ಬೈಟುಕಾಫಿ

ಗೆಲವು ಎಂದರೆ ಏನು?

ಗೆಲವೆಂದರೆ.. ಒಬ್ಬ ಮನುಷ್ಯ ಹಾಯಾಗಿ, ಆನಂದವಾಗಿ, ಕಡಿಮೆ ಸಮಸ್ಯೆಗಳೊಂದಿಗೆ, ಸನಿಹದವರೊಂದಿಗೆ ಒಳ್ಳೆಯ ಸಂಬಂಧದೊಂದಿಗೆ, ನಾಲ್ವರ ನಡುವೆ ಒಳ್ಳೆಯ ಹೆಸರಿನೊಂದಿಗೆ...

Published On :

ಗೆಲವೆಂದರೆ.. ಒಬ್ಬ ಮನುಷ್ಯ ಹಾಯಾಗಿ, ಆನಂದವಾಗಿ, ಕಡಿಮೆ ಸಮಸ್ಯೆಗಳೊಂದಿಗೆ, ಸನಿಹದವರೊಂದಿಗೆ ಒಳ್ಳೆಯ ಸಂಬಂಧದೊಂದಿಗೆ, ನಾಲ್ವರ ನಡುವೆ ಒಳ್ಳೆಯ ಹೆಸರಿನೊಂದಿಗೆ, ಹಣಕ್ಕಾಗಿ ಪರದಾಡದೇ, ಇದ್ದುದರಲ್ಲಿಯೇ ಇತರರಿಗೆ ಸಹಾಯ ಮಾಡುತ್ತಾ, ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ, ತನ್ನ ಸಮಯವನ್ನು ತಾನು ನಿರ್ದೇಶಿಸಿಕೊಳ್ಳುವ ಮಟ್ಟದಲ್ಲಿ ಪ್ರಶಾಂತವಾಗಿ ಇರಬಲ್ಲವನಾಗುವುದು.
ವಿದ್ಯಾರ್ಥಿಗಳಿಗೆ ಶಿಕ್ಷಣ ತರಗತಿಗಳನ್ನು ಪ್ರಾರಂಭಿಸುತ್ತಾ ನಾನು ಕೇಳುವ ಮೊಟ್ಟಮೊದಲ ಪ್ರಶ್ನೆ: "ನಿಮ್ಮಲ್ಲಿ ಬದುಕಿನಲ್ಲಿ ಮೇಲೆ ಬರಬೇಕೆಂದಿರುವವರು ಕೈ ಮೇಲಕ್ಕೆತ್ತಿ" ಎಂದು. ಎಲ್ಲರೂ ಕೈ ಎತ್ತುತ್ತಾರೆ. ಕೆಲವರು ನಿಂತು ನಂತರ ಕೈ ಮೇಲೆತ್ತುತ್ತಾರೆ.
"ನಿಜಕ್ಕೂ ಮೇಲಕ್ಕೆ ಬರುವುದೆಂದರೆ ಏನು?" ಎಂದು ನನ್ನ  ಎರಡನೆಯ ಪ್ರಶ್ನೆಗೆ ಹಾಲ್‍ನಲ್ಲಿ ವಿಶಾಲವಾದ ನಿಶ್ಶಬ್ದ (ಪದಪ್ರಯೋಗಕ್ಕೆ ಕ್ಷಮೆ ಇರಲಿ) ಆವರಿಸಿಕೊಳ್ಳುತ್ತದೆ. ಈ ಪ್ರಶ್ನೆಗೆ ಉತ್ತರ ಹೇಳಬೇಕೆಂದರೆ ದೊಡ್ಡವರು ಕೂಡಾ ಆಲೋಚನೆಗೆ ಒಳಗಾಗುತ್ತಾರೆ.    
ಈ ಮಧ್ಯೆ ಎರಡನೆ ಸಾಲಿನಲ್ಲಿರುವ ಮೂರನೆಯ ಹುಡುಗಿ ಎದ್ದು ನಿಂತು, "ಅಂದುಕೊಂಡಿದ್ದನ್ನು ಅಂದುಕೊಂಡಂತೆ ಸಾಧಿಸುವುದು" ಎನ್ನುತ್ತಾಳೆ. ಹೌದೆಂಬಂತೆ ಬಹಳ ಜನ ಮಕ್ಕಳು ತಲೆದೂಗುತ್ತಾರೆ.
"ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ನನ್ನ ಪ್ರಶ್ನೆ ಕೂಡಾ ಅದೇ! ಏನೂ ಅಂದುಕೊಳ್ಳದೇ, ಏನು ಸಂಪಾದಿಸಿದರೆ ಜೀವನದಲ್ಲಿ ಮೇಲೆ ಬಂದ ಹಾಗೆ ಲೆಖ್ಖ?" ಮತ್ತೆ ಸ್ವಲ್ಪ ಹೊತ್ತು ನಿಶ್ಶಬ್ದ. ಅದನ್ನು ಸೀಳಿಕೊಂಡು ಕೊನೆಯ ಬೆಂಚಿನ ಹುಡುಗ "ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯುವುದು" ಎನ್ನುತ್ತಾನೆ.
"ಒಬ್ಬ ವ್ಯಕ್ತಿ ಚೆನ್ನಾಗಿ ಓದಿ ಲಕ್ಷಗಟ್ಟಲೆ ಸಂಪಾದಿಸಿದ್ದಾನೆ. ತಂದೆತಾಯಿಯರನ್ನು ಅನಾಥಾಶ್ರಮದಲ್ಲಿ ಸೇರಿಸಿದ್ದಾನೆ. ಅವನು ಜೀವನದಲ್ಲಿ ಮೇಲೆ ಬಂದ ಹಾಗೇನು?" ಎಂದು ಕೇಳುತ್ತೇನೆ.
"ಇಲ್ಲ.. ಇಲ್ಲ" ಮಕ್ಕಳ ಒಕ್ಕೊರಲ ಧ್ವನಿಗೆ
ಆ ಹಾಲ್ ಅಲುಗಾಡಿಹೋಗುತ್ತದೆ.
"ಒಬ್ಬ ವ್ಯಾಯಾಮವಿಲ್ಲದೇ ಮೂವತ್ತು ವರ್ಷಗಳಿಗೇ ಮುದುಕನಾಗಿಬಿಡುತ್ತಾನೆ. ಇನ್ನೊಬ್ಬ ಮನೆಗೆ ಬಂದೊಡನೆ ಅವನ ಮನೆಯಲ್ಲಿ ಸ್ಮಶಾನವೈರಾಗ್ಯ ಆವರಿಸಿಕೊಳ್ಳುತ್ತದೆ. ಮತ್ತೊಬ್ಬನಿಗೆ ವಿದ್ಯೆ, ಹಣ ಇದೆ. ಆದರೆ ಕ್ಯಾರೆಕ್ಟರ್ ಇಲ್ಲ. ಇವರೆಲ್ಲಾ ಜೀವನದಲ್ಲಿ ಮೇಲಕ್ಕೆ ಬಂದ ಹಾಗಾ?"
ಇಲ್ಲವೆನ್ನುತ್ತಾರೆ ಮಕ್ಕಳು. "ಮತ್ತೇನು ಬೇಕು ಮನುಷ್ಯನಿಗೆ" ಎಂದು ಕೇಳುತ್ತೇನೆ.
"ತೃಪ್ತಿ" ಎನ್ನುತ್ತಾರೆ.
"ಮತ್ತೆ ಅದೇ ಪ್ರಶ್ನೆ. ತೃಪ್ತಿ ಹೇಗೆ ಉಂಟಾಗುತ್ತದೆ?"
ಚಿಕ್ಕ ಮಕ್ಕಳು ಅವರು. ಅವರಿಗೆ ಅವಗಾಹನೆ ಬಂದಿರುವÀಷ್ಟು ಪ್ರಮಾಣದಲ್ಲಿ ಇನ್ನೂ ಅನುಭವ ಬಂದಿಲ್ಲ. ಅಷ್ಟೊಂದು ಆಲೋಚನೆಯೂ ಅಸಾಧ್ಯವೇ. ಆದರೂ ಏನೋ ಹೇಳಬೇಕೆಂಬ ಆಸಕ್ತಿ ಇರುವುದು ನಿಜಕ್ಕೂ ಅಭಿನಂದನೀಯ. ಅದೇ ದೊಡ್ಡವರಾಗಿದ್ದರೆ ಮತ್ತೊಂದು ರೀತಿಯಲ್ಲಿ ಹೇಗೆ ಹೇಗೋ ವಾದಿಸಿ ಉತ್ತರವನ್ನು ಹೇಗೋ ಬೇರೆಲ್ಲೋ ತೆಗೆದುಕೊಂಡು ಹೋಗುತ್ತಾರೆ.
ವಿಜಯಕ್ಕೆ ಪ್ರತ್ಯೇಕವಾದ ದಾರಿ ಎಂದು ಯಾವುದೂ ಇಲ್ಲ. ಒಬ್ಬೊಬ್ಬ ಮನುಷ್ಯನಿಗೆ ಒಂದೊಂದು ಗುರಿ ಇರುತ್ತದೆ. ಎಲ್ಲರಲ್ಲಿಯೂ ವಿವಿಧ ರೀತಿಯ ಅಂತರ್ಲೀನ ಶಕ್ತಿಗಳಿರುತ್ತವೆ. ಅವನ್ನು ಉಪಯೋಗಿಸುತ್ತಾ ಒಂದು ಗಮ್ಯದ ನಂತರ ಮತ್ತೊಂದು ಗಮ್ಯವನ್ನು ಆನಂದದಿಂದ ತಲುಪುತ್ತಾ ಹೋಗುವುದೇ ವಿಜಯ.
"ರಾಜಾ! ಇಂಪೂ ಸೊಂಪೂ ಇಲ್ಲದ ಗಾಣದ ಎತ್ತಿನ ಜೀವನ ನೀಚ ಪದ್ಧತಿ.." ಎಂದು ವಿದುರ ದೃತರಾಷ್ಟ್ರನಿಗೆ ಹೇಳುತ್ತಾನೆ. ಇದನ್ನೇ ವಿದುರನೀತಿ ಎನ್ನುತ್ತಾರೆ. ಬೆಳಿಗ್ಗೆ ಏಳುವ ವೇಳೆಗೆ ಯಾವುದೇ ಉತ್ಸಾಹ ಇಲ್ಲದಿದ್ದರೆ ಬದುಕು ಬೋರು ಹೊಡೆಯದೇನು? ಈ ಲೇಖನಮಾಲೆಯಲ್ಲಿ ಈ ವಾದವನ್ನೇ ಸಾಕಷ್ಟು ಸಲ ನೀವು ಓದುತ್ತೀರಿ. ಇದರಲ್ಲಿ ಹೇಳಿದ್ದೆಲ್ಲಾ ನಿಮಗೆ ಇಷ್ಟವಾಗಬೇಕೆಂದಿಲ್ಲ. ಇಷ್ಟವಾಗುವುದಿಲ್ಲ ಕೂಡಾ. ಅವನ್ನು ಬಿಟ್ಟು ನಿಮಗೆ ಚೆನ್ನಾಗಿದೆ ಅನ್ನಿಸಿದ್ದು, ಮನಸ್ಸಿಗೆ ಇಷ್ಟವಾದದ್ದನ್ನು ಆಚರಿಸಿರಿ.
ಯಾವ ಮತದ ಬೋಧನೆಯಾದರೂ ಅದರ ಸಾರಾಂಶ, ಆಯಾ ದೇಶ ಕಾಲಮಾನ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಯಾವ ಪ್ರವಾದಿ ಹೇಳಿದರೂ ಆರೋಗ್ಯಕರ ಪದ್ಧತಿಯಲ್ಲಿ ಆನಂದಿಸುವ ಮಾರ್ಗಗಳನ್ನೇ ಹೇಳಿದ್ದಾನೆ. ಗಮ್ಯ ಒಂದೇ. ದಾರಿಗಳು ಹಲವು. ಯಾವ ದಾರಿ ಚೆನ್ನಾಗಿರುವುದೋ ಎಂದು ಅವರವರೇ ನಿರ್ಧರಿಸಿಕೊಳ್ಳಬೇಕು. ಆದರೆ, ಈ ಪ್ರಯಾಣದಲ್ಲಿ ಇತರರಿಗೆ ನಷ್ಟ ಆಗಕೂಡದು. ಟ್ವಿನ್ ಟವರ್ಸ್ ಉರುಳಿಹೋಗಿದ್ದು ವಿಜಯವೆಂದು ಬಿನ್‍ಲಾಡೆನ್ ಹೇಳಿದರೆ ನಂಬುವುದು - ಉಪವಾಸವಿದ್ದರೆ ಪುಣ್ಯ ಬರುವುದೆಂದು ಯಾರೋ ಹೇಳಿದರೆ ಮನೆಯಲ್ಲಿ ಎಲ್ಲರನ್ನೂ ಹಸಿವಿನಲ್ಲಿಟ್ಟು ಮಲಗಿಸುವುದು - ನಂತಹದ್ದೇ.
ಮನುಷ್ಯನ ಬದುಕಿನಲ್ಲಿ ಈಗಿರುವಷ್ಟು ಕ್ಲಿಷ್ಟತೆ ಹಿಂದೆಲ್ಲಾ ಇರಲಿಲ್ಲ. ಈಗ ಬುದ್ಧಿವಂತಿಕೆ ಹೆಚ್ಚಾಗಿದೆ. ಗೆಲುವಿಗೆ ಅಳತೆಗೋಲು 'ಹಣ, ಕೀರ್ತಿ' ಆಗಿವೆ.  ನ್ಯೂಕ್ಲಿಯಸ್ ಕುಟುಂಬಗಳ ನಿಶ್ಶಬ್ದ ಮನೆಗಳಲ್ಲಿ ತಾಂಡವವಾಡುತ್ತಿದೆ. ಮಕ್ಕಳ ಬಾಲ್ಯವನ್ನು ಛಿದ್ರಮಾಡಲು ಕರ್ಕಶಹಸ್ತಗಳೊಂದಿಗೆ, ಕರಾಳಪಾದಗಳೊಂದಿಗೆ ಕಾರ್ಪೋರೇಟ್ ಕಾಲೇಜುಗಳು ಬಾಗಿಲನ್ನು ಮೆಟ್ಟುತ್ತಿವೆ.  ಕಾರ್ಪೋರೇಟ್ ಕಂಪೆನಿ ಬೆಟ್ಟಗಳ ಮುಂದೆ ಬಿ.ಟೆಕ್ ನಿರುದ್ಯೋಗಿಗಳು ಕಂಪ್ಯೂಟರ್ ಉದ್ಯೋಗಗಳಿಗಾಗಿ ಟ್ರೆಕ್ಕಿಂಗ್ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ 'ಗೆಲುವ'ನ್ನು ನಿರ್ವಹಿಸುವುದು ಕಷ್ಟ. ಆದರೂ ಅದು ಅಸಾಧ್ಯವಾದದ್ದೇನೂ ಅಲ್ಲ.
ಓಂ ಪೂರ್ಣಮದ: ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವ ಶಿಷ್ಯತೇ
ಈ ಪ್ರಪಂಚ ಪರಿಪೂರ್ಣವಾದದ್ದು. ಪರಿಪೂರ್ಣತೆಯಿಂದ ಪರಿಪೂರ್ಣತೆಯನ್ನು ಕಿತ್ತು ಹಾಕಿದ ನಂತರವೂ ಕೂಡಾ ಪರಿಪೂರ್ಣತೆ  ಉಳಿದುಕೊಂಡೇ ಇದೆ. ಈಶಾವಾಸ್ಯ ಉಪನಿಷತ್ತಿನ ಈ ಮೊದಲ ಮಂತ್ರ ಓದುತ್ತಿರುವಂತೆಯೇ 'ಪೂರ್ಣ' ಎಂದರೆ '0' ಎಂಬ ಆಲೋಚನೆ ಆರ್ಯಭಟ್ಟನಿಗೆ ಬಂದು, ಅದು ಜಾಗತಿಕ ಗಣಿತಶಾಸ್ತ್ರವನ್ನು ಬದಲಾಯಿಸಿಬಿಟ್ಟಿತು. ಸೊನ್ನೆಗಿಂತ ಹೆಚ್ಚಾಗಿ ಏನು ಬಂದರೂ ಗೆಲುವೇ ತಾನೇ?
ಗೆಲುವೆಂದರೆ.. ಒಬ್ಬ ಮನುಷ್ಯ ಹಾಯಾಗಿ, ಆನಂದವಾಗಿ, ಕಡಿಮೆ ಸಮಸ್ಯೆಗಳೊಂದಿಗೆ, ಸನಿಹದವರೊಂದಿಗೆ ಒಳ್ಳೆಯ ಸಂಬಂಧದೊಂದಿಗೆ, ನಾಲ್ವರ ನಡುವೆ ಒಳ್ಳೆಯ ಹೆಸರಿನೊಂದಿಗೆ, ಹಣಕ್ಕಾಗಿ ಪರದಾಡದೇ, ಇದ್ದುದರಲ್ಲಿಯೇ ಇತರರಿಗೆ ಸಹಾಯ ಮಾಡುತ್ತಾ, ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ, ತನ್ನ ಸಮಯವನ್ನು ತಾನು ನಿರ್ದೇಶಿಸಿಕೊಳ್ಳುವ ಮಟ್ಟದಲ್ಲಿ ಪ್ರಶಾಂತವಾಗಿ ಇರಬಲ್ಲವನಾಗುವುದು. ಬೆಕ್ಕು ಎಂದರೆ ಮಾರ್ಜಾಲ ಎನ್ನುವಂತೆ ಇದೆಯೇನು
ಇದು? ಹಾಗಾದರೆ ವಿವರವಾಗಿ ಚರ್ಚಿಸೋಣ.

-ಯಂಡಮೂರಿ ವಿರೇಂದ್ರನಾಥ್
ಕನ್ನಡಕ್ಕೆ: ಯತಿರಾಜ್ ವೀರಾಂಬುಧಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.