ಶ್ರೇಯೋಸ್ತು
ಹೆಸರು ಶ್ರೇಯಾ. ವಯಸ್ಸಿನ್ನೂ ಹದಿನಾರು. ಆದರೆ ಅಭಿನಯದಲ್ಲಿ ಅನುಭವಿಗಳನ್ನೇ ಮೀರಿಸುವಷ್ಟು ಚುರುಕು...

ಹೆಸರು ಶ್ರೇಯಾ. ವಯಸ್ಸಿನ್ನೂ ಹದಿನಾರು. ಆದರೆ ಅಭಿನಯದಲ್ಲಿ ಅನುಭವಿಗಳನ್ನೇ ಮೀರಿಸುವಷ್ಟು ಚುರುಕು. ಈಕೆ ಸದ್ಯ ಕನ್ನಡ ಧಾರಾವಾಹಿ ಲೋಕದಲ್ಲಿ ಬಹು ಬೇಡಿಕೆಯ ಬಾಲನಟಿ. ಇನ್ನೊಂದು ವರ್ಷದಲ್ಲಿ ನಾಯಕನಟಿಯೇ ಆದರೂ ಅಚ್ಚರಿಯಿಲ್ಲ. ಮಂಗಳೂರು ಮೂಲದ ಈ ನಟಿ ಸಿನಿಮಾದಲ್ಲೂ ಒಂದು ಕೈ ನೋಡಿ ಸೈ ಅನಿಸಿಕೊಂಡಾಗಿದೆ.
ನಟನೆಯತ್ತ ನಿಮಗೆ ಆಸಕ್ತಿ ಮೂಡಿದ್ದು ಹೇಗೆ?
ಬಾಲ್ಯದಲ್ಲಿ ನನಗೆ ನಟನೆಯತ್ತ ಒಂದು ಚೂರೂ ಆಸಕ್ತಿ ಇರಲಿಲ್ಲ. ಮುಂದೊಂದು ದಿನ ಕಲಾವಿದೆಯಾಗಿ ಗುರುತಿಸಿಕೊಳ್ಳುತ್ತೇನೆ ಎಂಬ ಕನಸೂ ಕಂಡಿರಲಿಲ್ಲ. ಆದರೆ ನನ್ನ ಅಂಕಲ್ಗೆ ಆಸಕ್ತಿ ಇತ್ತು. ಜೊತೆಗೆ ಗಾಂಧಿನಗರದಲ್ಲಿ ಹಲವರ ಪರಿಚಯವೂ ಇತ್ತು. ಅವರೇ ನನ್ನ ಫೋಟೋಶೂಟ್ ಮಾಡಿಸಿ ಪ್ರೋತ್ಸಾಹಿಸಿದರು.
ಮೊದಲ ಬಾರಿ ಅವಕಾಶ ಸಿಕ್ಕಿದ್ದು ಹೇಗೆ?
ಮೊದಲ ಬಾರಿಗೆ ನನಗೆ ಅವಕಾಶ ಸಿಕ್ಕಿದ್ದು ಸಿನಿಮಾದಲ್ಲಿ. ಆಗ ನಾನು ಎಲ್ಕೆಜಿಯಲ್ಲಿದ್ದೆ. ನನ್ನ ಫೋಟೋ ನೋಡಿದ ನಿರ್ದೇಶಕರು 'ರೀ ಸ್ವಲ್ಪ ಬರ್ತೀರಾ' ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದರು. ನಂತರ ರಾಕ್ಷಸ, ಪ್ರೀತಿ ಏಕೆ ಭೂಮಿ ಮೇಲಿದೆ, ಕಾಸಿದ್ದೋನೇ ಬಾಸು, ಗೀಯಗೀಯ, ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ, ಮತ್ತೊಂದು ಮದುವೇನಾ, ಸ್ಕೂಲ್ ಮಾಸ್ಟರ್, ಜೋಗಿ, ಸಜನಿ, ತುಂಟ, ಕರೋಡ್ಪತಿ, ಅಗ್ರಜ ಮುಂತಾದ ಚಿತ್ರದಲ್ಲಿ ನಟಿಸಿದ್ದೇನೆ. ಸದ್ಯ ಮುದ್ದುಮನಸೇ ಎಂಬ ಚಿತ್ರ ಬಿಡುಗಡೆಗೆ ಬಾಕಿ ಇದೆ.
ಸೀರಿಯಲ್ಗೆ ಅವಕಾಶ ಹೇಗೆ ಅರಸಿಕೊಂಡು ಬಂತು?
ಫಣಿ ರಾಮಚಂದ್ರ ನನ್ನನ್ನು ಕಿರುತೆರೆಗೆ ಪರಿಚಯ ಮಾಡಿಕೊಟ್ಟ ನಿರ್ದೇಶಕರು. ಜಗಳಗಂಟಿಯರು ಧಾರಾವಾಹಿಯಲ್ಲಿ ಅವಕಾಶ ಕೊಟ್ಟರು. ನಂತರ ಬದುಕು, ನಾಗಮಣಿ, ಕಾದಂಬರಿ, ಎಲ್ಲಿ ಜಾರಿತೋ ಮನವು, ಮೃಗ, ನಿಗೂಢ ಮುಂತಾದ ಸೀರಿಯಲ್ಗಳಲ್ಲಿ ನಟಿಸಿದ್ದೇನೆ.
ಸದ್ಯ ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಿ?
ಝೀ ಕನ್ನಡದ ಶೃತಿ ನಾಯ್ಡು ನಿರ್ದೇಶನದ ಚಿ.ಸೌ.ಸಾವಿತ್ರಿಯಲ್ಲಿ ರಂಜಿತಾ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಉದಯ ಟೀವಿಯ ಕೋಗಿಲೆ ಧಾರಾವಾಹಿಯಲ್ಲೂ ನಟಿಸುತ್ತಿದ್ದೇನೆ. ರಾಧಾ ಕಲ್ಯಾಣಂ ಎಂಬ ತೆಲುಗು ಧಾರಾವಾಹಿಯಲ್ಲಿ ಸುಮಾರು 300 ಎಪಿಸೋಡ್ಗಳಲ್ಲಿ ನಟಿಸಿದ್ದೇನೆ.
ಇಲ್ಲಿಯವರೆಗೆ ನಟಿಸಿದ ಧಾರಾವಾಹಿಯಲ್ಲಿ ನಿಮ್ಮನ್ನು ಗುರುತಿಸುವಂತೆ ಮಾಡಿದ ಪಾತ್ರ ಯಾವುದು?
ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಹೆಳವನಕಟ್ಟೆ ಗಿರಿಯಮ್ಮ ಧಾರಾವಾಹಿಯಲ್ಲಿ ಗಿರಿ ಪಾತ್ರ ಮಾಡಿದ್ದೆ. ಇದು ದಾವಣಗೆರೆಯಲ್ಲಿ ನಡೆದಂಥ ಸತ್ಯಕಥೆ. ವೀಕ್ಷಕರು ನಾನೇ ಗಿರಿಯಮ್ಮ ಎಂದು ಕಾಲಿಗೆ ಬೀಳಲೂ ಬಂದಿದ್ದರು. ಈ ಪಾತ್ರಕ್ಕೆ ನನಗೆ ಉತ್ತಮ ನಟಿ ಪ್ರಶಸ್ತಿಯೂ ಲಭಿಸಿತ್ತು.
ಮುಂದಿನ ಗುರಿ ಏನು?
ನನಗೆ ಹೀರೋಯಿನ್ ಆಗಲು ಕ್ರೇಜ್ ಇಲ್ಲ. ಸಿ.ಎಸ್ ಮಾಡಬೇಕೆಂಬ ಕನಸು ನನ್ನದು. ಇದರ ಜೊತೆಗೆ ನಟನೆಯನ್ನು ಹವ್ಯಾಸವಾಗಿ ಮುಂದುವರೆಸುತ್ತೇನೆ.
ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು?
ನಿರೂಪಣೆ ಎಂದರೆ ನನಗೆ ಇಷ್ಟ. ಈ ಹಿಂದೆ ಕುಣಿಯೋಣು ಬಾರಾ ಎಂಬ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ನಿರೂಪಕಿಯಾಗಿದ್ದೆ. ಇದಲ್ಲದೆ ಬಿಡುವಿದ್ದಾಗ ಅನೇಕ ಪುಸ್ತಕಗಳನ್ನು ಓದುತ್ತೇನೆ. <
- ನವೀನ್ ಭಟ್ ಇಳಂತಿಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


