ಸ್ವಾಮಿ ಬನ್ನಿ

ಜನವರಿ ಇಪ್ಪತ್ತೇಳರಿಂದ ಮೂವತ್ತೊಂದರವರೆಗೆ ಕೊಳ್ಳೇಗಾಲದಿಂದ ಇಪ್ಪತ್ತಾರು ಕಿ.ಮೀ. ದೂರದಲ್ಲಿರುವ ಚಿಕ್ಕಲ್ಲೂರಿನಲ್ಲಿ ವಿಶಿಷ್ಟ ರೀತಿಯ ಜಾತ್ರೆ ನಡೆಯುತ್ತದೆ. ಹೆಂಡ, ಬಾಡು ಮತ್ತು ಭಂಗಿ ಸೊಪ್ಪೇ ಇಲ್ಲಿ ನೈವೇದ್ಯ.
ಕಿವಿ ತುಂಬಾ ಘನನೀಲಿ ಸಿದ್ದಪ್ಪಾಜಿ ಹಾಡು ಕೇಳುತ್ತಾ... ಹೊಟ್ಟೆ ತುಂಬಾ ಬಾಡು ತಿಂದು, ಕಂಠಪೂರ್ತಿ ಮದ್ಯ ಕುಡಿದು ತೇಲಾಡುವ ಮಂಟೇಸ್ವಾಮಿ ಪರಂಪರೆಯ ನೀಲಗಾರರ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ನೀವು ಬನ್ನಿ... ಕುಲ ಕುಲಮೊಂದೇ ಎಂದು ಸಾರುವ ಚಿಕ್ಕಲ್ಲೂರು ಜಾತ್ರೆಗೆ ನೀವು ಬನ್ನಿ.
ಜನವರಿ ಇಪ್ಪತ್ತೇಳರಿಂದ ಮೂವತ್ತೊಂದರವರೆಗೆ ಕೊಳ್ಳೇಗಾಲದಿಂದ ಇಪ್ಪತ್ತಾರು ಕಿ.ಮೀ. ದೂರದಲ್ಲಿರುವ ಕಾವೇರಿ ನದಿ ದಂಡೆಯ ಹೊಲ ಗದ್ದೆಗಳಲ್ಲಿ, ನದಿ ದಂಡೆಯಲ್ಲಿ ಯಾವುದೇ ಶಿಷ್ಟಾಚಾರಗಳಿಲ್ಲದೇ, ಒಲೆ ಹಾಕಿಕೊಂಡು ಹೆಂಡ, ಬಾಡು ಮತ್ತು ಭಂಗೀ ಸೊಪ್ಪಿನ ನೈವೇದ್ಯ ಮಾಡಿ, ಹಂಚಿ ಉಣ್ಣುವುದು ಈ ಜಾತ್ರೆಯ ಆಚಾರ.
ನೀಲಗಾರರ ಗಾಯನ
ನೂರಾರು ನೀಲಗಾರ ಮೇಳಗಳಿಂದ ಸೂಫಿಗಳ ಖವಾಲಿ ಮಾದರಿಯಲ್ಲಿ ಮಂಟೇಸ್ವಾಮಿಯ ಕಥಾ ಕಾವ್ಯದ ಲೋಕವೇ ಬಿಚ್ಚಿಕೊಳ್ಳುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಮೈಸೂರು ಪ್ರಾಂತ್ಯದ ಮಂಟೇಸ್ವಾಮಿ- ಸಿದ್ದಪ್ಪಾಜಿ ಒಕ್ಕಲಿನವರು ಗಂಡು ಮಕ್ಕಳಿಗೆ ನೀಲಗಾರ ದೀಕ್ಷೆ ಕೊಡಿಸುವ ಪದ್ಧತಿಯಿದೆ. ನೀಲಗಾರರು ನಾಗ ತಂಬೂರಿಯನ್ನು ನುಡಿಸುತ್ತಾ, ನಾಗಬೆತ್ತ, ಕಂಡಾಯಗಳನ್ನು ಮೆರೆಸುತ್ತಾ, ಜಾಗಟೆ ಬಾರಿಸುತ್ತಾ, ಜೋಳಿಗೆಗಳನ್ನು ಧರಿಸಿ ಮಂಟೇಸ್ವಾಮಿ ಮತ್ತವರ ಶಿಷ್ಯರ ಬಗ್ಗೆ ಜನಪದ ಕಾವ್ಯಗಳನ್ನು ಹಾಡುತ್ತಾರೆ. ಐದು ದಿನ ಎಲ್ಲೆಡೆಯಿಂದ ಬಂದ ನೀಲಗಾರರು ಬೆಳದಿಂಗಳ ರಾತ್ರಿಯಲ್ಲಿ ಚುಮುಚುಮು ಚಳಿಯಲ್ಲಿ ಗಿಜಿಗುಡುವ ಜನಜಂಗುಳಿಯಲ್ಲಿ ಧೂಪ ಸಾಂಬ್ರಾಣಿ ಜೊತೆಗೆ ಜಾಗಟೆ, ಶಬ್ದ, ಕೊಂಬು ಕಹಳೆನಾದ ಎಲ್ಲವನ್ನು ಮೀರಿಸುವಂತೆ ಧರೆಗೆ ದೊಡ್ಡವರ ಕಥೆಯನ್ನು 'ಸಿದ್ದಯ್ಯ ಸ್ವಾಮಿ ಬನ್ನಿ...' ಎಂದು ಕೊಂಡಾಡುವುದು ರೋಮಾಂಚನಕಾರಿ.
ಉತ್ತರ ಕರ್ನಾಟಕದ ಕೊಡೇಕಲ್ಲು ಬಸವಣ್ಣನ ಶಿಷ್ಯನಾಗಿದ್ದ ಮಂಟೇಸ್ವಾಮಿ ಅಲ್ಲಿಂದ ದಕ್ಷಿಣ ಭಾಗಕ್ಕೆ ಬಂದು ನೆಲೆಸುತ್ತಾನೆ. ಈತ ಮಲೆ ಮಹದೇಶ್ವರರ ಸಮಕಾಲೀನ. ಈ ಇಬ್ಬರು ಮಹಾಪುರುಷರು 15 ಮತ್ತು 16ನೇ ಶತಮಾನದಲ್ಲಿ ಅನೇಕ ಪವಾಡಗಳನ್ನು ಮೆರೆದಿದ್ದಾರೆ. ಅವರ ಶಿಷ್ಯರು ನೆಲೆಸಿರುವ ಚಿಕ್ಕಲ್ಲೂರು, ಕಪ್ಪಡಿ, ಬೊಪ್ಪೇಗೌಡನಪುರದಲ್ಲಿ ಜಾತ್ರೆ ನಡೆಯುತ್ತವೆ.
ಐದು ದಿನಗಳ ಜಾತ್ರೆ
ಕೊಳ್ಳೇಗಾಲ ತಾಲೂಕಿನ ಪವಾಡ ಪುರುಷ ಘನನೀಲಿ ಸಿದ್ದಪ್ಪಾಜಿ ನೆಲೆಸಿರುವ ಚಿಕ್ಕಲ್ಲೂರು ಜಾತ್ರೆಯೆಂದರೆ ಇಂದೊಂಥರಾ ನಶೆಯ ಜಾತ್ರೆ. ಇಲ್ಲಿ ಯಾವುದೇ ಸಂಪ್ರದಾಯ ಕಟ್ಟುಪಾಡುಗಳಿಲ್ಲ. ಆದರೆ ಎಲ್ಲೆ ಮೀರಿದ ಭಕ್ತಿಯಿದೆ. ಇಲ್ಲಿ ದೇವರಿಗೆ ಹೆಂಡ, ಬಾಡು ಮತ್ತು ಭಂಗೀ ಸೊಪ್ಪೇ ನೈವೇದ್ಯ, ಹಾಗಾಗಿ ಮೈಸೂರು ಪ್ರಾಂತ್ಯದ ಬಹುತೇಕ ಸಿದ್ದಪ್ಪಾಜಿ ಒಕ್ಕಲಿನ ಜನ ಸುಗ್ಗಿ ಮುಗಿಸಿ ಜಾತ್ರೆಗೆ ಬಂದು ನಶೆಯಲ್ಲಿ ತೇಲಾಡುತ್ತಾರೆ. ಇದೇ ಚಿಕ್ಕಲ್ಲೂರು ಜಾತ್ರೆಯ ವಿಶೇಷ.
ಪ್ರತಿವರ್ಷ ಜನವರಿಯ ಪುಷ್ಯ ಪೂರ್ಣಿಮೆಯಲ್ಲಿ ನಡೆಯುವ ಜಾತ್ರೆಯಲ್ಲಿ ಉಳಿದುಕೊಳ್ಳಲು ಯಾವುದೇ ಸೌಲಭ್ಯವಿಲ್ಲದ್ದರೂ, ಐದು ಲಕ್ಷಕ್ಕೂ ಹೆಚ್ಚು ಮಂದಿ ಬಂದು ಹೋಗುತ್ತಾರೆ. ಹೊಸ ವರ್ಷದ ಹುಣ್ಣಿಮೆಯಲ್ಲಿ ಈ ಜಾತ್ರೆ ಚಂದ್ರಮಂಡಲೋತ್ಸವದೊಂದಿಗೆ ಆರಂಭ. ದೊಡ್ಡವರ ಸೇವೆ, ಮುಡಿಸೇವೆ, ಪಂಕ್ತಿಸೇವೆ, ಮುತ್ತತ್ತಿರಾಯ ಆಂಜನೇಯ ಸೇವೆಯೊಂದಿಗೆ ಗುರುವಾರ ಜಾತ್ರೆ ಮುಕ್ತಾಯ. ಸಾವಿರಾರು ಕುಟುಂಬಗಳು ದೇವಸ್ಥಾನದ ಸುತ್ತಮುತ್ತ ಬಿಡಾರ ಹೂಡಿ ದೇವರಿಗೆ ಕುರಿ, ಆಡು, ಕೋಳಿ ಹರಕೆ ಒಪ್ಪಿಸುತ್ತಾರೆ. ಜಾತಿ ಭೇದ ಮರೆತು ಸಹಪಂಕ್ತಿ ಭೋಜನ ಮಾಡುತ್ತಾರೆ.
ಜಾತ್ರೆಯ ಇತಿಹಾಸ
ಮಂಟೇಸ್ವಾಮಿ ಕಾವ್ಯದಲ್ಲಿರುವಂತೆ ಸಿದ್ದಪ್ಪಾಜಿ, ಆಚಾರಿ ಜನಾಂಗದವರು. ಮೂಲ ಹೆಸರು ಕೆಂಪಾಚಾರಿ. ಪಂಚಾಳ ಪಾಳೇಗಾರರಿಗೂ ಮಂಟೇಸ್ವಾಮಿಗೂ ಯುದ್ಧ ನಡೆದಾಗ ಕೆಂಪಾಚಾರಿಯನ್ನು ಮಂಟೇಸ್ವಾಮಿ ಶಿಷ್ಯನಾಗಿಸಿಕೊಂಡ. ಈ ಸಂದರ್ಭ ಮಾರಿಯರು ಮಂಟೇಸ್ವಾಮಿಗೆ ಸಹಾಯ ಮಾಡುತ್ತಾರೆ. ಮಾರಿಯರಿಗೆ ಬಾಡೂಟ ಮತ್ತು ಮದ್ಯವನ್ನು ನೈವೇದ್ಯ ಮಾಡುವಂತೆ ಮಂಟೇಸ್ವಾಮಿ, ಶಿಷ್ಯನಿಗೆ ಹೇಳಿದರಂತೆ. ಅಂದಿನಿಂದ ಜಾತ್ರೆಯಲ್ಲಿ ಈ ಸಂಪ್ರದಾಯ.
- ಚಿತ್ರ-ಲೇಖನ: ದೇವರಾಜು ಕಪ್ಪಸೋಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


