ಬೈಟುಕಾಫಿ

ಸಾಲು ಮರದ ಪೇದೆ

ಇವರು ದಿನಾಚರಣೆಯ ಪರಿಸರವಾದಿಯಲ್ಲ. ನಿತ್ಯ ಪರಿಸರವಾದಿ. ವರ್ಷಪೂರ್ತಿ ಸಸಿ ನೆಡುತ್ತಿರುವ...

ಸಾಲು ಮರದ ಪೇದೆ
Published On :

ಇವರು ದಿನಾಚರಣೆಯ ಪರಿಸರವಾದಿಯಲ್ಲ. ನಿತ್ಯ ಪರಿಸರವಾದಿ. ವರ್ಷಪೂರ್ತಿ ಸಸಿ ನೆಡುತ್ತಿರುವ ಕಾಯಕ ಮಾಡುತ್ತಿರುವ ಈ ವ್ಯಕ್ತಿಯ ಹೆಸರು ವೈ.ಬಿ. ಕಾಂತರಾಜು. ಹಾಸನ ಜಿಲ್ಲೆ ಹಾಸನ ತಾಲೂಕು ಯಲಗುಂದ ಗ್ರಾಮದವರು. ಕರ್ನಾಟಕ ರಾಜ್ಯ ಮೀಸಲು ಪಡೆಯ ಹಾಸನ ಘಟಕದಲ್ಲಿ ಕಾನ್‌ಸ್ಟೇಬಲ್. ಖಾಕಿ ತೊಟ್ಟಾಗಲೂ ಅವಕಾಶ ಸಿಕ್ಕರೆ ಸಸಿ ನೆಡುತ್ತಾರೆ.
ಗ್ರಾಮಗಳಲ್ಲಿ ಪಾಳು ಬಿದ್ದ ಸ್ಥಳಗಳಲ್ಲಿ, ಸರ್ಕಾರಿ ಕಚೇರಿ, ಕ್ರೀಡಾಗಣ ಆವರಣಗಳಲ್ಲಿ ಗಿಡ ನೆಟ್ಟು ಪೋಷಿಸಲು ಇವರ ಹೆಚ್ಚಿನ ಆದ್ಯತೆ. ಸರ್ಕಾರಿ ಕಚೇರಿಗಳಿಗೆ ಬಹಳ ದೂರದಿಂದ ಅಲೆದು ಅಲೆದು ದಣಿಯುವ ರೈತರಿಗೆ ಕಚೇರಿಗಳ ಬಳಿ ಕೂರಲು ಗಿಡಮರ ಇಲ್ಲದೆ ಬಿಸಿಲಿನಿಂದ ಬಸವಳಿಯುತ್ತಾರೆ ಎಂಬುದು ಇದರ ಹಿಂದಿರುವ ಕಾಳಜಿ. ಕ್ರೀಡಾಂಗಣಕ್ಕೆ ಬರುವ ಮಂದಿಗೂ ನೆರಳು ಬೇಕು. ರಸ್ತೆ ಬದಿಯಲ್ಲಿ ಪಕ್ಷಿಗಳು ತಿನ್ನುವ ಹಣ್ಣು ನೀಡುವ ಆಲ ಮತ್ತಿತರ ಸಸಿಗಳನ್ನು ನೆಡುತ್ತಾರೆ. ಶಾಲೆ ಮಕ್ಕಳಿಗೆ ಹಸಿರಿನ ಮಹತ್ವದ ಬಗ್ಗೆ ತಿಳುವಳಿಕೆ ನೀಡಿ, ಅವರನ್ನು ಹುರಿದುಂಬಿಸಿ ಸಸಿ ನೆಡಲು, ನೀರು ಹಾಕಲು ಕರೆದುಕೊಂಡು ಹೋಗುತ್ತಾರೆ. ಬಂದ ಮಕ್ಕಳಿಗೆ ಅವರೇ ತಿಂಡಿ ಕೊಡಿಸುತ್ತಾರೆ.
ಚಿಕ್ಕವಯಸ್ಸಿನಿಂದಲೇ ಪರಿಸರ ಪ್ರೇಮ. ಕಾಂತರಾಜು ಯಲಗುಂದದ 8ನೇ ತರಗತಿಗೆ ಬೂದೇಶ್ವರ ಸ್ವಾಮಿ ವಿದ್ಯಾಸಂಸ್ಥೆಗೆ ಸೇರಿದಾಗ ಶಾಲೆಯ ತೋಟಗಾರಿಕೆ ಶಿಕ್ಷಕ ಆರ್.ಎಲ್. ಚಂದ್ರೇಗೌಡರು ಗಿಡ ಬೆಳೆಸಲು ಪ್ರೇರೇಪಿಸಿದರು. ಅಲ್ಲಿ 3 ವರ್ಷ ಸಹಪಾಠಿಗಳೊಂದಿಗೆ ಗಿಡಗಳನ್ನು ಚೆನ್ನಾಗಿ ಬೆಳೆಸಿ ಶಿಕ್ಷಕರ ಮೆಚ್ಚುಗೆ ಗಳಿಸಿದರು. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದನ್ನು ಪ್ರಮುಖ ಕಾಯಕ ಮಾಡಿಕೊಂಡರು.
ಸಮಾಜ ಸೇವೆ ಹಲವು ಬಗೆ
2003ರಿಂದ ಒಂದೂವರೆ ವರ್ಷ ಎಸ್‌ಟಿಎಫ್ ಸೇರಿ ನರಹಂತಕ ವೀರಪ್ಪನ್ ಹಿಡಿಯುವ ಕಾರ್ಯಾಚರಣೆಯಲ್ಲೂ ಕಾರ್ಯ ನಿರ್ವಹಿಸಿದ್ದರು ಕಾಂತರಾಜು. ರಕ್ತದಾನ ಮಾಡುತ್ತಾರೆ ಹಾಗೂ ಮಕ್ಕಳಿಂದ ಮಾಡಿಸುತ್ತಾರೆ. ಗ್ರಾಮೀಣ ಶಾಲೆಗಳಿಗೆ ಸ್ವತಃ ಗಿಡಗಳನ್ನು ಕೊಂಡುಹೋಗಿ ವಿತರಿಸುತ್ತಾರೆ. ವಿಕಲನಚೇತನರಿಗೆ ಹಾಗೂ ವಯೋವೃದ್ಧರಿಗೆ ಸರ್ಕಾರದ ಮಾಸಿಕ ಪಿಂಚಣಿ ದೊರಕಿಸಿಕೊಡಲು ಸಹಾಯ ಮಾಡುತ್ತಾರೆ. ಉಚಿತ ಆರೋಗ್ಯ ಶಿಬಿರ ಏರ್ಪಡಿಸುತ್ತಾರೆ. ಬಿಡುವಿನ ಸಮಯದಲ್ಲಿ ಗಿಡಮರಗಳಿಗೆ ಪ್ಲಾಸ್ಟಿಕ್ ಬಾಟಲಿ ನೀರು ತೂಗಿಹಾಕಿ ಪಕ್ಷಿಗಳ ದಾಹ ಇಂಗಿಸುತ್ತಾರೆ. ಇವರ ಸೇವೆ ಹಾಗೂ ಕಾಳಜಿಯನ್ನು ಮೆಚ್ಚಿ ನೆಹರು ಯುವ ಕೇಂದ್ರ ಅತ್ಯುತ್ತಮ ಸಾಧಕ ಪ್ರಶಸ್ತಿ ನೀಡಿದೆ.

- ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.