ಗ್ಯಾಜೆಟ್ ಗುಂಗು
20 ವರ್ಷಗಳ ಹಿಂದೆ...- ಸಂಜೆ ಐದರ ನಂತರ ಯಾವುದೇ ಹಳ್ಳಿಯ ರಸ್ತೆಯಲ್ಲೊಮ್ಮೆ ಓಡಾಡಿದರೆ...

20 ವರ್ಷಗಳ ಹಿಂದೆ...
- ಸಂಜೆ ಐದರ ನಂತರ ಯಾವುದೇ ಹಳ್ಳಿಯ ರಸ್ತೆಯಲ್ಲೊಮ್ಮೆ ಓಡಾಡಿದರೆ ಊರಿನ ಹೆಚ್ಚಿನ ಮಂದಿಯನ್ನು ಭೇಟಿಯಾಗಿ ಬಿಡಬಹುದಿತ್ತು. ಊರ ಹೆಂಗಸರೆಲ್ಲಾ ಅವರವರ ಮನೆಯೆದುರಿನ ಕಟ್ಟೆಯ ಮೇಲೆ ಕುಳಿತು ಯಾವ್ಯಾವುದೋ ಗಾಸಿಪ್‌ಗಳನ್ನು ಸವಿಯುತ್ತಿದ್ದರು. ಗಂಡಸರೂ ಅದರಲ್ಲಿ ಭಾಗವಹಿಸುತ್ತಿದ್ದರು ಅಥವಾ ಊರ ಮುಂದಿನ ದೊಡ್ಡ ಆಲದ ಮರದಡಿ ಇಲ್ಲವೇ ದೇವಸ್ಥಾನಗಳ ಜಗಲಿಯ ಮೇಲೆ 'ವಿಶೇಷ ಸಭೆ'ಗಳನ್ನು ನಡೆಸುತ್ತಿದ್ದರು.
- ಎಪ್ಪತ್ತರ ದಶಕದಲ್ಲಿ ನಾನು ಶಿವಮೊಗ್ಗದಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಸಂಜೆ ಐದು ಗಂಟೆಯಾಗುತ್ತಿದ್ದಂತೆ ಸ್ನೇಹಿತರೆಲ್ಲಾ ಸೇರಿ ಬಡಾವಣೆಯ ರಸ್ತೆಯಲ್ಲಿ 'ಕಾತರ'ದಿಂದ ತಿರುಗುತ್ತಿದ್ದೆವು. ಮನೆಯ ಕಾಂಪೌಂಡಿಗೋ, ಗೇಟಿಗೋ ಆತುಕೊಂಡು ಹರಟೆ ಕೊಚ್ಚುತ್ತಾ ನಿಂತಿರುತ್ತಿದ್ದ ಹುಡುಗಿಯರು ಒಮ್ಮೆ ನಮ್ಮ ಕಡೆ ಕುಡಿನೋಟ ಹರಿಸಿಬಿಟ್ಟರೆ ರೋಮಾಂಚನಗೊಳ್ಳುತ್ತಿದ್ದೆವು.
- ಮನೆಯಲ್ಲಿ ರಾತ್ರಿ ಊಟವಾದ ಮೇಲೆ ಒಂದು ಗಂಟೆ ನಾವು ಐದು ಮಕ್ಕಳು ಮತ್ತು ಅಪ್ಪ, ಅಮ್ಮ ಎಲ್ಲಾ ಸೇರಿ ಹರಟೆ ಹೊಡೆಯುತ್ತಿದ್ದೆವು. ನಮ್ಮ ಮನೆಗೆ ಬರುವ ನೆಂಟರೂ ಇದರಲ್ಲಿ ಮುಕ್ತವಾಗಿ ಭಾಗವಹಿಸುತ್ತಿದ್ದರು.
- ಜನ ಬಸ್ಸುಗಳಲ್ಲಿ ಅಥವಾ ಬಸ್ ನಿಲ್ದಾಣದಲ್ಲಿ ಸಮಯ ಕಳೆಯಲು ಪಕ್ಕದವರೊಡನೆ ಮಾತು ಬೆಳೆಸುತ್ತಿದ್ದರು. ಇದರಿಂದ ಉತ್ತಮ ಸ್ನೇಹಿತರು ಸಿಗುವ ಸಾಧ್ಯತೆಗಳಿತ್ತು. ಹಲವು ಬಾರಿ ಹೆಣ್ಣು ಗಂಡಿನ ವ್ಯವಹಾರಗಳೂ ಇಂಥ ಕಡೆಗಳಲ್ಲಿ ಕುದುರಿ ಕೆಲವರಿಗೆ ಕಂಕಣ ಬಲ ಕೂಡಿ ಬರುತ್ತಿತ್ತು.
ಆದರೆ ಈಗ...
- ಸಂಜೆಯಾದೊಡನೆ ಜನರೆಲ್ಲ ತಮ್ಮ ನೆಚ್ಚಿನ ಮೆಗಾ ಧಾರಾವಾಹಿಗಳಿಗಾಗಿ ಟೀವಿಯ ಮುಂದೆ ಸ್ಥಾಪಿತಗೊಂಡಿರುತ್ತಾರೆ. ರಸ್ತೆಯೆಲ್ಲಾ ಭಣಭಣ, ಮನೆಗಳಿಂದ ಟಿವಿಯ ಸದ್ದು ಮಾತ್ರ ಕೇಳುತ್ತದೆ.
- ಪೇಟೆಯ ಹುಡುಗರು ಮೊಬೈಲ್ ಮಾಯಾಜಾಲಕ್ಕೆ ಸಿಕ್ಕು ಡೇಟಿಂಗ್ ಮಾಡುತ್ತಿರಬೇಕಾದರೆ ಲೈನು ಹೊಡೆಯುವುದಕ್ಕೆ ಅರ್ಥವೇ ಇಲ್ಲ. ಸಣ್ಣ ಊರುಗಳಲ್ಲಿ 'ಗೋಯಿಂಗ್ ಸ್ಟಡಿ' ಸಾಧ್ಯವಿಲ್ಲದಿದ್ದರೂ ಅದರ ಪ್ರಾದೇಶಿಕ ರೂಪಾಂತರಗಳಿವೆ.
- ನಮ್ಮ ಮನೆಯಲ್ಲಿ ಮಕ್ಕಳೆಲ್ಲಾ ಚದುರಿ ಹೋಗಿದ್ದೇವೆ. ನೆಂಟರೂ ಬರುವುದು ಕಡಿಮೆಯಾಗಿದೆ. ಬಂದವರೂ ನಮ್ಮ ಜತೆ ಕುಳಿತು ಟಿವಿ ನೋಡುವುದರಿಂದ ಮುಕ್ತ ಮಾತುಕತೆಗಳಿಗಿಂತ 'ಮುಕ್ತ ಮುಕ್ತ' ಹೆಚ್ಚು ಆಕರ್ಷಣೀಯವಾಗಿದೆ.
- ಬಸ್‌ಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜನ ಮೊಬೈಲ್‌ನಲ್ಲಿ ಮಾತನಾಡುವುದರಲ್ಲೋ ಅಥವಾ ಎಫ್‌ಎಂ ರೇಡಿಯೋ ಕೇಳುವುದರಲ್ಲೋ ಮುಳುಗಿರುತ್ತಾರೆ. ಅಕ್ಕಪಕ್ಕದವರೊಡನೆ ನಾವಾಗಿಯೇ ಮಾತು ಬೆಳೆಸುವುದು ಸೌಜನ್ಯವಲ್ಲ ಎನ್ನುವ ಪಾಶ್ಚಿಮಾತ್ಯರ ತಪ್ಪು ತಿಳಿವಳಿಕೆ ನಮ್ಮಲ್ಲೂ ಬೇರೂರುತ್ತಿದೆ.
- ಬಸ್‌ಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜನ ಒಂದೋ ಮೊಬೈಲ್‌ನಲ್ಲಿ ಮಾತನಾಡುತ್ತಿರುತ್ತಾರೆ ಅಥವಾ ಎಫ್‌ಎಂ ರೇಡಿಯೋ ಕೇಳುತ್ತಿರುತ್ತಾರೆ. ಅಕ್ಕಪಕ್ಕದವರೊಡನೆ ನಾವಾಗಿಯೇ ಮಾತು ಬೆಳೆಸುವುದು ಸೌಜನ್ಯದ ಲಕ್ಷಣವಲ್ಲ ಎನ್ನುವ ಪಾಶ್ಚಿಮಾತ್ಯರ ತಪ್ಪು ತಿಳಿವಳಿಕೆ ನಮ್ಮಲ್ಲೂ ಬೇರೂರುತ್ತಿದೆ.
- ಹಳೆಯದೆಲ್ಲಾ ಸರಿ ಮತ್ತು ಹೊಸದೆಲ್ಲಾ ತಪ್ಪು ಎಂದು ಹೇಳುವುದು ಉದ್ದೇಶವಲ್ಲ. ಹಾಗೆ ನೋಡಿದರೆ ಹಳೆಯದು ಅತ್ಯುತ್ತಮವೇನೂ ಆಗಿರಲಿಲ್ಲ. ಆದರೆ, ಅದನ್ನು ಸುಧಾರಿಸುವುದು ಅಂದರೆ ಹೊಸ ಸಮಸ್ಯೆಗೆ ಸಿಲುಕಿಕೊಳ್ಳುವುದು ಅಂತೇನೂ ಆಗಬೇಕಿಲ್ಲವಲ್ಲ. ಅಭಿವೃದ್ಧಿ ಹೊಂದುವುದು ಅಥವಾ ಮುಂದುವರಿಯುವುದು ಎಂದರೆ ಮನುಷ್ಯ ಮನುಷ್ಯರ ನಡುವಿನ ಸಂಪರ್ಕವನ್ನೇ ಕಡಿದು ಹಾಕುವುದು ಎಂದಾಗಿದೆಯಲ್ಲಾ, ಇದೆಷ್ಟು ಆರೋಗ್ಯಕರ ಎನ್ನುವುದಷ್ಟೇ ಇಲ್ಲಿನ ಪ್ರಶ್ನೆ.
- ಜನರು ಒಟ್ಟಾಗಿ ಸೇರಿದಾಗ ಹೆಚ್ಚಿನ ಸಮಯದಲ್ಲಿ ಅನಗತ್ಯ ಗಾಸಿಪ್‌ಗಳು, ಯಾರನ್ನಾದರೂ ಹಣಿಯುವ ಕುತಂತ್ರಗಳು, ಬರೀ ಒಣ ರಾಜಕೀಯ ಚರ್ಚೆ, ಬೇಡದ ಊರ ಉಸಾಬರಿ ಇಂತಹವುಗಳಿಗೆ ಪ್ರಾಮುಖ್ಯತೆ ಸಿಗುತ್ತಿದ್ದವು ಎಂದುಕೊಳ್ಳೋಣ. ಆದರೆ, ಅಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಸಂಪರ್ಕ ಮತ್ತು ಸಂವಹನವೇರ್ಪಡುತ್ತಿತ್ತು. ಆಗ ನಮ್ಮೊಳಗಿನ ಭಾವನೆಗಳು ಹೊರಬಂದು ಮನಸ್ಸು ನಿರಾಳವಾಗುತ್ತಿತ್ತು. ಇದರಿಂದ ಜಗಳ, ಹೊಡೆದಾಟಗಳಾಗುವ ಸಾಧ್ಯತೆಗಳಿದ್ದರೂ ಸಂವಹನವೇ ಇಲ್ಲದ ಸ್ಥಿತಿಗಿಂತ ಇಂಥ ಋಣಾತ್ಮಕ ಸಂವಹನವಾದರೂ ಇರುವುದು ಅತ್ಯುತ್ತಮ ಎಂದು ಮನಃಶಾಸ್ತ್ರಜ್ಞರು ಮತ್ತು ಸಾಮಾಜಿಕ ವಿಜ್ಞಾನಿಗಳೆಲ್ಲರೂ ಒಪ್ಪುತ್ತಾರೆ. ಸಂಘಜೀವಿಯಾದ ಮನುಷ್ಯನ ಭಾವನಾತ್ಮಕ ಅಗತ್ಯಗಳು ಇಂಥ ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಪೂರ್ಣಗೊಳ್ಳುತ್ತಿದ್ದುದರಿಂದ ಆತ ಮಾನಸಿಕವಾಗಿ ಸಮಸ್ಥಿತಿಯಲ್ಲಿರುವ ಸಾಧ್ಯತೆಗಳೂ ಹೆಚ್ಚಾಗಿದ್ದವು.
ಇಂದು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಆಕರ್ಷಣೆ ಮಾನವೀಯ ಸಂಬಂಧಗಳ ಕರುಳಬಳ್ಳಿಯನ್ನು ಕತ್ತರಿಸುತ್ತಿದೆ. ಹೀಗೆ ಮನುಷ್ಯರ ನಡುವಿನ ಸಂವಹನ ಕಡಿಮೆಯಾಗುತ್ತಾ ಬಂದಂತೆ ನಮ್ಮ ಭಾವನಾತ್ಮಕ ಅಸ್ಥಿರತೆಗಳು ಹೆಚ್ಚುತ್ತವೆ. ಹದಗೆಡುತ್ತಿರುವ ಸಾಮಾಜಿಕ ವ್ಯವಸ್ಥೆ, ಹಾಳಾಗುತ್ತಿರುವ ಕೌಟುಂಬಿಕ ಸಂಬಂಧಗಳು, ಹೆಚ್ಚುತ್ತಿರುವ ವಿಚ್ಛೇದನಗಳು, ಏರುತ್ತಿರುವ ಮಧುಮೇಹ ಮತ್ತಿತರ ಲೈಫ್‌ಸ್ಟೈಲ್ ಕಾಯಿಲೆಗಳು ಇವೆಲ್ಲವುಗಳಿಗೆ ಸಾಕಷ್ಟು ಕಾಣಿಕೆ ನೀಡುತ್ತಿರುವುದು ನಮ್ಮಲ್ಲಿ ವ್ಯಕ್ತಪಡಿಸದೇ ಉಳಿದಿರುವ ಭಾವನೆಗಳ ಒತ್ತಡ ಎಂದು ಇತ್ತೀಚೆಗೆ ಎಚ್ಚರಿಸಲಾಗುತ್ತದೆ.
ನಾವೀಗ ಗ್ಯಾಜೆಟ್‌ಗಳ ಮಹಾಪೂರದಲ್ಲಿ ಕೊಚ್ಚಿಹೋಗಿದ್ದೇವೆ ಮತ್ತು ನಮ್ಮ ಅಸ್ತಿತ್ವಕ್ಕೆ ಅವು ಗಾಳಿ, ನೀರುಗಳಷ್ಟೇ ಅಗತ್ಯ ಎನ್ನುವ ಸ್ಥಿತಿ ತಲುಪಿದ್ದೇವೆ. ಮನುಷ್ಯ ಸಂಬಂಧಗಳಿಗೆ ಹೆಚ್ಚಿನ ಆತಂಕಗಳನ್ನೊಡ್ಡಿರುವುದು ದೂರಸಂಪರ್ಕ ಸಾಧನಗಳು ಅದರಲ್ಲೂ ಪ್ರಮುಖವಾಗಿ ಟಿವಿ, ಮೊಬೈಲ್, ಕಂಪ್ಯೂಟರ್ ಹಾಗೂ ಅಂತರ್ಜಾಲ. ವಿಪರ್ಯಾಸ ನೋಡಿ. ಈ ದೂರಸಂಪರ್ಕ ಸಾಧನಗಳು ನಮ್ಮನ್ನು ಕ್ಷಣಮಾತ್ರದಲ್ಲಿ ಪ್ರಪಂಚದೆಲ್ಲೆಡೆ ಕರೆದೊಯ್ಯುತ್ತವೆ. ಆದರೆ, ಪಕ್ಕದಲ್ಲೇ ಇರುವವರಿಂದ ನಮ್ಮನ್ನು ದೂರಮಾಡಿದೆ. ಇವುಗಳು ಭೌತಿಕ ಪ್ರಪಂಚವನ್ನು ಕಿರಿದಾಗಿಸಿವೆ. ಅದರ ಜತೆಗೆ ವಿಶ್ವಕ್ಕಿಂತ ವಿಶಾಲವಾಗಿದ್ದ ನಮ್ಮ ಮನೋಪ್ರಪಂಚವನ್ನೂ ಅನುಭವಕ್ಕೆ ಬರದಷ್ಟು ಚಿಕ್ಕದಾಗಿಸಿವೆ.
ಪಾಶ್ಚಿಮಾತ್ಯರ ಭೌತಿಕ ಸಾಧನಗಳಷ್ಟೇ ನಮಗೆ ಬೇಕು. ಆದರೆ, ಅವರ ಜೀವನಶೈಲಿ ಮಾತ್ರ ಬೇಡ ಎಂದರೆ ಅದು ಸಾಧ್ಯವಿಲ್ಲದ ಕನಸು. ಗ್ಯಾಜೆಟ್‌ಗಳ ಜೊತೆಗೆ ಅಲ್ಲಿನ ಸಾಮಾಜಿಕ ಪಿಡುಗುಗಳಾದ ಮುಕ್ತ ವಿಚ್ಛೇದನಗಳು, ಸಡಿಲಗೊಂಡ ಕೌಟುಂಬಿಕ/ ಸಾಮಾಜಿಕ ಸಂಬಂಧಗಳು, ಹೆಚ್ಚುತ್ತಿರುವ ಭಾವನಾತ್ಮಕ ಮತ್ತು ಆರೋಗ್ಯದ ಸಮಸ್ಯೆಗಳು ಎಲ್ಲವನ್ನೂ ನಾವು ಒಪ್ಪಿಕೊಳ್ಳಬೇಕು. ಸಮಸ್ಯೆಗಳು ಬೇಡವೆಂದರೆ ಗ್ಯಾಜೆಟ್‌ಗಳ ಬಳಕೆ ನಿಯಂತ್ರಿಸಬೇಕು. ಈ ನಿಯಂತ್ರಣದ ಪ್ರಾರಂಭ ಈ ತಲೆಮಾರಿನಿಂದಲೇ ಆರಂಭವಾಗಬೇಕು. ಏಕೆಂದರೆ ಮುಂದಿನ ತಲೆಮಾರುಗಳು ಹುಟ್ಟಿನಿಂದಲೇ ಗ್ಯಾಜೆಟ್‌ಗಳ ಬಳಕೆ ಪ್ರಾರಂಭಿಸಿರುವುದರಿಂದ ನಿಯಂತ್ರಣದ ಮಾತೇ ಅವರ ಕಲ್ಪನೆಯನ್ನು ಮೀರಿರುತ್ತದೆ.
ಹಾಗಾಗಿ ತಕ್ಷಣ ನಮ್ಮ ನಡುವೆ ಮುಖಾಮುಖಿಯಾದ ಸಂಪರ್ಕ(ಮೆಸೇಜು, ಇ-ಮೇಲ್ ಫೇಸ್‌ಬುಕ್ ಸಂಪರ್ಕಗಳಲ್ಲ!) ಮತ್ತೆ ಸ್ಥಾಪಿಸಿಕೊಳ್ಳುವ ಬಗ್ಗೆ ಒಂದು ಸಾಮಾಜಿಕ ಆಂದೋಲನ ಶುರುವಾಗಬೇಕಿದೆ. ಇದರ ಮೊದಲ ಹಂತವಾಗಿ ನಾವು ಗ್ಯಾಜೆಟ್‌ಗಳ ಬಳಕೆಯನ್ನು ನಿಯಂತ್ರಿಸಿಕೊಳ್ಳಲೇಬೇಕು.
-ನಡಹಳ್ಳಿ ವಸಂತ್
nvasanth1@hotmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


