ಬೈಟುಕಾಫಿ

ಸ್ಮಾರ್ಟ್ ಆಗದಿದ್ದರೆ ಜಯಿಸಲಾಗದು!

Published On :


ನೀವು ಸಿಕ್ಕಾಪಟ್ಟೆ ಪ್ರತಿಭಾವಂತರು. ನಿಮ್ಮಲ್ಲಿ ಅಪಾರ ಪ್ರತಿಭೆಯೂ ಇದೆ. ಶೈಕ್ಷಣಿಕವಾಗಿಯಂತೂ ನಿಮ್ಮದು ಸಾಂಸ್ಥಿಕ ಔನ್ನತ್ಯ. ಯಾವತ್ತೂ ಮೊದಲ ಸ್ಥಾನವನ್ನು ಬೇರಾರಿಗೂ ಬಿಟ್ಟುಕೊಟ್ಟಿಲ್ಲ. ಇನ್ನು ಛಲದ ವಿಷಯಕ್ಕೆ ಬಂದರೆ ದುರ್ಯೋದನನನ್ನು ಮೀರಿಸುತ್ತೀರಿ. ಶ್ರದ್ಧೆ ನಿಮ್ಮ ಜನ್ಮಜಾತ ಗುಣ. ಮುನ್ನುಗ್ಗುವ ಧೈರ್ಯಕ್ಕೆ ಕೊರತೆ ಎಂಬುದೇ ಇಲ್ಲ. ಇನ್ನೇನು ಬೇಕು ಜೀವನದಲ್ಲಿ? ಇಷ್ಟೆಲ್ಲವೂ ನಿಮ್ಮೊಳಗೆ ಇರುವಾಗ ಯಶಸ್ಸು ನಿಮ್ಮದೇ ತಾನೆ?
ಹಾಗೊಮ್ಮೆ ಅಂದುಕೊಂಡು ಬಿಟ್ಟರೆ ಖಂಡಿತಾ ಅದು ಸುಳ್ಳು. ಯಶಸ್ಸಿಗೆ ಇವಿಷ್ಟೇ ಮಾನದಂಡವಾಗಿರಲು ಸಾಧ್ಯವಿಲ್ಲ. ಯಶಸ್ವೀ ವ್ಯಕ್ತಿಗೆ ಇವೆಲ್ಲವೂ ಬೇಕು ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಇದನ್ನೂ ಮೀರಿ, ಬುದ್ಧಿವಂತಿಕೆ ಬೇಕು. ತೀರಾ ಉತ್ತರ ಕರ್ನಾಟಕ ಶೈಲಿಯಲ್ಲಿ ಹೇಳುವುದಾದರೆ ಅದು ಶ್ಯಾಣ್ಯಾತನ. ಇಂಗ್ಲಿಷ್‌ನಲ್ಲಿ ಸ್ಮಾರ್ಟ್‌ನೆಸ್ ಎನ್ನುತ್ತಾರಲ್ಲಾ ಅದು. ವಿವೇಕದ ಬೆಂಬಲದೊಂದಿಗೆ ಅರಳುವ ಬುದ್ಧಿವಂತಿಕೆ ಇದೆಯಲ್ಲಾ ಅದನ್ನು ರೂಢಿಸಿಕೊಳ್ಳದಿದ್ದರೆ ಇವತ್ತಿನ ಸ್ಪರ್ಧಾಯುಗದ ತೀವ್ರ ಪೈಪೋಟಿಯ ಗೆಲ್ಲುವುದು ಅಸಾಧ್ಯ. ಪ್ರತಿಭೆ, ಪರಿಶ್ರಮ ಮತ್ತು ಛಲದಿಂದ ಮಾತ್ರವೇ ಗೆಲ್ಲುತ್ತೇನೆಂಬ ಕಾಲ ಎಂದೋ ಮುಗಿದು ಹೋಗಿದೆ. ಇವತ್ತಿನ ತಲೆ ಮಾರು ಅಂಥ ಗುಣಗಳನ್ನು ಎಲ್ಲರೂ ಬಾಲ್ಯದಿಂದಲೇ ರೂಢಿಸಿಕೊಳ್ಳುತ್ತಿದೆ. ಎಲ್ಲರ ಗುರಿಯೂ ನೂರಕ್ಕೆ ನೂರು ಅಂಕವೇ ಆಗುತ್ತಿದೆ. ಬಹುತೇಕರು ಕೆರಿಯರ್‌ನತ್ತಲೇ ಕೇಂದ್ರೀಕೃತರಾಗಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಅತಿ ಸೂಕ್ಷ್ಮ ಸಂಗತಿಗಳೂ ಜೀವನದಲ್ಲಿ ಪ್ರಾಮುಖ್ಯ ಪಡೆದುಕೊಳ್ಳುತ್ತವೆ. ಮತ್ತೆ ಅನುಭವವೇ ಇಂಥದಕ್ಕೆ ಆಧಾರ. ಇಂಥ ಅನುಭವಗಳನ್ನು ಹಂಚಲೂ ಮಾರುಕಟ್ಟೆಯಲ್ಲಿ ಪ್ರತ್ಯೇಕ ಸಂಸ್ಥೆಗಳು ಹುಟ್ಟಿಕೊಂಡಿವೆ. ಕೋರ್ಸ್‌ಗಳು ಬಂದಿವೆ.
ಇಂಥ ಎಲ್ಲವನ್ನೂ ಅರಿಯುವ ಹೊತ್ತಿಗೆ, ರೇಸಿಗೆ ಬಿದ್ದು ಓಡಿ ಹೋಗುವ ವೇಳೆಗೆ ಬಳಲಿ ಹೋಗಿಬಿಡುವ ಅಪಾಯವಿರುತ್ತದೆ. ಎಲ್ಲಕ್ಕಿಂತ ಮೊದಲಿಗರಾಗಿ ನಾವು ಗುರಿಮುಟ್ಟಿದರೂ ಯಶಸ್ಸನ್ನು ಅನುಭವಿಸುವ ಉತ್ಸಾಹವೇ ನಮ್ಮಲ್ಲಿ ಉಳಿಯದೇ ಹೋದರೆ ಏನು ಪ್ರಯೋಜನ ಬಂತು? ಹೀಗಾಗಿ ಯೋಜಿತ ಮಾರ್ಗದಲ್ಲಿ, ಸೂಕ್ತ ಸಮಯದಲ್ಲಿ 'ಶ್ಯಾಣ್ಯಾತನ' ಮೆರೆಯವುದು ಅತ್ಯಂತ ಮುಖ್ಯ. ನೆನಪಿಡಿ, ನೀವು ಸ್ಮಾರ್ಟ್ ಆಗದಿದ್ದರೆ ನೀವೆಷ್ಟೇ ಸಮರ್ಥರಿದ್ದರೂ, ಪ್ರತಿಭಾವಂತರಿದ್ದರೂ ವ್ಯರ್ಥ. ಅಂಥ ಜಾಣತನ ಹೊರಗೆಲ್ಲೂ ಸಿಗುವಂಥದ್ದಲ್ಲ. ಅದಕ್ಕೆ ತರಬೇತಿಯೂ ಇಲ್ಲ. ಅದು ನಮ್ಮೊಳಗೇ ರೂಪುಗೊಳ್ಳಬೇಕು.

- ಸಹನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.