ಜಾಲಾಟದ ವಯಸು
ಕಾಲಕ್ಕೆ ತಕ್ಕಂತೆ ಯುವಪೀಳಿಗೆಯೂ ಬದಲಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳು ಯುವಪೀಳಿಗೆ ಕೈಗೆ ಸುಲಭವಾಗಿ ದಕ್ಕುತ್ತಿದೆ....

ಕಾಲಕ್ಕೆ ತಕ್ಕಂತೆ ಯುವಪೀಳಿಗೆಯೂ ಬದಲಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳು ಯುವಪೀಳಿಗೆ ಕೈಗೆ ಸುಲಭವಾಗಿ ದಕ್ಕುತ್ತಿದೆ. ಪರಿಣಾಮ ಅವರ ಜೀವನ ಶೈಲಿ ವೇಗವಾಗಿ ಬದಲಾವಣೆಯಾಗುತ್ತಿದೆ. ಬಹುತೇಕರ ಕೈಗೆ ಸ್ಮಾರ್ಟ್ಫೋನ್ ಅನ್ನುವ ಮಾಯೆ ಬಂದು ಕೂತಿದೆ.
ಶೇ.90ರಷ್ಟು ಯುವಜನತೆ ಪ್ರಪಂಚವನ್ನೇ ಗ್ರಾಮವನ್ನಾಗಿಸಿರುವ ಇಂಟರ್ನೆಟ್ನ ದಾಸರಾಗಿದ್ದಾರೆ. ಫೇಸ್ಬುಕ್, ಟ್ವಿಟರ್ ಬಹುತೇಕ ಯುವಜನರಿಗೆ ಅನ್ನ, ಆಹಾರದಷ್ಟೇ ಅನಿವಾರ್ಯ ಅನ್ನುವಂತಾಗಿಬಿಟ್ಟಿದೆ. ಮುಂಜಾನೆ ಎದ್ದು ರಂಗೋಲಿ ಹಾಕುತ್ತಿದ್ದ ಹೆಣ್ಣುಮಕ್ಕಳೀಗ ಫೇಸ್ಬುಕ್ ಮೂಲಕ ದಿನಚರಿ ಆರಂಭಿಸುತ್ತಿದ್ದಾರೆ. ಯುವಕರಿಗಂತೂ ಬೆಳಗ್ಗೆ ಎದ್ದ ಕೂಡಲೇ ನೆನಪಾಗುವುದು ಮೊಬೈಲ್.
ರಾತ್ರಿ ಯಾರು ಕರೆ ಮಾಡಿದ್ದಾರೆ? ಫೇಸ್ಬುಕ್ನಲ್ಲಿ ಹಾಕಿದ್ದ ಸ್ಟೇಟಸ್ಗೆ ಎಷ್ಟು ಮಂದಿ ಕಮೆಂಟ್ ಹಾಕಿದ್ದಾರೆ, ಎಷ್ಟು ಮಂದಿ ಲೈಕ್ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸದಿದ್ದರೆ ನೆಮ್ಮದಿಯೇ ಇಲ್ಲ. ಕೈಗೊಂದು ಸ್ಮಾರ್ಟ್ಫೋನ್ ಸಿಕ್ಕುಬಿಟ್ಟರೆ ಹೊರಜಗತ್ತಿನ ಪರಿವೆಯೇ ಅವರಿಗಿರುವುದಿಲ್ಲ. ಅಷ್ಟಕ್ಕೂ ಊಟ, ತಿಂಡಿ ಮಾಡುವಾಗಲೂ ಈ ಜಂಗಮವಾಣಿಯ ಕುರಿತು ಧೇನಿಸುವಂತಹದ್ದು ಏನಿದೆ ಎನ್ನುವುದು ಅಡುಗೆ ಮನೆಯಲ್ಲಿ ಕೂತ ಅಮ್ಮನಿಗೂ ಅರ್ಥವಾಗುವುದಿಲ್ಲ. ಬಹುಶಃ ಮೊಬೈಲ್ ದಾಸ್ಯಕ್ಕೆ ಬಿದ್ದ ಯುವಪೀಳಿಗೆಯಿಂದಲೂ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗಲಿಕ್ಕಿಲ್ಲ.
ದಾರಿ ಕಾಣದಾಗಿದೆ...
ಯುವಪೀಳಿಗೆಯಲ್ಲಿ ಹೆಚ್ಚುತ್ತಿರುವ ಮೊಬೈಲ್, ಸಾಮಾಜಿಕ ಜಾಲತಾಣಗಳ ದಾಸ್ಯತ್ವ ನಮ್ಮ ಸಂಸ್ಕೃತಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಅಪ್ಪ, ಅಮ್ಮನ ಜತೆಗೆ ಮುಖಕೊಟ್ಟು ಮಾತನಾಡುವಷ್ಟು ಪುರುಸೊತ್ತಿಲ್ಲದ ಮಕ್ಕಳು ವಾಟ್ಸ್ಅಪ್, ಲೈನ್, ವೀಚಾಟ್ನೊಂದಿಗೆ ಇಡೀ ಜಗತ್ತಿನ ಜತೆ ಸಂಪರ್ಕದಲ್ಲಿರುತ್ತಾರೆ. ತಡರಾತ್ರಿವರೆಗೆ ಚಾಟಿಂಗ್ನಲ್ಲಿ ಬ್ಯುಸಿಯಾಗಿರುತ್ತಾರೆ. ಓದು, ಆಟ, ಪಾಠ ಮರೆತು ಜಂಗಮವಾಣಿಯೊಳಗೆ ತೂರಿಕೊಳ್ಳುತ್ತಾರೆ. ತಮ್ಮದೇ ಕೃತಕ ಜಗತ್ತೊಂದನ್ನು ಸೃಷ್ಟಿಸಿಕೊಳ್ಳುತ್ತಾರೆ. ಆ ಜಗತ್ತಿನಲ್ಲಾಗುವ ಪ್ರತಿಯೊಂದು ಬೆಳವಣಿಗೆಗೂ ಸ್ಪಂದಿಸಲು ಆರಂಭಿಸುತ್ತಾರೆ. ಕೊನೆಗೆ ಖಿನ್ನತೆ ಜಾರಿಬೀಳುತ್ತಾರೆ. ಹಾಗಂದ ಮಾತ್ರಕ್ಕೆ ಸಾಮಾಜಿಕ ಜಾಲತಾಣ, ಮೊಬೈಲ್ ಬಳಕೆ ತಪ್ಪೇ? ಖಂಡಿತಾ ಇಲ್ಲ. ಆದರೆ, ಅದಕ್ಕೊಂದು ಮಿತಿ ಇರಬೇಕಷ್ಟೆ. ಆದರೆ, ಇಂದಿನ ಯುವಪೀಳಿಗೆ ಈ ಮಿತಿ ದಾಟುತ್ತಿರುವುದೇ ಸಮಸ್ಯೆಯ ಮೂಲ.
- ಪಾವನಾ ಗೌಡ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


