ಯುವಜನ/ಮಕ್ಕಳು

ಮೈಸೂರಿನ ದೊಡ್ಡ ಗಡಿಯಾರ

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಕೊರತೆಯಿಲ್ಲ. ಐತಿಹಾಸಿಕ ಮಹತ್ವದ ಭವ್ಯ ಅರಮನೆಗಳು, ಸುಂದರ ಹೂದೋಟ...

ಮೈಸೂರಿನ ದೊಡ್ಡ ಗಡಿಯಾರ
Published On :

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಕೊರತೆಯಿಲ್ಲ. ಐತಿಹಾಸಿಕ ಮಹತ್ವದ ಭವ್ಯ ಅರಮನೆಗಳು, ಸುಂದರ ಹೂದೋಟಗಳು, ಪಾರಂಪರಿಕ ಕಟ್ಟಡಗಳು, ದೇವಸ್ಥಾನಗಳು, ನಯನ ಮನೋಹರ ಬೃಂದಾವನ, ಮೃಗಾಲಯ, ಕಾರಂಜಿಕೆರೆ, ಚಾಮುಂಡಿಬೆಟ್ಟದಲ್ಲಿರುವ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ದೇವಸ್ಥಾನ... ಹೀಗೆ ಹೆಜ್ಜೆಗೊಂದು ಸುಂದರ ತಾಣ, ಇವುಗಳ ನಡುವೆ ಆಧುನಿಕತೆಯ ಪ್ರಹಾರಗಳನ್ನು ತಾಳಿಕೊಂಡು ಎತ್ತರವಾಗಿ ನಿಂತಿರುವ 'ಗೋಪುರ ಗಡಿಯಾರ' ಇಂದಿಗೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
'ಕ್ಲಾಕ್ ಟವರ್‌' ಎಂದು ಕರೆಯಲಾಗುವ ಈ ಗೋಪುರದ ಗಡಿಯಾರ ನಗರದ ಮಧ್ಯಭಾಗದಲ್ಲಿರುವ ಅರಮನೆ ಮತ್ತು ರಂಗಾಚಾರ್ಯ ಪುರಭವನದ ಎದುರಿಗಿದೆ. ಈ ಗಡಿಯಾರಕ್ಕೆ ಮಹತ್ವದ ಸ್ಥಾನವಿದೆ. 1927ರಲ್ಲಿ ಸಿದ್ಧವಾದ ಈ ಗೋಪುರದ ಗಡಿಯಾರದ ಕೆಳಭಾಗದಲ್ಲಿ ತಯಾರಿಸಿದ ಕಂಪನಿಯ ಹೆಸರನ್ನು ಫ್ರೆಂಚ್ ಭಾಷೆಯಲ್ಲಿ ಬರೆಯಲಾಗಿದೆ. ಹೂವಿನ ಬಳ್ಳಿಯಿಂದ ಕೂಡಿದ ಸಾಲುಗಳು ಗಂಟೆಯ ಸುತ್ತಲೂ ಇದೆ. ಗಂಟೆಯ ಮೇಲ್ಭಾಗವನ್ನು ತೊಲೆಯೊಂದಕ್ಕೆ ತೂಗುಹಾಕಲಾಗಿದೆ. ಗಂಟೆಯ ಮೇಲ್ಭಾಗದಲ್ಲಿ ಗುಮ್ಮಟವಿದೆ. ಅದರ ಮೇಲೊಂದು ಚಿನ್ನಲೇಪಿತ ಕಳಶವಿದೆ.
86 ವಸಂತಗಳನ್ನು ಕಂಡಿರುವ ಈ ಗಡಿಯಾರ ವಿದ್ಯುತ್‌ಚಾಲಿತ. ಮೊದಲು ನಾಲ್ಕು ದಿಕ್ಕಿನಲ್ಲೂ ರೋಮನ್ ಅಂಕಿಗಳಿದ್ದ ಫಲಕಗಳಿದ್ದವು. 1994ರಲ್ಲಿ ಕನ್ನಡ ಜಾಗೃತಿ ವರ್ಷದ ನೆನಪಿಗಾಗಿ ರೋಮನ್ ಅಂಕಿಗಳನ್ನು ತೆಗೆದು ಕನ್ನಡ ಅಂಕಿಗಳನ್ನು ಅಳವಡಿಸಲಾಯಿತು. ಗಡಿಯಾರದಲ್ಲಿ ಸಮಯ ವ್ಯತ್ಯಾಸವಾದರೆ ಗೋಪುರದ ಒಳಗೆ ಪ್ರವೇಶಿಸಿ ಇದನ್ನು ಸರಿಪಡಿಸಬಹುದು. 1927ರಲ್ಲಿ 72 ಅಡಿಗಳಿದ್ದ ಗೋಪುರವನ್ನು ಈಗ 92 ಅಡಿಗಳಷ್ಟು ಎತ್ತರಿಸಲಾಗಿದೆ. ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಗೋಪುರದ ಮಧ್ಯಭಾಗದಲ್ಲಿರುವ ಗಂಡಭೇರುಂಡಕ್ಕೆ ವಿಶೇಷ ದಿವಸಗಳಲ್ಲಿ ದೀಪಾಲಂಕಾರ ಮಾಡಲಾಗುವುದು.
ಈ ದೊಡ್ಡ ಗಡಿಯಾರವನ್ನು 'ಸಿಲ್ವರ್ ಜ್ಯುಬಿಲಿ' ಕ್ಲಾಕ್‌ಟವರ್ ಎಂದು ಕರೆಯುತ್ತಾರೆ. 25 ವರ್ಷಗಳ ಆಳ್ವಿಕೆಯನ್ನು ಪೂರೈಸಿದ ಅತ್ಯಂತ ಜನಪ್ರಿಯ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ರಜತ ಮಹೋತ್ಸವದ ಸ್ಮರಣಾರ್ಥ ಈ ಗಡಿಯಾರ ಸ್ಥಾಪನೆಯಾಯಿತು. ಇತಿಹಾಸವನ್ನು ಕನ್ನಡ, ಸಂಸ್ಕೃತ, ಇಂಗ್ಲಿಷ್, ಪರ್ಷಿಯನ್ ಭಾಷೆಗಳಲ್ಲಿ ಕೆತ್ತಲಾಗಿದೆ.

ಗೋಪುರದ ವೈಶಿಷ್ಟ್ಯಗಳು
ಗೋಪುರವನ್ನು ಗಾರೆಗಚ್ಚಿನಿಂದ ಕಟ್ಟಲಾಗಿದೆ. ಕಟ್ಟಲು ತೆಗೆದುಕೊಂಡ ಅವಧಿ ಕೇವಲ 90 ದಿನಗಳು. ನಿರ್ಮಾಣ ವೆಚ್ಚ ಅಂದಿನ ಕಾಲದಲ್ಲಿ 7 ಸಾವಿರ ರುಪಾಯಿಗಳು. ಗೋಪುರ ಗಡಿಯಾರವನ್ನು ಪ್ರಭವ ಸಂವತ್ಸರದ, ಶ್ರಾವಣ ಮಾಸ, ಶುಕ್ಲಪಕ್ಷ, ಸೋಮವಾರ ದಿನಾಂಕ 8-8-1927ರಂದು ಸ್ಥಾಪಿಸಲಾಯಿತು.
ಈ ದೊಡ್ಡ ಗಡಿಯಾರ ಮೈಸೂರು ನಗರದ ಸೌಂದರ್ಯದ ಪ್ರತೀಕ.

- ಎಂ.ಎಸ್. ಚಂದ್ರಶೇಖರ ಅಯ್ಯರ್, ಮೈಸೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.