ಕ್ಯಾಂಪಸ್ ಸೆಲೆಕ್ಷನ್
ಮೊದಲೆಲ್ಲ ನೌಕರಿಗಾಗಿ ಅರ್ಜಿ ಹಿಡಿದು ಊರೂರು ಅಲೆಯಬೇಕಿತ್ತು. ಆದರೆ, ಈಗ ಕಂಪನಿಗಳು...

ಮೊದಲೆಲ್ಲ ನೌಕರಿಗಾಗಿ ಅರ್ಜಿ ಹಿಡಿದು ಊರೂರು ಅಲೆಯಬೇಕಿತ್ತು. ಆದರೆ, ಈಗ ಕಂಪನಿಗಳು ಕಾಲೇಜಿನ ಬುಡಕ್ಕೇ ಬರುತ್ತವೆ. ಅರ್ಹ ವಿದ್ಯಾರ್ಥಿಗಳನ್ನು ಆರಿಸುತ್ತವೆ. ಹೀಗಾಗಿ ಪದವಿಯ ಅಂತಿಮ ವರ್ಷದ ಬಹುತೇಕ ವಿದ್ಯಾರ್ಥಿಗಳು ಈಗಿನಿಂದಲೇ ಕ್ಯಾಂಪಸ್ ಸೆಲೆಕ್ಷನ್ ಬಗ್ಗೆ ಕನಸು ಕಾಣಲಾರಂಭಿಸಿದ್ದಾರೆ. ಆದರೆ, ಇಂಥ ವಿದ್ಯಾರ್ಥಿಗಳಿಗೊಂದು ಆಘಾತಕಾರಿ ಸುದ್ದಿ ಕಾದಿದೆ.
2014ರಲ್ಲಿ ದೇಶಾದ್ಯಂತ ಅರ್ಹ ಉದ್ಯೋಗಿಗಳ ಸೆಲೆಕ್ಷನ್ಗಾಗಿ ಕ್ಯಾಂಪಸ್ಗೆ ಬರುವ ಕಂಪನಿಗಳ ಸಂಖ್ಯೆ ಮತ್ತು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಆಯ್ಕೆಯಾಗಬಹುದಾದ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಬಹುದು ಎಂದು ಫಸ್ಟ್ ನೌಕರಿ ಡಾಟ್ ಕಾಮ್ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಸರ್ವೆಯಲ್ಲಿ ಪಾಲ್ಗೊಂಡ 155ಕ್ಕೂ ಹೆಚ್ಚು ಕಂಪನಿಗಳಲ್ಲಿ ಶೇ.73ರಷ್ಟು ಕಂಪನಿಗಳು ಮುಂದಿನ ವರ್ಷ ಕ್ಯಾಂಪಸ್ ಸೆಲೆಕ್ಷನ್ಗೆ ಕತ್ತರಿ ಹಾಕುವ
ಸುಳಿವು ನೀಡಿವೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳುವ ಶೇ.44ರಷ್ಟು ಕಂಪನಿಗಳು ಕಡಿಮೆ ಪ್ರಮಾಣದಲ್ಲಿ ಆಯ್ಕೆಮಾಡಿಕೊಳ್ಳುವುದಾಗಿ ಹೇಳಿದ್ದರೆ, ಎಂಬಿಎ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಕಂಪನಿಗಳು ಕೆಲವೇ ಕೆಲವು ಕಾಲೇಜುಗಳಿಗಷ್ಟೇ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿವೆ.
ಯಾಕೆ ಹೀಗೆ?
ಇವೆಲ್ಲದಕ್ಕೂ ಕಾರಣ ಕಂಪನಿಗಳ ಆರ್ಥಿಕ ಹಿನ್ನಡೆ. ಇಂಥ ಪರಿಸ್ಥಿತಿಯಲ್ಲಿ ಕಂಪನಿಗಳು ಅತ್ಯುತ್ತಮ ವಿದ್ಯಾರ್ಥಿಗಳನ್ನಷ್ಟೇ ನೌಕರಿಗೆ ಸೇರಿಸಿಕೊಳ್ಳಲು ಆಸಕ್ತಿ ತೋರುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಸಂಬಳಕ್ಕಿಂತ ಮುಖ್ಯವಾಗಿ ತಮ್ಮ ಅರ್ಹತೆ ಮತ್ತು ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಲು ಆಸಕ್ತಿ ತೋರಬೇಕಿದೆ ಎನ್ನುತ್ತಾರೆ ಫಸ್ಟ್ನೌಕರಿಡಾಟ್ಕಾಂನ ವ್ಯವಹಾರ ವಿಭಾಗದ ಮುಖ್ಯಸ್ಥೆ ದೀಪಾಲಿ ಸಿಂಗ್. ವಿದ್ಯಾರ್ಥಿಗಳಲ್ಲಿನ ಸಂವಹನ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯದ ಕೊರತೆ, ಸಂದರ್ಶನ ವೇಳೆ ಆಯ್ಕೆಯಾದ ವಿದ್ಯಾರ್ಥಿಗಳು ಕಂಪನಿಗೆ ಸೇರಲು ಹಿಂದೇಟು ಹಾಕುವುದು ಮತ್ತು ಉತ್ತಮ ಸಂಬಳದ ನಿರೀಕ್ಷೆ ಕ್ಯಾಂಪಸ್ ಸಂದರ್ಶನಕ್ಕೆ ಬರುವ ಕಂಪನಿಗಳ ಪಾಲಿಗೆ ಬಹುದೊಡ್ಡ ಸವಾಲು ಎನ್ನುತ್ತಾರೆ ದೀಪಾಲಿ. ಹಾಗಾದರೆ, ಈ ಕ್ಯಾಂಪಸ್ ಸೆಲೆಕ್ಷನ್ಗೆ ಸಿದ್ಧತೆ ಹೇಗಿರಬೇಕು?
ಪರೀಕ್ಷೆ
ಕೆಲವು ಕಂಪನಿಗಳು ಕ್ಯಾಂಪಸ್ ಆಯ್ಕೆ ವೇಳೆ ಲಿಖಿತ ಆ್ಯಪ್ಟಿಟ್ಯೂಡ್ ಪರೀಕ್ಷೆ ನಡೆಸಬಹುದು. ಇಂಟರ್ನೆಟ್, ಲಭ್ಯವಿರುವ ಪುಸ್ತಕಗಳನ್ನು ಬಳಸಿಕೊಂಡು ಈ ರೀತಿಯ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಿ. ಈ ಹಿಂದೆ ಹೀಗೆ ಸೆಲೆಕ್ಟ್ ಆದ ವಿದ್ಯಾರ್ಥಿಗಳ ನೆರವು ಪಡೆಯಿರಿ.
ಗುಂಪು ಚರ್ಚೆ
ನೀವು ಗುಂಪು ಚರ್ಚೆಯಲ್ಲಿ ಹಿಂದಿದ್ದೀರಾ? ಹಾಗಿದ್ದರೆ ಈಗಿಂದಲೇ ಸಿದ್ಧತೆ ಆರಂಭಿಸಿ. ಯಾಕೆಂದರೆ ಬಹುತೇಕ ಕಂಪನಿಗಳು ನೀವು ಹೇಗೆ ಮಾತನಾಡುತ್ತೀರಿ, ನಿಮ್ಮ ವಿಚಾರವನ್ನು ಹೇಗೆ ಪ್ರಸ್ತುತ ಪಡಿಸುತ್ತೀರಿ, ಯಾವ ರೀತಿ ಗುಂಪಿನೊಂದಿಗೆ ಸಮನ್ವಯ ಸಾಧಿಸುತ್ತೀರಿ, ತಂಡವೊಂದನ್ನು ಮುನ್ನಡೆಸುವ ಕೌಶಲ್ಯ ನಿಮ್ಮಲ್ಲಿ ಇದೆಯೇ ಎನ್ನುವ ಕುರಿತು ಗುಂಪು ಚರ್ಚೆಯ ಮೂಲಕ ಪರೀಕ್ಷೆ ನಡೆಸುತ್ತವೆ.
ಟೆಕ್ನಿಕಲ್ ಇಂಟರ್ವ್ಯೂ
ಈ ರೀತಿಯ ಸಂದರ್ಶನಕ್ಕೆ ನೀವು ಪಠ್ಯದ ಕುರಿತು ಉತ್ತಮ ಜ್ಞಾನ ಹೊಂದಿದ್ದರೆ ಸಾಕು. ಸಾಮಾನ್ಯವಾಗಿ ಸಂದರ್ಶನದಲ್ಲಿ ನಿಮ್ಮಿಷ್ಟದ ಮತ್ತು ಆಯ್ಕೆಯ ವಿಷಯದ ಕುರಿತೇ ಸಂದರ್ಶಕರು ಪ್ರಶ್ನೆಗಳನ್ನು ಕೇಳುತ್ತಾರೆ.
ಎಚ್ಆರ್ ಇಂಟರ್ವ್ಯೂ
ಇದು ಅಂತಿಮ ಹಂತದ ಸಂದರ್ಶನ. ಸಾಧ್ಯವಾದಷ್ಟು ಇಲ್ಲಿ ನಿಮ್ಮನ್ನು ನೀವು ಧನಾತ್ಮಕವಾಗಿ ಪರಿಚಯಿಸುವ ಪ್ರಯತ್ನ ನಡೆಸಿ.
ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಬದುಕಿಗೆ ಪೂರಕವಾದ ಕಾರ್ಯಾಗಾರ ನಡೆಸಲಾಗುತ್ತದೆ. ಕ್ಯಾಂಪಸ್ ಸೆಲೆಕ್ಷನ್ ಸಂದರ್ಭ ವಿದ್ಯಾರ್ಥಿಗಳು ಎದುರಿಸುವ ಭಾಷೆಯ ಸಮಸ್ಯೆಯ ನಿವಾರಣೆಗಾಗಿ ಇಂಗ್ಲಿಷ್ ಸ್ಪೀಕಿಂಗ್ ಕೋಚಿಂಗ್ನ ವ್ಯವಸ್ಥೆ ಇದೆ. ಅಲ್ಲದೆ, ವಿದ್ಯಾರ್ಥಿಗಳಿಗಾಗಿ ಎನ್ಎಂಎಎಂಟಿಯು ಫೇಸ್ಬುಕ್ ಪೇಜ್ ಅನ್ನೂ ಮಾಡಿಕೊಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಕಾಲೇಜಿನಿಂದ ಕ್ಯಾಂಪಸ್ ಸೆಲೆಕ್ಷನ್ ಮೂಲಕ 700ಕ್ಕೂ ವಿದ್ಯಾರ್ಥಿಗಳು ವಿವಿಧ 60 ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ. 2014ರಲ್ಲಿ 40- 50 ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ಗಾಗಿ ನಿಟ್ಟೆ ಶಿಕ್ಷಣ ಸಂಸ್ಥೆಗೆ ಬರಬಹುದು ಎಂಬ ನಿರೀಕ್ಷೆಯಿದೆ.
- ಪ್ರೊ. ಶಾಲಿನಿ ಕೆ. ಶರ್ಮಾ, ನಿಟ್ಟೆ ಇನ್ಸ್ಟಿಟ್ಯೂಟ್
- ವಿದ್ಯಾ ಇರ್ವತ್ತೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


