ಕಡಿಮೆ ಕೊಲೆಸ್ಟರಾಲ್ ಸಹ ಅಪಾಯಕಾರಿಯೇ!

ನಮ್ಮ ಶರೀರ ಅದ್ಭುತ ಎಂಜಿನಿಯರಿಂಗ್ ಕೌಶಲಗಳಿಂದ ಕೂಡಿದೆ ಎಂದು ಹೇಳುವುದು ಇದಕ್ಕೇ. ಇದರ ನಿರ್ವಹಣೆ ಬಹಳ ಸುಲಭವಾದದ್ದು. ಆದರೆ ಯಂತ್ರ ಕೆಟ್ಟರೆ ಮಾತ್ರ ಬಲು ಸೂಕ್ಷ್ಮವಾದದ್ದು. ಇಲ್ಲಿ ಅಂಗಾಂಗಗಳಿಂದ ಹಿಡಿದು ಇವುಗಳಿಗೆ ಬಲ ತುಂಬುವ ಆಹಾರದವರೆಗೆ ಎಲ್ಲವೂ ಪ್ರಮಾಣಬದ್ಧ. ಯಾವುದರಲ್ಲಾದರೂ ಕೊಂಚ ಏರಿಳಿತ ಆದರೂ ಸಮಸ್ಯೆ ಕಟ್ಟಿಟ್ಟದ್ದು. ಅದಕ್ಕೊಂದು ಉದಾಹರಣೆ ಎಂದರೆ ಕೊಲೆಸ್ಟರಾಲ್. ಈ ಕೊಲೆಸ್ಟರಾಲ್ ಜಾಸ್ತಿಯಾದರೆ ಹೃದಯಾಘಾತದಂತಹ ಸಮಸ್ಯೆಗಳು ಬರುತ್ತವೆ ಎನ್ನುವುದು ಗೊತ್ತಿದೆ. ಆದರೆ ಕಡಿಮೆಯಾದರೂ ತೊಂದರೆ ಎನ್ನುವುದು ಗೊತ್ತಾ? ಅದೂ ಕೊಲೆಸ್ಟರಾಲ್ ಪ್ರಮಾಣ ಇಳಿದರೆ ನಮ್ಮ ವರ್ತನೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಿಂಸಾತ್ಮಕವಾಗಿ ವ್ಯವಹರಿಸುವಂತೆ ಮಾಡುತ್ತದೆ. ನಮ್ಮನ್ನು ಮೂಡಿಯಾಗಿಸುತ್ತದೆ ಎನ್ನುವುದು ಅಚ್ಚರಿಯ ವಿಷಯವೇ ಅಲ್ಲವೆ? ಅದಕ್ಕಾಗಿಯೇ ವಿಜ್ಞಾನಿಗಳು ಒಂದು ನಿಲುವಿಗೆ ಬಂದಿದ್ದಾರೆ - 'ಕಡಿಮೆ ಕೊಲೆಸ್ಟರಾಲ್ ಹೃದಯದ ತೊಂದರೆಗಳಿಂದ ನಮ್ಮನ್ನು ಪಾರು ಮಾಡಬಲ್ಲದೇ ವಿನಾ ಜೀವಿತಾವಧಿಯನ್ನು ಹೆಚ್ಚಿಸಲಾಗದು' ಎಂದು. ಕೊಲೆಸ್ಟರಾಲ್ ನಿಯಂತ್ರಿಸುವ ಭರದಲ್ಲಿ ಅಗತ್ಯಕ್ಕಿಂತ ಕಡಿಮೆ ಆದರೆ ಅಪಘಾತ, ಆತ್ಮಹತ್ಯೆ, ಕೊಲೆ ಇತ್ಯಾದಿಗಳು ಆರಂಭವಾಗಬಹುದು ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
ಕೊಲೆಸ್ಟರಾಲ್ ಅಧಿಕವಾಗಿದ್ದಾಗ ಅದು ವರ್ತನೆ ಅಥವಾ ಮೂಡ್ ಮೇಲೆ ವ್ಯತಿರಿಕ್ತ ಪರಿಣಾಮವನ್ನೇನೂ ಬೀರುವುದಿಲ್ಲ. ಕಡಿಮೆಯಾದಾಗ ಇಂತಹ ಸಾಧ್ಯತೆ ಅಧಿಕ. 1981ರಲ್ಲಿ ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆನಡೆಸಿದ ಅಧ್ಯಯನದಿಂದ ಈ ಸಂಗತಿ ಮೊದಲ ಸಲ ಬೆಳಕಿಗೆ ಬಂದಿತು. ಹೃದ್ರೋಗ ತಡೆಯಲು ಕೊಲೆಸ್ಟರಾಲ್ ನಿಯಂತ್ರಣಕ್ಕೆ ಮುಂದಾದ ಪುರುಷರಲ್ಲಿ ಆ ನಂತರ ಹಿಂಸಾತ್ಮಕ ಮನೋಭಾವ ಜಾಸ್ತಿಯಾಗಿದ್ದು, ಶಾಂತ ಸ್ವಭಾವದವರೂ ಆ ರೀತಿ ವರ್ತಿಸಲು ಆರಂಭಿಸಿದ್ದು ವಿಜ್ಞಾನಿಗಳ ನಿದ್ದೆಗೆಡಿಸಿತು. ಜೇ ಕಪ್ಲನ್ ಮತ್ತು ಸ್ಟೀಫನ್ ಮನುಕ್ ಎಂಬಿಬ್ಬರು ವಿಜ್ಞಾನಿಗಳು ಕೋತಿಗಳ ಮೇಲೆ ಪ್ರಯೋಗ ಕೈಗೊಂಡರು. ಕೆಲವು ಕೋತಿಗಳಿಗೆ ಕಡಿಮೆ ಕೊಬ್ಬಿನ ಆಹಾರ ನೀಡಿದರು. ಕೆಲವಕ್ಕೆ ಕೊಬ್ಬು ಜಾಸ್ತಿ ಇರುವ ಆಹಾರ ಕೊಟ್ಟರು. ಕಡಿಮೆ ಕೊಬ್ಬಿನ ಮೂಲಕ ಕೊಲೆಸ್ಟರಾಲ್ ಇಳಿಸಿಕೊಂಡಿದ್ದ ಕೋತಿಗಳು ಕಿರುಚಾಡುವುದು, ಹಾರಾಡುವುದು, ಅಕ್ಕಪಕ್ಕದವರ ಮೇಲೆ ವಿನಾಕಾರಣ ಆಕ್ರಮಣ ಮಾಡುವುದು ಇತ್ಯಾದಿ ಕೃತ್ಯಗಳು ಹೆಚ್ಚಿದ್ದವು. ಅಧಿಕ ಕೊಲೆಸ್ಟರಾಲ್ ಇರುವ ಕೋತಿಗಳಲ್ಲಿ ಅಂತಹ ಯಾವುದೇ ಲಕ್ಷಣ ಕಂಡುಬರಲಿಲ್ಲ.
'ಕಡಿಮೆ ಕೊಲೆಸ್ಟರಾಲ್ ವ್ಯಕ್ತಿಯ ವರ್ತನೆ, ಮನಸ್ಥಿತಿ ಮೇಲೆ ಪರಿಣಾಮ ಬೀರುವುದು ನಿಜ. ಆದರೆ ಇದರ ಹಿಂದಿನ ಕಾರಣ ಏನು ಎನ್ನುವುದನ್ನು ಪತ್ತೆ ಮಾಡಲು ಸಾಧ್ಯ ಆಗಿಲ್ಲ. ಬಹುಶಃ ಮೆದುಳಿನ ನರವ್ಯೂಹ, ಸೆರೋಟೊನಿನ್ನಂತಹ ನ್ಯೂರೋಟ್ರಾನ್ಸ್ಮೀಟರ್ಗಳ ಮೇಲೆ ಕೊಲೆಸ್ಟರಾಲ್ ಪ್ರಭಾವ ಬೀರಬಹುದು' ಎನ್ನುವ ತರ್ಕ ಮುಂದಿಡುತ್ತಾರೆ ಡಾ. ಮನುಕ್.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


