ದೇಸಿ ಲುಕ್
ಜಾನಪದ ಸೊಗಡು, ಹಳ್ಳಿಗಾಡಿನ ಜೀವನ, ಸಂಸ್ಕೃತಿ ಬಿಂಬಿಸುವ ಆಟ- ಊಟ... ಒಟ್ಟಾರೆ ನಮ್ಮದು 'ದೇಸಿ ಸಂಸ್ಕೃತಿ' ಎನ್ನುತ್ತಾ ಬೆಂಗಳೂರಿನ ಕಾಲೇಜೊಂದರ...

ಜಾನಪದ ಸೊಗಡು, ಹಳ್ಳಿಗಾಡಿನ ಜೀವನ, ಸಂಸ್ಕೃತಿ ಬಿಂಬಿಸುವ ಆಟ- ಊಟ... ಒಟ್ಟಾರೆ ನಮ್ಮದು 'ದೇಸಿ ಸಂಸ್ಕೃತಿ' ಎನ್ನುತ್ತಾ ಬೆಂಗಳೂರಿನ ಕಾಲೇಜೊಂದರ ಹುಡುಗ, ಹುಡುಗಿಯರು 'ಹಬ್ಬ'ದ ಮೂಡಿನಲ್ಲಿದ್ದರು.
ಹೇಳಿಕೇಳಿ ಇದು ಬೆಂಗಳೂರಿನ ಕಾಲೇಜು. ಈ ಮಾಯಾನಗರಿಯ ಹೈಟೆಕ್ ಸಂಸ್ಕೃತಿ ನಡುವೆ ವಿದ್ಯಾರ್ಥಿಗಳು ಈ ರೀತಿ 'ದೇಸಿ ಸಂಸ್ಕೃತಿ' ಅನ್ನುತ್ತಿದ್ದರೆ ಖಂಡಿತಾ ಅಚ್ಚರಿಯಾದೀತು. ಇದೇ ಅಚ್ಚರಿ ಮುಂದಿಟ್ಟುಕೊಂಡು ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಲಿಟ್ಟಾಗ ಮತ್ತಷ್ಟು ವಿಶೇಷ ಕಾದಿತ್ತು.
ಕಾಲೇಜಿನ ಕನ್ನಡಸಂಘದ ಒತ್ತಾಸೆಯಂತೆ ಇತ್ತೀಚೆಗೆ ಕಾಲೇಜಿನಲ್ಲಿ 'ನಮ್ಮ ಮಣ್ಣು ನಮ್ಮ ಬಣ್ಣ ದೇಸಿ ಹಬ್ಬ' ಆಯೋಜಿಸಲಾಗಿತ್ತು. ಹಬ್ಬದ ಅಂಗವಾಗಿ ಕಾಲೇಜು ಆವರಣವನ್ನು ತೆಂಗಿನ ಗರಿಗಳ ಚಪ್ಪರ, ತಳಿರು ತೋರಣ, ಹೂವಿನಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ತೊಟ್ಟಿದ್ದ ಬಣ್ಣ ಬಣ್ಣದ ದೇಸಿ ಉಡುಗೆ ತೊಡುಗೆಗಳು ಹಬ್ಬಕ್ಕೆ ಜಾತ್ರೆ ಕಳೆ ತಂದುಕೊಟ್ಟಿದ್ದವು. ಒಂದು ಕ್ಷಣ ಇದು ಕಾಲೇಜೋ ನಮ್ಮ ಹಳ್ಳಿಯ ಜಾತ್ರೆಯೋ ಎನ್ನುವ ಭಾವನೆ ಮೂಡುವಂತಿತ್ತು.
ಹಬ್ಬವಷ್ಟೇ ಅಲ್ಲ ಸ್ಪರ್ಧೆಯೂ...
ಈ ದೇಸಿ ಹಬ್ಬ ಒಂದು ಕಾಲೇಜಿಗಷ್ಟೇ ಸೀಮಿತವಾಗಿರಲಿಲ್ಲ. ಹಲವು ಕಾಲೇಜು ವಿದ್ಯಾರ್ಥಿಗಳೂ ಇಲ್ಲಿ ಸೇರಿದ್ದರು. ಹಬ್ಬದ ಅಂಗವಾಗಿ ಅಂತರ್ ಕಾಲೇಜು ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮನರಂಜನೆ ನೀಡಿದರು, ಸ್ವತಃ ಮನರಂಜನೆ ಪಡೆದರು. ಇದೇ ವೇಳೆ ದೇಸಿ ಆಟಗಳಾದ ಚೌಕಾಬಾರ, ಕೋಲಾಟ ಮತ್ತಿತರ ಆಟಗಳನ್ನು ವಿದ್ಯಾರ್ಥಿಗಳಿಂದ ಆಡಿಸಿ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು.
ವರ್ಲಿ ಕಲೆ
ದೇಸಿಯತೆ ಬಿಂಬಿಸುವ ವರ್ಲಿ ಕಲೆಯನ್ನು ಕಾಲೇಜು ಕಟ್ಟಡದ ಸುತ್ತ ಬರೆದದ್ದು ವಿಶೇಷವಾಗಿತ್ತು. ಇದನ್ನು ಬರೆದವರು ವೃತ್ತಿಪರ ಕಲಾವಿದರಲ್ಲ, ಬದಲಾಗಿ ವಿದ್ಯಾರ್ಥಿಗಳೇ. ಹತ್ತಕ್ಕೂ ಹೆಚ್ಚು ದಿನ ಸಂಯಮದಿಂದ ಕೂತು ಅವರು ಈ ಚಿತ್ರ ಬರೆದಿದ್ದರು.
ಊಟವೂ ದೇಸಿ
ದೇಸಿ ಆಟ, ದೇಸಿ ಕಲೆ, ದೇಸಿ ಬಟ್ಟೆ ಎಲ್ಲವೂ ಆಯಿತು. ಇನ್ನು ಊಟದಲ್ಲಿ ದೇಸಿತನ ತೋರಿಸದಿದ್ದರೆ ಹೇಗೆ? ಇದೇ ಕಾರಣಕ್ಕೆ ಕಾಲೇಜು ಸಾಂಸ್ಕೃತಿಕ ಸಮಿತಿ ಹಾಗೂ ಕನ್ನಡ ಸಂಘದ ಸದಸ್ಯರು ಸೇರಿ ಅಡಕೆ ತಟ್ಟೆ ಕೊಟ್ಟು ಅಚ್ಚ ಹಳ್ಳಿಯ ಊಟ ಬಡಿಸಿದರು. ಮುದ್ದೆ- ಅವರೇ ಬೇಳೆಸಾರು, ಪಾಯಿಸಾ, ಉಪ್ಪಿನಕಾಯಿ ಊಟದ ರುಚಿಯನ್ನು ಎಲ್ಲರೂ ಕೊಂಡಾಡಿದರು.
ಇನ್ನು ಈ ಹಬ್ಬಕ್ಕೆ ಚಾಲನೆ ನೀಡಿದ ವಿಧಾನವೂ ಅಪ್ಪಟ ದೇಸಿ ಪೂಜಾ ಕುಣಿತದಿಂದ.
ನಂತರ ಅತಿಥಿಗಳು ಡೋಲು ಬಾರಿಸುವ ಮೂಲಕ ಭಾಷಣ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳನ್ನು ದೇಸಿ ಸ್ಟೈಲ್‌ನಲ್ಲೇ ಕರಿ ಕಂಬಳಿ ಹಾಸಿದ ಚಾವಡಿಯ ಮೇಲೆ ಕೂರಿಸಿದ್ದು ಮತ್ತೊಂದು ವಿಶೇಷ. ಅಲ್ಲದೆ, ಅವರಿಗೆ ನೀಡಲಾದ ಹಣ್ಣು ಮತ್ತು ಅದರ ಬುಟ್ಟಿ ಕೂಡ ದೇಸಿ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು.
ಒಟ್ಟಿನಲ್ಲಿ ನಿಜಕ್ಕೂ ಇದು ದೇಸಿ ಹಬ್ಬವನ್ನು ನೆನಪಿಸುವ ಕಾರ್ಯಕ್ರಮ. ಇಂಥದ್ದೊಂದು ಕಾರ್ಯಕ್ರಮ ಎಲ್ಲಾ ಕಾಲೇಜುಗಳಲ್ಲೂ ನಡೆದರೆ ನಮ್ಮ ದೇಸಿ ಸಂಸ್ಕೃತಿ ಮುಂದಿನ ತಲೆಮಾರಿನವರೆಗೂ ಉಳಿಸಿ, ಬೆಳೆಸಲು ಸಾಧ್ಯವಾದೀತು ಎನ್ನುವುದು ಬಹುತೇಕ ಅತಿಥಿಗಳ ಅಭಿಪ್ರಾಯವಾಗಿತ್ತು.
ಉತ್ತಮ ಪ್ರತಿಕ್ರಿಯೆ
ವಿದ್ಯಾರ್ಥಿಗಳಿಗೆ ಕೇವಲ ಅಂತರ ಕಾಲೇಜು ಸ್ಪರ್ಧೆ ನಡೆಸುವುದರಿಂದ ಯಾವುದೇ ಅರ್ಥ ಇಲ್ಲ. ನಶಿಸಿ ಹೋಗುತ್ತಿರುವ ಕಲೆಯ ಪರಿಚಯ ಮಾಡಿಕೊಡಬೇಕೆಂಬುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ವಿದ್ಯಾರ್ಥಿಗಳು ಹಾಗೂ ಕಾಲೇಜು ಅಧ್ಯಾಪಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
- ಡಾ. ರಮೇಶಚಂದ್ರ ದತ್ತ
ಕನ್ನಡ ಸಂಘದ ಸಂಚಾಲಕರು
- ದೇವರಾಜ್ ಎಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


