ಬೈಟುಕಾಫಿ

ಪೊತ್ತೆ ಗೊತ್ತೆ?

ಪೊತ್ತೆ ಗೊತ್ತೆ?
Published On :

ಇದೂ ಈರುಳ್ಳಿಯೇ...
ಹೆಸರು ಪೊತ್ತೆ. ಉತ್ತರ ಕನ್ನಡದ ಕುಮಟಾ ಮೂಲಕ ಗೋಕರ್ಣ, ಅಂಕೋಲ ಕಡೆ ಸಂಚರಿಸುವವರಿಗೆ ಹೊನ್ನಾವರ ದಾಟಿದ ಮೇಲೆ ರಸ್ತೆಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ಗುಲಾಬಿ ವರ್ಣದ ಈ ಈರುಳ್ಳಿಯ ಗೊಂಚಲು ಗಮನ ಸೆಳೆಯುತ್ತದೆ. ಅಷ್ಟೇ ಅಲ್ಲ, ಅದರ ಚಿತ್ತಾಕರ್ಷಕ ಬಣ್ಣ ಆಕಾರ ನಾಲಗೆಯಲ್ಲಿ ನೀರೂರಿಸುತ್ತದೆ. ಕೊಳ್ಳೋಣ ಎಂದು ಅದನ್ನು ಮಾರಲು ಕುಳಿತವರ ಸನಿಹ ಹೋಗಿ 'ಎಷ್ಟಪ್ಪಾ ಬೆಲೆ?' ಎಂದು ವಿಚಾರಿಸಿದರೆ, ಕಮ್ಮಿ ರೇಟಲ್ಲಿ ನಿಮ್ಮ ಕೈಗಿಡುತ್ತಾರೆ.
ಪೊತ್ತೆ... ಆಶ್ಚರ್ಯವಾಗುತ್ತದಲ್ಲ ಈ ಹೆಸರು? ಸುಮಾರು 5 ಕಿಲೋ ತೂಗುವ ಈ ಗೊಂಚಲಿಗೆ ಇಲ್ಲಿ ಕರೆಯುವ ಹೆಸರು ಪೊತ್ತೆ. ಹೆಸರು ತುಂಬಾ ಲೋಕಲ್ ಅಂತನ್ನಿಸಿದರೂ ಇದಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಇದೆ. ಕುಮಟಾದ ಮಧ್ಯಮ ವರ್ಗದ ಉಸಿರೇ ಇದರಲ್ಲಿದೆ. ಒಮ್ಮೆ ರುಚಿ ನೋಡಿದರೆ ಮತ್ತೊಮ್ಮೆ ಆ ಮಾರ್ಗವಾಗಿ ಬಂದಾಗ ಅದನ್ನು ಹುಡುಕದವರಿಲ್ಲ. ಇದರ ರುಚಿ ವಿಭಿನ್ನ, ಈರುಳ್ಳಿಯ ವಾಸನೆ ಒಗ್ಗುವುದಿಲ್ಲ ಎಂಬವರಿಗೂ ಅದು ಈರುಳ್ಳಿಯೇ ಅಲ್ಲವೇನೋ ಎಂಬಷ್ಟು ವಾಸನೆರಹಿತ. ರುಚಿಯಲ್ಲಿ ತುಂಬಾ ಸಿಹಿ. ಹುಳಿ ಬಜ್ಜಿಗೆ ಹೇಳಿ ಮಾಡಿಸಿದ್ದು.
ಮುಸ್ಲಿಮರಿಗೂ ಇಷ್ಟವಾದ ನೆಯಿಚೋರ್ ಅಥವಾ ತುಪ್ಪದ ಅನ್ನಕ್ಕೆ ಇದು ಅನಿವಾರ್ಯವೆನಿಸಿದೆ. ಅದರಿಂದಾಗಿ ದುಬೈನಂಥ ಅರಬ್ ರಾಷ್ಟ್ರಗಳಿಗೆ ಒಂದು ಕಾಲದಲ್ಲಿ ಅಪಾರ ಪ್ರಮಾಣದಲ್ಲಿ ಇದು ಹಡಗಿನ ಮೂಲಕ ರವಾನೆಯಾಗುತ್ತಿತ್ತು. ಮಹಾರಾಷ್ಟ್ರದವರೂ ತುಂಬಾ ಇಷ್ಟಪಡುತ್ತಿದ್ದ ಕಾರಣ ಕುಮಟಾ ಈರುಳ್ಳಿ ಅಲ್ಲಿಗೂ ರವಾನೆಯಾಗುತ್ತಿತ್ತು ಅನ್ನುವ ಕಥೆಯನ್ನೂ ಹೇಳುತ್ತಾರೆ ರೈತರು.
ಕುಮಟಾ ಈರುಳ್ಳಿ ರುಚಿ ಕಳೆದುಕೊಂಡಿಲ್ಲವಾದರೂ ಉತ್ಪಾದನೆ ಇಳಿಮುಖವಾಗಿದೆ. ಮಳೆಗಾಲದ ಭತ್ತದ ಕೊಯ್ಲು ಮುಗಿಸಿ ರೈತರು ಅದನ್ನು ಬೆಳೆಯುವುದು ವಾಡಿಕೆ. 90ರಿಂದ 120 ದಿನಗಳಲ್ಲಿ ಫಸಲು ಕೈಸೇರುವ ಬೇಸಾಯ. ಗಿಡಗಳಿಗೆ 80 ದಿನ ನೀರು ಹನಿಸಬೇಕು, ಸಣ್ಣ ಪ್ರಮಾಣದಲ್ಲಿ ತುಂಬಾ ರೈತರು ಇದನ್ನು ಬೆಳೆಯುತ್ತಾರೆ. ಹಾಗೆ ಬೆಳೆದ ಗಡ್ಡೆಗಳ ಜುಟ್ಟನ್ನು ಜೋಡಿಸಿ ಚೆಂದವಾದ ಪೊತ್ತೆ ಕಟ್ಟುವ ಕೆಲಸ ಮನೆಯ ಹೆಂಗಸರದು. ಇದನ್ನು ಮಧ್ಯವರ್ತಿಗಳಿಗೆ ಮಾರದೆ ತಾವೇ ರಸ್ತೆ ಪಕ್ಕ ಕುಳಿತು ಯಾತ್ರಿಗಳಿಗೆ ಕೊಟ್ಟು ಪೂರ್ಣ ಲಾಭ ಗಳಿಸುತ್ತಾರೆ. ಸರಕು ಮುಗಿಯುವ ವರೆಗೂ ರಸ್ತೆ ಪಕ್ಕ ಅವರ ಠಿಕಾಣಿ.
ಇದು ದೀರ್ಘ ಕಾಲ ರಕ್ಷಿಸಿಡಲು ಸೂಕ್ತವಾಗಿದೆ. ರೈತರು ಹೇಳುವ ಬೆಲೆ ದಿಗಿಲು ಹುಟ್ಟಿಸಿದರೂ ತುಂಬಾ ಮಂದಿ ಮಾರಾಟಕ್ಕೆ ಕುಳಿತಿರುವ ಕಾರಣ ಚೌಕಾಶಿಯಂತೂ ಇದ್ದೇ ಇದೆ. ಕೊನೆಗೆ ಹೇಳಿದ ಬೆಲೆಯ ಅರ್ಧಕ್ಕೆ ಬಂದುಬಿಡುವುದೂ ಉಂಟು. ಏನಿದ್ದರೂ ಇದು ಹೆಚ್ಚುವಾಗ ಕೂಡ ಕಣ್ಣುರಿ ತರುವುದಿಲ್ಲ. ಪೊತ್ತೆಯ ಆಕರ್ಷಣೆ ಇನ್ನೊಮ್ಮೆ ಕುಮಟಾಗೆ ಬಾ ಎನ್ನುತ್ತದೆ.

-  ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.