ಆಟೋಟ ತಾರೆ
ಸ್ಕೇಟಿಂಗ್‌ನಲ್ಲಿ ದಾಖಲೆ ಬರೆದ ಬುದ್ಧಿ ಮಾಂದ್ಯ ಮಗ ಧನರಾಜ್ ಪ್ರತಿಭೆಗೆ ಪ್ರೋತ್ಸಾಹ ನೀಡಿ ಬೆಳೆಸಿದ ಕೆ. ಮಾಧವ ಕೂಡ ರಾಜ್ಯಮಟ್ಟದ ಕ್ರೀಡಾಪಟು.

ಕ್ರೀಡಾಪ್ರಭದಲ್ಲಿ ಕೆಲ ತಿಂಗಳ ಹಿಂದೆ ಪ್ರಕಟವಾದ 'ಧನಬಲ ಇಲ್ಲದ ಧನರಾಜ್' ಲೇಖನ ನಿಮಗೆ ನೆನಪಿರಬಹುದು. ಸ್ಕೇಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿ ದೇಶಕ್ಕೆ ಹಲವಾರು ಪದಕಗಳನ್ನು ತಂದಿರುವ ಧನರಾಜ್‌ರ ನೋವಿನ ಬದುಕನ್ನು ಆ ಲೇಖನದಲ್ಲಿ ಚಿತ್ರಿಸಲಾಗಿತ್ತು. ಅದು ಪ್ರಕಟಗೊಂಡಾಗ ಮಂಡ್ಯ, ಬೆಂಗಳೂರು, ಕೊಪ್ಪ, ಮಂಗಳೂರು ಮುಂತಾದ ಕಡೆಗಳಿಂದ ಸಾಂತ್ವನ, ಸಹಕಾರದ ಮಹಾಪೂರವೇ ಹರಿದು ಬಂದಿತ್ತು. ನೊಂದ ಧನರಾಜ್ ಕುಟುಂಬಕ್ಕೆ ಇದರಿಂದ ಸ್ವಲ್ಪ ಸಮಾಧಾನ ದೊರಕಿದೆ.
ಅಪ್ಪನೂ ಕ್ರೀಡಾಸಾಧಕ
ಬುದ್ಧಿಮಾಂದ್ಯ ಮಗ ಧನರಾಜ್ ಪ್ರತಿಭೆಗೆ ಪ್ರೋತ್ಸಾಹ ನೀಡಿ ಬೆಳೆಸಿದ ಕೆ. ಮಾಧವ ಕೂಡ ರಾಜ್ಯಮಟ್ಟದ ಕ್ರೀಡಾಪಟು ಎಂಬುದು ನಿಮಗೆ ಗೊತ್ತಾಗಬೇಕು. ಮಂಗಳೂರಿನ ಅಳಪೆ ಸರಿಪಲ್ಲ ನಿವಾಸಿ ಮಾಧವ ಅವರು ವೃತ್ತಿಯಲ್ಲಿ ಅಟೋರಿಕ್ಷಾ ಚಾಲಕ. ವಯಸ್ಸು 53. ಹುಟ್ಟಿದ ಇಬ್ಬರು ಮಕ್ಕಳು ಅಂಗವಿಕಲರು. ಇಷ್ಟೆಲ್ಲಾ ನೋವಿದ್ದರೂ ಸದಾ ಹಸನ್ಮುಖಿ ಮಾಧವ ತನ್ನ ಮಕ್ಕಳ ಸಾಧನೆಯಲ್ಲಿ ನೋವನ್ನು ಮರೆತವರು.
ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಹೊರಟ ಧನರಾಜ್‌ಗೆ ದಿನನಿತ್ಯ ತರಬೇತಿ ನೀಡುತ್ತಾ ತಾನೂ ಕ್ರೀಡೆಯಲ್ಲಿ ಭಾಗವಹಿಸತೊಡಗಿದರು. ಪ್ರತಿದಿನ ಮಗನೊಂದಿಗೆ 9 ಕಿ.ಮೀ. ಓಡುತ್ತಾರೆ. ಕಡುಬಡತನದ ಇವರಿಗೆ ಓಡುವ ಮುಂಚೆ ನೀರಿನಲ್ಲಿ ಹಾಕಿದ ಕಡ್ಲೆಕಾಯಿ, ಗ್ಲುಕೋಸ್ ನೀರು ಶಕ್ತಿಯನ್ನು ತುಂಬುತ್ತದೆ. ಅಭ್ಯಾಸ ಮುಗಿಸಿ ಮನೆಗೆ ವಾಪಸಾಗುವ ಇವರು ಗಂಜಿ, ಚಹಾ ಕುಡಿದು ಅಟೋರಿಕ್ಷಾದಲ್ಲಿ ದುಡಿಮೆಗೆ ಹೊರಡುತ್ತಾರೆ. ನಂತರ ಸಂಜೆ ಮತ್ತೆ ಅಭ್ಯಾಸ. ಇದು ಅವರ ದಿನಚರಿ. ಮಾಧವ ಅವರ ಮಡದಿ ಪುಟ್ಟ ಅಂಗಡಿಯಲ್ಲಿ ದುಡಿಯುತ್ತಾರೆ.
ಬಡತನದ ಇವರಿಗೆ ತರಬೇತಿದಾರರಿಲ್ಲ. ಸ್ವಯಂ ಅಭ್ಯಾಸ. ಮೊದಲ ಬಾರಿಗೆ 2011ರಲ್ಲಿ ಭೂತನಾಥೇಶ್ವರ ದೇವಳದ ಕ್ರಾಸ್ ಕಂಟ್ರಿ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಬರಿಗಾಲಿನಲ್ಲಿ 21 ಕಿ.ಮೀ. ಓಡಿ ಪೂರ್ಣಗೊಳಿಸಿದ್ದರು. ಸುರತ್ಕಲ್ ಎನ್‌ಐಟಿಕೆ ಕ್ರೀಡಾಂಗಣದಲ್ಲಿ ನವೆಂಬರ್‌ನಲ್ಲಿ ನಡೆದ 8ನೇ ಮಾಸ್ಟರ್ ಅಥ್ಲೆಟಿಕ್‌ನಲ್ಲಿ ಭಾಗವಹಿಸಿ 400 ಮೀ. ಪ್ರಥಮ, 800 ಮೀ. ಪ್ರಥಮ, 1,500 ಮೀ. ಪ್ರಥಮ ಸ್ಥಾನದೊಂದಿಗೆ 3 ಚಿನ್ನದ ಪದಕ ಗೆದ್ದಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನ ಕಡಲೂರಿನಲ್ಲಿ ನಡೆದ ಎರಡನೇ ದಕ್ಷಿಣ ಭಾರತ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ 800 ಮೀ. ದ್ವಿತೀಯ, 1,500 ಮೀ. ದ್ವಿತೀಯ, 5,000 ಮೀ. ದ್ವಿತೀಯ, 4400 ಮೀ. ದ್ವಿತೀಯ ಸ್ಥಾನ ಪಡೆದು 4 ಬೆಳ್ಳಿಯನ್ನು ರಾಜ್ಯಕ್ಕೆ ತಂದಿದ್ದಾರೆ. ಅಲ್ಲದೆ ಮೇ ತಿಂಗಳಿನಲ್ಲಿ ಕೇರಳದ ತಿರುವನಂತಪುರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೂ ಆಯ್ಕೆಯಾಗಿದ್ದಾರೆ.
ಮಾಧವರ ಸಾಧನೆಗೆ ನೆರಳಾಗಿರುವವರು ಅನೇಕರು. ಅದರಲ್ಲಿ ಮಂಗಳೂರಿನ ಆಗ್ನೆಸ್ ಸ್ಪೆಷಲ್ ಸ್ಕೂಲ್‌ನ ಪಿಇಟಿ ಮಾಸ್ಟರ್ ನಾರಾಯಣ, ಕದ್ರಿ ಆ್ಯಡ್‌ಲ್ಯಾಬ್‌ನ ಪ್ರದೀಪ್ ಶೆಟ್ಟಿ, ಶ್ರೀಧರ್ ಶಕ್ತಿನಗರ, ಸರಸ್ವತಿ ಫ್ರೆಂಡ್ಸ್ ಕ್ಲಬ್ ಮುಂತಾದವರ ಸಹಾಯವನ್ನು ನೆನಪಿಸಿಕೊಳ್ಳುತ್ತಾರೆ.
ಆಟಕ್ಕೂ ಇಲ್ಲ, ಊಟಕ್ಕೂ ಇಲ್ಲ
ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ಆಸೆ. ಊಟಕ್ಕಾದರೆ ಬಟ್ಟೆಗಿಲ್ಲ, ಬಟ್ಟೆ ಧರಿಸಿದರೆ ಊಟವಿಲ್ಲ ಎಂಬಂತಿದೆ ಇವರ ಪರಿಸ್ಥಿತಿ. ಸಾಧನೆಗೆ ಸಹಾಯದ ಅಗತ್ಯವಿದೆ.
ಸಂಪರ್ಕ: 9945371424. ಸಿಂಡಿಕೇಟ್ ಬ್ಯಾಂಕ್, ಸೈಂಟ್ ಆಗ್ನೆಸ್ ಕಾಲೇಜು ಬ್ರಾಂಚ್, ಬೆಂದೂರು, ಮಂಗಳೂರು ಇಲ್ಲಿರುವ ಅವರ ಖಾತೆ ಸಂಖ್ಯೆ: 022442200008606.
ರವಿರಾಜ್ ಕಟೀಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


