ಹೋರಾಟದ ಮೇರಿ ಪರ್ವತ
.jpg?w=1200&q=68&auto=format,compress)
ಅದು ಹೆಜ್ಜೆ ಹೆಜ್ಜೆಯ ಹೋರಾಟ. ತನ್ನ ವೃತ್ತಿ ಬದುಕಿನ ರಕ್ಷಣೆಗಾಗಿ, ಹಕ್ಕು, ಸ್ವಾಭಿಮಾನಕ್ಕಾಗಿ. ಇಷ್ಟೆಲ್ಲ ನಡೆದದ್ದು ಸಾಂವಿಧಾನಿಕ ಬದ್ಧ ವೈವಾಹಿಕ ಹಕ್ಕು ಪ್ರತಿಪಾದಿಸಿದ್ದಕ್ಕಾಗಿ.
ಸಂಘರ್ಷಮಯ 25 ವರ್ಷಗಳ ವೃತ್ತಿ ಜೀವನ ಕಳೆದು, ಹೊರಬಂದು ಹೊಸದಾಗಿ ಬದುಕು ಕಟ್ಟಿಕೊಂಡಿರುವ ಮಾಜಿ ಶಿಕ್ಷಕಿ, ಹಾಲಿ ವಕೀಲೆ ಮೇರಿ ಸುಶೀಲಾ ಅವರ ಕಥೆ ಆರಂಭವಾಗೋದೇ ಹೀಗೆ...
ಕಾನೂನು ಸಮರ ಆರಂಭವಾದದ್ದೇ ಅವರು ವೃತ್ತಿ ಆರಂಭಿಸಿದಾಗ. ಪಡೆದ ನೌಕರಿ ಉಳಿಸಿಕೊಳ್ಳಲು, ದುಡಿಯಲು, ಸ್ವಯಂ ನಿವೃತ್ತಿ ಪಡೆಯಲು, ಅಷ್ಟೇ ಅಲ್ಲ ಕೊನೆಗೆ ಪಿಂಚಣಿ ಪಡೆಯಲು ಕೂಡ ಹೋರಾಟವೇ ಮಾರ್ಗವಾಯಿತು. ಸುದೀರ್ಘ ಹೋರಾಟದಲ್ಲಿ ಒಬ್ಬಂಟಿಯಾಗಿದ್ದ ಇವರಿಗೆ ಕೊನೆಯವರೆಗೆ ಕೈಹಿಡಿದದ್ದು ನ್ಯಾಯಾಲಯ ಮಾತ್ರ. ಕೊನೆಗೆ ಮೇರಿ, ತಮ್ಮ ಶಿಕ್ಷಣ ವೃತ್ತಿಯನ್ನೇ ತೊರೆದು ವಕೀಲೆಯಾಗಿ ಸೇವೆ ಸಲ್ಲಿಸಲು ಮುಂದಾಗುವ ಮೂಲಕ ನ್ಯಾಯಾಂಗದ ಋಣ ತೀರಿಸುವ ಪ್ರಯತ್ನ ನಡೆಸಿದ್ದಾರೆ.
14 ವರ್ಷ ವನವಾಸ
ಬಿಎಸ್‌ಸಿ ಪದವೀಧರೆಯಾದ ಮೇರಿ ಪ್ರತಿಷ್ಠಿತ ಸರ್ಕಾರಿ ಅನುದಾನಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೊಂದರಲ್ಲಿ 1981ರಲ್ಲಿ ಶಿಕ್ಷಕಿಯಾಗಿ ನೇಮಕಗೊಂಡರು. ಆದರೆ, ಆ ಶಾಲೆಯ ವಿಚಿತ್ರ ನಿಯಮವೊಂದು ಅವರನ್ನು ಸಿಟ್ಟಿಗೇಳುವಂತೆ ಮಾಡಿತ್ತು. ಆ ಶಾಲೆಯಲ್ಲಿ ಶಿಕ್ಷಕರು ವಿವಾಹವಾಗುವಂತಿಲ್ಲ, ಕಡ್ಡಾಯವಾಗಿ ಶಾಲೆಯ ಹಾಸ್ಟೆಲ್‌ನಲ್ಲೇ ನೆಲೆಸಬೇಕಿತ್ತು! ವಿವಾಹ ಹಾಗೂ ಸಾಂಸಾರಿಕ ಬದುಕು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಿದ ಮೇರಿ ಸುಶೀಲಾ ಅವರು ಈ ಷರತ್ತಿನ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಪರಿಣಾಮ ಒಂದೇ ವರ್ಷದಲ್ಲಿ ಇವರು ಕೆಲಸ ಕಳೆದುಕೊಳ್ಳಬೇಕಾಯಿತು. ಇದನ್ನು ಅವರು ಮತ್ತೊಮ್ಮೆ ಶಿಕ್ಷಣ ಮೇಲ್ಮನವಿ ಪ್ರಾಧಿಕಾರದ ಮುಂದೆ ಪ್ರಶ್ನಿಸಿದರು. ಬೆದರಿದ ಶಿಕ್ಷಣ ಸಂಸ್ಥೆ ಸಂಧಾನಕ್ಕೆ ಬಂತು. ಪ್ರಕರಣ ಇತ್ಯರ್ಥಗೊಂಡು, ಅವರನ್ನು ಗಣಿತ ಶಿಕ್ಷಕಿಯನ್ನಾಗಿ ನೇಮಕ ಮಾಡಲಾಯಿತಾದರೂ ನೇಮಕ ಪತ್ರ ನೀಡಲಿಲ್ಲ. ಇದಕ್ಕಾಗಿ ಸುಶೀಲಾ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ನ್ಯಾಯಾಲಯದ ಆದೇಶದಂತೆ 1985ರಲ್ಲಿ ನೇಮಕ ಪತ್ರ ನೀಡಲಾಯಿತು.
ನೆಪಕ್ಕೆ ನೇಮಕ ಪತ್ರ ನೀಡಿದ ಆಡಳಿತ ಮಂಡಳಿ ಸುಶೀಲಾಗೆ ಕೆಲಸ ನೀಡಲಿಲ್ಲ. ಶಾಲೆಯ ಒಳ ಬರದಂತೆ ನಿರ್ಬಂಧ ವಿಧಿಸಿ, ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಲಾಯಿತು. ತಮಗಾದ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಗೆ ಪತ್ರ ಬರೆದರು. ಇಲಾಖೆಗೂ ದೂರು ಸಲ್ಲಿಸಿದ್ದರು. ಪ್ರಯೋಜನ ಶೂನ್ಯ. ಸೋಲದ ಸುಶೀಲಾ, ಹೈಕೋರ್ಟ್ ಮೊರೆ ಹೋದರು. 1998ರಲ್ಲಿ ಹೈಕೋರ್ಟ್, ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿತು. ಅಲ್ಲಿಯವರೆಗೆ 14 ವರ್ಷ ಕಳೆದಿತ್ತು.
ಕೆಲಸವಿದ್ದರೂ ಇಲ್ಲ
ಇಷ್ಟಾದರೂ, ತರಗತಿ ತೆಗೆದುಕೊಳ್ಳಲು ಆಡಳಿತ ಮಂಡಳಿ ಅವಕಾಶ ಕಲ್ಪಿಸಲಿಲ್ಲ. ಕೊನೆಗೊಮ್ಮೆ ಬೇಸತ್ತ ಸುಶೀಲಾ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸುಪ್ರೀಂಕೋರ್ಟ್ ಇವರಿಗೆ ಪೂರಕವಾಗಿ ಆದೇಶಿಸಿತು 1999ರಲ್ಲಿ. ಅಷ್ಟರಲ್ಲಾಗಲೇ ಶಾಲೆ ಬೇರೆ ಶಿಕ್ಷಕಿಯ ನೇಮಕ ಮಾಡಿತ್ತು. ಆದರೂ, ಕೋರ್ಟ್ ಆದೇಶದಂತೆ ಕೆಲಸ ನೀಡಲಾಯಿತು. ದಶಕಗಳ ಹೋರಾಟದ ನಂತರ ಸುಶೀಲಾ ತಮ್ಮ ನೌಕರಿ ಹಿಂಪಡೆಯಲು ಸಫಲರಾಗಿದ್ದರು. <
ಶಿಕ್ಷಕಿ ವಕೀಲೆ ಆದದ್ದು
ಶಿಕ್ಷಕಿಯ ಹುದ್ದೆ ಉಳಿಸಿಕೊಳ್ಳಲು ವರ್ಷಾನುಗಟ್ಟಲೇ ನ್ಯಾಯಾಲಯದ ಮೆಟ್ಟಿಲು ಹತ್ತಿಳಿದ ಸುಶೀಲಾ, ಕೊನೆಗೆ ತಾವೇ ವಕೀಲ ಪದವಿ ಪಡೆಯುವ ನಿರ್ಧಾರ ಮಾಡಿದರು. 2007ರಲ್ಲಿ ದೂರಶಿಕ್ಷಣ ಇಲಾಖೆಯಲ್ಲಿ ಪದವಿ ಪರೀಕ್ಷೆ ಬರೆದು 2010ರಲ್ಲಿ ಕಾನೂನು ಪದವಿ ಗಳಿಸಿದರು. ನಂತರ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದರು. ಆದರೆ, ಇವರ ವಿರುದ್ಧ ಪ್ರಾರಂಭದಿಂದಲೂ ಕತ್ತಿ ಮಸೆಯುತ್ತಲೇ ಇದ್ದ ಆಡಳಿತ ಮಂಡಳಿ ಅರ್ಜಿ ತಿರಸ್ಕರಿಸಿತು. ಅಷ್ಟರಲ್ಲಿ ಸ್ವತಃ ವಕೀಲೆಯಾಗಿದ್ದ ಸುಶೀಲಾ, ಮತ್ತೊಮ್ಮೆ ನ್ಯಾಯ ಕೋರಿ ಕಟಕಟೆ ಏರಿದರು. ತಾವೇ ವಾದ ಮಂಡಿಸಿ ಗೆದ್ದರು. ಆಡಳಿತ ಮಂಡಳಿ ಅಲ್ಲೂ ಮೊಂಡಿಗೆ ಬಿದ್ದು ಪಿಂಚಣಿ ನೀಡಲು ನಿರಾಕರಿಸಿತು.
ಮತ್ತೊಂದು ಸುತ್ತಿನ ಕಾನೂನು ಹೋರಾಟ. ಆಡಳಿತ ಮಂಡಳಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಸುಶೀಲಾ, ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಬಂಧನ ವಾರೆಂಟ್ ಕೂಡ ಹೊರಡಿಸಿದರು. ಈ ನಿರಂತರ ಹೋರಾಟಕ್ಕೆ ಕೊನೆಗೂ ತಲೆ ಬಾಗಿರುವ ಆಡಳಿತ ಮಂಡಳಿ, 1985ರಿಂದ ಸೇವಾ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡು ಪಿಂಚಣಿ ಪಾವತಿಸುತ್ತಿದೆ.
ಇದೀಗ ತಮ್ಮ ಹೋರಾಟದ ಬದುಕಿಗೆ ವಿರಾಮ ನೀಡಿರುವ ಮೇರಿ ಸುಶೀಲಾ ವಕೀಲೆಯಾಗಿ ಕೌಟುಂಬಿಕ ನ್ಯಾಯಾಲಯ ಸೇರಿದಂತೆ ಇತರ ವ್ಯಾಜ್ಯಗಳನ್ನು ಕೈಗೆತ್ತಿಕೊಂಡು ನೆಮ್ಮದಿಯ ಬದುಕು ಕಾಣುತ್ತಿದ್ದಾರೆ. ಹೆಣ್ಣಿನ ಛಲ, ಬಲಕ್ಕೆ ಮಾದರಿಯಾಗಿದ್ದಾರೆ.
- ಸುಪ್ರೀತಾ ಹೆಬ್ಬಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


.jpg?w=64&q=30&auto=format,compress)