ಹಾಲು ಮಾರ್ಕ್
ದಿನ ಬೆಳಗಾದರೆ ಸಾಕು ಎಲ್ಲರ ಮನೆಯ ಮುಂದೆ ಸಾಮಾನ್ಯವಾಗಿ ಕಾಣಿಸುವ ವಸ್ತು ಹಾಲು ಮತ್ತು ಪೇಪರ್...

ದಿನ ಬೆಳಗಾದರೆ ಸಾಕು ಎಲ್ಲರ ಮನೆಯ ಮುಂದೆ ಸಾಮಾನ್ಯವಾಗಿ ಕಾಣಿಸುವ ವಸ್ತು ಹಾಲು ಮತ್ತು ಪೇಪರ್. ಹಾಲು ಭೂಲೋಕದ ಅಮೃತ.
ಈಗ ಹಾಲಿನ ವಿಚಾರ ಯಾಕೆಂದರೆ, ಪ್ರಪಂಚದಲ್ಲೇ ಹಾಲು ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. 2011ರ ಅಂಕಿ ಅಂಶ ಪ್ರಕಾರ, ಭಾರತ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ. ಆ ವರ್ಷದ ಉತ್ಪಾದನೆ 121 ಮಿಲಿಯ ಲೀಟರ್. ಆದರೆ ದೇಶದಲ್ಲಿ ಉತ್ಪಾದನೆಗಿಂತಲೂ ಬೇಡಿಕೆ ಹೆಚ್ಚಾಗುತ್ತಿದೆ. 2017ರ ವೇಳೆಗೆ ವರ್ಷಕ್ಕೆ 155 ಮಿಲಿಯ ಲೀಟರ್‌ಗೆ ಬೇಡಿಕೆ ಸೃಷ್ಟಿಯಾಗಲಿದೆ. ಪರಿಹಾರ- ಹಾಲಿನ ಉತ್ಪಾದನೆ ಹೆಚ್ಚಿಸುವುದು. ಇದಕ್ಕಾಗಿ ಆರಂಭವಾದ ಸಂಸ್ಥೆ ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್.
ವರ್ಲ್ಡ್ ಬ್ಯಾಂಕ್ ಮತ್ತು ಭಾರತ ಸರ್ಕಾರದ ಧನಸಹಾಯದಿಂದ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯೇ ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್. 2012ರಲ್ಲಿ ಆರಂಭವಾದ ಈ ಸಂಸ್ಥೆಯ ಮೂಲ ಉದ್ದೇಶ ದೇಶದ ಹಾಲಿನ ಉತ್ಪಾದನೆ ಹೆಚ್ಚಿಸುವುದು. 14 ರಾಜ್ಯಗಳಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತಿದೆ. ಹಾಲಿನ ಉತ್ಪಾದನೆಗೆ ಬೇಕಾದ ಅನುಕೂಲಗಳನ್ನು ಉತ್ಪಾದಕರಿಗೆ ಒದಗಿಸುವುದೇ ಇದರ ಮುಖ್ಯ ಕಾರ್ಯ. ಅದರಲ್ಲಿ ಮೊದಲನೆಯದು ಹಾಲಿನ ಡೈರಿಗಳ ಆಧುನೀಕರಣ ಮತ್ತು ಉತ್ಪಾದಕರಿಗೆ ಸರಿಯಾದ ಬೆಲೆ ಒದಗಿಸುವುದು. ಈಗಾಗಲೇ ರಾಜ್ಯದ 7 ಜಿಲ್ಲೆಗಳಲ್ಲಿ ಸಂಸ್ಥೆ ಕೆಲಸ ಆರಂಭಿಸಿದೆ. ಡೈರಿಗಳಲ್ಲಿ ಹಳೆಯ ಮಾಪಕ ಮತ್ತು ನೀರಿನ ಬೆರಕೆ ಕಂಡುಹಿಡಿಯುವ ಲ್ಯಾಕ್ಟೋಮೀಟರ್‌ಗಳ ಬದಲು ಮಿಲ್ಕ್ ಅನಲೈಸರ್‌ಗಳನ್ನು ಇರಿಸಿದೆ. ಈ ಹೊಸ ಯಂತ್ರದಿಂದ 30 ಸೆಕೆಂಡ್‌ನಲ್ಲಿ ಹಾಲಿನ ಗುಣಮಟ್ಟ ತಿಳಿಯಬಹುದು ಮತ್ತು ಹಾಲಿನಲ್ಲಿರುವ ಫ್ಯಾಟ್‌ನ ಆಧಾರದ ಮೇಲೆ ಬೆಲೆಯನ್ನೂ ಯಂತ್ರವೇ ನಿಗದಿ ಮಾಡುತ್ತದೆ. ಇದರಿಂದ ಮೋಸ ಹೋಗುವ ಭಯ ಇಲ್ಲ ಮತ್ತು ಉತ್ತಮ ಗುಣಮಟ್ಟದ ಹಾಲು ದೊರೆಯುತ್ತದೆ. ಹೆಚ್ಚು ಹಾಲು ಉತ್ಪಾದಿಸುವ ಆಸೆಯೂ ಮೂಡುತ್ತದೆ.
ಡೈರಿ ಡೆವಲಪ್‌ಮೆಂಟ್ ಬೋರ್ಡ್ ಕೇವಲ ಡೈರಿಗಳನ್ನು ಅಭಿವೃದ್ಧಿಪಡಿಸುವುದಿಲ್ಲ, ಹಳ್ಳಿಯ ಜನರ ಮನೆಗಳಿಗೆ ಭೇಟಿ ನೀಡಿ ತಜ್ಞರಿಂದ ಜಾನುವಾರು ಪರೀಕ್ಷೆ, ಆರೋಗ್ಯ ತಪಾಸಣೆ ಮಾಡುತ್ತಾರೆ. ಹಸುವಿಗೆ ಅನಾರೋಗ್ಯವಾದಲ್ಲಿ ಡೈರಿಗೆ ದೂರು ನೀಡಿದರೆ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡುತ್ತಾರೆ. ಹಸುವಿಗೆ ಎಷ್ಟು ಆಹಾರ ನೀಡಬೇಕೆಂದು ಸಹ ತಿಳಿಸುತ್ತಾರೆ. ಪ್ರತಿವಾರ ಪಶುತಜ್ಞರು ಊರಿಗೆ ಭೇಟಿ ನೀಡುತ್ತಾರೆ. ಜೊತೆಗೆ ಉತ್ತಮ ತಳಿಯ ಹಸು ಪಡೆಯುವ ಕುರಿತು ಸಂಶೋಧನೆ, ಸಾಮರ್ಥ್ಯವುಳ್ಳ ಗೂಳಿಗಳು ಮತ್ತು ವೀರ್ಯ ಉತ್ಪಾದನೆ ಯೋಜನೆಗಳನ್ನೂ ಕೆಎಂಎಫ್ ಸಹಾಯದೊಂದಿಗೆ ನಡೆಸುತ್ತಿದೆ. 2016ರ ವೇಳೆಗೆ ಬೆಂಗಳೂರಿನ 320 ಹಳ್ಳಿಗಳಲ್ಲಿ ಈ ಯೋಜನೆ ಆರಂಭಿಸುವ ಗುರಿ. ಈಗಾಗಲೇ 119 ಹಳ್ಳಿಗಳಲ್ಲಿ ಆರಂಭಿಸಿ ಉತ್ತಮ ಫಲಿತಾಂಶ ಪಡೆದಿದೆ. ಕೋಲಾರ, ಮೈಸೂರು, ರಾಯಚೂರು, ಮಂಡ್ಯ, ದಕ್ಷಿಣ ಕನ್ನಡ, ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆರಂಭವಾಗಿದೆ. ದೇಶದ ಯೋಜನಾ ಗುರಿಯ ಶೇ.15ನ್ನು ಸಂಸ್ಥೆ ಈಗಾಗಲೇ ಸಾಧಿಸಿದೆ.
ಇತ್ತೀಚೆಗೆ ಬೆಂಗಳೂರಿನ ಗಾಣಗಾಲು ಮತ್ತು ದೊಡ್ಡನಲ್ಲೂರು ಗ್ರಾಮಗಳಲ್ಲಿ ಯೋಜನೆಯ ಪರಿಶೀಲನೆ ನಡೆಯಿತು. ಸಂಸ್ಥೆಯ ಮುಖ್ಯಸ್ಥರು ಆಗಮಿಸಿ ಹಾಲು ಉತ್ಪಾದಕರ ಅಭಿಪ್ರಾಯ ಕೇಳಿದರು. ಗ್ರಾಮಸ್ಥರಲ್ಲಿ ಸಂತಸ ಕಂಡರು. ಇದರಿಂದ ರಾಜ್ಯದ ಎಲ್ಲ ಹಳ್ಳಿಗಳಲ್ಲೂ ಯೋಜನೆ ಆರಂಭಿಸಲು ಇನ್ನಷ್ಟು ಉತ್ಸಾಹ ಮೂಡಿದೆ ಎಂದು ಸಂಸ್ಥೆಯ ನಿರ್ವಹಣಾ ನಿರ್ಮಾಪಕ ಎಂ.ಡಿ.ದಿಲೀಪ್ ಹೇಳಿದರು. ಯೋಜನೆ ಇಷ್ಟರಲ್ಲೇ ನಿಮ್ಮ ಊರಿಗೂ ಬರಬಹುದು. ಹಸು ಖರೀದಿ ಮಾಡಲು ತಯಾರಾಗಿ.
- ಶಾಲಿನಿ ಬಿ. ಭಂಡಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


