ಟೆನ್ಷನ್ ಕೊಲ್ಲಲು ಬ್ರೋಕರ್ ಬೇಡ !
ಟೆನ್ಷನ್ನಿಂದ ಆಗುವ ಅಂತಿಮ ಪರಿಣಾಮ ಒಂದೊಂದು ಸಲ ಭಯಂಕರವಾಗಿರುತ್ತದೆ. ಅದನ್ನು ತಡೆದುಕೊಂಡು ಗಟ್ಟಿಯಾಗಿ....

ಟೆನ್ಷನ್ನಿಂದ ಆಗುವ ಅಂತಿಮ ಪರಿಣಾಮ ಒಂದೊಂದು ಸಲ ಭಯಂಕರವಾಗಿರುತ್ತದೆ. ಅದನ್ನು ತಡೆದುಕೊಂಡು ಗಟ್ಟಿಯಾಗಿ ನಿಲ್ಲಬಲ್ಲ ವರಾಗುವುದೇ ಆತ್ಮಸ್ಥೈರ್ಯ. ಟೆನ್ಷನ್, ದು:ಖ ಹೆಚ್ಚುಕಡಿಮೆ ಒಟ್ಟಿಗೇ ಇರುತ್ತವೆ. ರಾಜಮಂಡ್ರಿ ಪ್ರಾಂತ್ಯದಲ್ಲಿ ನಡೆದ ಸತ್ಯಘಟನೆಯೊಂದನ್ನು ಹೇಳುತ್ತೇನೆ.
ಅಲ್ಲಿಯವರೆಗೂ ಅಂಗಳದಲ್ಲಿ ಕಳೆಕಳೆಯಾಗಿ ತಿರುಗಾಡಿದ ಹುಡುಗಿ ಕಾಣಿಸಲಿಲ್ಲ. ಮಾರನೆಯ ದಿನ ಸಂಜೆ ಇನ್ನೂರು ಕಿಲೋಮೀಟರ್ ದೂರದಲ್ಲಿ ರಾಜ್ಯದ ಗಡಿಯ ಬಳಿ, ಅರ್ಧರಾತ್ರಿ ನಡೆದ ಕಾರು ಅಪಘಾತದಲ್ಲಿ ಆ ಹುಡುಗಿ ಸಾವಿಗೀಡಾದಳೆಂದು ಪೊಲೀಸರಿಂದ ಫೋನು. ಇಂಜಿನಿಯರಿಂಗ್ ಮೊದಲ ವರ್ಷದಲ್ಲಿ ಓದುತ್ತಿದ್ದ ಹುಡುಗಿ, ಮೊದಲ ವರ್ಷದಲ್ಲಿಯೇ ಓದುತ್ತಿದ್ದ ಹುಡುಗನೊಂದಿಗೆ ಗುಟ್ಟಾಗಿ ಮದುವೆ ಮಾಡಿಕೊಳ್ಳುವುದಕ್ಕಾಗಿ ಮತ್ತೊಂದು ರಾಜ್ಯಕ್ಕೆ ಹೋಗುತ್ತಿದ್ದಾಗ ನಡೆದ ಅಪಘಾತ. ಅವಳೊಂದಿಗೆ ಮನೆಯಿಂದ ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿದ್ದ ಮೂವತ್ತು ಲಕ್ಷ ರೂಪಾಯಿ ಹಣ, ಹತ್ತು ಲಕ್ಷ ಬೆಲೆ ಬಾಳುವ ಚಿನ್ನ ಕಾರಿನಲ್ಲಿ ಸಿಕ್ಕಿತೆಂಬ ಸುದ್ದಿ. ಒಂದೆಡೆ ದು:ಖ, ಬೆಂಕಿಗೆ ಬಿದ್ದ ಘನತೆ-ಗೌರವ ಮತ್ತೊಂದೆಡೆ.
ಟೆನ್ಷನ್ ಅನ್ನು ಗೆಲ್ಲುವುದು ಬೇರೆ. ಅದರಿಂದ ದೂರಕ್ಕೆ ಓಡಿಹೋಗುವುದು ಬೇರೆ. ಓಡಿ ಹೋಗಲು ಸಹಾಯ ಮಾಡುವ ಬ್ರೋಕರುಗಳು ಸಿಗರೇಟು, ನಿದ್ರೆ ಗುಳಿಗೆಗಳು, ಮದ್ಯ. ಇವುಗಳ ಅಭ್ಯಾಸಕ್ಕೆ ಬಿದ್ದರೆ ಟಿ.ವಿ. ಸೀರಿಯಲ್ ನೋಡುವುದನ್ನು ನಿಲ್ಲಿಸಲು ಆಗುವಷ್ಟೇ ಕಷ್ಟವಾಗುತ್ತದೆ.
ಟೆನ್ಷನ್ಗೆ ಸರಿಯಾದ ಮದ್ದು ಪ್ರಶಾಂತತೆ. ಟೆನ್ಷನ್ನಿನಲ್ಲಿ ನೀವು ಹೇಗೆ ವತರ್ಿಸುತ್ತೀರಿ? ವಿದೇಶದಲ್ಲಿ ಪಾಸ್ಪೋಟರ್್ ಕಳೆದುಹೋದರೆ? ಪರೀಕ್ಷೆಗೆ ಹೋಗುವಾಗ ಟ್ರಾಫéಿಕ್ ಜಾಂನಲ್ಲಿ ಸಿಕ್ಕಿಕೊಂಡರೆ? ಹನಿಮೂನ್ನಲ್ಲಿ ಪೊಲೀಸ್ ರೈಡ್ ಆದರೆ..? ಕುಣಿದಾಡುತ್ತೀರಾ? ನಿಯಂತ್ರಣ ಕಳೆದುಕೊಳ್ಳುತ್ತೀರಾ? ಕೈಕಾಲು ಆಡದೇ ಕುಸಿದು ಬೀಳುತ್ತೀರಾ? ಇಲ್ಲಾ - ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಕೂಡ ನಿಮ್ಮ ಟೇಕಿಟ್ ಈಜೀ ಪಾಲಿಸಿ(!)ಗೆ ಹೆಮ್ಮೆ ಪಡುತ್ತೀರಾ? ಈ ಟೆನ್ಷನ್ ರೋಗ ನನಗೂ ಇದೆ. ಚಿಕ್ಕ ಚಿಕ್ಕ ವಿಷಯಗಳಿಗೂ ಟೆನ್ಷನ್ಗೆ ಒಳಗಾಗುತ್ತೇನೆ. ಆದರೆ ಚಿಕ್ಕ ಸಾಧನದ ಮೂಲಕ ಇದನ್ನು ಕಡಿಮೆ ಮಾಡಿಕೊಳ್ಳಬಹುದೆಂದು ತಿಳಿದುಕೊಂಡಿದ್ದೇನೆ.
ಟೆನ್ಷನ್, ಕಿರಿಕಿರಿ, ನಿರಾಶೆಗಳ ಹಿಂದಿರುವ ನಿಜವಾದ ಕಾರಣಗಳನ್ನು ತಿಳಿದುಕೊಳ್ಳಿ. ಅದರ ನಂತರ ತಾಕರ್ಿಕವಾಗಿ ಆಲೋಚಿಸಿರಿ. ಮನೆಯ ದಾಖಲೆ ಪತ್ರಗಳು ಅತ್ಯಗತ್ಯವಾಗಿ ಬೇಕಾಗಿ ಅವನ್ನು ಹುಡುಕುತ್ತಿ ರುತ್ತೀರೆಂದುಕೊಳ್ಳೋಣ. ಆ ಸಮಯದಲ್ಲಿ ನಿಮ್ಮ ಹೆಂಡತಿ ನಿಮ್ಮನ್ನು ಸಿನಿಮಾಗೆ ಹೋಗೋಣವೆಂದು ಕೇಳುತ್ತಾಳೆ. ಕಾಗದಪತ್ರಗಳು ಸಿಗದೇ ಕಿರಿಕಿರಿಯಿಂದಿರುವ ನೀವು ಅದೇ ಕೋಪದಲ್ಲಿ ಏನೋ ಒಂದು ಮಾತು ಅಂದುಬಿಡುತ್ತೀರಿ. ಒಮ್ಮೆ ಆಲೋಚಿಸಿರಿ. ಹಾಗೆ ಹೇಳುವ ಅಗತ್ಯವಿದೆಯೇ? ಅವರಿಗೆ ನಿಮ್ಮ ಸಮಸ್ಯೆಯನ್ನು ಹೇಳಬಹುದು. ಆ ಪೇಪರುಗಳನ್ನು ಹುಡುಕಲು ನಿಮ್ಮ ಕುಟುಂಬದ ಸದಸ್ಯರ ಸಹಾಯ ಪಡೆದುಕೊಳ್ಳಬಹುದು. ಇಲ್ಲವೇ ಒಂದು ಗಂಟೆಯ ನಂತರ ಅವು ಎಲ್ಲಿವೆಯೆಂಬ ನೆನಪು ನಿಮಗೇ ಬರಬಹುದು.
ರೈಲು ಹಿಡಿಯಲು ಸಮಯವಾಗಿದೆ. ಆಟೋ ಚಾಲಕನನ್ನು ಅವಸರಿಸುತ್ತಿದ್ದೀರಿ. ಶಂಖದ ಹುಳುವಿನಂತೆ ಮೆಲ್ಲನೆ ಚಲಿಸುತ್ತಿರುವ ವಾಹನಗಳು ಮತ್ತಷ್ಟು ಬೇಸರ ತರಿಸುತ್ತಿವೆ. ಪ್ರತಿ ಕೆಂಪು ದೀಪವೂ ಉರಿ ಹೊತ್ತಿಸುತ್ತಿದೆ. ಇನ್ನು ಕೆಲವೇ ಸೆಕೆಂಡುಗಳಿವೆ ಎನ್ನುವಾಗ ನಿಲ್ದಾಣದ ಮುಂದೆ ಆಟೋ ನಿಲ್ಲುತ್ತದೆ. ಹನುಮಂತನಂತೆ ಭೂಮಿಯ ಮೇಲೆಗರಿ, ಸಂಜೀವಿನಿ ಪರ್ವತದಂತಹ ಸಾಮಾನುಗಳನ್ನು ಎತ್ತಿಕೊಂಡು, ಚಿಲ್ಲರೆ ಕೂಡ ತೆಗೆದುಕೊಳ್ಳದೇ ಪ್ಲಾಟ್ಫಾರಮ್ ಮೇಲೆ ಒಂದೇ ನೆಗೆತಕ್ಕೆ ಓಡಿದರೆ ತಿಳಿದ ವಿಷಯವೇನೆಂದರೆ ... ರೈಲುಗಾಡಿ ಒಂದು ಗಂಟೆ ತಡವೆಂದು..!
ಆನಂದದಿಂದಲೇ ಬೇಸರಿಸಿಕೊಳ್ಳುತ್ತಾ (!) ಕೂಲ್ ಡ್ರಿಂಕ್ ಕುಡಿದು ಬೆವರೊರೆಸಿಕೊಳ್ಳುತ್ತಿದ್ದ ಹಾಗೆ ಹಠಾತ್ತನೆ ಅನುಮಾನ ಬಂದು ಹುಡುಕಿದರೆ ಜೇಬಿನಲ್ಲಿ ಟಿಕೆಟ್ಟುಗಳಿಲ್ಲ. ಮನೆಯಲ್ಲಿ ಮೇಜಿನ ಮೇಲೆ ಮರೆತುಬಿಟ್ಟಿರುವಿರೆಂದು ನೆನಪಾಗುತ್ತದೆ.
ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಹೀರೋನಂತೆ ರೌಡಿಗಳೊಂದಿಗೆ ಹೋರಾಡಿ, ಅವರೆಲ್ಲರನ್ನೂ ಬಡಿದು, ಮದುವೆ ಮಂಟಪಕ್ಕೆ ಹೋಗುವ ವೇಳೆಗೆ ವಿಲನ್ ಈಗಾಗಲೇ ಹೀರೋಯಿನ್ ಕುತ್ತಿಗೆಯಲ್ಲಿ ತಾಳಿ ಬಿಗಿದುಬಿಟ್ಟ ಭಾವನೆ. ಕೆಲವು ಕ್ಷಣಗಳ ನಂತರ ಹೃದಯ ಮತ್ತೆ ಹೊಡೆದುಕೊಳ್ಳಲಾರಂಭಿಸಿದ ಮೇಲೆ, ಪಕ್ಕದ ಮನೆಯಲ್ಲಿರುವ ಗೆಳೆಯನಿಗೆ ಫೋನ್ ಮಾಡಿ... ಆತ ಸಿಕ್ಕಿ.. ಅರ್ಧಗಂಟೆಯಲ್ಲಿ ತೆಗೆದುಕೊಂಡು ಬರುವೆನೆಂದು ಹೇಳಿದಾಗ ಉಂಟಾಗುವ ಆನಂದ... ಒಂದು ಗಂಟೆಯಾದರೂ ಅವನು ಬರದಿದ್ದಾಗ ಆವಿಯಾಗಿ.. ಅಷ್ಟರಲ್ಲಿಯೇ ರೈಲುಗಾಡಿ ಬಂದಿತೆಂಬ ಘೋಷಣೆ ಕೇಳಿಸಿ... ಹೃದಯ ಜಾರಿ....
ಇಷ್ಟು ಟೆನ್ಷನ್ನುಗಳಿಂದ ಮೂರು ರೀತಿಯ ಅಭ್ಯಾಸಗಳಿಂದಾಗಿ ಹೊರಬೀಳಬಹುದು. ಟ್ರೈನು ತಡವಾಗಿ ಬರುವ ಸಮಯವನ್ನು 139 ಡಯಲ್ ಮಾಡಿ ತಿಳಿದುಕೊಳ್ಳುವ ಮೂಲಕ (ಪ್ಲ್ಯಾನಿಂಗ್), ಸ್ವಲ್ಪ ಬೇಗ ಹೊರಡುವುದರ ಮೂಲಕ (ಸಮಯ ಪಾಲನೆ), ವಸ್ತುಗಳ ಲಿಸ್ಟ್ನ್ನು ಮೊದಲೇ ಬರೆದಿಟ್ಟುಕೊಂಡು ಜೊತೆಯಲ್ಲಿ ಇಟ್ಟುಕೊಳ್ಳುವುದರ ಮೂಲಕ (ಸ್ಪೇಸ್ ಮ್ಯಾನೇಜ್ಮೆಂಟ್). ಇಪ್ಪತ್ತು ರೂಪಾಯಿಗಳನ್ನು ಕಟ್ಟಿದರೆ ಸ್ಟೇಷನ್ನಿನಲ್ಲಿಯೇ ಡೂಪ್ಲಿಕೇಟ್ ಟಿಕೆಟ್ ನೀಡುತ್ತಾರೆಂಬ ಜ್ಞಾನ. ಅದು ಮೇಲಿನ ಮೂರಕ್ಕಿಂತ ಉತ್ತಮ ಉಪಾಯ.
ರೈಲುಗಾಡಿ ಮಿಸ್ ಆಗುವುದೇನೋ ಎಂಬ ಭಯದಿಂದ ಎರಡು ಗಂಟೆಗಳ ಮೊದಲು ಹೋಗಿ ಕುಳಿತುಕೊಳ್ಳುತ್ತಾರೆ. ಸ್ಟೇಷನ್ನಲ್ಲಿ ಪೆಟ್ಟಿಗೆಗಳನ್ನು ತೆರೆದು, ಎಲ್ಲವೂ ಇವೆಯೇ ಎಂದು ನೋಡಿಕೊಳ್ಳುತ್ತಾರೆ. ಅದು ಇನ್ನೊಂದು ರೀತಿಯ ಮಾನಸಿಕ ರೋಗ.
ಸೂರ್ಯನ ಬಳಿ ಕುಂತಿ ಸಂಕೋಚ ಪಡದೇ ಇದ್ದಿದ್ದರೆ
ಭಯದ ನಂತರ ಮನುಷ್ಯನಿಗಿರುವ ಅಷ್ಟೇ ಅಪಾಯಕಾರಿಯಾದ ಮತ್ತೊಂದು ರೋಗ ಸಂಕೋಚ. ಒಬ್ಬ ಹುಡುಗಿಯ ಸಹಪಾಠಿಗಳನೇಕರಿಗೆ ಬೇಸಿಗೆ ರಜದಲ್ಲಿ ಮದುವೆ ಆಗಿತ್ತು. ಲಗ್ನಪತ್ರಿಕೆ ನೀಡಿದ ಪ್ರತಿ ಫ್ರೆಂಡ್ ಮದುವೆಗೆ ಅವಳು ಹೋಗಿದ್ದಳು. ನಿಶ್ಚಿತಾರ್ಥಗಳಿಗೆ ಕೂಡ ಅಟೆಂಡ್ ಆಗಿದ್ದರಿಂದ ಓದಿನಲ್ಲಿ ಹಿಂದೆ ಬಿದ್ದಳು. ಗ್ರ್ಯಾಜ್ಯುಯೇಷನ್ನಲ್ಲಿ ಒಳ್ಳೆಯ ಅಂಕಗಳೊಂದಿಗೆ ಪಾಸ್ ಆಗಿದ್ದ ಆ ಹುಡುಗಿ ಸಿವಿಲ್ ಪ್ರಿಲಿಮ್ಸ್ನಲ್ಲಿ ದಾರುಣವಾಗಿ ಫೆಯಿಲ್ ಆದಳು. ಇಂತಹ ಸಂದರ್ಭಗಳಲ್ಲಿ ನೋ ಹೇಳಲಾಗದ ಬಲಹೀನತೆ, ಯಾರೇನು ಅಂದುಕೊಳ್ಳುವರೋ ಎನ್ನುವ ಸಂಕೋಚ, ಆತ್ಮನ್ಯೂನತೆ, ಐಡೆಂಟಿಟಿ ಕ್ರೈಸಿಸ್ ಮಿಳಿತವಾಗಿರುತ್ತವೆ.
ಕೊಡುವುದಲ್ಲಿರುವ ಆನಂದಕ್ಕಿಂತ, ಕಳೆದುಕೊಳ್ಳುವುದರಿಂದ ಬರುವ ವಿಷಾದ ಹೆಚ್ಚಾದರೆ ಅದನ್ನು ಸಂಕೋಚ ಎನ್ನುತ್ತಾರೆ. ಕಳೆದುಕೊಳ್ಳುವುದರಿಂದ ಉಂಟಾಗುವ ವಿಷಾದಕ್ಕಿಂತ ಕೊಡುವುದರಿಂದ ಬರುವ ಆನಂದ ಹೆಚ್ಚಾದರೆ ಅದನ್ನು ದಾತೃತ್ವ ಎನ್ನುತ್ತಾರೆ.
ಇತರರು ನಮ್ಮೊಂದಿಗೆ ಹೇಗಿದ್ದರೆ ನಮಗೆ ಚೆನ್ನಾಗಿರುವುದೋ ನಾವು ಅವರಿಗೆ ಹೇಳದಿದ್ದರೆ ಅವರಿಗೆ ಹೇಗೆ ತಿಳಿಯುತ್ತದೆ? ಇತರರಿಗೆ ನೋ ಹೇಳುವುದು ನಮ್ಮನ್ನು ಅವರಿಂದ ದೂರ ಮಾಡಬಹುದು. ಆದರೆ ಯಸ್ ಹೇಳುವುದರಿಂದ ನಮ್ಮನ್ನು ನಮಗೆ ದೂರ ಮಾಡಿಕೊಳ್ಳಕೂಡದು ಅಲ್ಲವೇ? ಇತರರ ಕೋರಿಕೆಗಳಿಗೆ, ನಮ್ಮ ಅನಾನುಕೂಲಗಳಿಗೆ ಮಧ್ಯೆ ಸರಿಯಾದ ಗೆರೆ ಎಳೆದುಕೊಳ್ಳಬಲ್ಲವರಾದರೆ ಮಾನವ ಸಂಬಂಧಗಳು ಚೆನ್ನಾಗಿರುತ್ತವೆ.
ಎರಡು ದಶಕಗಳ ಹಿಂದೆ ನಡೆದ ಒಂದು ಘಟನೆ ನನ್ನ ಆಲೋಚನಾ ವಿಧಾನವನ್ನು ಬದಲಿಸಿತು. ನನಗಿನ್ನೂ ಸಜೀವವಾಗಿ ನೆನಪಿದೆ. ನನ್ನ ಮೌಲ್ಯವನ್ನು ಬದಲಾಯಿಸಿಕೊಳ್ಳಲು ಸಹಾಯ ಮಾಡಿತು. ಇದು ಸರಿಯೇ ಅಲ್ಲವೇ ಎನ್ನುವ ವಿಷಯ ಇಲ್ಲಿ ಚರ್ಚನೀಯಾಂಶವಲ್ಲ. ಅವರವರ ವೈಯಕ್ತಿಕ ಅಭಿಪ್ರಾಯ ಅವರವರದು.
ಒಬ್ಬ ಸ್ನೇಹಿತ ನಾವು ನಾಲ್ವರನ್ನು ಪಾಟರ್ಿಗೆ ಆಹ್ವಾನಿಸಿದ. ನಮ್ಮಲ್ಲಿ ಒಬ್ಬರು ತಮ್ಮೊಂದಿಗೆ ಮತ್ತಿಬ್ಬರನ್ನು ಕರೆತಂದರು. ಆ ಇಬ್ಬರೂ ನಮ್ಮ ಮಿತ್ರರಿಗೆ ಹತ್ತಿರದ ಸ್ನೇಹಿತರೇ ಆದರೂ, ಅವರನ್ನು ನೋಡಿ ಆತ ನಿಯತ್ತಿನೊಂದಿಗೆ ಕೂಡಿದ ಅಚ್ಚರಿಯಿಂದ ನಿಮ್ಮನ್ನು ಯಾರು ಕರೆದರು? ಎಂದ. ಅಲ್ಲಿಯೇ ಇದ್ದ ನಾವೆಲ್ಲಾ ಅವಾಕ್ಕಾದೆವು. ಆ ಇಬ್ಬರನ್ನು ಈ ಪಾಟರ್ಿಗೆ ಆಹ್ವಾನಿಸಿದ್ದ ಗೆಳೆಯ ಗಿಲ್ಟಿಯಾಗಿ ಫೀಲಾಗುತ್ತಾ ಎಲ್ಲರೂ ಇದ್ದರೆ ಚೆನ್ನಾಗಿರುತ್ತದೆ ಅಲ್ಲವಾ ಎಂದು ನಾನೇ ಕರೆದೆ ಎಂದ.
ಇದು ನನ್ನ ಪಾಟರ್ಿ ಅಲ್ಲವಾ? ಎನ್ನಲಿಲ್ಲ ಹೋಸ್ಟ್. ಆದರೆ ಅವನ ನೋಟದಲ್ಲಿ ಆ ಭಾವನೆ ಕಂಡುಬಂದಿತ್ತು. ಆ ದಿನ ಪಾಟರ್ಿ ನಿಸ್ಸಾರವಾಗಿ ನಡೆಯುತ್ತದೆ ಎಂದುಕೊಂಡೆನಾದರೂ, ಆಶ್ಚರ್ಯವೆಂದರೆ ಅ ವಿಷಯವನ್ನು ಎಲ್ಲರೂ ಐದು ನಿಮಿಷಗಳಲ್ಲಿ ಮರೆತುಬಿಟ್ಟಿದ್ದರು. ಆದರೆ ಎಲ್ಲರ ಮೇಲೆ ಅದರ ಪ್ರಭಾವ ಸ್ವಲ್ಪವಾದರೂ ಆಗಿದೆ ಎಂದುಕೊಂಡಿದ್ದೇನೆ.
ಇತರರ ಅಭಿಪ್ರಾಯದೊಂದಿಗೆ ಸಂಬಂಧವೇ ಇಲ್ಲದೆ ತನ್ನ ಮೌಲ್ಯಗಳೊಂದಿಗೆ ಬದುಕಬಲ್ಲವರಾಗುವುದು ಒಳ್ಳೆಯ ಕಲೆ. ಎಲ್ಲರಿಂದ ಒಳ್ಳೆಯವರು ಎನ್ನಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನ ಒಂದು ಮಾನಸಿಕ ರೋಗ. ಈ ಕಾಂಪ್ಲೆಕ್ಸುಗಳು ವಿಧವಿಧವಾಗಿ ಇರುತ್ತವೆ. ಹಣದ ವಿಷಯಕ್ಕೆ ಬಂದರೆ, ನಾವು ಎಷ್ಟು ಅನುಭವಿಸುತ್ತೇವೋ ಅದೇ ನಮ್ಮ ಆಸ್ತಿ. ಎಷ್ಟನ್ನು ಇತರರಿಗೆ ತೋರಿಸಬೇಕೆಂದುಕೊಳ್ಳುವೆವೋ ಅದು ನಮ್ಮ ಕಾಂಪ್ಲೆಕ್ಸ್. ಇನ್ನು ಯಾವ ವಿಧವಾದ ಐಶ್ವರ್ಯವೂ ಇಲ್ಲದವರೇ ತಮ್ಮ ಐಶ್ವರ್ಯವನ್ನು ಎಲ್ಲರೂ ಗುರುತಿಸಬೇಕು ಎಂದುಕೊಳ್ಳುತ್ತಾರೆ ಎಂದು ಎಲ್ಲಿಯೋ ನಾನೇ ಬರೆದಿದ್ದೇನೆ. ಈ ಚಿಕ್ಕ ವಾಕ್ಯ ಕೂಡಾ ನನ್ನನ್ನು ಬಹಳ ಪ್ರಭಾವಿತನನ್ನಾಗಿ ಮಾಡಿದೆ .
-ಯಂಡಮೂರಿ ವಿರೇಂದ್ರನಾಥ್
ಕನ್ನಡಕ್ಕೆ : ಯತಿರಾಜ್ ವೀರಾಂಬುಧಿ
(ಮುಂದುವರಿಯುವುದು)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


