ಶಿಕ್ಷಣ ಈಕ್ಷಣ
ದೊಡ್ಡೋನಾದ ಮೇಲೆ ಏನಾಗ್ತೀಯ...? ಇದು ಮಕ್ಕಳು ಶಾಲೆ ಸೇರಿದ ಪ್ರಾರಂಭದ ದಿನಗಳಲ್ಲಿ...

ದೊಡ್ಡೋನಾದ ಮೇಲೆ ಏನಾಗ್ತೀಯ...? ಇದು ಮಕ್ಕಳು ಶಾಲೆ ಸೇರಿದ ಪ್ರಾರಂಭದ ದಿನಗಳಲ್ಲಿ ಉತ್ತರಿಸಲೇ ಬೇಕಾದ ಪ್ರಶ್ನೆ. ಬಹುತೇಕ ಡಾಕ್ಟರ್, ಎಂಜಿನಿಯರುಗಳಾದರೆ, ಅಲ್ಲಿಲ್ಲಿ ಲೆಕ್ಚರ್‌ಗಳು ಕಾಣಬಹುದು. ಇದು ನಮ್ಮ ಮಾತಿನ ಮೂಲಕ ನಾವು ಉತ್ತುಂಗ ಎಂದುಕೊಂಡ ಗುರಿಗಳು ಮಗುವಿನ ಉತ್ತರಗಳಲ್ಲಿ ಅನುರಣನಗೊಳ್ಳುವ ರೀತಿ. ಯಾವ ಮಗು ಕೂಡಾ ಟೈಲರ್ ಆಗ್ತೀನಿ, ಅಂಗಡಿ ಇಡ್ತೀನಿ, ಹೊಲಗಳಲ್ಲಿ ದುಡಿಯುವ ರೈತನಾಗ್ತೀನಿ ಎಂದು ಹೇಳುವುದಿಲ್ಲ. ಅಪ್ಪಿ ತಪ್ಪಿ ಆ ಉತ್ತರ ಬಂದರೆ ಎಲ್ಲರೆದುರು ನಗೆಗೀಡಾಗಿ, ತನ್ನ ಉತ್ತರವನ್ನು ಬದಲಾಯಿಸಬೇಕಾಗುತ್ತದೆ.
Aim High.. ಇದು ಮೂಲಮಂತ್ರ. ಆದರೆ ಆ ಎತ್ತರ ಕೇವಲ ಬಿಳಿಕಾಲರಿನ ಉದ್ಯೋಗದ ಮೂಲಕ ಅಳೆಯಲ್ಪಡುವುದು ದುರಂತ. ಸಮಾಜ ಎಂದ ಮೇಲೆ ಎಲ್ಲಾ ರೀತಿಯ ವೃತ್ತಿಗಳೂ ಅನಿವಾರ್ಯ. ಕೆಲವನ್ನು ಕೀಳಾಗಿ, ಇನ್ನು ಕೆಲವನ್ನು ಮೇಲಾಗಿ ಬಿಂಬಿಸುವುದೇಕೆ? ವಿದ್ಯೆ ಇರುವುದು ನಮ್ಮ ಅರಿವಿನ ಹರಿವನ್ನು ಹಿಗ್ಗಿಸುವುದಕ್ಕೆ. ಅದನ್ನು ಬಿಟ್ಟು ಇದು ನಮ್ಮ ಜೀವನೋಪಾಯಕ್ಕೆ ಅನಿವಾರ್ಯವಾದ ಉದ್ಯೋಗ ಪಡೆದುಕೊಳ್ಳಲು ಏಣಿಯಾಗಿ ಮಾತ್ರ ಉಪಯೋಗವಾಗುತ್ತಿದೆ.
ಸಹಜವಾಗಿ ಮಗುವನ್ನು ಬೆಳೆಯಲು ಬಿಡದೆ ನಮ್ಮ ಹೆಗ್ಗಳಿಕೆ ಹೆಚ್ಚಿಸಿಕೊಳ್ಳಲು ಅದನ್ನು ಸಕಲ ವಿದ್ಯಾ ಪಾರಂಗತರನ್ನಾಗಿಸುವ ಪಣ ತೊಡುತ್ತೇವೆ. ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಿದ್ರೆಯ ಸಮಯವನ್ನು ಬಿಟ್ಟರೆ ಉಳಿದೆಲ್ಲಾ ಸಮಯದಲ್ಲು ಅವರಿಗೆ ನಾಲ್ಕು ಗೋಡೆಯ ಮಧ್ಯೆ ಇರುವ ಯಾವುದೋ ಒಂದು ಕ್ಲಾಸು ಅನ್ನುವ ಜೈಲಿನಲ್ಲಿ ಕೂತಿರಬೇಕೆನ್ನುವ ಶಿಕ್ಷೆ ವಿಧಿಸುತ್ತೇವೆ. ಆಟ ಆಡುವುದು ಸುಮ್ಮನೆ ವ್ಯರ್ಥ ಕಾಲಹರಣ ಎಂದುಕೊಳ್ಳುತ್ತೇವೆ. ಮಕ್ಕಳ ಬಾಲ್ಯ ಸಹಜ ತುಂಟಾಟಗಳನ್ನಾಗಲೀ, ಮುದ್ದು ಮಾತುಗಳನ್ನಾಗಲೀ ಬಯಸದ ನಾವುಗಳು ಅವರು ಸದಾ ಪಾಠ ಪುಸ್ತಕದ ಒಳಗೆ ಕಣ್ಣು ತೂರಿಸುತ್ತಿರಬೇಕೆಂದೇ ಬಯಸುತ್ತೇವೆ.
ಇಷ್ಟಾಗಿಯೂ ಮಗು ನಾವು ಬಯಸಿದ ಅತ್ಯುತ್ತಮ ಎಂಬ ಸ್ಥಾನವನ್ನು ಪಡೆಯದಿದ್ದರೆ, ಇನ್ಯಾರನ್ನೋ ಹೋಲಿಸಿ ಅವಮಾನ ಮಾಡುತ್ತೇವೆ. ನಮ್ಮ ಒತ್ತಾಯ, ಒತ್ತಡಗಳು ಹೆಚ್ಚಿದಂತೆಲ್ಲ, ಇದರ ಪರಿಣಾಮ ಮಗುವಿನ ಮುಗ್ಧ ಮನಸ್ಸಿನಲ್ಲಿ ಆಳವಾದ ಗಾಯ ಮೂಡಿಸಬಹುದು. ಇದನ್ನು ನಿಭಾಯಿಸುವಲ್ಲಿ ವಿಪಲತೆಯನ್ನೂ ಪಡೆಯಬಹುದು. ಮಂಕಾಗಬಹುದು, ವಿದ್ಯೆಯ ಕುರಿತು ಅನಾಸಕ್ತಿ ಹೊಂದಬಹುದು, ಇದು ಅವರ ಮುಂದಿನ ಭವಿಷ್ಯಕ್ಕೆ ಮಾರಕ ಹೊಡೆತ ನೀಡಬಹುದು.
ವೇಗವಾಗಿ ಸಾಗುತ್ತಿರುವ ಸ್ಪರ್ಧಾತ್ಮಕ ಯುಗವಿದು. ಸದಾ ಓಡುತ್ತಲೆ ಇರಬೇಕು. ನಿಂತವನನ್ನು ಕೇಳುವವರಿಲ್ಲ. ಓಟದಲ್ಲಿ ಹಿಂದೆ ಬಿದ್ದರೆ ಸೋಲು. ಸೋಲು ಎನ್ನುವುದು ಬದುಕಿನಲ್ಲಿ ಇರಲೇಬಾರದು. ಇದು ನಾವು ಮಕ್ಕಳಿಗೆ ಹೇಳುವ ಮಾತುಗಳು. ಮೇಲು ನೋಟಕ್ಕೆ ಈ ಮಾತಿನಲ್ಲಿ ಏನೂ ತಪ್ಪಿಲ್ಲ. ಆದರೆ ಅದು ತಪ್ಪು ಎಂದು ಅರಿವಾಗುವುದು ಮಗು ಯಾವುದೋ ಕಾರಣದಿಂದ ಹಿಂದೆ ಬಿದ್ದಾಗ. ಆಗ ಅವರನ್ನು ಸಂತೈಸಿ ತಡವುವ ಬದಲು ನಾವಾಡುವ ವ್ಯಂಗ ಭರಿತ ಕೀಳು ಮಾತುಗಳಿಂದ ಅವರ ಆತ್ಮ ಸ್ಥೈರ್ಯವನ್ನು ಕುಗ್ಗಿದಾಗ...
ಎಲ್ಲಿ ತಪ್ಪುತ್ತೇವೆ ನಾವು... ಒಮ್ಮೆ ಅತ್ಮಾವಲೋಕನ ಮಾಡಿಕೊಳ್ಳಬೇಕೆನಿಸುತ್ತದೆ ಅಲ್ಲವೇ..
ಪುಟ್ಟ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ ಹೆಚ್ಚಾಗಿ ಹೊರ ಪ್ರಪಂಚವನ್ನು ಬೆರಗುಗಣ್ಣಿನಿಂದ ನೋಡಿ ಕಲಿಯಲು ಇಷ್ಟ ಪಡುತ್ತವೆ. ಅವರ ಕುತೂಹಲದ ಪ್ರಶ್ನೆಗಳಿಗೆ, ಗೊಣಗದೇ ಉತ್ತರವನ್ನು ಹೇಳುವ ತಾಳ್ಮೆ ನಮ್ಮಲ್ಲಿರಬೇಕು.
ಆಟೋಟಗಳು ಕೇವಲ ದೈಹಿಕ ಕ್ಷಮತೆಯನ್ನು ಮಾತ್ರ ಹೆಚ್ಚಿಸದೆ ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸುತ್ತದೆ. ಅವರ ದಿನದ ಸ್ವಲ್ಪ ಸಮಯವನ್ನು ಇದಕ್ಕಾಗಿ ಮೀಸಲಿಟ್ಟರೆ ಅವರಿಗೆ ಉಂಟಾಗುವ ಸಂತಸದಿಂದ, ಜೀವನ ಪ್ರೀತಿ ಹೆಚ್ಚುತ್ತದೆ.
ಮಾನವ ಸಂಬಂಧಗಳ ಮೌಲ್ಯವನ್ನು ಅವರಿಗೆ ತಿಳಿಸಬೇಕು. ನೆಂಟರಿಷ್ಟರೊಡನೆ ಬೆರೆಯಲು ಬಿಡಬೇಕು.
ಅವರ ಆಸೆಗಳು ನಮ್ಮಿಂದ ಪೂರೈಸಲು ಸಾಧ್ಯವಿಲ್ಲದಂತವುಗಳಾಗಿದ್ದರೆ ಬೇಡ, ಇಲ್ಲ.. ಎಂದು ನಕಾರಾತ್ಮಕ ಧೋರಣೆಯಿಂದ ನಿರಾಕರಿಸುವುದನ್ನು ಬಿಟ್ಟು, ಪ್ರೀತಿಯಿಂದ ಮನವೊಲಿಸಿ, ಅವರನ್ನು ಬೇರೆ ವಿಷಯದ ಕಡೆಗೆ ಗಮನ ಹೋಗುವಂತೆ ನೋಡಿಕೊಳ್ಳಬೇಕು. ನಮ್ಮ ಸಂಸ್ಕೃತಿಯ ಬೆಲೆ, ಹಿರಿಯರೊಡನೆ ನಡೆದುಕೊಳ್ಳುವ ರೀತಿ ನೀತಿ ಇವುಗಳನ್ನು ತಿಳಿ ಹೇಳಬೇಕು.
ನಡೆಯುವವರೆಡವದೆ ಕುಳಿತವರೆಡವುತ್ತಾರೆಯೆ? ತಪ್ಪಿದಾಗ ಬೈದು ಮನ ನೋಯಿಸುವುದಕ್ಕಿಂತ, ಸಹಜವೆಂಬಂತೆ ಸ್ವೀಕರಿಸಿ ತಪ್ಪನ್ನು ಅವರಿಗೆ ಮನದಟ್ಟು ಮಾಡಿಸುವುದು ಮುಖ್ಯ. ಸಣ್ಣ ಪುಟ್ಟ ಘಟನೆಗಳ ಉದಾಹರಣೆ, ನಮ್ಮ ಬಾಲ್ಯದ ತಪ್ಪು ತಿದ್ದಿಕೊಂಡ ಕಥೆಗಳೋ ಅವರಿಗೆ ಸಮಾಧಾನ ನೀಡಿ ಮುಂದೆ ಅದನ್ನು ಮರುಕಳಿಸದಂತೆ ನೋಡಿಕೊಳ್ಳುವಲ್ಲಿ ಸಹಕಾರಿ.
ಜೀವನದ ಸಫಲತೆ ಯಾವುದೋ ಒಂದು ನಿರ್ದಿಷ್ಟ ಉದ್ಯೋಗ ಪಡೆದರೆ ಮಾತ್ರ, ಎಂಬುದನ್ನು ತಿರಸ್ಕರಿಸಿ, ಬದುಕು ನಡೆಸುವ ಹಲವು ದಾರಿಗಳತ್ತಲೂ ನೋಟ ಹರಿಸಲು ಬಿಡಿ. ಉದ್ಯೋಗ ಯಾವುದೇ ಇರಲಿ ಹೆಮ್ಮೆಯಿಂದ ಹೊಸ ಬದುಕಿನತ್ತ ತಲೆ ಎತ್ತಿ ನಡೆಯಲು, ಅನುವು ಮಾಡಿಕೊಡಬೇಕು.
ಯಾರಿಗೆ ಗೊತ್ತು ಮುಂದೊಂದು ದಿನ ನಮ್ಮ ಮಗು ನಡೆದ ಹೊಸದಾರಿ, ಹಲವು ಹೆಜ್ಜೆಗಳು ಹಿಂಬಾಲಿಸುವಂತೆ ಮಾಡಬಹುದು.
ಎಲ್ಲದಕ್ಕಿಂತ ಮುಖ್ಯವಾಗಿ ಅವರ ಸುಂದರ ಬಾಲ್ಯವನ್ನು ಕಳೆದು ಹೋಗದಂತೆ ನೋಡಿಕೊಳ್ಳಬೇಕು. ಮತ್ತೆಂದೂ ಮರಳಿ ಪಡೆಯಲಾಗದ ಆ ಕನಸಿನ ಜೀವನ ಅವರೊಂದಿಗೆ ಕೊನೆಯವರೆಗೆ ಹಸಿರಾಗಿರುವಂತೆ ನೋಡಿಕೊಳ್ಳಲು ನಾವು ಒಂದಿಷ್ಟು ನಮ್ಮ ಪ್ರೀತಿಯ ನೀರೆರೆಯಬೇಕು. ತಡವಾಗಿ ಪರಿತಪಿಸುವುದರಿಂದ, ಇಂದೇ ಸಿದ್ಧರಾಗೋಣ ಅಲ್ಲವೇ?
- ಅನಿತಾ ನರೇಶ್ ಮಂಚಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


