ಬೈಟುಕಾಫಿ

ಸ್ನೇಕ್ ಮಂದಿರ

ಸ್ನೇಕ್ ಮಂದಿರ
Published On :

ನಾಗರಪಂಚಮಿ ದಿನ ನಮಗೆ ಗೊತ್ತು. ಆದರೆ, ನಮ್ಮೂರಿನ ಚಿತ್ರಮಂದಿರದ ತೆರೆ ಮೇಲೆ ನಾಗಪ್ಪ ನಾಟ್ಯವಾಡಿದ್ದು ಯಾವಾಗ? ಇಲ್ಲಿದೆ ಒಂದು ಫ್ಯಾಕ್ಟ್ ಶೀಟ್.
'ಹಾವಿನ ರೋಷ ಹನ್ನೆರಡು ವರುಷ...' ಅಂತ ಸಾಹಸಸಿಂಹ ವಿಷ್ಣುವರ್ಧನ್‌ರಿಂದ ಹಾಡಿಸಿ ಬೆಟ್ಟ ಹತ್ತಿಸಿದವರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಆದರೆ, ವಿಷ್ಣುವರ್ಧನ್‌ರ ಈ 'ನಾಗರಹಾವು' ರೋಷ ಗೀತೆ ಹಾಡಿ 12 ಅಲ್ಲ, 42 ವರ್ಷ ಆಯಿತು. ಅಲ್ಲಿಂದ ಇಲ್ಲಿಯ ತನಕ ನಮ್ಮ ಕನ್ನಡ ಸಿನಿ ಪರದೆ 'ನಾಗ'ಪ್ಪನನ್ನು ತುಂಬಾ ಸಿರೀಯಸ್ ಆಗಿ ತೆಗೆದುಕೊಂಡೇ ಇಲ್ಲ. ಕಣಗಾಲರ ಆ ಹಾವಿನ ಮುಂದೆ ರಿಯಲ್ ಸ್ಟಾರ್ ಉಪೇಂದ್ರ ಅವರ 'ನಾಗರಹಾವು' ಪ್ರೇಕ್ಷಕನಿಗೆ ಹಾವಿನ ಬಾಲದಂತೆ ಕಂಡಿತು. ಹೀಗಾಗಿ ವಿಷ್ಣು ಹಾವಿನಷ್ಟೇ ಪ್ರಬಲವಾದ ಮತ್ತೊಂದು ನಾಗರಹಾವು ಕನ್ನಡ ತೆರೆಯನ್ನು ಅಲಂಕರಿಸಲಿಲ್ಲ.
 ಹಾಗೆ ನೋಡಿದರೆ 1972ರ 'ನಾಗರಹಾವು'ಗಿಂತ ಮೊದಲೇ ಸ್ನೇಕ್ ಬೆಳ್ಳಿಪರದೆಗೆ ಪ್ರವೇಶಿಸಿದೆ. ಆದರೆ, ಹಾವನ್ನು ಕೇಂದ್ರವಾಗಿಟ್ಟುಕೊಂಡು ಬಂದ ಕನ್ನಡ ಸಿನಿಮಾಗಳನ್ನು ನೋಡಲು ಹೊರಟವರಿಗೆ ಮೊದಲು ಕಾಣುವುದು 'ನಾಗಮಂಡಲ'. ಟಿ.ಎಸ್. ನಾಗಾರಭಣ ನಿರ್ದೇಶಿಸಿ, ಪ್ರಕಾಶ್ ರೈ, ವಿಜಯಲಕ್ಷ್ಮಿ ಅಭಿನಯದ 'ನಾಗಮಂಡಲ' ಚಿತ್ರದಲ್ಲಿ ಹೆಸರಿಗೆ ತಕ್ಕಂತೆ ಹಾವು ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ. ಮೊತ್ತ ಮೊದಲು ಇಲ್ಲಿ ಹಾವಿನ ಹೆಜ್ಜೆ ಮೂಡಿದ್ದು, 'ಸತ್ಯಹರಿಶ್ಚಂದ್ರ' ಚಿತ್ರದಲ್ಲಿ. ಹಾವಿನಿಂದ ಕಚ್ಚಿಸಿಕೊಂಡು ಸಾಯುವ ಲೋಹಿತಾಶ್ವನ ಮೂಲಕ ಚಿತ್ರಕ್ಕೆ ಹೊಸ ತಿರುವು ಬರುತ್ತದೆ. ಆ ಮೂಲಕ ಈ ಸಿನಿಮಾಗೆ ಹಾವಿನ ಹುತ್ತವೂ ಕೇಂದ್ರಬಿಂದುವಾಗುತ್ತದೆ.

ಐವತ್ತರ ಹಾವು
ಕನ್ನಡ ಸಿನಿಮಾ ಇತಿಹಾಸದಲ್ಲಿ ಹಾವಿನ ವಯ್ಯಾರ 1950ರಲ್ಲಿ ಆರಂಭವಾಯಿತು ಎನ್ನಬಹುದು. ಇದು 1960ರ ವರೆಗೂ ಸಾಗಿಬಂತು. ಜಾನಪದ, ಸಾಮಾಜಿಕ ಕಥೆಗಳ ಸಿನಿಮಾಗಳನ್ನು ಹಾವಿನ ಸಂಕೇತವಿಲ್ಲದೆ ನೆನಪಿಸಿಕೊಳ್ಳುವುದು ಕೂಡ ಅಸಾಧ್ಯ. ನಿರ್ದೇಶಕ ಟಿ.ಎಸ್. ನಾಗಾಭರಣ ಪ್ರಕಾರ, ಜಾನಪದ ಚಿತ್ರಗಳಲ್ಲಿ ಹಾವು, ಗರುಡ ಅಥವಾ ಕುದುರೆ ಈ ಮೂರು ಪ್ರಾಣಿಗಳು ನಮಗೆ ಅತ್ಯಂತ ಪ್ರಿಯ ಎನಿಸಿಕೊಂಡವು. ಅದರಲ್ಲೂ ಹಾವು ಹೆಚ್ಚು ಆಪ್ತವಾಗಿತ್ತು. ಆದರೆ ಹಾವು ತನ್ನ ರೂಪ, ಪಾತ್ರ ಮತ್ತು ನೆಲೆ ಬದಲಾಯಿಸಿಕೊಂಡಿದ್ದು ಸಿನಿಮಾಗಳಿಗಿಂತ ಹೆಚ್ಚಾಗಿ ಸಾಹಿತ್ಯದಲ್ಲೇ. ಎ.ಕೆ. ರಾಮಾನುಜನ್ ಅವರ ಕಥೆಗಳಲ್ಲು ಹಾವಿನ ರೂಪ ಬದಲಾಗಿರುವುದನ್ನು ಕಾಣುತ್ತೇವೆ. ಮಾಡರ್ನ್ ಸಾಹಿತ್ಯದಲ್ಲಿ ಹಾವು ಮೋಹಿನಿಯಾಗಿದೆ.
ಹಾವಿನ ಪಾತ್ರದ ಸುತ್ತ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಅದು ಬಳಕೆಯಾದ ರೀತಿ. ವಿಠಲಚಾರಿ ಅವರು 'ಹಾಟ್‌ಪುಟ್‌' ಎನ್ನುತ್ತ ಹಾವನ್ನು ಮಾಟ, ಮಂತ್ರದ ಸಂಕೇತವಾಗಿ ಬಳಸಿಕೊಂಡರೆ, ಪುಟ್ಟಣ್ಣ ಕಣಗಾಲ್ ಅವರು ಅದೇ ಹಾವನ್ನು, 'ನಾಗರಹಾವು' ಚಿತ್ರದಲ್ಲಿ ದ್ವೇಷ ಜ್ವಾಲೆಯಾಗಿಸಿದರು. ಮುಂದೆ 'ಹರಿಶ್ಚಂದ್ರ' ಚಿತ್ರದಲ್ಲಿ ಹಾವು ದೈವಿಕ ಎನಿಸಿಕೊಂಡರೆ, ಟಿ.ಎಸ್. ನಾಗಾಭರಣ ಅವರ 'ನಾಗಮಂಡಲ' ಚಿತ್ರದಲ್ಲಿ ಲೈಂಗಿಕ ವಸ್ತುವಾಯಿತು. ದ್ವೇಷ, ಮಾಟ, ಮಂತ್ರ, ಲೈಂಗಿಕ ವಸ್ತುವಾಗಿ ಕನ್ನಡದ ಹತ್ತಾರು ಚಿತ್ರಗಳಿಗೆ ಜೀವದಾನ ಮಾಡಿದ ಹಾವು ಈಗ ಕಣ್ಮರೆಯಾಗಿದೆ. ಕಾಡಿನಲ್ಲಿ ಮಾತ್ರವಲ್ಲ, ನಾಡಿನ ತೆರೆ ಮೇಲೂ ಹಾವಿನ ಫೂತ್ಕಾರ ಕೊಂಚ ಕಡಿಮೆಯೇ ಎನ್ನಬಹುದು.

 ಜಾನಪದ ಚಿತ್ರಗಳಲ್ಲಿ ಮಾಟ, ಮಂತ್ರ ಮಾಡಿಸಿಕೊಂಡು ಸ್ವತಃ ಹಾವೇ ಬಂದು ಜನರನ್ನು ಕಚ್ಚಿ ಸಾಯಿಸಿದರೆ, ಸಾಮಾಜಿಕ ಚಿತ್ರಗಳಲ್ಲಿ ಮಾತ್ರ ಆಕಸ್ಮಿಕವಾಗಿ ಜನರೇ ಹಾವಿನಿಂದ ಕಚ್ಚಿಸಿಕೊಳ್ಳುತ್ತಾರೆ. ಆರಂಭದ ದಿನಗಳಲ್ಲಿ 'ದಾಕ್ಷಾಯಿಣಿ' ಚಿತ್ರದಲ್ಲೂ ತನ್ನ ಖದರ್ ತೋರಿಸಿದ ಹಾವು, ಯಾಕೋ ಓಂಸಾಯಿ ಪ್ರಕಾಶ್‌ರ 'ಶ್ರೀನಾಗಶಕ್ತಿ' ಚಿತ್ರ ಬರುವಷ್ಟರಲ್ಲಿ ಮೆತ್ತಗಾಯಿತು. 'ಆಪ್ತರಕ್ಷಕ' ಚಿತ್ರದಲ್ಲಿ 'ನಾಗವಲ್ಲಿ'ಯಾಗಿ ಭುಸುಗುಟ್ಟಿದರೂ ಕ್ಲೈಮ್ಯಾಕ್ಸ್‌ವರೆಗೆ ಅದಿಲ್ಲ. ಹೀಗಾಗಿ 'ಆಪ್ತರಕ್ಷಕ'ನ ವಿಷ್ಣು ಹಾವು ಒಂದು ರೀತಿಯಲ್ಲಿ 'ಮರೆ'ತಾರೆ! ಅಂದಹಾಗೆ ನಾಗರಪಂಚಮಿಯಂದು ಹಾವಿನ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಿರುವಾಗಲೇ ಪ್ರತಿಭಾ ನಂದಕುಮಾರ್ ತಮ್ಮ ನಿರ್ದೇಶನದಲ್ಲಿ 'ಸ್ನೇಕ್ ನಾಗ' ಎನ್ನುವ ಚಿತ್ರವನ್ನು ತೆರೆಗೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಇಲ್ಲಿ ಸ್ನೇಕ್ ನಾಗನ ಪಾತ್ರದಲ್ಲಿ ಲೂಸ್ ಮಾದ ಯೋಗೀಶ್ ಕಾಣಿಸಿಕೊಂಡಿದ್ದಾರೆ. ಹಾವು ಮತ್ತೆ ಎಂದಿನಂತೆ ತೆರೆ ಮೇಲೆ ನರ್ತಿಸುತ್ತದೋ ಅಥವಾ ಕಾಮಿಡಿ ಪೀಸಾಗುತ್ತದೋ ನೋಡೋಣ.

ನಾಗಮಂಡಲ ಸಂಕೇತ
ಒಂದೇ ವಸ್ತುವನ್ನು ಏಕಕಾಲಕ್ಕೆ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ದೃಷ್ಟಿಕೋನಗಳಲ್ಲಿ ಕಟ್ಟಿಕೊಟ್ಟ ಕಥೆ 'ನಾಗಮಂಡಲ'. ಚಂದ್ರಶೇಖರ ಕಂಬಾರರ 'ಸಿರಿಸಂಪಿಗೆ' ಹಾಗೂ ಗಿರೀಶ್ ಕಾರ್ನಾಡ್‌ರ 'ನಾಗಮಂಡಲ' ಒಂದೇ ವಸ್ತುವಿನ ಎರಡು ನೆಲೆಗಳು. ದೈವಿಕ, ಮಾಟ- ಮಂತ್ರದ ಅಸ್ತ್ರವಾಗಿ ಬಳಕೆಯಾಗುತ್ತಿದ್ದ ಹಾವನ್ನ ನಿರ್ದೇಶಕ ನಾಗಾಭರಣ ಕೌಟುಂಬಿಕೇತರ ಸಂಬಂಧಗಳನ್ನು ಹೇಳುವ ಪ್ರಮುಖ ಪಾತ್ರವನ್ನಾಗಿ ತೋರಿಸಿದರು. 'ನಾಗಮಂಡಲ' ಚಿತ್ರವನ್ನು ಕೈಗೆತ್ತಿಕೊಂಡಾಗ ಹಾವು ನನಗೆ ಸಂಕೇತವಾಗಿ ಕಾಣಲಿಲ್ಲ. ಅದೊಂದು ಪಾತ್ರವಾಗಿ ಕಂಡಿತು. ನಾಟಕ ಬೆಳ್ಳಿತೆರೆಗೆ ಬರುವಾಗ ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಟ್ಟಿಕೊಟ್ಟೆ. ವ್ಯಕ್ತಿಯ ಒಳ ಮತ್ತು ಹೊರಗಿನ ಜಗತ್ತನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗಿದ್ದು ಹಾವಿನ ಪಾತ್ರದ ಮೂಲಕ' ಎನ್ನುತ್ತಾರೆ ನಾಗಾಭರಣ. ಹೀಗೆ ಹಾವು ಕೌಟುಂಬಿಕ ಸಂಬಂಧಗಳ ಒಳತೋಟಿಯನ್ನು ತೆರೆದಿಡುವ ಪರಿಣಾಮಕಾರಿ ಪಾತ್ರವಾಗಿ ಮೂಡಿಬಂದಿದ್ದು 'ನಾಗಮಂಡಲ'ದಲ್ಲಿ ಮಾತ್ರ.

ಪರ ಊರಿನ ಹಾವು ಗಳು
ಕನ್ನಡ ಚಿತ್ರರಂಗ ಮಾತ್ರವಲ್ಲ, ಹಿಂದಿ, ತಮಿಳು, ತೆಲುಗಿನ ತೆರೆಗಳ ಮೇಲೂ ಹಾವಿನ ನರ್ತನ ಸಾಕಷ್ಟಿದೆ. ಮುಖ್ಯವಾಗಿ ನೆನಪಿಗೆ ಬರುವುದು ಶ್ರೀದೇವಿ ನಟಿಸಿದ 'ನಾಗಿನ್‌' ಚಿತ್ರ. ಈಕೆಗೂ ಮೊದಲೇ ರೀನಾ ರಾಯ್ ನಾಗಿಣಿಯಾಗಿ ಕಾಣಿಸಿಕೊಂಡಿದ್ದಳು. ಆಮೇಲೆ ಮಲ್ಲಿಕಾ ಶೆರಾವತ್ 'ಹಿಸ್‌' ಎಂದಿದ್ದಳು. 'ಶೇಷನಾಗ್‌'ನಲ್ಲಿ ರೇಖಾ ಸರ್ಪಾವತಾರ ತಾಳಿದ್ದಳು.

-ಆರ್.ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.