ಬೈಟುಕಾಫಿ

ಗೊಣಗಾಟದಿಂದ ಪ್ರಯೋಜನವಿಲ್ಲ

Published On :

ಇಂಥವರು ಒಂದು ರೀತಿಯಲ್ಲಿ ಅತೃಪ್ತ ಆತ್ಮಗಳಿದ್ದಂತೆ. ಯಾವುದರಲ್ಲೂ ತೃಪ್ತಿ ಎಂಬುದು ಇರುವುದಿಲ್ಲ. ಹಾಗೆಂದು ಏನನ್ನಾದರೂ ಸಾಧಿಸಿ ತೋರಿಸುವ ಛಾತಿಯೂ ಇರುವುದಿಲ್ಲ. ಸದಾ ಒಂದಿಲ್ಲೊಂದು ಕಾರಣಕ್ಕೆ ಗೊಣಗಾಡುತ್ತಲೇ ಇರುತ್ತಾರೆ. ಒಟ್ಟಾರೆ ವ್ಯವಸ್ಥೆಯ ದೂಷಣೆಯೇ ಇವರ ಕಾಯಕ. ಅದು ಸರಿ ಇಲ್ಲ, ಇದು ಸರಿ ಇಲ್ಲ. ಅವರು ಹಾಗೆ, ಇವರು ಹೀಗೆ....ಹೀಗೆಯೇ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಲೇ ಇರುತ್ತಾರೆ. ಹಾಗೆ ನೋಡಿದರೆ ಯಾವುದೇ ವ್ಯವಸ್ಥೆಯೂ ಸಂಪೂರ್ಣ ದೋಷಮುಕ್ತವಾಗಿರುವುದಿಲ್ಲ. ಮಾತ್ರವಲ್ಲ ಅಂಥ ದೋಷ ನಿವಾರಣೆಗೆ ನಾವುಗಳೂ ಅಷ್ಟೇ ಹೊಣೆಗಾರರಾಗಿರುತ್ತೇವೆ. ಅದನ್ನು ಸರಿಪಡಿಸುವ ಜವಾಬ್ದಾರಿ ನಮ್ಮದೂ ಆಗಿರುತ್ತದೆ. ಇದನ್ನು ನಾವು ಯಾಕೆ ಯೋಚಿಸುವುದೇ ಇಲ್ಲ. ಅಷ್ಟಕ್ಕೂ ವ್ಯವಸ್ಥೆ ಎಂಬುದು ನಾವೇ ಸೃಷ್ಟಿಸಿಕೊಂಡ ಪರಿಧಿ. ಅದನ್ನು ಎಷ್ಟು ಬೇಕೋ ಅಷ್ಟು ಕಿರಿದಾಗಿಸಿಕೊಳ್ಳುವ, ಹಿಗ್ಗಿಸಿ ಹೆಮ್ಮಪಟ್ಟುಕೊಳ್ಳುವ ಎಲ್ಲ ಜರೂರತ್ತೂ ನಮ್ಮದೇ ಆಗಿರುತ್ತವೆ. ಹಾಗಿರುವಾಗ ಸುಮ್ಮನೇ ಯಾರೋ ಮಾಡಿಕೊಡಲಿ ಎಂದು ಬಯಸುವುದು, ಎಲ್ಲವೂ ನಮ್ಮ ಮೂಗಿನ ನೇರಕ್ಕೇ ಇರಬೇಕೆಂದು ಬಯಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಒಂದು ಸಂಗತಿಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳಲೇಬೇಕು. ಯಾವತ್ತೂ ವ್ಯವಸ್ಥೆ ನಮಗಾಗಿ ಇರುವುದಿಲ್ಲ. ನಾವು ವ್ಯವಸ್ಥೆಗಾಗಿ ಇರುವುದು. ಅಂತೆಯೇ ನಾವು ಅದರ ಭಾಗವಾಗಬೇಕೇ ಹೊರತು, ಅದೆಂದೂ ಒಬ್ಬ ವ್ಯಕ್ತಿಯ ಭಾಗವಾಗಿರುವುದೇ ಇಲ್ಲ. ಅಷ್ಟಕ್ಕೂ ನಾವು ಅದರ ಒಳ ಹೊಕ್ಕು ಪ್ರಯತ್ನಮುಖಿಗಳಾಗುವ ಇಚ್ಛಾಶಕ್ತಿಯನ್ನು ತೋರಬೇಕು. ಇದ್ದ ಪರಿಸರದಲ್ಲೇ ನಮ್ಮ ಕ್ರಿಯಾಶೀಲತೆಯನ್ನು ಮೆರೆಯಬೇಕು. ಎಲ್ಲ ಮಿತಿಯೊಳಗೇ ನಾವೇನೆಂಬುದನ್ನು ತೋರಿಸಿಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ವೃಥಾ ಗೊಣಗಾಟ ಬಿಟ್ಟು ನಮ್ಮಪಾಡಿಗೆ ನಾವು ಕರ್ತವ್ಯ ನಿರ್ವಹಣೆಯ ಬದ್ಧತೆಯನ್ನು ತೋರಿಸಬೇಕು. ಅಷ್ಟಾದರೆ ಎಲ್ಲವೂ ಸರಿಯಾಗೇ ಇರುತ್ತದೆ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.