ಬೈಟುಕಾಫಿ

ಜೀನು ಗೂಡು

ಜೀನು ಗೂಡು
Published On :

ಬಸ್ಸು ಹತ್ತಿ ಒಳ ನುಗ್ಗುವುದರೊಳಗೆ ನಿಮ್ಮ ಕಣ್ಣು ನಮ್ಮ ಬಟ್ಟೆಯನ್ನು ಸ್ಕ್ಯಾನ್ ಮಾಡುತ್ತದೆ. ಮೈಯ್ಯೆಲ್ಲಾ ಹುಳ ಹರಿದಂತಾಗುತ್ತದೆ. ಆದರೂ ಪ್ರಶ್ನಿಸಲಾಗುತ್ತದೆಯೇ? ಕೇಳುವುದರೊಳಗೆ ನಿಮ್ಮ ಕಣ್ಣು ಇಹಲೋಕ ಮರೆತ ಬಾಬಾರಂತೆ ವೇಷ ತೊಟ್ಟು ಕುಳಿತಿರುತ್ತದೆ. ಥಿಯೇಟರ್‌ನಲ್ಲಿ ಪಾಪ್‌ಕಾರ್ನ್ ಕೊಳ್ಳಲೆಂದು ಹೋದಾಗ ಎಷ್ಟೊಂದು 'ಮುಗ್ಧ'ವಾಗಿ ನಮ್ಮ ಮೇಲೆ ತಳ್ಳಲ್ಪಡುತ್ತೀರಿ?! ಪಾಪ ನೀವು, ಛೆ, ಅದ್ಹೇಗೆ ಹುಡುಗೀರ ಮೇಲೇ ಎಲ್ಲ ನಿಮ್ಮನ್ನು ತಳ್ತಾರೆ ಅಂತಾ?! ಎಲ್ಲಾದರೂ ಕುಳಿತರೆ ಸಾಕು, ಬಂದು ನಿಂತು ಮೇಲಿನಿಂದ ಒಳಗೆ ಹಣಕುತ್ತೀರಿ. ನೀವು ನಿಂತಿರುವಾಗ ಕುಳಿತದ್ದು ನಮ್ಮದೇ ತಪ್ಪು ಬಿಡಿ! ಆಟೋದಲ್ಲಿ ಕುಳಿತು ಹೋಗುವಾಗ ಆಟೋ ವೇಗಕ್ಕೆ ಸರಿಯಾಗಿ ಬೈಕೋಡಿಸಿ ಹಸಿವಿನಿಂದ ನಮ್ಮ ಕಾಲು ನೋಡುತ್ತೀರಿ. ಇಲ್ಲೂ ನಮ್ಮದೇ ಮಿಸ್ಟೇಕ್. ಅದರ ಕೆಳಗಿನ ಚಪ್ಪಲಿಯ ರುಚಿ ಒಂದೆರಡು ಬಾರಿ ತೋರಿಸಿದ್ದರೆ ಮತ್ತೆ ಬಹುಷಃ ನಿಮಗೆ ಹಸಿವಾಗುತ್ತಿರಲಿಲ್ಲ!
ಇದಕ್ಕೆಲ್ಲ ನಾವು ಹಾಕೋ ಜೀನ್ಸ್ ಕಾರಣ ಅಂತ ಗೂಬೆಯನ್ನು ನಮ್ಮ ತಲೆಗೆ ಸುಲಭವಾಗಿ ಕೂರಿಸಿ ನುಣುಚಿಕೊಳ್ಳುವ ನೀವು ಸೀರೆ ತೊಟ್ಟು ನಿಂತಾಗ ಸೊಂಟ ನೋಡೋದಿಲ್ಲವೇ ಹೇಳಿ? ಮೊದಲು ನಿಮ್ಮ ಜೀನ್ಸ್ (ವಂಶವಾಹಿ) ಸರಿಪಡಿಸಿಕೊಳ್ಳಿ. ಬಸ್ಸಿನಲ್ಲಿ ರಾತ್ರಿ ಪ್ರಯಾಣದಲ್ಲಿ ಒಮ್ಮೆಯೂ ಸರಿಯಾಗಿ ನಿದ್ರಿಸಿದ್ದಿಲ್ಲ. ಪ್ರತಿ ನಿಮಿಷವೂ ಮೈಮೇಲೆ ಎಲ್ಲಿಂದ ಕೈ ಬರುತ್ತದೆ ಎಂಬ ತಳಮಳದಲ್ಲಿ ಮೈಯೆಲ್ಲಾ ಕಣ್ಣಾಗಿ ಕುಳಿತುಕೊಳ್ಳುತ್ತೇವೆ. ಆಗಾಗ ನಾನಿನ್ನೂ ಎಚ್ಚರವಾಗಿದ್ದೇನೆ ಎಂದು ನಿಮಗೆಲ್ಲ ತೋರಿಸಲು ಅಲುಗಾಡುತ್ತೇವೆ. ಮೊಬೈಲ್ ಫೋನ್‌ನಲ್ಲಿ ತಕ್ಷಣ ಯಾರಿಗೆ ಕಾಲ್ ಮಾಡಬಹುದೋ ಅವರ ನಂಬರನ್ನು ಒಮ್ಮೆ ಡಯಲ್ ಮಾಡಿ ಮೇಲೆ ತಂದಿಟ್ಟುಕೊಳ್ಳುತ್ತೇವೆ. ಜೀನ್ಸ್‌ನ ಜೇಬಲ್ಲಿ ಪಿನ್ನಿಟ್ಟುಕೊಳ್ಳುತ್ತೇವೆ. ನಮ್ಮ ಇಷ್ಟೂ ಭಯಕ್ಕೆ ನಾವು ಜೀನ್ಸ್ ತೊಡುವುದೇ ಕಾರಣ ಎಂಬ ಅನಿಸಿಕೆ ನಿಮ್ಮದಾದರೆ, ನಿಮ್ಮ ಸೀರೆ ತೊಡುವ ಮನೆಮಗಳಿಗೆ, ಪತ್ನಿಗೆ, ತಂಗಿಗೆ ಈ ಭಯ ಎಂದೂ ಕಾಡಿಲ್ಲವೇ ಕೇಳಿ ನೋಡಿ!
ರಾತ್ರಿ ಹತ್ತು ಗಂಟೆಯಾದ ಮೇಲೆ ಗಾಡಿಯಲ್ಲಿ ಮನೆಗೆ ಹೋಗಬೇಕಾದ ಪ್ರಸಂಗ ಬಂದರೆ ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಯಾರೋ ನಮ್ಮೊಂದಿಗಿದ್ದಾರೆ ಎಂಬಂತೆ ನಟಿಸುತ್ತಾ ನಮಗೆ ಗೊತ್ತಿಲ್ಲದೆಯೇ ವೇಗವಾಗಿ ಓಡಿಸುತ್ತೇವೆ. ರಾತ್ರಿ ಬಸ್ಸಿಗಾಗಿ ಒಬ್ಬರೇ ಹೆಚ್ಚು ಕಾಲ ಕಾಯಬೇಕಾಗಿ ಬಂದರೆ ಅಲ್ಲಿರುವ ಗಂಡಸರಿಗೆಲ್ಲ ನಾನು ವೇಶ್ಯೆಯಲ್ಲ, ಮನೆಮಗಳು ಎಂದು ತೋರಿಸಿಕೊಡಲು ಇನ್ನಿಲ್ಲದ ಉಪಾಯ ಹೂಡುತ್ತೇವೆ. ಈ ಎಲ್ಲ ಭಯಕ್ಕೂ ನಾವು ತೊಡುವ ಜೀನ್ಸೇ ಕಾರಣ ಎಂಬುದು ನಿಮ್ಮ (ಮೊಂಡು?)ವಾದವಾಗಿದ್ದಲ್ಲಿ ನಿಮ್ಮ ತಂಗಿಯನ್ನೋ ಮಗಳನ್ನೋ ಚೂಡಿ ಹಾಕಿಸಿ ಅದೇ ನಿರ್ಜನ ರಸ್ತೆಯಲ್ಲಿ 15 ನಿಮಿಷ ನಿಲ್ಲಿಸಿ ನೋಡಿ. ಆ ಧೈರ್ಯ ನಿಮಗಿಲ್ಲ, ಏಕೆಂದರೆ ಇಲ್ಲಿರುವುದು ಬಟ್ಟೆಯ ತಪ್ಪಲ್ಲ. ಯಾವುದನ್ನು ಅಲ್ಲವೆಂದು ಸಾರುತ್ತೀರೋ ಅದೇ ನಿಜವಾದ ಕಾರಣವೆಂಬುದು ನಿಮ್ಮೊಳ ಮನಸಿಗೂ ಗೊತ್ತು.
ನಿಮ್ಮ ತಂಗಿಯನ್ನು ಅವನಾರೋ ಕೆಕ್ಕರಿಸಿ ನೋಡಿದರೆ ಹೋಗಿ ಒದೆಯುವ ನೀವು, ನೀವೇ ಅದೇ ತಪ್ಪನ್ನು ಮಾಡಿದಾಗ ನಾವು ಪ್ರಶ್ನಿಸಿದರೆ, 'ಅಕ್ಕತಂಗಿಯರಿದ್ದಾರೆ, ಆದರೆ ಹೆಂಡತಿಯಿಲ್ಲ' ಎಂದು ಮರ್ಯಾದೆ ಬಿಟ್ಟು ಹಲ್ಲು ಗಿಂಜುತ್ತೀರಿ. ನಿಮ್ಮ ಮಗಳಿಗೆ ಕರಾಟೆ ತಂತ್ರಗಳನ್ನು ಹೇಳಿಕೊಡುವ ನೀವು ಮಗಳ ಫ್ರೆಂಡನ್ನು ನೋಡಿ ಮನಸೊಳಗೇ ಮಂಡಿಗೆ ತಿನ್ನುತ್ತೀರಿ.
ಹೌದು, ಜೀನ್ಸ್ ತೊಡುತ್ತೇವೆ. ಅದು ನಮ್ಮ ಇಷ್ಟ. ನಮ್ಮ ಕಂಫರ್ಟ್. ನಾವು ಜೀನ್ಸ್ ತೊಟ್ಟ ಮಾತ್ರಕ್ಕೆ ನಮ್ಮನ್ನು ನಖಶಿಖಾಂತ ಚಪ್ಪರಿಸಿ, ದಕ್ಕುವಳೋ ಎಂದು ಪರೀಕ್ಷಿಸುವ ಹಕ್ಕನ್ನು ನಿಮಗೆ ಕೊಟ್ಟಿದ್ಯಾರು? ಯಾರು ಕೊಟ್ಟಿದ್ದಾರೆ ನಮ್ಮ ದೇಹವನ್ನು ಸ್ಕ್ಯಾನ್ ಮಾಡುವ, ನಮ್ಮ ನಡತೆ, ಬಟ್ಟೆ ಬಗ್ಗೆ ತೀರ್ಪು ನೀಡಲು ಪರ್ಮಿಶನ್ನು? ನಾವೇನು ತೊಡುತ್ತೇವೆ, ಏನು ತೊಡಬೇಕು, ಏನು ತೊಡಬಾರದು ಎಂಬುದನ್ನು ನೀವು ನಿರ್ಧರಿಸಲು ನಾವು ನಿರ್ಜೀವ ವಸ್ತುವಲ್ಲ. ನಮ್ಮನ್ನು ಹಿಂದೆ, ಮುಂದೆ ಎಲ್ಲ ಕೋನಗಳಿಂದಲೂ ನೀವು ಪರಿಶೀಲಿಸಲು ನಾವು ಮಾರಾಟಕ್ಕಿಲ್ಲ. ಪ್ರತಿಯೊಂದು ಬಾರಿ ಅತ್ಯಾಚಾರ ಪ್ರಕರಣ ಕೇಳಿಬಂದಾಗಲೂ ಅವಳೇನು ತೊಟ್ಟಿದ್ದಳು ಎಂಬುದನ್ನು ಕೇಳುವುದು ಬಿಡಿ. ನಿಮ್ಮ ರೋಗಗ್ರಸ್ಥ ಮನಸ್ಥಿತಿಗೆ ಅವಳು ಏನು ಧರಿಸಿದ್ದಳು ಎಂಬುದಕ್ಕಿಂತ 'ಅವಳು' ಎಂಬುದಷ್ಟೇ ಸಾಕು. ನಮ್ಮ ಬಟ್ಟೆಯ ಬಗ್ಗೆ ಮಾತನಾಡುವ ಮೊದಲು ನಾಲ್ಕು ತಿಂಗಳ ಮಗುವನ್ನೂ ಬಿಡದ ನಿಮ್ಮ ಕಾಮುಕತನಕ್ಕೆ ಕೊಳ್ಳಿ ಇಟ್ಟುಕೊಳ್ಳಿ.
ಜೈ ಜೀನ್ಸ್!
ಮೊನ್ನೆ ಮೊನ್ನೆ ಮುಂಬಯಿಯಲ್ಲಿ ಹೆಣ್ಣುಮಗಳೊಬ್ಬಳಿಗೆ ಗಂಡ ಜೀನ್ಸ್ ಧರಿಸಬೇಡ, ಕೇವಲ ಸೀರೆ ಧರಿಸಬೇಕು ಎಂದು ಕಟ್ಟುಪಾಡು ಹೇರಿದ್ದನ್ನು ಪ್ರಶ್ನಿಸಿ ಆಕೆ ಕೋರ್ಟ್ ಮೆಟ್ಟಿಲೇರಿದಳು. ಇದು ಕೂಡಾ ಕೌಟುಂಬಿಕ ದೌರ್ಜನ್ಯವೆಂದು ಪರಿಗಣಿಸಿ ದಂಪತಿಗೆ ನ್ಯಾಯಾಲಯ ಡೈವೋರ್ಸ್ ನೀಡಿದೆ. ಇದು ದೌರ್ಜನ್ಯಕ್ಕೆ ವಿನೂತನ ವ್ಯಾಖ್ಯೆ ನೀಡಿದೆ.

= ರೇಶ್ಮಾರಾವ್ ಸೊನ್ಲೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.