ಬೈಟುಕಾಫಿ

ತಂಪಿಟ್ಟಿಗೆ

ರಾತ್ರಿ ಕಳೆದು ಹಗಲಾಗುವುದರೊಳಗೆ ಮುಗಿಲೆತ್ತರದ ಕಟ್ಟಡ ಕಟ್ಟಿದ ಉದಾಹರಣೆ ನಮ್ಮ ಕಣ್ಮುಂದೆಯೇ ಇದೆ. ಆದರೆ, ಪರಿಸರಕ್ಕೆ ಮಾರಕವಾಗುವ...

ತಂಪಿಟ್ಟಿಗೆ
Published On :

ರಾತ್ರಿ ಕಳೆದು ಹಗಲಾಗುವುದರೊಳಗೆ ಮುಗಿಲೆತ್ತರದ ಕಟ್ಟಡ ಕಟ್ಟಿದ ಉದಾಹರಣೆ ನಮ್ಮ ಕಣ್ಮುಂದೆಯೇ ಇದೆ. ಆದರೆ, ಪರಿಸರಕ್ಕೆ ಮಾರಕವಾಗುವ ಅಂಶಗಳೇ ಹೆಚ್ಚಾಗಿರುವ ತಾಂತ್ರಿಕ ಯುಗದಲ್ಲಿ ನಿಸರ್ಗ ಸ್ನೇಹಿ ಕಟ್ಟಡ ನಿರ್ಮಾಣ ಸುಲಭದ ಮಾತಲ್ಲ. ಹಾಗಂತ ಸಾಧ್ಯವೇ ಇಲ್ಲ ಎಂದಲ್ಲ. ಸ್ವಲ್ಪ ತಾಳ್ಮೆ, ಪರಿಸರ ಕಾಳಜಿ ಇದ್ದರೆ ಎಲ್ಲವೂ ಸರಳ.
ಮನೆ ನಿರ್ಮಿಸಲು ಮೂಲವಾಗಿ ಸಿಮೆಂಟ್, ಕಬ್ಬಿಣ ಹಾಗೂ ಇಟ್ಟಿಗೆ ಬೇಕೇ ಬೇಕು. ಆದರೆ, ಇವುಗಳಲ್ಲಿ ಪರಿಸರಕ್ಕೆ ಹಾನಿಯಾಗುವ ಅಂಶಗಳೇ ಹೆಚ್ಚು. ಆದರೆ, ಆಸ್ಟ್ರಿಯಾ ಮೂಲದ ವೀನರ್‌ಬರ್ಗರ್ ಎಂಬ ಕಂಪನಿ ಪರಿಸರ ಸ್ನೇಹಿ, ಮನೆ ತಂಪಾಗಿರಿಸುವ ಇಟ್ಟಿಗೆಗಳನ್ನು ರೂಪಿಸುತ್ತಿದೆ.
ಮಾಮೂಲಿ ಇಟ್ಟಿಗೆಗಳಂತೆ ತಾಳಿಕೆ, ಬಾಳಿಕೆಗೂ ಕಮ್ಮಿಯಿಲ್ಲ. ಕೊಂಚ ತುಟ್ಟಿಯಾದರೂ ಕಾಸಿಗೂ ಮನೆಗೂ ಹೊರೆಯಲ್ಲ. ಪೋರೋಥರ್ಮ್ ಪರ್ಪೋರೇಟೆಡ್ ಕ್ಲೇ, ಪೋರೋಥರ್ಮ್ ಥರ್ಮೋ ಬ್ರಿಕ್ಸ್ ಎಂಬ ಎರಡು ವಿಧದ ಇಟ್ಟಿಗೆ ತಯಾರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಯಾದರೂ ಮಧ್ಯಮ ವರ್ಗದವರಿಗೂ ಸುಲಭವಾಗಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ತಯಾರಿಸೋದು ಹೇಗೆ?

ನೋಡಲು ಮಾಮೂಲಿ ಇಟ್ಟಿಗೆಗಳಂತೆ ಇದ್ದರೂ ಲಾಭ ಮಾತ್ರ ವಿಭಿನ್ನ. ಸಿಮೆಂಟ್ ಬ್ಲಾಕ್ ರೂಪದಲ್ಲೇ ಜೇಡಿಮಣ್ಣು, ಬತ್ತದ ಹೊಟ್ಟು, ಗ್ರಾನೈಟ್ ಕೊರೆಯುವಾಗ ದೊರೆಯುವ ಪುಡಿ ಹಾಗೂ ಕಾರ್ಖಾನೆಗಳಲ್ಲಿ ಬಳಸುವ ಕಲ್ಲಿದ್ದಲು ಬೂದಿಯನ್ನು ಬಳಸಿ ಈ ಇಟ್ಟಿಗೆ ನಿರ್ಮಿಸಲಾಗುತ್ತದೆ. ಮೇಲ್ಭಾಗದಲ್ಲಿ ವಿನ್ಯಾಸ ರೂಪದಲ್ಲಿದ್ದರೂ ಒಳ ಭಾಗದಲ್ಲಿ ಟೊಳ್ಳಾಗಿರುತ್ತದೆ. ಸುತ್ತಲೂ ಇರುವ ದಪ್ಪನೆಯ ಹೊದಿಕೆ ಹೊರ ಭಾಗದಿಂದ ಬರುವ ಬಿಸಿ ತಡೆಯಲು ಸಹಾಯಕ. ಇದರಿಂದ ಮನೆ/ ಕಟ್ಟಡದ ಒಳಪ್ರದೇಶ ತಂಪಾಗಿರಿಸುತ್ತದೆ. ಅಲ್ಲದೇ ಟೊಳ್ಳಾದ ಪ್ರದೇಶದಲ್ಲಿ ಸ್ಪಂಜ್ ರೂಪದ ವಸ್ತು ಕೂಡ ಬಳಸಲಾಗುತ್ತದೆ. ಇದು ಕೂಡ ಮನೆಯ ವಾತಾವರ ಣವನ್ನು ತಂಪಾಗಿರಿಸುತ್ತದೆ. ಇಟ್ಟಿಗೆಯಲ್ಲೇ ಒಳಮೈ ವಿನ್ಯಾಸ ಮಾಡಬಹುದು ಎಂಬುದು ಮತ್ತೊಂದು ವಿಶೇಷ. ಆದರೆ, ಅಂದಕ್ಕಾಗಿ ಬಾಳಿಕೆ ಹಾಳು ಮಾಡಿಕೊಳ್ಳಬೇಡಿ. ಸಿಮೆಂಟ್ ಮಾಡಲೇಬೇಕು ಎನ್ನುತ್ತಾರೆ ಕಂಪನಿ ಅಧಿಕಾರಿಗಳು.
ಕೆರೆಯಿಂದ ಹೂಳೆತ್ತುತ್ತಾರೆ
ಮಾಮೂಲಿ ಇಟ್ಟಿಗೆ ತಯಾರಿಸುವ ಮಾಲೀಕರು ಮಣ್ಣನ್ನು ಗುಡ್ಡ ಮತ್ತು ಹೊಲದಲ್ಲಿ ಅಗೆದು ತರುತ್ತಾರೆ. ಆದರೆ ವೀನರ್‌ಬರ್ಗರ್ ಕಂಪನಿಯವರು ವಿವಿಧ ಊರುಗಳಲ್ಲಿ ಹೂಳು ತುಂಬಿರುವ ಕೆರೆಗಳಿಗೆ ತೆರಳಿ ಅಲ್ಲಿನ ಹೂಳನ್ನೇ ಮೇಲೆತ್ತಿ ಬಳಸುತ್ತಾರೆ. ಇದರಿಂದ ಕೆರೆ ಹೂಳೆತ್ತುವ ಹೊರೆ ತಪ್ಪುವುದಲ್ಲದೇ ಗುಡ್ಡ, ಹೊಲ ಅಗೆಯುವುದು ತಪ್ಪುತ್ತದೆ. ಜತೆಗೆ ಬತ್ತದ ಕಾರ್ಖಾನೆಯಲ್ಲಿ ದೊರೆಯುವ ಹೊಟ್ಟು, ಇನ್ನೊಂದೆಡೆ ಗ್ರಾನೈಟ್ ಕೊರೆಯುವ ವೇಳೆ ದೊರೆಯುವ ಪುಡಿ, ಕಾರ್ಖಾನೆಗಳಲ್ಲಿ ಬಳಸುವ ಕಲ್ಲಿದ್ದಲು ಪುಡಿ ಕ್ರೋಢೀಕರಿಸಿ ಮಿಶ್ರಣ ಮಾಡಲಾಗುತ್ತದೆ. ಬಳಿಕ ಅದನ್ನು ಯಂತ್ರದಲ್ಲಿ ಹಾಕಿ ನಿರ್ದಿಷ್ಟ ಮಟ್ಟದ ಇಟ್ಟಿಗೆ
ರೂಪದಲ್ಲಿ ಸಿದ್ಧಪಡಿಸಿ ಬೆಂಕಿಯಲ್ಲಿ ಸುಡಲಾಗುತ್ತದೆ.ಮಾಮೂಲಿ ಇಟ್ಟಿಗೆ ಮಾದರಿಯಲ್ಲೇ ರೂಪಿಸುವ ಪ್ರಕ್ರಿಯೆಯಾದರೂ ಬಳಕೆ ಮಾಡಿದ ಬಳಿಕ ದೊರೆ
ಯುವ ಕಚ್ಚಾವಸ್ತುಗಳಿಂದಲೇ ಪರಿಸರಕ್ಕೆ ಹಾನಿಯಾಗದಂತೆ ರೂಪಿಸುವುದೇ ಈ ಇಟ್ಟಿಗೆಯ ವಿಶೇಷ.

ತೂಕದಲ್ಲಿ ಕಡಿಮೆ
ಮಾಮೂಲಿ ಪುಟ್ಟ ಇಟ್ಟಿಗೆಗಳನ್ನು ಸಿಮೆಂಟ್ ಮಾದರಿ ಬ್ಲಾಕ್ ಆಕಾರಕ್ಕೆ ಹೋಲಿಸಿ ಜೋಡಿಸಿದರೆ (ಅಂದರೆ 10ರಿಂದ 12 ಇಟ್ಟಿಗೆಗಳಾದರೂ ಬೇಕಾಗಬಹುದು) ಅದರ ತೂಕ ಸುಮಾರು 25.5 ಕೆ.ಜಿ., ಸಿಮೆಂಟ್ ಬ್ಲಾಕ್ ತೂಕ ಅಂದಾಜು 34 ಕೆ.ಜಿ. ಆಗಬಹುದು. ಆದರೆ, ವೀನರ್‌ಬರ್ಗರ್ ರೂಪಿಸುವ ಪರಿಸರ ಸ್ನೇಹಿ ಇಟ್ಟಿಗೆ ತೂಕ ಕೇವಲ 11.1 ಕೆ.ಜಿ. ಹೀಗಾಗಿ ದೊಡ್ಡ ಕಟ್ಟಡ ನಿರ್ಮಿಸುವಾಗ ಇದು ಗಣನೀಯ ಪ್ರಮಾಣದಲ್ಲಿ ಭಾರವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಮನೆ ನಿರ್ಮಿಸುವಾಗ ಕೂಡ 'ಭದ್ರ ಬುನಾದಿ'ಗೆ ಬಳಸುವ ವಸ್ತುಗಳಲ್ಲೂ ಇಳಿಮುಖವಾಗುತ್ತದೆ.

192 ವರ್ಷಗಳ ಇತಿಹಾಸ
ಆಸ್ಟ್ರಿಯಾ ಮೂಲದ ವೀನರ್‌ಬರ್ಗರ್ ಕಂಪನಿಗೆ 192 ವರ್ಷಗಳ ಇತಿಹಾಸವಿದೆ. 1819ರಲ್ಲಿ ವಿಯೆನ್ನಾದಲ್ಲಿ ಜನ್ಮ ತಾಳಿದ ಕಂಪನಿ ಇಂದು ವಿಶ್ವದಾದ್ಯಂತ 30 ರಾಷ್ಟ್ರಗಳಲ್ಲಿ ತನ್ನ ಕಾರ್ಯಬಾಹುಳ್ಯ ಚಾಚಿದೆ. 2006ರಲ್ಲಿ ಭಾರತಕ್ಕೆ ಕಾಲಿಟ್ಟಿದ್ದು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕುಣಿಗಲ್‌ನಲ್ಲಿ ಸ್ವಂತ ಕಾರ್ಖಾನೆ ಹೊಂದಿದೆ. ಅಲ್ಲಿಂದಲೇ ಕರ್ನಾಟಕ ಹಾಗೂ ಸುತ್ತಲಿನ ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಇತರೆಡೆ ಪೂರೈಕೆ ಮಾಡುತ್ತಿದೆ. ಹುಬ್ಬಳ್ಳಿಯಲ್ಲೂ ಕಚೇರಿ ಹೊಂದಿದ್ದು ಗ್ರಾಮೀಣ ಪ್ರದೇಶಗಳಿಗೂ ಸೇವೆ ಒದಗಿಸುತ್ತಿದೆ.
ತರಬೇತಿಗೆ ತಜ್ಞರು
ಪರಿಸರ ಸ್ನೇಹಿ ಇಟ್ಟಿಗೆಗಳನ್ನು ಬಳಸಿ ಮನೆ ನಿರ್ಮಿಸಲು ಬೇಕಾದ ಸೂಕ್ತ ತರಬೇತಿ ನೀಡಲು ಕಂಪನಿ ವತಿಯಿಂದಲೇ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ ಕೊಡಲಾಗುತ್ತದೆ. ಅದಕ್ಕೇನು ಹೆಚ್ಚುವರಿಯಾಗಿ ಹಣ ನೀಡಬೇಕಿಲ್ಲ. ಮನೆ ಕಟ್ಟುವ ಸ್ಥಳಕ್ಕೇ ಇಟ್ಟಿಗೆಗಳನ್ನು ಪೂರೈಸಲಾಗುತ್ತದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈ ಇಟ್ಟಿಗೆಗಳನ್ನು ಬಳಸಿ ಕಟ್ಟಡ ಹಾಗೂ ಮನೆಗಳನ್ನು ನಿರ್ಮಿಸಲಾಗಿದೆ.
ಒಂದು ಇಟ್ಟಿಗೆಗೆ 60
ವೀನರ್‌ಬರ್ಗರ್ ತಯಾರಿಸಿರುವ ಒಂದು ಇಟ್ಟಿಗೆ ಬೆಲೆ 60. ಹೌಹಾರಬೇಡಿ. 6ರಿಂದ 8 ಮಾಮೂಲಿ ಇಟ್ಟಿಗೆ ಸೇರಿದರೆ ಇದರ ಒಂದು ಇಟ್ಟಿಗೆಗೆ ಸಮ. ಮಾರುಕಟ್ಟೆಯಲ್ಲಿ ಮಾಮೂಲಿ ಒಂದು ಇಟ್ಟಿಗೆಗೆ 7ರಿಂದ 8 ಇದೆ ಎಂದು ಅಂದಾಜಿಸಿದರೂ ಈ ಗಾತ್ರಕ್ಕೆ ತರಲು 48ರಿಂದ 50 ಆಗುತ್ತದೆ. <



ಚನ್ನು ಮೂಲಿಮನಿ
    - kp.channu@gmail.com
   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.