ಬೈಟುಕಾಫಿ

ಚಂಡೆಪ್ರಚಂಡ

ಯಕ್ಷ ರಂಗವನ್ನು ಪ್ರವೇಶಿಸಿದ್ದು ವೇಷಧಾರಿಯಾಗಿ. ಶುರುವಾದದ್ದು ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷದಿಂದ.

ಚಂಡೆಪ್ರಚಂಡ
Published On :

ವೇಷಧಾರಿಯಾಗಿ ಯಕ್ಷ ರಂಗಕ್ಕೆ ಕಾಲಿಟ್ಟ ಇಡಗುಂಜಿ ಕೃಷ್ಣ ಯಾಜಿ ನಂತರದಲ್ಲಿ ಹೆಸರು ಮಾಡಿದ್ದು ಚಂಡೆ ವಾದಕರಾಗಿ. 40 ವರ್ಷಗಳಿಂದ ಚಂಡೆ ವಾದಕರಾಗಿದ್ದರೂ 'ಸಾಧ ನೆ ಸಾಲದು' ಎಂಬ ಭಾವ ಅವರದು. ಈ ಸಾಧಕನಿಗೆ ಬೆಂಗಳೂರಿನಲ್ಲಿ ನಾಳೆ ಸನ್ಮಾನ.

ಯಕ್ಷ ರಂಗವನ್ನು ಪ್ರವೇಶಿಸಿದ್ದು ವೇಷಧಾರಿಯಾಗಿ. ಶುರುವಾದದ್ದು ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷದಿಂದ. ನಂತರ ಸುಬ್ರಹ್ಮಣ್ಯ, ಚಂದ್ರಹಾಸ, ಅಭಿಮನ್ಯು, ಅರ್ಜುನ ಮುಂತಾದ ವೇಷಗಳು ಬರಲಾರಂಭಿಸಿದವು. ಇದ್ದಕ್ಕಿದ್ದಂತೆ ತಿರುವು ಪಡೆದ ಕಲಾಜೀವನ ಅವರನ್ನು ಬಡಗುತಿಟ್ಟಿನ ಖ್ಯಾತ ಚಂಡೆ ವಾದಕನನ್ನಾಗಿ ರೂಪಿಸಿತು.
ಹೊನ್ನಾವರ ತಾಲೂಕಿನ ಇಡಗುಂಜಿಯ ಕೃಷ್ಣ ಯಾಜಿ ಅವರದು ಐದು ದಶಕಗಳಿಂದ ಯಕ್ಷಗಾನ ಕಲಾ ಸೇವೆ. ಕಲಾವಿದನಾಗಿ ಹೆಸರು ಪಡೆಯುತ್ತಿದ್ದ ಕಾಲದಲ್ಲಿಯೇ ಖ್ಯಾತ ಮದ್ದಲೆ ವಾದಕ ಕಿನ್ನೀರು ನಾರಾಯಣ ಹೆಗ್ಡೆ ಅವರ ಮದ್ದಲೆ ವಾದನ ಸೆಳೆಯಿತು. ಅವರ ಬಳಿ ಮದ್ದಲೆ ಅಭ್ಯಾಸ. ನಂತರ ಗುಂಡ್ಮಿ ರಾಮಚಂದ್ರ ನಾವಡರಲ್ಲಿ ಚಂಡೆ ಹಾಗೂ ಮದ್ದಲೆ ವಾದನದಲ್ಲಿ ವಿಶೇಷ ತರಬೇತಿ. ಆ ನಂತರ ಅವರ ಕಾರ್ಯ ಏನಿದ್ದರೂ ಕುಣಿಯುವುದಲ್ಲ, ಕುಣಿಸುವುದು.
ನಾಲ್ಕು ದಶಕಗಳಿಂದ ಚಂಡೆ ವಾದನದಲ್ಲಿ ಕೃಷ್ಣ ಯಾಜಿ ದೊಡ್ಡ ಹೆಸರು. ಚಂಡೆಯೊಂದಿಗೆ ಮಾತನಾಡುವ ಕಲಾ ನೈಪುಣ್ಯ ದಕ್ಕಿದೆ. ನಯ ನಾಜೂಕಿನ ವೈವಿಧ್ಯಪೂರ್ಣ ನುಡಿತಗಳು ಸಿದ್ಧಿಸಿವೆ. ಸಂದರ್ಭಾನುಸಾರವಾಗಿ ಅಬ್ಬರದ ಭೋರ್ಗರೆತ, ಮರುಕ್ಷಣ ಕಲ್ಪನೆಗೂ ನಿಲುಕದ ನಾದಸುಧೆಯ ಪ್ರದರ್ಶನ ಇವರ ಸಾಧನೆಗೆ ಸಾಕ್ಷಿ. ತೆಂಕು ತಿಟ್ಟಿನ ಚಂಡೆ ವಾದನದಲ್ಲೂ ನುರಿತ ಕೈ.
ಇಡಗುಂಜಿ, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮೂಲ್ಕಿ, ಗುಂಡಬಾಳ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉಮಾಮಹೇಶ್ವರಿ ಕಲಾವರ್ಧಕ ಸಂಘದ ತಾಳಮದ್ದಲೆ ಕೂಟದಲ್ಲಿ ಪ್ರಧಾನ ಮದ್ದಲೆ ವಾದಕ. ಶ್ರೀಮಯ ಕಲಾಕೇಂದ್ರ ಗುಣವಂತೆ, ದೇವರು ಹೆಗಡೆ ಯಕ್ಷಗಾನ ಶಾಲೆ ಮುರೂರು ಇಲ್ಲಿ ಯಕ್ಷಗಾನ ಗುರುವಾಗಿ  12-13 ವರ್ಷ ಕಾಲ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡಿದ್ದಾರೆ.
ಇತ್ತೀಚಿನ ಆವಿಷ್ಕಾರವಾದ ಶತಾವಧಾನಿ ಡಾ.ಆರ್. ಗಣೇಶ್ ಅವರ ನಿರ್ದೇಶನದ ಭಾಮಿನಿ ಹಾಗೂ ಕೃಷ್ಣಾರ್ಪಣ ಕಾರ್ಯಕ್ರಮಗಳಿಗೆ ಚಂಡೆವಾದನದ ವಿಶೇಷ ಛಾಪು ಮೂಡಿಸಿದ ಹಿರಿಮೆ ಇವರದು. ಗೋಪಾಲಕೃಷ್ಣ  ಹೆಗಡೆ ನೇತೃತ್ವದ 'ಲಯಲಾಸ್ಯ' ಕಾರ್ಯಕ್ರಮದಲ್ಲಿ ತಬಲಾ ಮತ್ತು ಮೃದಂಗಗಳೊಂದಿಗೆ ಚಂಡೆವಾದನದ ವಿಭಿನ್ನ ಆಯಾಮ, ಪಟ್ಟು ಮತ್ತು ಪೆಟ್ಟುಗಳ ಪ್ರದರ್ಶನ ನೀಡಿದ್ದು ಸಣ್ಣ ಮಾತಲ್ಲ.
ಯಕ್ಷಗಾನಕ್ಕಷ್ಟೇ ಸೀಮಿತವಾದ ಚಂಡೆಯನ್ನು ನಾಟಕರಂಗಕ್ಕೂ ವಿಸ್ತರಿಸುವ ಮೂಲಕ ಹೊಸ ಪ್ರೇಕ್ಷಕರನ್ನು ತಲುಪಿದ್ದಾರೆ. ದೆಹಲಿ, ಮುಂಬಯಿ, ಕೋಲ್ಕತ್ತಾ, ಅಮೃತಸರ, ತ್ರಿವೇಂಡ್ರಂ,  ಭೋಪಾಲ್, ಝಾನ್ಸಿ, ಬೆಂಗಳೂರು ಮುಂತಾದೆಡೆ ಕಾರ್ಯಕ್ರಮ ನೀಡಿರುವ ಇವರು ವಿದೇಶಗಳಲ್ಲಿಯೂ ಚಂಡೆಯ ಸದ್ದು ಮೊಳಗಿಸಿದ್ದಾರೆ.
ಲಂಡನ್, ಸ್ಪೇನ್, ಫ್ರಾನ್ಸ್, ಚೀನಾ, ನೇಪಾಳ, ಬರ್ಮಾ, ಲಾಹೋತ್ಸೆ, ಮಲೇಶಿಯಾ, ಸಿಂಗಾಪುರ, ಫಿಲಿಪ್ಪೀನ್ಸ್ ರಾಷ್ಟ್ರಗಳಿಗೆ ಇಡಗುಂಜಿ ಮೇಳದೊಂದಿಗೆ ತೆರಳಿದ್ದರು.
ಕಿನ್ನೀರು ನಾರಾಯಣ ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿಯಲ್ಲಿ ಮೊದಲಿಗರಾದ ಇವರು, 2011ರಲ್ಲಿ ಉಡುಪಿ ಕಲಾಕೇಂದ್ರದಿಂದ ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ, 2012ರಲ್ಲಿ ಕಾಶ್ಶಪ ಪ್ರತಿಷ್ಠಾನ, ವಿದ್ಯಾ ಸಂಸ್ಕೃತಿ ಟ್ರಸ್ಟ್ ಗಡಿಗೆಹೊಳೆ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಮೊದಲಾದ ಯಕ್ಷರಂಗದ ಸಾಧಕರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮದ್ದಲೆ ಹಾಗೂ ಚಂಡೆ ವಾದನಗಳೆರಡರಲ್ಲೂ ಅತ್ಯುನ್ನತ ಕಲಾವಿದರಾದರೂ 'ಸಾಧನೆ ಸಾಲದು' ಎಂಬ ಮನೋಭಾವ; ವಿನಯ ಮತ್ತು ಶಿಸ್ತು ಜೀವನದ ಜೀವಾಳವಾಗಿರಬೇಕೆಂಬ ಸಂಕಲ್ಪ; ಸೋಲೊಪ್ಪದ ಸಂಯಮದ ಬದುಕು ಇವರದು. ಯಕ್ಷಗಾನ ಕಲೆಗಾಗಿ ಜೀವ ತೇಯುತ್ತಿರುವ ಯಾಜಿಯವರರಿಗೆ ಕಲೆಯೇ ಕಾಯಕ, ಯಕ್ಷಗಾನವೇ ಅನ್ನದ ದಿಕ್ಕು- ಬದುಕಿನ ದಾರಿ.

ನಾಳೆ ಸಂಮಾನ
ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ಇಡಗುಂಜಿ ಕೃಷ್ಣ ಯಾಜಿ ಅವರನ್ನು ನಾಳೆ (ಜೂನ್ 30) ತನ್ನ 4ನೇ ವಾರ್ಷಿಕೋತ್ಸವ 'ಯಕ್ಷೋತ್ಸವ'ದಲ್ಲಿ ಸನ್ಮಾನಿಸುತ್ತಿದೆ. ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಮಧ್ಯಾಹ್ನ 3.30ಕ್ಕೆ ಕೃಷ್ಣಮೂರ್ತಿ ತುಂಗ ಸಾರಥ್ಯದಲ್ಲಿ ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರಿಂದ 'ಭೀಷ್ಮೋತ್ಪತ್ತಿ' ಪ್ರಸಂಗ, 5ರಿಂದ ಸಭಾ ಕಾರ್ಯಕ್ರಮ ಮತ್ತು ಯಾಜಿಯವರಿಗೆ ಸನ್ಮಾನ, 5.30ಕ್ಕೆ ಯಕ್ಷಸಿಂಚನದ ಕಲಾವಿದರಿಂದ ಮತ್ತೊಂದು ಅಪರೂಪದ ಪ್ರಸಂಗ 'ತಾಮ್ರಧ್ವಜ ಕಾಳಗ'. ಸಂಪ್ರದಾಯದ ರಥ ಕುಣಿತ, ಒಡ್ಡೋಲಗ, ರಾಕ್ಷಸ ಒಡ್ಡೋಲಗ, ಅಂಬಿಗ ಒಡ್ಡೋಲಗ, ಯುದ್ಧ ನೃತ್ಯ ಮೊದಲಾದ ವಿಶೇಷ ಅಕರ್ಷಣೆಗಳೂ ಇವೆ.
ಬಡಗು ತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಅಭ್ಯಾಸ ಹಾಗೂ ಅಧ್ಯಯನಕ್ಕೆ ಒತ್ತು ಕೊಟ್ಟು ಗುಣಮಟ್ಟದ ಪ್ರದರ್ಶನಗಳನ್ನು ನೀಡುವ ಉದ್ದೇಶದಿಂದ ಬೆಂಗಳೂರಿನ ಸಮಾನಮನಸ್ಕರು ರಚಿಸಿಕೊಂಡಿರುವ ಹವ್ಯಾಸಿ ತಂಡ 'ಯಕ್ಷಸಿಂಚನ'. ಮಾಹಿತಿಗೆ: ರವಿ ಮಡೋಡಿ- 9986384205/ ಶಶಿರಾಜ ಸೋಮಯಾಜಿ 9986363495.

- ರಾಜೇಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.