ಗೋಲೀಕರಣ

ಅದೊಂದು ಕಾಲವಿತ್ತು. ದೂರದಲ್ಲೆಲ್ಲೋ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯವನ್ನೋ, ಫುಟ್ಬಾಲ್ ಪಂದ್ಯವನ್ನೋ ನೋಡಲು ಜನರು ರೇಡಿಯೋ ಕಾಮೆಂಟರಿ ಮೇಲೇ ಅವಲಂಬಿಸಬೇಕಿತ್ತು. 70ರ ಹಾಗೂ 80ರ ದಶಕಗಳಲ್ಲಿ, ಫೆವಿಕಾಲ್ ಹಚ್ಚಿ ಕಿವಿಗೆ ಅಂಟಿಸಿಕೊಂಡವರಂತೆ ಪುಟ್ಟ ಪುಟ್ಟ ರೇಡಿಯೋ, ಟ್ರಾನ್ಸಿಸ್ಟರ್‌ಗಳನ್ನು ಕಿವಿಗೆ ಅಂಟಿಸಿಕೊಂಡು ತಿರುಗಾಡುತ್ತಿದ್ದವರು ಅನೇಕ. ನಂತರ ಕ್ರೀಡೆಗಳನ್ನು ಜನರ ಸನಿಹಕ್ಕೆ ತಂದಿದ್ದು ಟೆಲಿವಿಷನ್.
ಈಗ ಟೆಲಿವಿಷನ್ ಜೊತೆಗೆ ಇಂಟರ್ನೆಟ್ ಸಹ ದೊಡ್ಡ ಮಟ್ಟದಲ್ಲಿ ಕ್ರೀಡಾಕೈಂಕರ್ಯ ಮಾಡುತ್ತಿದೆ. ಯುಟ್ಯೂಬ್, ಟ್ವಿಟರ್, ಫೇಸ್‌ಬುಕ್ ಮುಂತಾದ ಜಾಲತಾಣಗಳು ಕ್ರೀಡೆಯ ಬಗೆಗಿನ ಮಾಹಿತಿಯನ್ನಷ್ಟೇ ಅಲ್ಲ, ಅವುಗಳ ಸಂಭ್ರಮ ಇಮ್ಮಡಿಗೊಳಿಸುವ ಕಾರ್ಯವನ್ನೂ ಮಾಡುತ್ತಿವೆ. ಇದರ ಬಗ್ಗೆ ಬ್ರೆಜಿಲ್ ವಿಶ್ವಕಪ್ ಸಮರ ಸಾಕಷ್ಟು ಸಾಕ್ಷ್ಯಾಧಾರ ನೀಡಿವೆ. ಈ ಬಗ್ಗೆ ನಡೆಸಲಾದ ಸಮೀಕ್ಷೆಗಳು ಎಲ್ಲರ ಹುಬ್ಬೇರುವಂತೆ ಮಾಡಿದ್ದು ಜಗತ್ತು ಎಷ್ಟರ ಮಟ್ಟಿಗೆ ಇಂಟರ್ನೆಟ್ ಎಂಬ ಮಾಯಾಲೋಕಕ್ಕೆ ಒಳಗಾಗಿದೆ ಎಂಬುದನ್ನು ವಿಷದೀಕರಿಸಿದೆ.
ಇಡೀ ವಿಶ್ವಕಪ್ ಪಂದ್ಯಾವಳಿಯನ್ನು ಟಿವಿ ಮೂಲಕ ಎಷ್ಟು ಕೋಟಿ ಜನ ನೋಡಿದರೋ ಸರಿಸುಮಾರು ಅಷ್ಟೇ ಮಂದಿ ಇಂಟರ್ನೆಟ್‌ನಲ್ಲಿ ನೋಡಿದ್ದಾರೆ. ಅಂದರೆ ಟೆಲಿವಿಷನ್‌ಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ! ದಿಗ್ಗಜ ಕ್ರೀಡಾವಾಹಿನಿಗಳಾದ ಇಎಸ್‌ಪಿಎನ್, ಸ್ಟಾರ್ ಸ್ಪೋರ್ಟ್ಸ್‌ನಂಥ ಕಂಪನಿಗಳೂ ಟ್ವಿಟರ್ ಅಕೌಂಟ್ ಮಾಡಿ ಆ ಮೂಲಕ ಮಾಹಿತಿ ನೀಡಲು ಮುಂದಾಗಿದ್ದು, ಆ ಮೂಲಕ ಅಂತರ್ಜಾಲದಲ್ಲಿರುವ ಕ್ರೀಡಾಭಿಮಾನಿಗಳನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದು ಇದಕ್ಕೆ ಸಾಕ್ಷಿ.
ಸಮೀಕ್ಷೆ ಬಹಿರಂಗಗೊಳಿಸಿದ ಸತ್ಯ
ಟ್ವಿಟರ್ ಮೂಲಕ ಹರಿದಾಡಿದ ಪಂದ್ಯಾವಳಿಯ ಮಾಹಿತಿಯನ್ನು ಸುಮಾರು 2 ದಶಲಕ್ಷ ಜನ 'ಫಾಲೋ' ಮಾಡಿದ್ದಾರೆಂದರೆ, ಇಂಟರ್ನೆಟ್ ಮೇಲೆ ಜನರ ಅವಲಂಬನೆ ಅದೆಷ್ಟಿದೆ ಎಂಬುದು ಸ್ಪಷ್ಟ. ಬ್ರೆಜಿಲ್‌ನ ಒಟ್ಟಾರೆ ಜನಸಂಖ್ಯೆ ಅಂದಾಜು 200 ದಶಲಕ್ಷ. ಆದರೆ, ವಿಶ್ವಕಪ್ ವೇಳೆ ಇಂಟರ್ನೆಟ್ ಮೂಲಕ ಮಾಹಿತಿ ಹಂಚಿಕೊಂಡ ಜನರ ಸಂಖ್ಯೆ 3 ಶತಕೋಟಿ. ಸಿಸ್ಕೋ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ವಿಶ್ವಕಪ್ ವೇಳೆ 5 ಎಕ್ಸಾಬೈಟ್ಸ್ (ಸಾವಿರ ಟೆರ್ರಾಬೈಟ್‌ಗೆ ಒಂದು ಪೆಟಾಬೈಟ್, ಸಾವಿರ ಪೆಟಾಬೈಟ್‌ಗೆ ಒಂದು ಎಕ್ಸಾಬೈಟ್)ನಷ್ಟು ಮಾಹಿತಿ ವಿನಿಮಯವಾಗಿದೆ. ಇದು ಇಡೀ ಬ್ರೆಜಿಲ್ ದೇಶದ ಜನ ಇಂಟರ್ನೆಟ್ ಮೂಲಕ ಮಾಡಿಕೊಳ್ಳುವ ವಿನಿಮಯಕ್ಕಿಂತ ಮೂರರಷ್ಟು ಅಧಿಕ!
ಈ ಕಾರಣದಿಂದಲೇ, ಇದು ಬ್ರೆಜಿಲ್‌ಗೆ ವಿಶ್ವದ 5ನೇ ಅತಿದೊಡ್ಡ ಇಂಟರ್ನೆಟ್ ಮಾರುಕಟ್ಟೆ ಎಂಬ ಹೆಗ್ಗಳಿಕೆ ತಂದುಕೊಟ್ಟಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯುಟ್ಯೂಬ್ ಹಾಗೂ ಟ್ವಿಟರ್‌ಗಳು ಕ್ರಮವಾಗಿ ಬ್ರೆಜಿಲ್ ವಿಶ್ವಕಪ್ ಫುಟ್ಬಾಲ್ ವೇಳೆ ಟಾಪ್-5 ಸಾಮಾಜಿಕ ಜಾಲತಾಣಗಳಾಗಿ ಜನಮನ ಸೆಳೆದಿವೆ. ಬ್ರೆಜಿಲ್ ಅಷ್ಟೇ ಅಲ್ಲ, ವಿಶ್ವದಲ್ಲೇ ಹೀಗೆ ಇಂಟರ್ನೆಟ್ ಮಾಹಿತಿ ಪಡೆದವರ ಸಂಖ್ಯೆ ಹಲವು ಬಿಲಿಯ! ಇದರಲ್ಲಿ, ಸ್ಮಾರ್ಟ್‌ಫೋನ್‌ಗಳ ಮೂಲಕ ಮಾಹಿತಿ ಪಡೆದವರು 94 ದಶಲಕ್ಷ!
ಟಿವಿ V/S ಸಾಮಾಜಿಕ ಜಾಲತಾಣ
ತಂತ್ರಜ್ಞಾನವು ಟೆಲಿವಿಷನ್ ಹಾಗೂ ಸಾಮಾಜಿಕ ಜಾಲತಾಣಗಳ ನಡುವೆ ಒಂದು ಸುಂದರ ಸ್ಪರ್ಧೆ ಏರ್ಪಡಿಸಿವೆ. ಬ್ರೆಜಿಲ್ ಹಾಗೂ ಕ್ರೊವೇಶಿಯಾ ನಡುವೆ ಜೂ. 12ರಂದು ನಡೆದ ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು 42.9 ಬಿಲಿಯ ಜನ ಟಿವಿ ಮೂಲಕವೇ ವೀಕ್ಷಿಸಿದ್ದಾರೆ. ಇದು ಹೊಸ ದಾಖಲೆ. ಆದರೆ, ಪಂದ್ಯಾಟದ ಮೊದಲ ವಾರದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವಾರ್ತೆ ನೋಡಿದವರ ಸಂಖ್ಯೆ 141 ಮಿಲಿಯ. ಪಂದ್ಯಾವಳಿಯ ಮುಕ್ತಾಯದವರೆಗೆ ಬರೀ ಫೇಸ್‌ಬುಕ್‌ನಲ್ಲಿ ಹರಿದಾಡಿದ ಪೋಸ್ಟ್, ಕಾಮೆಂಟ್, ಲೈಕ್‌ಗಳ ಸಂಖ್ಯೆ 1 ಶತಕೋಟಿ. ಟ್ವಿಟರ್‌ಗಳಲ್ಲಿ ಹೀಗೆ ಹರಿದಾಡಿದ ಮಾಹಿತಿ 10 ಮಿಲಿಯ.
1 ಮಿಲಿಯ
ಇಎಸ್‌ಪಿಎನ್‌ನ ಟ್ವಿಟರ್ ಅಕೌಂಟ್‌ಗೆ ಪ್ರತಿಪಂದ್ಯಕ್ಕೂ ಸಿಗುತ್ತಿರುವ ವೀಕ್ಷಕರ ಸಂಖ್ಯೆ
6,00,000
ಬ್ರೆಜಿಲ್ ವಿಶ್ವಕಪ್‌ಗೆ ಹರಿದುಬಂದ ಪ್ರವಾಸಿಗರ ಸಂಖ್ಯೆ
2.9
ಬಿಲಿಯ- ಪ್ರಸಕ್ತ ವರ್ಷದಲ್ಲಿ ಬ್ರೆಜಿಲ್‌ನಲ್ಲಿರುವ ಇಂಟರ್ನೆಟ್ ಅವಲಂಬಿತರ ಸಂಖ್ಯೆ
1.8
ಮಿಲಿಯ- ಯುಎಸ್ ತಂಡ ವಿಶ್ವಕಪ್‌ನಿಂದ ಹೊರಬಿದ್ದಾಗ ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಉಂಟಾದ ಸ್ಪಂದನ. ಇವುಗಳಲ್ಲಿ ಶೇ. 65 ಫೇಸ್‌ಬುಕ್, ಶೇ. 77 ಪಾಲು ಟ್ವಿಟರ್‌ನದ್ದು.
4.3
ಎಕ್ಸಾಬೈಟ್ಸ್ - ವಿಡಿಯೋ ಸ್ಟ್ರೀಮಿಂಗ್, ಇಂಟರ್ನೆಟ್ ಬ್ರಾಡ್‌ಕಾಸ್ಟಿಂಗ್ ಮೂಲಕ ಅಂತರ್ಜಾಲದಲ್ಲಿ ದಾಖಲಾದ ಟ್ರಾಫಿಕ್.
500
ಕ್ರೀಡಾಂಗಣದಲ್ಲಿರುವ ಕ್ಯಾಮೆರಾಗಳು ಪ್ರತಿ ಸೆಕೆಂಡ್‌ಗೆ ಕ್ಲಿಕ್ಕಿಸುವ ಇಮೇಜ್‌ಗಳ ಸಂಖ್ಯೆ
39 ನಿಮಿಷ
ಪ್ರತಿ ಗೋಲಿಗೆ ಜರ್ಮನಿ ತಂಡ ತೆಗೆದುಕೊಂಡ ಸರಾಸರಿ ಸಮಯ.
49 ನಿಮಿಷ
ಪ್ರತಿ ಗೋಲಿಗೆ ಬ್ರೆಜಿಲ್ ತಂಡ ತೆಗೆದುಕೊಂಡ ಸರಾಸರಿ ಸಮಯ.
25 ಮಿಲಿಯ ಪೋರ್ಚುಗಲ್ - ಅಮೆರಿಕ ತಂಡಗಳ ಸೆಣಸನ್ನು ಟಿವಿ ಮೂಲಕ ವೀಕ್ಷಿಸಿದವರ ಸಂಖ್ಯೆ.
16 ಮಿಲಿಯ
ಅಮೆರಿಕ ತಂಡದ ಮೊದಲ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸಿದವರ ಸಂಖ್ಯೆ.
906
ಬಿಲಿಯ 2010ರ ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸಿದವರು.
42.9 ಮಿಲಿಯ
ಪಂದ್ಯಾವಳಿಯ ಮೊದಲ ಪಂದ್ಯ (ಬ್ರೆಜಿಲ್ ಹಾಗೂ ಕ್ರೊವೇಶಿಯಾ)ವನ್ನು ಟಿವಿಯಲ್ಲಿ ವೀಕ್ಷಿಸಿದ ಜನರ ಸಂಖ್ಯೆ.
42.9 ಮಿಲಿಯ
ಬ್ರೆಜಿಲ್‌ನ ಪ್ರಮುಖ ವಾಹಿನಿ 'ಟಿವಿ ಗ್ಲೋಬೋ'ಗೆ ಮೊದಲ ಪಂದ್ಯ ಪ್ರಸಾರದ ವೇಳೆ ಸಿಕ್ಕ ಪ್ರೇಕ್ಷಕರು.
3.2 ಬಿಲಿಯ. 2010ರ ದಕ್ಷಿಣ ಆಫ್ರಿಕಾ ಫುಟ್ಬಾಲ್ ವಿಶ್ವಕಪ್ ಅನ್ನು ಟಿವಿ ಮೂಲಕ ನೋಡಿದವರು.
141 ಮಿಲಿಯ- ಪಂದ್ಯಾವಳಿ ಮೊದಲ ವಾರದಲ್ಲಿ ಫೇಸ್‌ಬುಕ್‌ನಲ್ಲಿ ಮಾಹಿತಿ ವಿನಿಮಯ ಮಾಡಿದ ಗ್ರಾಹಕರ ಸಂಖ್ಯೆ.
ಗೋಲ್ ಮೌತ್
ತಂತ್ರಜ್ಞಾನ ಕ್ರೀಡೆಗಳನ್ನು ಜನಪ್ರಿಯಗೊಳಿಸುವುದಷ್ಟೇ ಅಲ್ಲ, ತಂಡಗಳ ಕೌಶಲ್ಯಾಭಿವೃದ್ಧಿಗೂ ನೆರವಾಗುತ್ತಿದೆ. ಖ್ಯಾತ ಸಾಫ್ಟ್‌ವೇರ್ ಕಂಪನಿ ಸ್ಯಾಪ್, ಜರ್ಮನಿಯ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಮ್ಯಾಚ್ ಇನ್‌ಸೈಟ್ ಸಾಫ್ಟ್‌ವೇರ್ ಒದಗಿಸಿದೆ. ಆಟಗಾರರ ಬಟ್ಟೆಯೊಳಗೆ ಅಳವಡಿಸಲಾಗುವ ಸೆನ್ಸರ್‌ಗಳಲ್ಲಿ ಕಾರ್ಯ ನಿರ್ವಹಿಸುವ ಈ ಸಾಫ್ಟ್‌ವೇರ್, ಆಡುವಾಗ ಆಟಗಾರರ ರಕ್ತದೊತ್ತಡ, ಒತ್ತಡ ನಿಭಾಯಿಸುವ ರೀತಿ ಮುಂತಾದ ಮಾಹಿತಿಗಳನ್ನು ನೀಡುತ್ತದೆ. ಇದರಿಂದ, ಯಾವ ಪಂದ್ಯದಲ್ಲಿ ಯಾವ ಆಟಗಾರನನ್ನು ಹೇಗೆ ಬಳಸಿಕೊಳ್ಳಬೇಕೆಂಬ ಮಾಹಿತಿಯನ್ನು ಕೋಚ್‌ಗಳಿಗೆ ನೀಡುತ್ತದೆ. ಅಲ್ಲದೆ, ಬಾಲ್‌ನೊಳಗೂ ಕೆಲ ಎಲೆಕ್ಟ್ರಾನಿಕ್ ಉಪಕರಣ ಅಳವಡಿಸಿ, ಯಾವ ಆಟಗಾರ ಚೆಂಡನ್ನು ಯಾವ ರೀತಿ ಕಿಕ್ ಮಾಡುತ್ತಾನೆ ಎಂಬ ಮಾಹಿತಿಗಳನ್ನೂ ಪಡೆಯಲಾಗುತ್ತಿದೆ. ಇದು ನಿರ್ದಿಷ್ಟ ತಂಡವನ್ನು ಬಲಿಷ್ಠಗೊಳಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ ತಜ್ಞರು.
= ಚೇತನ್ ಓ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


