ಬೈಟುಕಾಫಿ

ಈ ಪುಸ್ತಕ ಬರೆದು ನಾನೇ ಬದಲಾದೆ

ವಿನೋದಕ್ಕಾಗಿ ಕಥೆಗಳನ್ನು ಬರೆದರು. ನಾಟಕಗಳನ್ನು ಬರೆದರು. ಹೆಸರಿಗಾಗಿ ಕಾದಂಬರಿಗಳನ್ನು ಬರೆದರು....

ಈ ಪುಸ್ತಕ ಬರೆದು ನಾನೇ ಬದಲಾದೆ
Published On :

ವಿನೋದಕ್ಕಾಗಿ ಕಥೆಗಳನ್ನು ಬರೆದರು. ನಾಟಕಗಳನ್ನು ಬರೆದರು. ಹೆಸರಿಗಾಗಿ ಕಾದಂಬರಿಗಳನ್ನು ಬರೆದರು. ಹಣಕ್ಕಾಗಿ ಸಿನಿಮಾಗಳಿಗೆ ಬರೆದರು. ಕಾದಂಬರಿ ಕ್ಷೇತ್ರಕ್ಕೆ ಓದುಗರು ಕಡಿಮೆಯಾದರೆಂದೆನಿಸಿದಾಗ ವ್ಯಕ್ತಿತ್ವವಿಕಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆದರು. ಇವೆಲ್ಲಾ ಸುಮ್ಮನೆ ಸಾಧ್ಯವಾಗಲಿಲ್ಲ. ಎಷ್ಟೋ ಪುಸ್ತಕಗಳನ್ನು ಓದಿದರು. ಇಂಗ್ಲೀಷಿನೊಂದಿಗೆ ಇತರ ಭಾಷೆಗಳ ಸಾಹಿತ್ಯವನ್ನು ಸವಿಸ್ತಾರವಾಗಿ ಅಧ್ಯಯನ ಮಾಡಿದರು. ತನ್ನದೇ ಆದ ಶೈಲಿಯನ್ನು ಸೃಷ್ಟಿಸಿಕೊಂಡರು. ಓದುಗರೊಂದಿಗೆ ಆತ್ಮೀಯ ಸಂಬಂಧಗಳನ್ನು ಬೆಳೆಸಿಕೊಂಡರು. ಯಾವುದನ್ನು ಮಾಡಿದರೂ ಇಷ್ಟದಿಂದಲೇ ಮಾಡಿದರು. ಬಹಳ ಜನ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಈಗ ಅವರು ತಮಗೆ ಸಂತೃಪ್ತಿ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇವರೇ ತೆಲುಗು, ಕನ್ನಡ, ತಮಿಳು, ಮಲಯಾಳ ಭಾಷೆಗಳಲ್ಲಿ ಜನಪ್ರಿಯರಾದ ಯಂಡಮೂರಿ ವೀರೇಂದ್ರನಾಥ್.



'ಕಣಿವೆಯಿಂದ ಶಿಖರಕ್ಕೆ' ಎನ್ನುವ ವ್ಯಕ್ತಿತ್ವ ವಿಕಸನದ ಮತ್ತೊಂದು ಪುಸ್ತಕ ಬರೆಯುವುದರ ಹಿಂದಿನ ಉದ್ದೇಶವೇನು?
ನಾನು ಕೆಲವು ದಶಕಗಳಿಂದ ಯಶಸ್ಸು ಎಂದರೆ ಏನೆಂದು ಆಲೋಚಿಸುತ್ತಿದ್ದೆ. ನಮ್ಮ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂದು ಅನೇಕರು ಹೇಳುತ್ತಾರೆ. ಐಏಎಸ್, ಐಪಿಎಸ್ ಅಧಿಕಾರಿಗಳು, ಎಪ್ಪತ್ತು ವರ್ಷದ ಅಧಿಕಾರಿಗಳು ಕೂಡಾ ನಾನು ಬದುಕಿನಲ್ಲಿ ಮೇಲೆ ಬರಬೇಕೆನ್ನುತ್ತಾರೆ. ಈ ಪ್ರಶ್ನೆ ನನ್ನ ಮನದಲ್ಲಿ ಗುಂಯ್ಗುಡುತ್ತಲೇ ಇತ್ತು. ನಾನು ಈ ಪ್ರಶ್ನೆಯನ್ನು ಅನೇಕ ವಿದ್ಯಾರ್ಥಿಗಳನ್ನು ಕೇಳುತ್ತೇನೆ. ಅವರು ತಮ್ಮ 25ನೇ ವರ್ಷದಲ್ಲಿ ಮೇಲೆ ಬರುವೆವೆನ್ನುತ್ತಾರೆ. ಅಂದರೆ ಒಂದು ಚಿಕ್ಕ ಉದ್ಯೋಗ ಸಂಪಾದಿಸಿದರೆ ಮೇಲಕ್ಕೆ ಬಂದಂತೆ ಅಂದುಕೊಳ್ಳುತ್ತಾರೆ. ನನ್ನ ಪ್ರಕಾರ ಇದು ಬದುಕಿನಲ್ಲಿ ಮೇಲೆ ಬರುವುದಲ್ಲ. ಆ ಸಮಯದಲ್ಲಿ ನನಗೆ ಬದುಕಿನಲ್ಲಿ ಮೇಲೆ ಬರುವುದೆಂದರೇನೆಂದು ಹಠಾತ್ತನೆ ಹೊಳೆದಿತ್ತು. ಆಗ ಈ ಪುಸ್ತಕ ಬರೆಯಲು ಆರಂಭಿಸಿದೆ. ನನ್ನ ಪ್ರಕಾರ, ಪುಸ್ತಕದ ಮೊದಲ ಅಧ್ಯಾಯ ಹೇಳುವುದೇನೆಂದರೆ ನಾವು ಷಡ್ವಿಧ ದರಿದ್ರಗಳಿಂದ ಹೊರಬೀಳಬೇಕು. ಅಂದರೆ ಕಾಮ, ಕ್ರೋಧ, ಲೋಭ, ಮದ, ಮಾತ್ಸರ್ಯ ಮತ್ತು ಮೋಹವೆಂಬ ಅರಿಷಡ್ವರ್ಗಗಳಿಂದ ತಪ್ಪಿಸಿಕೊಳ್ಳಬೇಕು. ನಂತರ ಷಡೈಶ್ವರ್ಯಗಳನ್ನು ಅಂದರೆ ಆರೋಗ್ಯ, ಕೀರ್ತಿ, ಸಂಪತ್ತು, ಪ್ರೇಮ, ಜ್ಞಾನ ಮತ್ತು ಆಸಕ್ತಿ ಪಡೆದುಕೊಳ್ಳಬೇಕು. ಮೊದಲ ಆರನ್ನು ಬಿಟ್ಟು ಎರಡನೆಯ ಆರನ್ನು ಸಂಪಾದಿಸಿದರೆ ಆಗ ಮನುಷ್ಯನು ಬದುಕಿನಲ್ಲಿ ಮೇಲೆ ಬಂದಿರುವೆನೆಂದು ಆರಾಮವಾಗಿ ಹೇಳಬಹುದು. ಈ ಪೀಠಿಕೆಯೊಂದಿಗೆ ಈ ಪುಸ್ತಕವನ್ನು ಬರೆಯಲಾರಂಭಿಸಿದೆ. ಬರೆಯಲು ನನಗೆ 2 ವರ್ಷ ಹಿಡಿಯಿತು. ಈ ಹಸ್ತಪ್ರತಿಯನ್ನು 20 ಸಲವಾದರೂ ಓದಿದ್ದೇನೆ. ಹೆಚ್ಚುಕಡಿಮೆ ನನಗೆ ಈ ಪುಸ್ತಕ ಬಾಯಿಪಾಠವಾಗಿದೆ. ಸಾಕಷ್ಟು ನೋವು ಅನುಭವಿಸಿದ್ದೇನೆ.

ನಿಮ್ಮ ಪುಸ್ತಕ ಓದುತ್ತಿದ್ದರೆ ಇದೊಂದು ಸಾರಾಂಶವೆಂದೂ, ಇದರಲ್ಲಿನ ಪ್ರತಿಯೊಂದು ವಿಷಯವನ್ನೂ ಹಿಗ್ಗಿಸಿ ಒಂದೊಂದು ಪುಸ್ತಕ ಬರೆಯಬಹುದೆಂದೂ ನನಗನ್ನಿಸಿತು.
ಹೌದು. ಇದು ಘನೀಕರಿಸಿದ ಪುಸ್ತಕ. ಈಗ ನಾನು ಪ್ರತಿಯೊಂದು ವಿಷಯದ ಮೇಲೆ ಒಂದೊಂದು ಪುಸ್ತಕ ಬರೆಯುತ್ತಿದ್ದೇನೆ. ಪ್ರೇಮದ ಬಗ್ಗೆ ಒಂದು, ಶ್ರೀಮಂತಿಕೆಯ ಬಗ್ಗೆ ಒಂದು, ಹಣ ಸಂಪಾದಿಸುವುದು ಹೇಗೆ ಎಂದು ಒಂದು, ಆರು ಐಶ್ವರ್ಯಗಳನ್ನು ಸಂಪಾದಿಸುವುದರ ಬಗ್ಗೆ ಒಂದು ಪುಸ್ತಕ ಬರೆಯುತ್ತಿದ್ದೇನೆ. ಪ್ರತಿ ಪುಸ್ತಕ ನೂರು ಪುಟಗಳಾದರೆ ಸುಮಾರು 600 ಪುಟಗಳಾಗುತ್ತದೆ. ಆದರೆ ನನ್ನ ಪುಸ್ತಕ ಸರಾಸರಿ ಆರ್ಥಿಕ ಸ್ಥಿತಿಯ ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳನ್ನು ತಲುಪಬೇಕೆನ್ನುವುದು ನನ್ನ ಅಭಿಲಾಷೆ.

ಈ ಪುಸ್ತಕ ಬರೆದಿದ್ದರಿಂದ ನಿಮ್ಮ ಬದುಕಿನಲ್ಲಿ ಏನಾದರೂ ಪ್ರಭಾವ ಉಂಟಾಗಿದೆಯೇ?
ಈ ಪುಸ್ತಕ ಬರೆದ ನಂತರ ನಾನು ಕೂಡಾ ಸಾಕಷ್ಟು ಬದಲಾಯಿಸಿದ್ದೇನೆ. ಮೊದಲು ಮಹಾಕೋಪಿಷ್ಠನಾಗಿದ್ದೆ. ಚಿಕ್ಕಪುಟ್ಟ ವಿಷಯಗಳಿಗೆ ಸಿಟ್ಟು, ಆಶಾಭಂಗ. ಆಮೇಲೆ ಭಯ. ಈ ಪುಸ್ತಕಗಳನ್ನು ಮುಗಿಸಿದ ಮೇಲೆ ನನ್ನ ಭಯ ಮಾಯವಾಗಿದೆ. ರಾತ್ರಿ ಒಂದು ಗಂಟೆಗೆ ಸ್ಮಶಾನಕ್ಕೆ ಹೋಗಬಲ್ಲೆ. ದೊಡ್ಡ ವಿಪತ್ತು ಎದುರಾದರೂ ನಾನು ಬಿಕ್ಕಿ ಬಿಕ್ಕಿ ಅಳುವುದಿಲ್ಲ. ನನ್ನಲ್ಲಿನ ಕೋಪ ಹೊರಟುಹೋಗಿದೆ. ಈಗ ನಾನು ಪ್ರಶಾಂತವಾಗಿ, ನೆಮ್ಮದಿಯಿಂದ ಇದ್ದೇನೆ. ನನಗೆ ಬದುಕನ್ನು ಆನಂದಿಸುವುದು ಗೊತ್ತಿದೆ. ಎಲ್ಲರೂ ತಾವು ಆನಂದಿಸುತ್ತಿದ್ದೇವೆ ಎಂದುಕೊಂಡಿದ್ದಾರೆ. ಆದರೆ ನಾನು ಷಡೈಶ್ವರ್ಯಗಳೊಂದಿಗೆ ಆನಂದಿಸುತ್ತೇನೆ. ನನ್ನ ಈ 66ನೆಯ ವಯಸ್ಸಿನಲ್ಲಿ ನಾನು ಆರೋಗ್ಯವಾಗಿದ್ದೇನೆ. ನಿಂತುಕೊಂಡು 7 ಗಂಟೆ ಲೆಕ್ಚರ್ ಕೊಡಬಲ್ಲೆ. ನನಗೆ ಸ್ವಲ್ಪ ಕೀರ್ತಿ ಇದೆ. ಹಣದ ಸಮಸ್ಯೆ ಇಲ್ಲ. ಜ್ಞಾನ, ಉತ್ಸಾಹಗಳಿವೆ. ಬದುಕಿನಲ್ಲಿ ಬೋಧಕರು ಮತ್ತು ಶಿಕ್ಷಕರು ಇರುತ್ತಾರೆ. ಬೋಧಕರು ತಾವು ಬೋಧಿಸಿದ್ದನ್ನು ಅನುಸರಿಸಬೇಕು. ನಾನು ಶತ ಪ್ರತಿಶತ ಬೋಧಿಸುವುದನ್ನು ಅನುಸರಿಸುತ್ತೇನೆ. ಬದುಕಿನ ಬಗೆಗಿನ ನನ್ನ ಮನೋಭಾವ ಈ ಪುಸ್ತಕಗಳನ್ನು ಬರೆದ ಮೇಲೆ ಬದಲಾಗಿದೆ.

ಕೆಲವು ವಿಷಯಗಳನ್ನು ಅನೇಕ ಪುಸ್ತಕಗಳಲ್ಲಿ ಒತ್ತಿ ಹೇಳುವಿರೇನೋ ಎಂದೆನಿಸುತ್ತದೆ.
ಹೌದು. ಕೆಲವು ವಿಷಯಗಳು ಪುನರಾವೃತ್ತಿಗೊಳ್ಳುವುದನ್ನು ಗಮನಿಸಬಹುದು. ಯಾವ ಲೇಖಕನೂ ತನ್ನ ಸಿದ್ಧಾಂತಗಳಿಂದ ತಪ್ಪಿಸಿಕೊಳ್ಳಲಾರ. ಬಹಳಷ್ಟು ಪುಸ್ತಕಗಳನ್ನು ಬರೆದಿರುವ ಷೇಕ್ಸ್ಪಿಯರ್ನಂತಹ ಮಹಾನ್ ಲೇಖಕ ಕೂಡಾ ತನ್ನ ಸಿದ್ಧಾಂತಗಳನ್ನು ಎಲ್ಲೋ ಒಂದೆಡೆ ಪುನರಾವೃತ್ತಿ ಮಾಡಿದ್ದಾನೆ. ಇದು ಲೇಖಕನಿಗೆ ಆ ವಿಷಯದ ಬಗ್ಗೆ ಆಸ್ಥೆಯನ್ನು ಹೇಳುತ್ತದೆ.

ನೀವು ಓದುಗರನ್ನು ರೋಮಾಂಚನದ ಪರಾಕಾಷ್ಠೆಗೆ ತಲುಪಿಸುವಂತಹ ಕಾದಂಬರಿಗಳನ್ನು ಬರೆದಿರಿ. ನಂತರ ಚಿಕ್ಕ ಚಿಕ್ಕ ನಾನ್ಫಿಕ್ಷನ್ ಪುಸ್ತಕ- ನಿಮ್ಮನ್ನು ನೀವು ಗೆಲ್ಲಬಲ್ಲಿರಿ, ವಿಜಯದತ್ತ ಪಯಣ, ನೀವು ಒಳ್ಳೆ ಹುಡುಗಿ ಅಲ್ಲ- ಬರೆದಿರಿ. ನಂತರ ದೊಡ್ಡ ಪುಸ್ತಕಗಳಾದ ವಿಜಯಕ್ಕೆ ಐದು ಮೆಟ್ಟಿಲು, ವಿಜಯದ ಸಂಗಾತಿ, ಮೈಂಡ್ ಪವರ್ಗಳನ್ನು ಬರೆದಿರಿ. ವಿಜಯಕ್ಕೆ ಐದು ಮೆಟ್ಟಿಲು ಪಡೆದ ಖ್ಯಾತಿಯ ಬಗ್ಗೆ ದಯವಿಟ್ಟು ಹೇಳಿ.
ನಾನು ಬರೆದಿರುವುದು 3 ಅಥವಾ ನಾಲ್ಕು ಸಸ್ಪೆನ್ಸ್ ಪುಸ್ತಕ ಅಷ್ಟೇ. ತುಳಸೀದಳಂ, ಅಭಿಲಾಷ ಇತ್ಯಾದಿ. ನನ್ನ ಮುಂದಿನ ಪುಸ್ತಕಗಳು ದುಡ್ಡು ದುಡ್ಡು ಮತ್ತು ಬೆಳದಿಂಗಳ ಬಾಲೆ. ಇವುಗಳಲ್ಲಿ ಸಸ್ಪೆನ್ಸ್ ಇದ್ದರೂ ಸ್ವಲ್ಪ ಬೇರೆ ವಿಷಯಗಳೂ ಇದ್ದವು. ಈ ಎರಡು ಪುಸ್ತಕಗಳಲ್ಲಿಯೂ ನಾಯಕ ಎಲ್ಲವನ್ನೂ ಕಳೆದುಕೊಂಡು ಮತ್ತೆ ಸ್ವಂತ ಬುದ್ಧಿವಂತಿಕೆಯಿಂದ ಮೇಲೆ ಬರುತ್ತಾನೆ. ಓದುಗರು ಕಾದಂಬರಿ ಓದುವುದನ್ನು ಕಡಿಮೆ ಮಾಡಿದಾಗ ನಾನು ವ್ಯಕ್ತಿತ್ವ ವಿಕಸನದ ಮೇಲೆ ಏಕೆ ಬರೆಯಬಾರದೆಂದು ಆಲೋಚಿಸಿದೆ. ಮೊದಲು ಚಿಕ್ಕ ಪುಸ್ತಕಗಳನ್ನು ಬರೆದೆ. ಅವುಗಳ ವಿಜಯ ಕಂಡು ಜನರು ಲಾಭವನ್ನು ಕೋರಿ ಪುಸ್ತಕಗಳಿಗಾಗಿ ಹಣ ವೆಚ್ಚ ಮಾಡುವರೇ ಹೊರತು ಮನೋರಂಜನೆಯ ಪುಸ್ತಕಗಳಿಗಾಗಿ ಅಲ್ಲ ಎಂದೆನಿಸಿತು. ಅವರು ಫಿಕ್ಷನ್ ಇಂದ ನಾನ್ಫಿಕ್ಷನ್ಗೆ ಬದಲಾದಾಗ ವಿಜಯಕ್ಕೆ ಐದು ಮೆಟ್ಟಿಲು ಬರೆದೆ. ತೆಲುಗಿನಲ್ಲಿ ಇದರ ವಹಿವಾಟು 2 ಕೋಟಿ ರೂಪಾಯಿ ದಾಟಿದೆ. ಇದೊಂದು ದಾಖಲೆ. ನನ್ನದೇ ತುಳಸಿದಳ ಮತ್ತು ಬೆಳದಿಂಗಳ ಬಾಲೆಯ ದಾಖಲೆಯನ್ನು ಮುರಿದಿದೆ.


ನಿಮ್ಮ ಪುಸ್ತಕಗಳಲ್ಲಿನ ಒಂದು ವಾಕ್ಯದ ಆಣಿಮುತ್ತುಗಳು ನನ್ನನ್ನು ಬಹಳವೇ ಆಕರ್ಷಿಸಿವೆ. 'ಅವನೇ ಅವಳ ಸೈನ್ಯ'ದಲ್ಲಿನ 'ಸರಹದ್ದು ಮಾನವ ನಿರ್ಮಿತ' ಎನ್ನುವ ಮಾತು. ಇವನ್ನು ಬರೆಯಲು ನೀವು ವಿಶೇಷ ಪ್ರಯತ್ನ ಮಾಡುವಿರಾ ಹೇಗೆ? ಅಥವಾ ಪರಿಪಕ್ವ ಲೇಖಕರಾದಾಗ ಇದು ಸಹಜವಾಗಿ ಬರುವುದೇ?
ಕನ್ನಡ ಓದುಗರಿಗೆ ನಾನು ಹೇಳಬಯಸುವುದೇನೆಂದರೆ ನಾನು ತೆಲುಗು ವಿದ್ಯಾರ್ಥಿ ಅಲ್ಲ ಎಂದು! ನನ್ನ ದ್ವಿತೀಯ ಭಾಷೆ ಹಿಂದಿ. ನಾನು ಕಾಮರ್ಸ್ ವಿದ್ಯಾರ್ಥಿಯಾಗಿದ್ದರಿಂದ ನಮಗೆ ತೆಲುಗು ಭಾಷೆ ಪಠ್ಯವಾಗಿರಲಿಲ್ಲ. ನಾನು ಪುಸ್ತಕ ಬರೆಯಲಾರಂಭಿಸಿದ ಮೇಲೆ ತೆಲುಗು ಕಲಿತೆ. ನನ್ನ ತಂದೆ ಕವಿ. ಅವರ ಎಲ್ಲಾ ಪದ್ಯಗಳೂ ನನಗಿಷ್ಟ. ತೆಲುಗಿನಲ್ಲಿ ಅನೇಕ ಶ್ರೇಷ್ಠ ಲೇಖಕರಿದ್ದಾರೆ. ಶ್ರೀಕೃಷ್ಣದೇವರಾಯ, ಅಲ್ಲಸಾನಿ ಪೆದ್ದನ- ಇವರನ್ನೆಲ್ಲಾ ಮನನ ಮಾಡಿದೆ. ನೀವು ಎಚ್ಚರಿಕೆಯಿಂದ ಗಮನಿಸಿದರೆ ನನ್ನ ಕಾದಂಬರಿಗಳಲ್ಲಿನ ಪದ್ಯಗಳಲ್ಲಿ ಯತಿ, ಗಣ, ಪ್ರಾಸ ಎಲ್ಲವೂ ಸರಿಯಾಗಿ ಬಳಸಿದ್ದೇನೆ. ಇದನ್ನು ನಾನು ದೇವರಿತ್ತ ಕಾಣಿಕೆ ಎಂದೂ, ನಾನು ಗಳಿಸಿಕೊಂಡ ಜ್ಞಾನವೆಂದೂ ಹೇಳಬಹುದು. ಅನೇಕ ಲೇಖಕರು ಒಳ್ಳೆಯ ವಾಕ್ಯಗಳನ್ನು ಬರೆದಿದ್ದನ್ನು ನೋಡಿ ನಾನೂ ಏಕೆ ಬರೆಯಬಾರದು ಎಂದುಕೊಂಡೆ. ಆ ನಿಟ್ಟಿನಲ್ಲಿ ಯೋಚಿಸತೊಡಗಿದೆ. ಈ ವಾಕ್ಯಗಳು ಉಪ್ಪಿಟ್ಟಿನಲ್ಲಿನ ಗೋಡಂಬಿಯ ಚೂರುಗಳಂತೆ ನನ್ನ ಕಾದಂಬರಿಗಳಿಗೆ ಸಹಾಯ ಮಾಡಿವೆ.

ನಿಮ್ಮ ರಣಹದ್ದಿನ ರೆಕ್ಕೆ ಸಪ್ಪಳ, ಪವಿತ್ರಯುದ್ಧ, ಮಳೆಗಾಲದ ಒಂದು ಸಂಜೆ- ಇವುಗಳಲ್ಲಿನ ಕೆಲವು ಚಾರಿತ್ರಿಕ ಘಟನೆಗಳನ್ನು ಕಂಡಾಗ ಇವು ನಿಜವೇ ಎನ್ನುವಂತೆ ಅನ್ನಿಸುತ್ತದೆ.
ಫ್ರೆಡರಿಕ್ ಫೋರ್ಸಿತ್ ಬರೆದ ಒಡೆಸ್ಸಾ ಫೈಲ್, ದಿ ಡೇ ಆಫ್ ದಿ ಜಕಾಲ್ನಂತೆ ನಾನು ಕೂಡಾ ಈ ರೀತಿಯ ಪ್ರಯೋಗಗಳನ್ನು ಮಾಡಿದೆ. ಅವುಗಳಲ್ಲಿನ ಕೆಲವು ಘಟನೆಗಳು ನಿಜವೇ ಇಲ್ಲ ಲೇಖಕನ ಕಲ್ಪನೆಯೇ ಎನ್ನುವ ಅನುಮಾನ ಪುಸ್ತಕ ಓದಿದ ಮೇಲೂ ಓದುಗರನ್ನು ಕಾಡುತ್ತವೆ ಅಲ್ಲವೇ?

ನೀವು ಮಕ್ಕಳಿಗಾಗಿ ಪುಸ್ತಕ ಬರೆದಿದ್ದೀರಿ. ಅವರ ಬಗ್ಗೆ ಕಾಳಜಿ ಇರುವ ನೀವು, ನಿಮ್ಮದೇ ರೀತಿಯಲ್ಲಿ ಅವರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿದ್ದೀರಿ. ಸರಸ್ವತಿ ವಿದ್ಯಾಪೀಠ ಸ್ಥಾಪಿಸಿದ್ದೀರಿ.
ಮಕ್ಕಳು ಈಗಿನ ಹೊಸ ವಾತಾವರಣಕ್ಕೆ ಅಂದರೆ ಕಂಪ್ಯೂಟರ್, ಅಂತರ್ಜಾಲಗಳಿಗೆ ಹೊಂದಿಕೊಳ್ಳಬೇಕು. ಅದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ನನ್ನ ಚಿಂತೆ ಏನೆಂದರೆ ಮಕ್ಕಳು ಆಟಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳಬಾರದು. ಸದಾ ಆಟಗಾರರು, ನಟರ ಬಗ್ಗೆ ಆಲೋಚಿಸುತ್ತಿರಬಾರದು. ಅವರು ಆಟಗಳನ್ನು ಆಡಬೇಕು. ನಾವು ಚಿಕ್ಕಂದಿನಲ್ಲಿ ಕಬಡ್ಡಿ, ಕೊಕ್ಕೋ, ಬ್ಯಾಡ್ಮಿಂಟನ್ ಆಡುತ್ತಿದ್ದೆವು. ನಂತರ ಮನೆಗೆ ಬಂದು ಓದುತ್ತಿದ್ದೆವು. ಆಟಗಳನ್ನು ಆಡಬೇಕೇ ಹೊರತು ಅವನ್ನು ನೆನಪಿನಲ್ಲಿ ಹೊರಳಿಸಬಾರದು. ಹೊಸ ಪೀಳಿಗೆ ಸದಾ ಆಟ, ಆಟಗಾರರನ್ನೂ ನಿರಂತರ ನೆನೆಯುತ್ತದೆ. ಅದು ನನ್ನ ಪ್ರಕಾರ ಅಪಾಯಕಾರಿ. ಪಾಲಕರಿಗೆ, ಪೋಷಕರಿಗೆ ನನ್ನ ಕಳಕಳಿಯ ಮನವಿ ಏನೆಂದರೆ ನಿಮ್ಮ ಮಕ್ಕಳನ್ನು ಆಟಗಳಲ್ಲಿ ತೊಡಗಿಸಿ. ಅವರು ಆಡಬೇಕು. ಕೇವಲ ನೋಡುತ್ತಾ ಕಾಲ ಕಳೆಯಬಾರದು. ಅದೇ ನನ್ನ ಉದ್ದೇಶ. ಅದಕ್ಕೇ ಸರಸ್ವತಿ ವಿದ್ಯಾಪೀಠ. ಮಕ್ಕಳು ಆಡುತ್ತಾ ಪಾಡುತ್ತಾ ಕಲಿಯಬೇಕೆನ್ನುವುದೇ ಸರಸ್ವತಿ ವಿದ್ಯಾಪೀಠದ ಸ್ಥಾಪನೆಯ ಹಿನ್ನೆಲೆ. ಕಾಕಿನಾಡದಲ್ಲಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಒಂದು ದಿನದ ವ್ಯಕ್ತಿತ್ವ ವಿಕಸನದ ಪಾಠ ನೀಡಲಾಗುತ್ತದೆ.

ಮಕ್ಕಳಿಗೆ ನಡೆಸುವ ವರ್ಕ್ಷಾಪ್ ಮತ್ತು ಕಾರ್ಪೊರೇಟ್ ಕಂಪೆನಿಗಳಿಗೆ ನಡೆಸುವ ವರ್ಕ್ಷಾಪ್ಗಳಿಗೆ ನಿಮ್ಮ ಸಿದ್ಧತೆ ಹೇಗೆ?
ಅವರವರ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಸಿದ್ಧತೆ ನಡೆಸುತ್ತೇನೆ. ಅದಕ್ಕೆ ಮಕ್ಕಳ ಪಠ್ಯವಿಷಯಗಳನ್ನೂ, ಕಾರ್ಪೊರೇಟ್ ಕಂಪೆನಿಯ ನೇಪಥ್ಯವನ್ನೂ ತಿಳಿದುಕೊಂಡು ಅದಕ್ಕೆ ಸರಿಯಾದ ಪ್ರಶ್ನೆಗಳು, ವಿನೋದ ಇತ್ಯಾದಿಗಳನ್ನು ಸಿದ್ಧಗೊಳಿಸುತ್ತೇನೆ. ಸಾಕಷ್ಟು ತರಗತಿ ನಡೆಸಿದ ಮೇಲೆ ಇದು ಸ್ವಯಂಚಾಲಿತವಾಗಿದೆ.
ನಿಮಗೆ ಅತ್ಯಂತ ಪ್ರಿಯವಾದ ನಿಮ್ಮ ಪುಸ್ತಕ ಯಾವುದು?
ನನಗೆ ನಾಲ್ಕೈದು ಇಷ್ಟ. ಆನಂದೋಬ್ರಹ್ಮ, ಅಂತರ್ಮುಖಂ. ಹಾಗೆಯೇ ವ್ಯಾಪಾರೀ ಮನೋದೃಷ್ಟಿಯಿಂದ ಬರೆದ ಬೆಳದಿಂಗಳ ಬಾಲೆ ಇಷ್ಟ. ಅದರಲ್ಲಿ ನಾನು ಬರೆದಿರುವ ಕವಿತೆಗಳು ಇಷ್ಟ. ಇನ್ನು ವಿಜಯಕ್ಕೆ ಐದು ಮೆಟ್ಟಿಲು ಮತ್ತು ಈಗ ಈ ಕಣಿವೆಯಿಂದ ಶಿಖರಕ್ಕೆ.

ರಕ್ತಸಿಂಧೂರದಂತಹ ಕಮ್ಯೂನಿಸ್ಟ್ ಛಾಯೆಯ ಕಾದಂಬರಿಯಿಂದ ವಿಜಯಕ್ಕೆ ಆರನೆಯ ಮೆಟ್ಟಿಲು ನಾನ್ಫಿಕ್ಷನ್ ಪುಸ್ತಕದ ಭಗವದ್ಗೀತೆಯ ವ್ಯಾಖ್ಯಾನ- ಇವೆರಡರ ನಡುವೆ ಸಾಗರದಷ್ಟು ಅಂತರವಿದೆ.
ಇದಕ್ಕೆ ವಯಸ್ಸು ಮತ್ತು ಪರಿಪಕ್ವತೆ ಕಾರಣವೆನ್ನಬಹುದು. ನನ್ನಲ್ಲಿ ಸಮಾನತೆಯ ಅಭಿಲಾಷೆ ಇದೆ. ಈ ಚುನಾವಣಾ ಪದ್ಧತಿಯಲ್ಲಿ ನನಗೆ ಹೆಚ್ಚು ನಂಬಿಕೆಯಿಲ್ಲ. ಇದನ್ನು ರಾಕ್ಷಸ, ಕಣಿವೆಯಿಂದ ಶಿಖರಕ್ಕೆ ಕೃತಿಗಳಲ್ಲಿ ಕಾಣಬಹುದು. ಈಗ ಈ ಇಜಂಗಳ ಬಗ್ಗೆ ಒಂದು ಪುಸ್ತಕ ಬರೆಯುತ್ತಿದ್ದೇನೆ. ಅದರಲ್ಲಿ ನನ್ನ ಅಭಿಪ್ರಾಯ ಇನ್ನಷ್ಟು ಸ್ಪಷ್ಟವಾಗಿ ತಿಳಿಯಬಹುದು.

ಕನ್ನಡ ಓದುಗರಿಗೆ ಏನು ಹೇಳಬಯಸುತ್ತೀರಿ?
ಕನ್ನಡಿಗರಿಗೆ 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವುದಕ್ಕಾಗಿ ನನ್ನ ಹಾರ್ದಿಕ ಅಭಿನಂದನೆಗಳು. ನಾವು ಇನ್ನೂ 5 ಪ್ರಶಸ್ತಿಗಳಿಂದ ಹಿಂದಿದ್ದೇವೆ. ಇನ್ನು ವೈಯಕ್ತಿಕ ಆನಂದ ತರುವ ವಿಷಯಕ್ಕೆ ಬಂದರೆ ನನ್ನ ಮೊಮ್ಮಗ ಸಿಂಗಪೂರ್ನ ಒಲಂಪಿಯಾಡ್ನಲ್ಲಿ ಚಿನ್ನದ ಪದಕ ಗೆದ್ದ ಹತ್ತು ಜನರಲ್ಲಿ ಒಬ್ಬ. ಅವನೀಗ ಚೀನಾದಲ್ಲಿ ಫೈನಲ್ಸ್ನಲ್ಲಿ ಭಾಗವಹಿಸಲಿದ್ದಾನೆ. ಅವನ ವಯಸ್ಸು 11 ವರ್ಷ. ಕಣಿವೆಯಿಂದ ಶಿಖರಕ್ಕೆ ಪುಸ್ತಕ ಬರೆದು, ಅದರಿಂದ ನಾನು ನನ್ನ ಬದುಕಿನಲ್ಲಿ ಅನೇಕ ಒಳ್ಳೆಯ ಮಾರ್ಪಾಡುಗಳನ್ನು ಕಂಡಿದ್ದೇನೆ. ಕನ್ನಡದ ಓದುಗರಿಗೂ ಅದರಿಂದ ಪ್ರಯೋಜನವಾಗಲೆಂದು ಆಶಿಸುತ್ತೇನೆ.
                                                    (ನಾಳೆ:  ಕಣಿವೆಯಿಂದ ಶಿಖರಕ್ಕೆ ಆರಂಭ)


- ಯತಿರಾಜ್ ವೀರಾಂಬುಧಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.