ನೋಟು ನೋಟ
2005ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎನ್. ಜಯಶಂಕರ ಶರ್ಮ ಕಚೇರಿ ವತಿಯಿಂದ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಮರಳಿ ಬರುವಾಗ ....

2005ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎನ್. ಜಯಶಂಕರ ಶರ್ಮ ಕಚೇರಿ ವತಿಯಿಂದ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಮರಳಿ ಬರುವಾಗ ತಮ್ಮ ಗೆಳೆಯನಿಗಾಗಿ ಅಲ್ಲಿನ ನೋಟು, ನಾಣ್ಯಗಳನ್ನು ಸಂಗ್ರಹಿಸಿ ತಂದಿದ್ದರು. ಇವನ್ನು ನೋಡಿದ ಐದನೇ ತರಗತಿ ಓದುತ್ತಿದ್ದ ಅವರ ಮಗ ಲಾಲಕೃಷ್ಣ ಶರ್ಮ ಒಂದು ನೋಟನ್ನು ಕೈಯಲ್ಲಿ ಹಿಡಿದು, 'ಇದು ಎಷ್ಟು ರುಪಾಯಿ ನೋಟು?' ಎಂದು ಕೇಳಿದ. 'ಇದು ಟಾಕಾ. ಬಾಂಗ್ಲಾ ದೇಶದ ಕರೆನ್ಸಿ. ಭಾರತದಲ್ಲಿ ಇದರ ಚಲಾವಣೆ ಸಾಧ್ಯವಿಲ್ಲ. ಹವ್ಯಾಸಕ್ಕಾಗಿ ಸಂಗ್ರಹ ಮಾಡಬಹುದಷ್ಟೇ' - ಎಂದು ಶರ್ಮ ಉತ್ತರಿಸಿದರು. ಲಾಲಕೃಷ್ಣನ ಕುತೂಹಲ ತಣಿಯಲಿಲ್ಲ, ಇನ್ನಷ್ಟು ಬೆಳೆಯಿತು. ಬೇರೆ ಬೇರೆ ದೇಶಗಳಿಗೆ ಪ್ರತ್ಯೇಕ ಕರೆನ್ಸಿ ಇರುವ ವಿಷಯ ಆಗಷ್ಟೇ ಅವನಿಗೆ ಗೊತ್ತಾಗಿದ್ದು. ತಾನೂ ಇಂಥ ನೋಟುಗಳನ್ನು ಸಂಗ್ರಹಿಸಬೇಕು ಎಂಬ ಆಸೆ ವ್ಯಕ್ತಪಡಿಸಿದ. ತಮ್ಮ ಗೆಳೆಯನಿಗೆ ನೀಡಿ ಉಳಿದ ನೋಟುಗಳನ್ನು ಪುತ್ರನ ಕೈಗಿತ್ತರು. ಹಾಗೆ ಆರಂಭವಾಯಿತು ಈ ಹವ್ಯಾಸ.
ಪ್ಲಾಸ್ಟಿಕ್ ನೋಟುಗಳ ನೋಟ
ಈಗ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ಓದುತ್ತಿರುವ ಲಾಲಕೃಷ್ಣನ ಬಳಿ 100ಕ್ಕೂ ಹೆಚ್ಚು ದೇಶಗಳ ನಾಣ್ಯ, ನೋಟು ಹಾಗೂ ಅಂಚೆ ಚೀಟಿಗಳ ಸಂಗ್ರಹವಿದೆ. ಈ ಹವ್ಯಾಸಕ್ಕೆ ಕೊನೆ ಎಂಬುದೇ ಇಲ್ಲ. ಸಂಗ್ರಹ ಎಲ್ಲರೂ ಮಾಡುತ್ತಾರೆ, ಅದರಲ್ಲೇನಾದರೂ ವಿಶೇಷತೆ ಬೇಕಲ್ಲ ಎಂದು ಯೋಚಿಸಿದಾಗ ಹೊಳೆದಿದ್ದು - ಪ್ಲಾಸ್ಟಿಕ್ ನೋಟುಗಳ ಪ್ರಪಂಚ!
ವಿಶೇಷ ಸಂಗ್ರಹ
ಹೀಗೆ ಮೂರು ವರ್ಷಗಳಿಂದ ಪ್ಲಾಸ್ಟಿಕ್ ನೋಟುಗಳ ಹಿಂದೆ ಬಿದ್ದಿರುವ ಲಾಲಕೃಷ್ಣ ಅಲ್ಲಿಂದೀಚೆಗೆ 34 ದೇಶಗಳ 120ಕ್ಕೂ ಹೆಚ್ಚು ನೋಟುಗಳನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾನೆ. ಜಗತ್ತಿನಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಿದ್ದು ಆಸ್ಟ್ರೇಲಿಯಾ. ಇದಲ್ಲದೆ, ಮೆಕ್ಸಿಕೋ, ನ್ಯೂಜಿಲ್ಯಾಂಡ್, ರೊಮಾನಿಯಾ, ಕೆನಡಾ, ಸಿಂಗಾಪುರ ಮುಂತಾದ ದೇಶಗಳ ನೋಟುಗಳೂ ಈತನ ಸಂಗ್ರಹದಲ್ಲಿವೆ. ಯುದ್ಧದಲ್ಲಿ ತನ್ನನ್ನು ಬೆಂಬಲಿಸಿದ ದೇಶಗಳ ಹೆಸರುಗಳಿರುವ ವಿಶೇಷ ನೋಟೊಂದನ್ನು ಕುವೈತ್ ಬಿಡುಗಡೆ ಮಾಡಿತ್ತು. ಚೀನಾ ಮುದ್ರಿಸಿದ ಈ ಸಹಸ್ರಮಾನದ ಮೊದಲ ನೋಟು, ಒಲಿಂಪಿಕ್ ನೆನಪಿಗೆ ಹೊರತಂದ ನೋಟು, ತೇಜಸ್ವಿ ಕತೆಗಳಲ್ಲಿ ಬರುವ ಈಸ್ಟರ್ ಐಲ್ಯಾಂಡ್ ಮೂರ್ತಿಗಳಿರುವ ನೋಟು, 50ನೇ ಸ್ವಾತಂತ್ರ್ಯೋತ್ಸವಕ್ಕೆ ಸಿಂಗಾಪುರ ಹಾಗೂ ಬ್ರೂನಿ ದೇಶಗಳು ಜಂಟಿಯಾಗಿ ಬಿಡುಗಡೆ ಮಾಡಿದ ನೋಟುಗಳು ಲಾಲಕೃಷ್ಣನ ಬಳಿ ಇವೆ. 100ಕ್ಕೂ ಅಧಿಕ ರಾಷ್ಟ್ರಗಳ ಅಂಚೆ ಚೀಟಿಗಳನ್ನು ಸಂಗ್ರಹಿಸಿರುವ ಈತ ಮೊದಲ ದಿನದ ಅಂಚೆ ಕವರ್ಗಳು (first day covers), ಮಿನಿಯೇಚರ್ ಶೀಟ್ಗಳು, ತಂಜಾವೂರು, ವಿವೇಕಾನಂದ ಹಾಗೂ ಟಾಗೋರ್ ಚಿತ್ರಗಳಿರುವ ಅಂಚೆ ಕಾರ್ಡುಗಳನ್ನೂ ಒಟ್ಟು ಮಾಡಿದ್ದಾನೆ. ಭಾರತೀಯ ಸಿನಿಮಾ ಶತಮಾನೋತ್ಸವದ ಅಂಗವಾಗಿ ಅಂಚೆ ಇಲಾಖೆ ಹೊರತಂದ 50 ಸ್ಟ್ಯಾಂಪುಗಳನ್ನೂ ಸೇರಿಸಿಕೊಂಡಿದ್ದಾನೆ. ಬೆಳ್ತಂಗಡಿ ಸಮೀಪದ ಮೇಲಂತಬೆಟ್ಟುವಿನಲ್ಲಿರುವ ಮನೆಯ ಒಂದು ಕೋಣೆ ಈ ಸಂಗ್ರಹದ ಸಂರಕ್ಷಣೆಗೇ ಮೀಸಲಾಗಿದೆ.
ಹೆತ್ತವರ ಹಂಬಲ
ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ತಾಯಿ ಸಾವಿತ್ರಿ ಅವರೂ ಮಗನ ಆಸಕ್ತಿಗೆ ನೀರೆರೆಯುತ್ತಿದ್ದಾರೆ. ಕಚೇರಿ ಕಾರ್ಯಗಳಿಗಾಗಿ ಆಗಾಗ ಪ್ರವಾಸ ಹೋಗುವ ಜಯಶಂಕರ ಶರ್ಮ ವಾಪಸ್ ಬರುವಾಗ ಪುತ್ರನಿಗಾಗಿ ಆತನ ಸಂಗ್ರಹದಲ್ಲಿ ಇನ್ನೂ ಇಲ್ಲದ ನಾಣ್ಯ, ನೋಟು, ಅಂಚೆ ಚೀಟಿ ತರುವುದನ್ನು ಮರೆಯುವುದಿಲ್ಲ. ಸದ್ಯದಲ್ಲೇ ಈ ಎಲ್ಲ ಸಂಗ್ರಹದ ಪ್ರದರ್ಶನಗಳನ್ನು ಏರ್ಪಡಿಸಲು ಸಿದ್ಧತೆ ನಡೆಸಿದ್ದಾನೆ ಲಾಲಕೃಷ್ಣ. ಹೆಚ್ಚು ಮಾತಿಲ್ಲದ ಲಾಲಕೃಷ್ಣ ಶರ್ಮ (ಮೊ. 9449926433) ಸದಾ ಅಧ್ಯಯನಶೀಲ. ಪ್ರತಿಭಾವಂತ ಚೆಸ್ ಆಟಗಾರ. ಭವಿಷ್ಯದಲ್ಲಿ ಬೋಧಕನಾಗುವ ಆಸೆ ಅವನದು. ಸಂಶೋಧನೆಯಲ್ಲೂ ಆಸಕ್ತಿಯಿದೆ.
- ಚಿತ್ರ-ಲೇಖನ: ಅನಂತ ಹುದೆಂಗಜೆ
hudengaje@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


