೆ ಗೂರಲು ರೋಗದಿಂದ ನರಳುತ್ತಿದ್ದಳು ಬೇರೆ. ತುರ್ತಾಗಿ ರಾಮಿ ಗಣಿತ ಪಠ್ಯಪುಸ್ತಕ ಕೊಳ್ಳಬೇಕಿತ್ತು. ಅವನ ಮಾಸ್ತರು ತಾಕೀತು ಮಾಡಿದ್ದರು. ಸರಿ, ಇಗೋ ಈ ನೂರು ರೂಪಾಯಿ ಅಂತ ನಂಜವ್ವ ಅವನಿಗೆ ಅದಕ್ಕಾಗಿ ಕೊಟ್ಟಿದ್ದಳು. ಬೆಳಗ್ಗೆ ರಾಮಿ ಎಂದಿನಂತೆ ಹತ್ತೂಮುಕ್ಕಾಲು ಗಂಟೆಗೆ ಶಾಲೆಗೆ ಹೊರಟ. ರೊಟ್ಟಿ ತಿಂದು ಕಲಸನ್ನದ ಬುತ್ತಿ ಒಯ್ದಿದ್ದ. ನಂಜವ್ವ ಕೂಲಿಗೆ ಹೊಲಕ್ಕೆ ಹೊರಟಳು.
ಸಂಜೆ  ಮಗ ಶಾಲೆಯಿಂದ ವಾಪಸ್ಸಾಗುವ ಹೊತ್ತಿಗೆ ನಂಜವ್ವ ಹೂಲದಿಂದ ಬಂದು ಟೀ ಕಾಯಿಸುತ್ತಾಳೆ. ಆದರೆ ಆ ದಿನ ಸಂಜೆ ಸೂರ್ಯ ಮುಳುಗಿ ಕತ್ತಲಾವರಿಸಿದರೂ ರಾಮಿ ಮನೆಗೆ ಬರಲಿಲ್ಲ. ಸಹಜವಾಗಿಯೆ ನಂಜವ್ವ ಗಾಬರಿಗೊಂಡಳು. ಏನು ಹೈಕಳೊ ಸ್ವಲ್ಪ ಕೂಡ ಶಿಸ್ತು, ಜವಾಬ್ದಾರಿಯಿಲ್ಲ ಎಂದು ನಂಜವ್ವ ರೇಗಾಡಿಕೊಳ್ಳುತ್ತಿದ್ದಂತೆ ನಿಧಾನವಾಗಿ ರಾಮಿ ಗುಡಿಸಿಲಿನೊಳಗೆ ಹೆಜ್ಜೆಯಿಟ್ಟ. ಮಗನ ಮೇಲೆ ಏಕಾಏಕಿ ಸಿಟ್ಟಿನಿಂದ ಬೈದಾಡುವುದು ಬೇಡವೆಂದು ಅವಳು ತೀರ್ಮಾನಿಸಿದಳು. 'ಏಕೆ ಮಗೂ ಕತ್ತಲು ಮಾಡ್ಕೊಂಡು ಬಂದೆ....ಕರಡಿ, ತೋಳದ ಕಾಟ ಶಾನೆ ಈಗಂತು. ಮುಂದೆ ಹೀಗೆ ಮಾಡೀಯಾ ಹುಷಾರು...' ಅಂತ ಟೀ ಬಿಸಿಮಾಡಲು ಮುಂದಾದಳು.
'ಅವ್ವ, ಶಾಲೆ ಮಧ್ಯಾನ್ಹ ನಾಲ್ಕೂವರೆಗೇನೆ ಮುಗಿಯಿತು. ಹೇಗೂ ಇವತ್ತು ಗುರುವಾರ, ಊರಿನ ಸಂತೆ. ನೀ ಕೊಟ್ಟ ನೂರು ರೂಪಾಯಿಗೆ ರಂಗಣ್ಣನ ಅಂಗಡೀಲಿ ಹತ್ತು ಬೆಲೂನು ಕೊಂಡೆ. ಸಂತೆಯಲ್ಲಿ ಮಾರಿದೆ. ತಲಾ ಮೂರು ರೂಪಾಯಿ, ಅಂದರೆ ಒಟ್ಟು ಮೂವತ್ತು ರೂಪಾಯಿ ಲಾಭ ಬಂತು. ನೂರಮೂವತ್ತು ರೂಪಾಯಿನಲ್ಲಿ ಇಗೋ ನಿಂಗೆ ಟಾನಿಕ್, ಮಾತ್ರೆ ತಂದೆ. ಹೇಗಿದೆ ನನ್ನ ಉಪಾಯ ಹೇಳವ್ವ' ಅಂದ ಮಗರಾಯ. ನಂಜವ್ವಳಿಗೆ ರಾಮಿಯ ಕಪಾಳಕ್ಕೆ ಬಾರಿಸಬೇಕೆನ್ನಿಸುವಷ್ಟು ಆಕ್ರೋಶವಾಗಿತ್ತು. 'ದೊಡ್‌ಮನುಷ್ಯ ನೀನು. ಪುಸ್ತಕಕ್ಕೆ ಅಂತ ಕೊಟ್ಟ ದುಡ್ನ ಔಷಧಿಗೆ ಖರ್ಚು ಮಾಡೋಕೆ ನೀನೇ ಆಗ್ಬೇಕಾ ಹೇಳು. ನನಗೇನು. ನಾಳೆ ನಿಮ್ಮ ಮೇಷ್ಟ್ರು ನಿನ್ನ ಶಾಲೆಯಿಂದ ವಜಾ ಮಾಡ್ತಾರೆ ನೋಡ್ತಿರು' ಅಂತ ಕೆರಳಿದಳು. ರಾಮಿ ಮೆಲ್ಲಗೆ ತನ್ನ ಕಂಕುಳಿನಲ್ಲಿದ್ದ ಹಳೇ ವರ್ತಮಾನ ಪತ್ರಿಕೆಯಲ್ಲಿ ಸುತ್ತಿದ್ದ ಪುಸ್ತಕವನ್ನು ಕಾಣುವಂತೆ ತಾಯಿ ಮುಂದೆ ಹಿಡಿದ. 'ಅವ್ವ, ಹೋದವರ್ಷ ಇದೇ ತರಗತಿಯಲ್ಲಿ ಓದುತ್ತಿದ್ದ ರವಿ ಕೊಟ್ಟ ಪುಸ್ತಕ ಇದು, ಗಣಿತಮಾಸ್ತರೇ ಬೆಳಗ್ಗೆ ನಂಗೆ ಇದನ್ನು ಕೊಟ್ಟರು' ಎಂದು ವಿವರಿಸಿದ. ನಂಜವ್ವ ಹೆಮ್ಮೆ, ಅಭಿಮಾನದಿಂದ ಮಗನನ್ನು ಬಾಚಿ ತಬ್ಬಿಕೊಂಡಳು.

-  ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.