ಮರಳು ಹೆಸರು

ಈ ಬಾರಿ ಮಳೆ ಕೊರತೆ ಕಾಡುತ್ತಿದೆ. ಮುಂಗಾರು ಆರಂಭದಲ್ಲಿ ಕೊಂಚ ಸುರಿದು ಮಳೆ ಮರೆಯಾಗಿದೆ. ಆದರೂ ಈ ರೈತರು ಹೆಸರು ಬೆಳೆಯಲ್ಲಿ ಬಂಪರ್ ಸಾಧಿಸಿದ್ದಾರೆ. ಮೈತುಂಬ ಕಾಯಿ ಕಟ್ಟಿಕೊಂಡು ಗಿಡಗಳು ನಳನಳಿಸುತ್ತಿವೆ. ಈ ಸೊಗಸೆಲ್ಲಿಂದ ಬಂತು ಎಂದು ಕೇಳಿದರೆ, ಇದೆಲ್ಲ ಮರಳಿನ ಮಹಿಮೆ ಎನ್ನುತ್ತಾರೆ ರೈತರು.
ಬರದ ನಡುವೆಯೂ ಸಾವಿರಾರು ಎಕರೆ ಪ್ರದೇಶದಲ್ಲಿ ಹೆಸರು ಬೆಳೆ ಹಸಿರಾಗಿ ಕಂಗೊಳಿಸುತ್ತಿದೆ. ಭರ್ಜರಿ ಕಾಯಿ ಹಿಡಿಯುವ ಮೂಲಕ ಬಂಪರ್ ಬೆಳೆ ಬಂದಿದೆ.
ಏನಿದು ಮರಳಿನ ಮಹಿಮೆ?
ಮಳೆಯಾಶ್ರಿತ, ಕಪ್ಪು ಮಣ್ಣಿನ ಪ್ರದೇಶದಲ್ಲಿ ಮರಳಿನ ಮೂಲಕ ರೈತರು ತೇವಾಂಶ ಕಾಪಾಡಿಕೊಂಡಿದ್ದಾರೆ. ಕಪ್ಪು ಮಣ್ಣಿನ ಭೂಮಿಗೆ ಎಕರೆಗೆ ನಾಲ್ಕಾರು ಟ್ರ್ಯಾಕ್ಟರ್ ಮರಳು ಹಾಕುತ್ತಾರೆ. ಮಳೆಗಾಲ ಶುರುವಾಗುತ್ತಿದ್ದಂತೆಯೇ ಬಿತ್ತನೆ ಮಾಡುತ್ತಾರೆ. ಅಲ್ಪಸ್ವಲ್ಪ ಮಳೆಯಾದರೂ ಸಾಕು, ತೇವಾಂಶ ಆರದಂತೆ ಮರಳು ಕಾಯುತ್ತದೆ. ಬೆಳೆ ಚೆನ್ನಾಗಿ ಬರುತ್ತದೆ. ಆದರೆ, ಹೀಗೆ ಬಿತ್ತಿದ ಮೇಲೆ ನೇಗಿಲು ಹೊಡೆಯುವಂತಿಲ್ಲ. ನೇಗಿಲು ಹೊಡೆದರೆ, ಮರಳು ನೆಲದೊಳಗೆ ಇಳಿಯುತ್ತದೆ. ಕೇವಲ ಬಿತ್ತುವುದಕ್ಕಾಗಿ ಹರಗುವುದು, ಸಾಲು ಬಿಡುವುದು- ಇಷ್ಟನ್ನೇ ಮಾಡಬೇಕು. ಮರಳು ಹಾಕಿದ ಮೇಲೆ ಭೂಮಿಯಲ್ಲಿ ಕಳೆಯೂ ಅಷ್ಟಾಗಿ ಹುಟ್ಟುವುದಿಲ್ಲ.
ಉತ್ತಮ ಇಳುವರಿ
ಮರಳು ಹಾಕಿ ಬಿತ್ತನೆ ಮಾಡುವ ಭೂಮಿಯ ಇಳುವರಿಗೂ ಹಾಗೂ ಪಾರಂಪರಿಕ ಪದ್ಧತಿಯ ಬಿತ್ತನೆ ಫಸಲಿಗೂ ತುಂಬಾ ವ್ಯತ್ಯಾಸ ಇದೆ. ಮರಳು ಹಾಕಿದ ಹೊಲದಲ್ಲಿ ಶೇಂಗಾ ಬೆಳೆ ಎಕರೆಗೆ 40-50 ಚೀಲ ಬರುತ್ತದೆ. ಆದರೆ, ಸಾಮಾನ್ಯ ಭೂಮಿಯಲ್ಲಿ 20-30 ಚೀಲ. ಮರಳು ಹಾಕಿದ ಭೂಮಿ ಇಳುವರಿಯೂ ಉತ್ತಮ ಎಂದೇ ರೈತರು ಹೇಳುತ್ತಾರೆ.
ಬರಕ್ಕೆ ಪರಿಹಾರ
ಅಲ್ಪಸ್ವಲ್ಪ ಮಳೆಯಾಗುವ ಹೊತ್ತಲ್ಲಿ ಇದು ಸೂಕ್ತ ವಿಧಾನ. ಒಂದೆರಡು ಮಳೆಯಾದರೂ ಬೆಳೆ ಚೆನ್ನಾಗಿ ಬರುತ್ತದೆ. ಈ ಸಾರಿ ಬರ ಕಾಡುತ್ತಿದ್ದು, ರೈತರು ಮರಳು ಹಾಕಿಸಿ, ಬಿತ್ತನೆ ಮಾಡಿರುವುದರಿಂದ ಬರ ಇದ್ದರೂ ಅತ್ಯುತ್ತಮ ಬೆಳೆ ಬಂದಿದೆ. ಒಂದು ಸಾರಿ ಮರಳು ಹಾಕಿದರೆ ನಾಲ್ಕಾರು ವರ್ಷ ಚಿಂತೆ ಇಲ್ಲ. ಇನ್ನಷ್ಟು ದಿನ ಬೇಕು ಎನ್ನುವುದಾದರೆ ಉಳುಮೆ ತೀರಾ ಕಡಿಮೆ ಮಾಡಬೇಕು. ಆಗ ನಾಲ್ಕಾರು ವರ್ಷದ ಬದಲಾಗಿ 8-10 ವರ್ಷವೂ ಮರಳು ಪ್ರಯೋಜನ ನೀಡುತ್ತದೆ.
ಬರದ ನೆರಳಲ್ಲಿ ಹೆಸರು ಬೆಳೆ ಬಂಪರ್
ಬರದ ನಡುವೆಯೂ ಸಾವಿರಾರು ಎಕರೆ ಪ್ರದೇಶದಲ್ಲಿ ಹೆಸರು ಬೆಳೆ ಹಸಿರಾಗಿ ಕಂಗೊಳಿಸುತ್ತಿದೆ. ಇದಕ್ಕೆ ಕಾರಣ ಮರಳು ಎಂದರೆ ನಂಬುತ್ತೀರಾ?
= ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


