ಸಂತಸದ ಮಿಕ
ಈ ಸಂತೋಷ ಎನ್ನುವುದು ಇದೆಯಲ್ಲಾ ಹಾಗೆಂದರೇನು? ಅದು ಎಲ್ಲಿ ಸಿಗುತ್ತದೆ? ಯಾವಾಗಲೂ ಅದು ನಮ್ಮ ಜತೆಯಲ್ಲೇ ಇರುವುದಿಲ್ಲ ಏಕೆ? ಬೇರೆಲ್ಲರೂ ಯಾವಾಗಲೂ ಸಂತೋಷವಾಗಿಯೇ ಇರುತ್ತಾರೆ, ಆದರೆ ನಾವು ಮಾತ್ರ ಏಕೆ ಹಾಗಿರಲು ಸಾಧ್ಯವಿಲ್ಲ? ಇಂಥ ಪ್ರಶ್ನೆಗಳು ಸದಾ ನಮ್ಮಲ್ಲಿ ಸುಳಿದಾಡುತ್ತಲೇ ಇರುತ್ತವೆ.
ಅಂಥದ್ದೊಂದು ಸ್ಥಿತಿ ಇದೆಯಲ್ಲಾ ಅದು ನಮ್ಮೊಳಗೇ ನಿರ್ಮಾಣವಾಗಬೇಕಾದುದೇ ಹೊರತೂ ಅದನ್ನು ಬೇರೆಲ್ಲಿ ಹುಡುಕಿದರೂ ಸಿಗಲಿಕ್ಕೆ ಸಾಧ್ಯವೇ ಇಲ್ಲ. ಬಹಳಷ್ಟು ಮಂದಿ ಸಂತೋಷವನ್ನು ಹುಡುಕಿಕೊಂಡು ಎಲ್ಲೆಲ್ಲಿಗೋ ಹೋಗುತ್ತಿರುತ್ತಾರೆ. 'ಅಯ್ಯೋ ಸಿಕ್ಕಾಪಟ್ಟೆ ಬೋರಾಗಿಬಿಟ್ಟಿದೆಯಪ್ಪಾ ಬದುಕು ಒಂದಷ್ಟು ದಿನ ಎಲ್ಲಾದರೂ ಸುತ್ತಾಡಿ ಸಂತೋಷವಾಗಿದ್ದು ಬರಬೇಕು' ಎನ್ನುವುದನ್ನು ಕೇಳಿದ್ದೇವೆ. ಅಂದರೆ ಸುತ್ತಾಟವಷ್ಟೇ ಸಂತೋಷವೇ? ಅಥವಾ ಇರುವ ಜಾಗದಲ್ಲಿ ಅದು ಸಿಗುವುದಿಲ್ಲವೇ? ಖಂಡಿತಾ ನೀವಿದ್ದಲ್ಲಿಯೇ ನಿಮಗೆ ಬೇಕೆಂದರೆ ಸಂತೋಷ ಸಿಗಲು ಸಾಧ್ಯ.
ಮೊದಲೇ ಹೇಳಿಯಾಯಿತಲ್ಲ. ಅದೊಂದು ಮನಸಿಕ ಸ್ಥಿತಿಯಷ್ಟೆ. ನಾನು ಹೇಗಿದ್ದೇನೋ, ಏನಾಗಿದ್ದೇನೋ ಅದೇ ನನಗೆ ಸಂತೋಷ ಎಂದುಕೊಂಡರೆ ಖಂಡಿತಾ ನೀವು ಸಂತೋಷವಾಗಿರಲು ಸಾಧ್ಯ. ಅದಿಲ್ಲದಿದ್ದರೆ ನೀವೆಲ್ಲಿಗೇ ಹೋದರೂ ನಿಮಗೆ ಸಂತೋಷ ಕಾಣವುದೇ ಇಲ್ಲ. ಮತ್ತೆ ಈ ಸಂತೋಷವೆನ್ನುವುದು ತೀರಾ ವ್ಯಕ್ತಿಗತವಾದದ್ದು. ಒಬ್ಬರಿಗೆ ಸಂತೋಷ ಕೊಡುವ ಸಂಗತಿ ಇನ್ನೊಬ್ಬರಿಗೂ ಸಂತೋಷದಾಯಕವಾಗಿರಲು ಸಾಧ್ಯವಿಲ್ಲ. ಅವರವರ ಅಭಿರುಚಿ, ಮನೋಭಾವ, ನಿರೀಕ್ಷೆಗಳನ್ನು ಅವಲಂಬಿಸಿ ಅದು ನಿರ್ಧಾರವಾಗುತ್ತದೆ. ಸಂತೋಷದ ಮೂಲವೇ ತೃಪ್ತಿ. ಅದರ ನಾಶವೇ ನಿರೀಕ್ಷೆ. ನಮ್ಮಲ್ಲಿ ನಿರೀಕ್ಷೆಗಳು ಕಡಿಮೆಯಾಗಿ ತೃಪ್ತಿಯ ಮಟ್ಟ ಹೆಚ್ಚುತ್ತಾ ಹೋದಂತೆಲ್ಲ, ಸಂತೋಷ ತುಂಬಿ ತುಳುತ್ತದೆ. ಅದು ಖಂಡಿತಾ ಬಹಿರಂಗದ ವಸ್ತುವಲ್ಲ. ಅಂತರಂಗದ ಅನುಭೂತಿ. ಅದು ನಿಮ್ಮನ್ನು ಸಾಧನೆಯತ್ತ, ಸಂತೃಪ್ತಿಯ ಉತ್ತುಂಗದತ್ತ ಕೊಂಡೊಯ್ಯಬಲ್ಲ ಸಾಧನ. ನಾನು ಸದಾ ಸಂತೋಷವಾಗಿಯೇ ಇರುತ್ತೇನೆ ಎಂಬ ನಿರ್ಧಾರಕ್ಕೆ ಬಂದ ದಿನವೇ ನಿಮ್ಮ ಉನ್ನತಿ ಆರಂಭವಾಗುತ್ತದೆ. ನೀವು ಉಲ್ಲಾಸದ ಪರಾಕಾಷ್ಟೆಗೆ ಏರಲು ಆರಂಭಿಸಿರುತ್ತೀರಿ. ಈ ಸಂತೋಷವೆಂಬ ಪ್ರಾಣಿ ಖಂಡಿತಾ ಅದಾಗಿಯೇ ನಿಮ್ಮ ಬಲೆಗೆ ಬಂದು ಬೀಳುವುದಿಲ್ಲ. ಅದನ್ನು ಅರಸುತ್ತಾ ಅಲೆದರೂ ಅದು ನಿಮಗೆ ಮಾಯಾಜಿಂಕೆಯಂತೆ ಮಂಕು ಬೂದಿ ಎರಚುತ್ತದೆ. ನೀವು ಹೊಂಚು ಹಾಕಿ ಕುಳಿತರೆ ನಿಮ್ಮ ಕಣ್ತಪ್ಪಿಸಿಯೇ ಹೋಗುತ್ತದೆ. ನಿಮ್ಮ ಪಾಡಿಗೆ ನೀವು ಇದ್ದು ನೋಡಿ, ತಂತಾನೇ ನಿಮ್ಮನ್ನು ಹೊಸೆದುಕೊಂಡೇ ಸಂತಸ ಓಡಾಡುತ್ತಿರುತ್ತದೆ!
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

