ರೊಟ್ಟಿಗೆ ಮೆಂತ್ಯ ಹಾಕಿ ರುಚಿ ತೋರಿಸಿದ!
ಕೆಲವು ವರ್ಷಗಳ ಹಿಂದಿನ ಘಟನೆ. ನನ್ನ ಕಂಪನಿ ಆಗತಾನೆ ಹೆಸರು ಮಾಡುತ್ತಿತ್ತಷ್ಟೇ. ಒಮ್ಮೆ ಹೀಗೆ ಕೆಲಸದ ಮೇಲೆ ಮೈಸೂರಿಗೆ ಹೋದಾಗ ನನ್ನ ಬಾಲ್ಯದ ಗೆಳೆಯನ ನೆನಪಾಯಿತು. ಅವನಿಗೊಂದು ಫೋನು ಹಚ್ಚಿ, 'ನಾಳೆ ಬೆಳಗ್ಗೆ ತಿಂಡಿಗೆ ಬರುತ್ತೀನಿ' ಅಂದೆ. 'ಆಯ್ತು ಮಾರಾಯ ಬಾ. ಬಡವರ ಮನೆಗೆ ಕೃಷ್ಣ ಬರೋದು ತಪ್ಪೇ?' ಎಂದು ತಮಾಷೆಯಲ್ಲಿ ಹೇಳಿದ. 'ಕೃಷ್ಣ ಬರ್ತಾನೆ ಅಂತ ಕೊನೆಗೆ ಅವಲಕ್ಕಿ ಮಾಡಿಬಿಡಬೇಡ. ಏನಾದರೂ ಸ್ಪೆಷಲ್ ಏನಾದ್ರೂ ಮಾಡು' ಅಂದೆ. 'ಹ್ಞೂಂ' ಎಂದು ಫೋನ್ ಇಟ್ಟ. ಆದರೆ, ಅವನ ಮನೆಯಲ್ಲಿ ಹೆಂಡತಿ ಇರಲಿಲ್ಲ. ಆಕೆ ಊರಿಗೆ ಹೋಗಿರುವ ವಿಚಾರ ನನಗೆ ತಿಳಿದಿರಲಿಲ್ಲ.
ಮರುದಿನ ಹೋದಾಗ, ಅವನು ಅಕ್ಕಿ ರೊಟ್ಟಿಗೆ ಹಿಟ್ಟು ಕಲಿಸುತ್ತಿದ್ದ. ನನಗೆ ಅನುಮಾನ ಬಂತು. 'ಇವನಿಗೆ ರೊಟ್ಟಿ ಮಾಡೋದಿಕ್ಕೆ ಬರುತ್ತಾ?' ಅಂತ. ಅಲ್ಲದೆ, ಆ ಹಿಟ್ಟು ಹಳದಿ ಬಣ್ಣ ಪಡೆದಿತ್ತು. ಯಾಕೆ ಹಾಗಾಯ್ತು ಎಂದು ನಾನು ಕೇಳುವ ಮೊದಲೇ, 'ನೋಡು ಮೆಂತ್ಯ ಹಾಕಿದ್ರೆ ಹ್ಯಾಗೆ ಕಲರ್ ಬರುತ್ತೆ ಅಂತ' ಎಂದು ಅವನೇ ಹೇಳಿಬಿಟ್ಟ. ನನಗೆ ಅಚ್ಚರಿಯಾದರೂ ಸುಮ್ಮನಿದ್ದೆ. ಪಾಪ ಕಷ್ಟಪಟ್ಟು ಮಾಡುತ್ತಿದ್ದಾನಲ್ಲ, ರುಚಿ ನೋಡಿ ಕಾಮೆಂಟ್ ಮಾಡೋಣ ಅಂತನ್ನಿಸಿತು. ಕೆಲವೇ ಹೊತ್ತಲ್ಲಿ ರೊಟ್ಟಿ ರೆಡಿ. ಆದರೆ, ಆ ರೊಟ್ಟಿಯ ರುಚಿಯೇ ಅದ್ಭುತ.
ಅಷ್ಟರಲ್ಲೇ ನನಗೆ ಗೊತ್ತಿಲ್ಲದ ಸಂಗತಿಯೊಂದನ್ನು ಅವನು ಹೇಳಿದ. ಕಂಪನಿ ಕೆಲಸದ ಮೇಲೆ ಆತ ಆಫ್ರಿಕದ ಈಜಿಪ್ಟ್, ಇಥಿಯೋಪಿಯಾಕ್ಕೆ ಹೋಗಿದ್ದನಂತೆ. ಅಲ್ಲಿನ ಪಾಕಕಲೆಯನ್ನು ಕಲಿತು, ನನಗೆ ರುಚಿ ತೋರಿಸಿದ್ದ. ಅರಬ್ಬರು ಇದನ್ನು 'ಹುಲ್ಬ' ಎಂದೂ, ಇಥಿಯೋಪಿಯಾದಲ್ಲಿ 'ಅಬಿಷ್' ಎಂದೂ ಕರೆಯುತ್ತಾರಂತೆ.
ನೋಡಿ, ಮೆಂತ್ಯದ ಮುಖಗಳು ಎಂಥವು ಅಂತ! ಗ್ರೀಸ್‌ನಲ್ಲಿ ಹಸಿಯಾದ ಅಥವಾ ಬೇಯಿಸಿದ ಬೀಜಗಳನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುತ್ತಾರಂತೆ. ಅಮೆರಿಕದಲ್ಲಿ ಚಟ್ನಿ, ಮಸಾಲೆ ಮಿಶ್ರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅಲ್ಲದೆ ಅಲ್ಲಿ ಕೃತಕ ಮೇಪಲ್ ಸಿರಪ್‌ನಲ್ಲಿ ಮುಖ್ಯ ರುಚಿಕಾರಕವಾಗಿ ಬಳಸುವುದು ಈ ಮೆಂತ್ಯವನ್ನೇ.
ಬರೀ ಅಡುಗೆಯಷ್ಟೇ ಅಲ್ಲ. ಮೆಂತ್ಯ ಅತ್ಯುತ್ತಮ ಸೌಂದರ್ಯ ಚಿಕಿತ್ಸಕ ಕೂಡ. ನನಗೆ ಗೊತ್ತಾಗಿದ್ದು ಹತ್ತಿರದ ಸಂಬಂಧಿಕರ ಮನೆಯ ಹುಡುಗಿಯಿಂದ. ಅವರ ಮನೆಯಲ್ಲಿ ಅಪ್ಪ ದೋಸೆಗೆಂದು ಮೆಂತ್ಯ ತಂದಿಡುತ್ತಿದ್ದರೆ, ಅದು ಬಾರಿ ಬೇಗ ಖರ್ಚಾಗುತ್ತಿತ್ತಂತೆ. ಕಾರಣ, ಆ ಹುಡುಗಿಯೇ ಆಗಿದ್ದಳು. ಆಕೆ ಮೆಂತ್ಯವನ್ನು ಹೇರ್ ಕಂಡೀಷನಿಂಗ್‌ಗಾಗಿ ಬಳಸಿಕೊಳ್ಳುತ್ತಿದ್ದಳು. ಮೆಂತ್ಯವನ್ನು ಪುಡಿಮಾಡಿಕೊಂಡು ಅರ್ಧ ಕಪ್ ಮೊಸರಿನಲ್ಲಿ ಬೆರೆಸಿ, ಅದಕ್ಕೆ ನಾಲ್ಕೈದು ಹನಿ ನಿಂಬೆರಸ ಬೆರೆಸಿ, ತಲೆಕೂದಲಿಗೆ ಪ್ಯಾಕ್ ಮಾಡಿಕೊಳ್ಳುತ್ತಿದ್ದಳು. ಕೊಂಚ ಸಮಯದ ನಂತರ ತಣ್ಣೀರಿನಿಂದ ತೊಳೆದುಕೊಂಡರೆ ಕಂಡಿಷನಿಂಗ್ ಕೆಲಸ ಮುಗಿದಂತೆ. ಸದಾ ಒಣಗಿದಂತೆ ಕಾಣುತ್ತಿದ್ದ ಕೂದಲು ಮೆಂತ್ಯದಿಂದ ಮೃದುಗೊಳ್ಳುತ್ತಿತ್ತು.
ನಾಳೆ ಮೆಂತ್ಯದ ವೈದ್ಯಕೀಯ ಉಪಯೋಗದ ಬಗ್ಗೆ ಚರ್ಚಿಸೋಣ...
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

