ಪ್ರಿಯಾಂಕಾ ಪೂರ್ಣಾಂಕ
ತುಂಬಾ ಹಿಂದಿನ ಮಾತು. ಶಿವಮೊಗ್ಗದ ಮಹಿಳಾ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿರುವ ಹುಡುಗಿ ಟ್ರೈನ್ನಲ್ಲಿ...

ತುಂಬಾ ಹಿಂದಿನ ಮಾತು. ಶಿವಮೊಗ್ಗದ ಮಹಿಳಾ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿರುವ ಹುಡುಗಿ ಟ್ರೈನ್ನಲ್ಲಿ ಬೆಂಗಳೂರಿಗೆ ಹೊರಟಿದ್ದಳು. ಪಕ್ಕದಲ್ಲೇ ಕೂತವರು ಮಾತನಾಡಿಸಿದರು. 'ನೋಡಕ್ಕೆ ಚೆನ್ನಾಗಿದ್ದೀಯಾ. ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಗಬಹುದು. ಈ ನಂಬರ್ಗೆ ಪೋನ್ ಮಾಡು' ಎಂದರು.
ಅನುಮಾನ, ಹಿಂಜರಿಕೆಯಲ್ಲೇ ಫೋನ್ ಮಾಡಿದ ಹುಡುಗಿಗೆ ಆ ಕಡೆಯಿಂದ 'ನಿನ್ನ ಫೋಟೋಗಳನ್ನು ಕಳುಹಿಸಿಕೊಡು ನೋಡೋಣ' ಎಂಬ ಉತ್ತರ. ಹುಡುಗಿ ಮೊಬೈಲ್ನಲ್ಲೇ ಫೋಟೋ ತೆಗೆದು ಕಳುಹಿಸಿದ್ದಾಳೆ. ಫೋಟೋ ನೋಡಿಯೇ ನಿರ್ದೇಶಕರು ಓಕೆ ಮಾಡಿದ್ದಾರೆ. ಡಿಪ್ಲೊಮಾ ವಿದ್ಯಾರ್ಥಿನಿ ಸಿನಿಮಾ ನಟಿಯಾಗಿದ್ದು ಹೀಗೆ. ಹಾಗೆ ಬಂದ ನಟಿಯ ಹೆಸರು ಪ್ರಿಯಾಂಕ. ಫೋಟೋ ನೋಡಿ ಪಾತ್ರ ಕೊಟ್ಟ ನಿರ್ದೇಶಕರ ಹೆಸರು ಅಶೋಕ್ ಕಶ್ಯಪ್.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರಿಯಾಂಕಗಳಿದ್ದಾರೆ. ಈ ಪ್ರಿಯಾಂಕ ಯಾರು? 'ಪ್ರೀತಿಯಿಂದ' ಎನ್ನುವ ಧಾರಾವಾಹಿ ಬಗ್ಗೆ ಹೇಳಬೇಕು. ಅಶೋಕ್ ಕಶ್ಯಪ್ ಹಾಗೂ ರೇಖಾರಾಣಿ ಅವರ 'ಪ್ರೀತಿಯಿಂದ' ಧಾರಾವಾಹಿಯಲ್ಲಿ ಈಕೆಯದು 'ಗುಲಾಬಿ' ಎನ್ನುವ ಪಾತ್ರ. ಆ ಗುಲಾಬಿಯೇ ಈ ಪ್ರಿಯಾಂಕ.
ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಪ್ರಿಯಾಂಕ ಮುಂದೆ ಚಿತ್ರವೊಂದಕ್ಕೆ ನಾಯಕಿಯಾಗಿ ಸದ್ದಿಲ್ಲದೆ ಚಿತ್ರೀಕರಣವನ್ನೂ ಮುಗಿಸಿದ್ದಾಳೆ. ಚಿತ್ರದ ಹೆಸರು, 'ಗಣಪ'. ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲಿ ಸೆಟ್ಟೇರಿರುವ ಈ ಚಿತ್ರದ ನಿರ್ದೇಶಕರು ಶ್ರೀನಿವಾಸ ಪ್ರಭು. ನಿರ್ಮಾಣ ಪರಮೇಶ್ ಅವರದ್ದು. ಚಿತ್ರದ ನಾಯಕ ಆನೇಕಲ್ ಬಾಲರಾಜ್ ಅವರ ಪುತ್ರ 'ಕೆಂಪ' ಸಂತೋಷ್. ಇತ್ತೀಚೆಗಷ್ಟೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಪಕ್ಕಾ ಮಾಸ್ ಚಿತ್ರವಾಗಿರುವ 'ಗಣಪ'ದಲ್ಲಿ ಪ್ರಿಯಾಂಕ ಸೆಂಟರ್ ಆಫ್ ಅಟ್ರ್ಯಾಕ್ಷನ್. 'ಪ್ರೀತಿಯಿಂದ ಎನ್ನುವ ಧಾರಾವಾಹಿಗೆ ಆಯ್ಕೆಯಾದಾಗ ಪಾತ್ರ ಮಾಡಲು ಹಿಂದೆ ಮುಂದೆ ನೋಡಿದೆ. ಯಾಕೆಂದರೆ ಕಾಲೇಜು ಮುಗಿದಿರಲಿಲ್ಲ. ಆದರೆ, ಅಶೋಕ್ ಕಶ್ಯಪ್ ಅವರು ತೀರ್ಥಹಳ್ಳಿ ಬಳಿ ಚಿತ್ರೀಕರಣ, ಕಾಶ್ಮೀರಿ ಹುಡುಗಿ ಪಾತ್ರ. ನಿಮಗೆ ಸೂಟ್ ಆಗುತ್ತದೆ ಅಂದಾಗ ಚಿತ್ರೀಕರಣ ಜಾಗ ಹತ್ತಿರ ಇದೆ ಅಂತ ಒಪ್ಪಿಕೊಂಡೆ. ಪಾತ್ರ ತುಂಬಾ ಚೆನ್ನಾಗಿತ್ತು. ಚಿತ್ರೀಕಣದ ನಡುವೆಯೇ ಮೂರು ವರ್ಷ ಡಿಪ್ಲೊಮಾ ಮುಗಿಸಿದೆ' ಎಂದು ತಮ್ಮ ಆರಂಭ ದಿನಗಳ ನಟನೆಯನ್ನು ನೆನಪಿಸಿಕೊಳ್ಳುತ್ತಾರೆ ಪ್ರಿಯಾಂಕ.
ಸದ್ಯ 'ಗಣಪ' ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಪ್ರಿಯಾಂಕ, ಸಿಲ್ಕ್ ಸ್ಯಾರಿ, ಜ್ಯೂವಲರಿ ಜಾಹೀರಾತುಗಳಿಗೆ ಬಣ್ಣ ಹಚ್ಚಿದ್ದಾರೆ. ಎರಡು ತಮಿಳು ಚಿತ್ರಗಳ ನಿರ್ದೇಶಕ ಜೊತೆ ಮಾತುಕತೆ ಮಾಡಿದ್ದಾರೆ. 'ನನಗೆ ಎಲ್ಲ ರೀತಿಯ ಪಾತ್ರ ಇಷ್ಟ. ಗ್ಲಾಮರ್, ಹಾಟ್ ಆಗಿ ಕಾಣಿಸಿಕೊಳ್ಳುವುದಕ್ಕೆ ನನ್ನ ಅಭ್ಯಂತರವಿಲ್ಲ. ಎಕ್ಸ್ಪೋಸಿಂಗ್ ಕೂಡ ಮೆಚೂರ್ಡ್ ಆಗಿರಬೇಕು' ಎನ್ನುವ ಪ್ರಿಯಾಂಕ, ಲೆಕ್ಕಭರ್ತಿಗೆ ವರ್ಷಕ್ಕೆ ಹತ್ತು ಸಿನಿಮಾ ಮಾಡುವ ಬದಲು ಒಂದು ಚಿತ್ರ ಮಾಡಿದರೆ ಸಾಕು ಎನ್ನುವ ಅಭಿಪ್ರಾಯದವರು. ಭದ್ರಾವತಿಯ ಲಕ್ಷ್ಮಿಪುರಂನಲ್ಲಿ ಹುಟ್ಟಿದ ಪ್ರಿಯಾಂಕ ಓದಿದ್ದು ಶಿವಮೊಗ್ಗದಲ್ಲಿ. 'ಗಣಪ' ಚಿತ್ರದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಪ್ರಿಯಾಂಕ, ಗಾಂಧಿನಗರದಲ್ಲಿ ನೆಲೆ ನಿಲ್ಲುವ ಅವಕಾಶಗಳು ಹೆಚ್ಚಾಗಿವೆ.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


