ಕನ್ನಡದ ಗುಡಿಗೆ 125
ಕನ್ನಡಕ್ಕೆ ಕಗ್ಗತ್ತಲಾಗಿದ್ದ ಕಾಲವದು. ಕನ್ನಡ ಭಾಷೆ ಬಗ್ಗೆ ಆಸ್ಥೆ, ಆಸಕ್ತಿ ಒತ್ತಟ್ಟಿಗಿರಲಿ, ಎಲ್ಲಿ ನೋಡಿದರಲ್ಲಿ ಕನ್ನಡ ಭಾಷೆಯ...

ಕನ್ನಡಕ್ಕೆ ಕಗ್ಗತ್ತಲಾಗಿದ್ದ ಕಾಲವದು. ಕನ್ನಡ ಭಾಷೆ ಬಗ್ಗೆ ಆಸ್ಥೆ, ಆಸಕ್ತಿ ಒತ್ತಟ್ಟಿಗಿರಲಿ, ಎಲ್ಲಿ ನೋಡಿದರಲ್ಲಿ ಕನ್ನಡ ಭಾಷೆಯ ಬಗ್ಗೆ ಅನಾದರವಿತ್ತು. ಇಂಗ್ಲಿಷ್, ಮರಾಠಿ ಭಾಷೆಗಳ ಪ್ರಭಾವ ಹಬ್ಬಿತ್ತು. ಅನಾದರ ಹೋಗಲಾಡಿಸಿ ಕನ್ನಡ ನುಡಿ, ಸಂಸ್ಕೃತಿ ಉಳಿಸಿ ಬೆಳೆಸಲು ಹುಟ್ಟಿದ್ದೇ ಕರ್ನಾಟಕ ವಿದ್ಯಾವರ್ಧಕ ಸಂಘ.
ಕನ್ನಡದ ಗುಡಿ ಎಂದೇ ಹೆಸರಾದ ಧಾರವಾಡದಲ್ಲಿರುವ ವಿದ್ಯಾವರ್ಧಕ ಸಂಘಕ್ಕೆ ಈಗ 125 ವರ್ಷಗಳ ಸಂಭ್ರಮ. 1890 ಜುಲೈ 20ರಂದು ಜನ್ಮ ತಾಳಿದ ಕನ್ನಡದ ಮೊದಲ ಸಂಘವಿದು. ಶತಮಾನೋತ್ತರ ಬೆಳ್ಳಿಹಬ್ಬದ ಕಾರ್ಯಕ್ರಮಗಳು ಜು. 19 ಹಾಗೂ 20ರಂದು ನಡೆಯಲಿವೆ.
ಸಂಘದ ಸ್ಥಾಪನೆಯ ಪೂರ್ವದಲ್ಲಿ ಈ ಭಾಗವನ್ನು ಬ್ರಿಟಿಷ್ ಸರ್ಕಾರ ದಕ್ಷಿಣ ಮಹಾರಾಷ್ಟ್ರವೆಂದೇ ಗುರುತಿಸುತ್ತಿತ್ತು. ವಿಜಯ ನಗರ ಸಾಮ್ರಾಜ್ಯ ಪತನದ ಬಳಿಕ ಕನ್ನಡ ಭಾಷಿಕರ ಪ್ರದೇಶಗಳು ಮರಾಠಿ ಪೇಶ್ವೆಗಳ, ಪಾಳೇಗಾರರ, ಸುಲ್ತಾನರ, ನವಾಬರ ಆಳ್ವಿಕೆಯಲ್ಲಿ ಹಂಚಿಹೋಗಿ, ಕನ್ನಡ ನೆಲದಲ್ಲಿಯೇ ಕನ್ನಡಿಗರು ದ್ವಿತೀಯ ದರ್ಜೆಯ ಪ್ರಜೆಗಳಾಗಿ ಬದುಕುವ ಶೋಚನೀಯ ಸ್ಥಿತಿ ನಿರ್ಮಾಣವಾಗಿತ್ತು. ಮುಂಬೈ, ಮದ್ರಾಸ್, ಹೈದ್ರಾಬಾದ್ ಹಾಗೂ ಮೈಸೂರು ಕರ್ನಾಟಕವೆಂದು ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸಲು ವಿದ್ಯಾವರ್ಧಕ ಸಂಘ ಮುಂದಾಯಿತು.
ಸಂಸ್ಥಾಪಕರಿವರು
ಕನ್ನಡಿಗರ ಅಭಿಮಾನವಾಗಿ ಬೆಳೆದಿರುವ ವಿದ್ಯಾವರ್ಧಕ ಸಂಘ ಸ್ಥಾಪಿಸಲು ಕಾರಣರಾದವರು ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ ರಾ.ಹ. ದೇಶಪಾಂಡೆ. ಇವರೊಂದಿಗೆ ಶ್ಯಾಮರಾವ್ ವಿಠ್ಠಲ, ವೆಂಕಟರಂಗೋ ಕಟ್ಟಿ, ಗುರುಸಿದ್ದಪ್ಪ ಗಿಲಗಂಚಿ, ಶ್ರೀನಿವಾಸರಾವ್ ರೊದ್ದ, ರಾಮರಾವ್ ದೇಸಾಯಿ, ಶಾಂತವೀರಪ್ಪ ಮೆಣಸಿನಕಾಯಿ, ಶೇಷಗಿರಿರಾವ್ ಕೊಪ್ಪಿಕರ, ಗುರಾಚಾರ್ಯರು, ಧೊಂಡೋ ನರಸಿಂಹ ಮುಳಬಾಗಿಲ ಕೈ ಜೋಡಿಸಿ ವಿದ್ಯಾವರ್ಧಕ ಸಂಘ ಕಟ್ಟಿ ಬೆಳೆಸಿದರು. ಮೈಸೂರು ಅರಸರಿಂದ 1905ರಲ್ಲಿ ಸಂಘಕ್ಕೆ ಸ್ವಂತ ಕಟ್ಟಡದ ಭಾಗ್ಯ ದೊರೆಯಿತು. ಸಂಘದ ಸಂಸ್ಥಾಪಕ ರಾ.ಹ. ದೇಶಪಾಂಡೆ ಕನ್ನಡ ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಯ ಸಮ್ಮೇಳನಗಳನ್ನು ನಡೆಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟಿಗೂ ಕಾರಣರಾದರು. ಐತಿಹಾಸಿಕ ಗೋಕಾಕ ಚಳವಳಿಯ ನೇತೃತ್ವ ವಹಿಸಿದ ಸಂಘ, ನೆರೆ ರಾಜ್ಯ ಮತ್ತು ಪರ ಸಂಸ್ಕೃತಿಯಿಂದ ಆಪತ್ತು ಬಂದಾಗಲೆಲ್ಲ ಕನ್ನಡಿಗರನ್ನು ಎಚ್ಚರಿಸಿದೆ. 2010ರಿಂದ ಧಾರವಾಡ, ಕಾಶಿ, ಮುಂಬೈ, ಬರೋಡಾದಲ್ಲಿ ನಾಲ್ಕು ಅಖಿಲ ಭಾರತ ಹೊರನಾಡು ಕನ್ನಡಿಗರ ಸಮ್ಮೇಳನ ಮಾಡಿ ಹೊರನಾಡ ಕನ್ನಡಿಗರಲ್ಲೂ ಆತ್ಮವಿಶ್ವಾಸ ತುಂಬಿದೆ. ಕನ್ನಡಪರ ದ್ವನಿ ಮೊಳಗಿಸುವ ಮೂಲಕ ಸಂಘವು ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿದೆ.
50 ವರ್ಷದ ಆಡಳಿತ
ವಿದ್ಯಾವರ್ಧಕ ಸಂಘಕ್ಕೆ ಮುಂಚೆ ಸರ್ಕಾರದಿಂದ ಅನುದಾನ ಬರುತ್ತಿರಲಿಲ್ಲ. ನಾಡೋಡ ಡಾ ಪಾಟೀಲ ಪುಟ್ಟಪ್ಪ 1967ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾದಾಗ ವಾರ್ಷಿಕ ರು. 500 ಅನುದಾನವಿತ್ತು. ಸರ್ಕಾರದ ನಿರ್ಲಕ್ಷ್ಯ ಎತ್ತಿ ತೋರಿದ ಪಾಪು, ರು. 25 ಸಾವಿರ ಅನುದಾನ ತಂದರು. ಸತತವಾಗಿ ಗೆಲವು ಸಾಧಿಸುತ್ತಾ ಬಂದಿರುವ ಪಾಪು ಸಂಘದ ಅಧ್ಯಕ್ಷರಾಗಿ 50 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸಂಘಕ್ಕೆ ರು. 1 ಕೋಟಿ ಅನುದಾನ ಬರುವಂತೆ ನೋಡಿಕೊಂಡಿದ್ದಾರೆ.
ಜು. 19 ಹಾಗೂ 20ರಂದು ಸಂಸ್ಥಾಪನೆಯ ಶತಮಾನೋತ್ತರ ಬೆಳ್ಳಿ ಹಬ್ಬದಾಚರಣೆ ನಡೆಯುತ್ತಿದ್ದು, ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ-ಕನ್ನಡಿಗ-ಕರ್ನಾಟಕ ಕುರಿತು ಚಿಂತನ-ಮಂಥನ, ಚಿತ್ರಕಲಾ ಪ್ರದರ್ಶನ, ಕನ್ನಡ ಕೆಚ್ಚಿನ ಹಾಡುಗಾರಿಕೆ, ಜಾನಪದ ಮತ್ತು ಸುಗಮ ಸಂಗೀತ ನಡೆಯಲಿದೆ. ಜು. 20ರ ಸಂಜೆ 5ಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಶತಮಾನೋತ್ತರ ಬೆಳ್ಳಿ ಹಬ್ಬದಾಚರಣೆ ಉದ್ಘಾಟಿಸಲಿದ್ದಾರೆ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


