ಅಮ್ಮಾಮೃತ

ಪ್ರತ್ಯಕ್ಷ ದೈವವೆಂಬಂಥ ಅಮ್ಮಂದಿರು ಕೇವಲ ಪುರಾಣಗಳಲ್ಲಲ್ಲ, ವಾಸ್ತವದಲ್ಲೂ ಇದ್ದಾರೆ ಅನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಅಂಥ ಅಮ್ಮಂದಿರ ನೆನಪಿನ ಕಾರ್ಯಕ್ರಮವೇ 'ಅಮ್ಮ ನಿನ್ನ ಎದೆಯಾಳದಲ್ಲಿ'.
'ಓಂ'ಕಾರ... ಅದು ಅಕಾರ ಉಕಾರ ಮಕಾರಗಳ ಸಮ್ಮಿಲನ. ಅದೇ ಬ್ರಹ್ಮಾಂಡವನ್ನು ಆಳುತ್ತಿರುವ, ರಕ್ಷಿಸುತ್ತಿರುವ ದೈವ. ಅದೇ ಅಕಾರ ಮಕಾರಗಳಲ್ಲಿ ಮೂಡಿದವಳು ಅಮ್ಮ. ಹಾಗಾಗಿಯೇ ಉಪನಿಷತ್ 'ಮಾತೃ ದೇವೋಭವ' ಎಂದಿತು. ಪ್ರತಿ ಜೀವಿಯ ಬದುಕು ಅರಳಬೇಕಿದ್ದರೆ ಅಮ್ಮ ಕೊಡುವ ಸಂಸ್ಕಾರ ಅತ್ಯಗತ್ಯ.
ಅಂದು ಶಂತನು ಮಹಾರಾಜ ಸ್ನಾನಕ್ಕಾಗಿ ಗಂಗೆಯ ತಟಕ್ಕೆ ಬಂದ. ಅಲ್ಲಿ ಆತ ಕಂಡದ್ದು ಶರದಿಂದ ನಿರ್ಮಾಣವಾಗುತ್ತಿದ್ದ ಸೇತುವೆ. ಎಲ್ಲಿಂದಲೋ ಶರವೊಂದು ಬಂದು ಒಂದು ಹತ್ತಾಗಿ, ಹತ್ತು ನೂರಾಗಿ, ನೂರು ಸಹಸ್ರವಾಗಿ ಹರಿವ ನೀರನ್ನ ನಿಲ್ಲಿಸುತ್ತಿದೆ. ಹಾಗೆ ಪುಂಖಾನುಪುಂಖವಾಗಿ ಶರಪ್ರಯೋಗ ಮಾಡುತ್ತಿದ್ದವನು ಒಬ್ಬ ಪುಟ್ಟ ಬಾಲಕ. 'ಯಾರ ಮಗನಪ್ಪಾ ನೀನು?' ಅಂತ ಕೇಳಿದ ಶಂತನು. ಆ ಮಗು ಉತ್ತರಿಸಿತು 'ನಾನು ಗಂಗೆಯ ಮಗ'. ಶಂತನು ಹಿಗ್ಗಿದ. ಗಂಗೆ ಮೈದಾಳಿ ಬಂದು, 'ಹೌದು ಇವನು ನಿನ್ನ ಮಗ. ಮತ್ಯಾರಿಂದಲೂ ಕೊಡಿಸಲಾಗದ ಅದ್ಭುತ ಶಿಕ್ಷಣವನ್ನು ಕೊಡಿಸಿದ್ದೇನೆ. ಇವನಿಗೆ ದೇವವ್ರತ ಅನ್ನುವ ಹೆಸರಿಟ್ಟಿದ್ದೇನೆ' ಎನ್ನುತ್ತಾಳೆ. ಈ ದೇವವ್ರತನೇ ಭೀಷ್ಮಾಚಾರ್ಯ. ಇಂಥಾ ಭೀಷ್ಮರನ್ನ ರೂಪಿಸಿದ್ದು ಅಮ್ಮ.
'ತೆಗೆದುಕೋ ಈ ವಿಷವನ್ನ. ನಿನ್ನ ಕೈಯ್ಯಾರೆ ಪ್ರಹ್ಲಾದ ಕುಮಾರನಿಗೆ ಪ್ರಾಶನ ಮಾಡಿಸು' ಎಂದು ಕಯಾದುವಿಗೆ ಆಜ್ಞಾಪಿಸಿದವನು ತಂದೆ ಹಿರಣ್ಯಕಶಿಪು. ತಾಯಿ ಮರಣ ಸಂಕಟವನ್ನ ಒಡಲಲ್ಲಿ ತುಂಬಿಕೊಂಡೇ ಗಂಡನಿಗೆ ಹೆದರಿ ಮಗನಿಗೆ ವಿಷ ಕುಡಿಸುತ್ತಾಳೆ. ವಿಸ್ಮಯ ಅಂದರೆ ಮಗನಿಗೆ ತಾಯಿ ಕೊಟ್ಟ ವಿಷ ಅಮೃತವಾಯಿತು. ಅಮ್ಮನೇ ದೈವವಾದಳು.
ಇಂಥ ಅಮ್ಮಂದಿರು ಕೇವಲ ಪುರಾಣದಲ್ಲಿ ಅಲ್ಲ, ವಾಸ್ತವದಲ್ಲೂ ತಾಯಿ ಪ್ರತ್ಯಕ್ಷ ದೈವ ಅನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಬದುಕಿನ ಪ್ರತಿ ಹಂತದಲ್ಲೂ ಆಕೆಯ ಹಾರೈಕೆ ನಮಗೆ ಬೇಕು, ಆಕೆಯ ಆಸರೆ ಬೇಕು, ಹೊತ್ತು ಹೆತ್ತು ಕೈತುತ್ತು ತಿನ್ನಿಸಿ ಬೆಳೆಸುತ್ತಾಳೆ. ತಲೆಬಾಚಿ, ಬಟ್ಟೆಹಾಕಿ, ಶೂ ತೊಡಿಸಿ, ತಾನೇ ಪುಸ್ತಕ ಹೊತ್ತು ವಿದ್ಯಾಲಯಕ್ಕೆ ಬಿಟ್ಟುಬರುತ್ತಾಳೆ. ಎಡವಿ ಬಿದ್ದರೆ ಅವಚಿಕೊಂಡು ವೈದ್ಯರಲ್ಲಿಗೆ ಓಡುತ್ತಾಳೆ. ಯಾರೋ ಗೇಲಿ ಮಾಡಿ ನಕ್ಕಾಗ ನಮ್ಮ ಪರ ನಿಂತು ಮಾತನಾಡುತ್ತಾಳೆ. ಕಷ್ಟಗಳು ಎದುರಾದಾಗ ಧೈರ್ಯ ತುಂಬಿ ಪ್ರೋತ್ಸಾಹಿಸುತ್ತಾಳೆ. ಕೊರೆವ ಚಳಿಯಲ್ಲೂ ಸೆರಗ ಕಂಬಳಿ ಹೊದಿಸಿ ತಾನು ನಡುಗುತ್ತಿರುತ್ತಾಳೆ. ಹೀಗೆ ಪಟ್ಟಿಮಾಡುತ್ತಾಹೋದರೆ ತಾಯಿಯ ತ್ಯಾಗ ಕಾಳಜಿಗಳಿಗೆ ಅಂತ್ಯವೇ ಇರುವುದಿಲ್ಲ. ಇಂಥಾ ಅಮ್ಮನಿಗೆ ನಾವೇನಾದರೂ ಪ್ರತ್ಯುಪಕರಿಸಿದ್ದೇವಾ? ದೈವ ನಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ ಬಿಡಿ. ಹಾಗಂತ ದೈವದ ನೆನಪನ್ನೇ ಮಾಡದಿದ್ದರೆ ನಮ್ಮ ಜನ್ಮವೇ ವ್ಯರ್ಥ ಅಲ್ವಾ?
ಈ ನಿಟ್ಟಿನಲ್ಲಿ ಸುವರ್ಣ ನ್ಯೂಸ್ 24x7 ವಾಹಿನಿ 'ಅಮ್ಮ ನಿನ್ನ ಎದೆಯಾಳದಲ್ಲಿ' ಎನ್ನುವ ಅಪರೂಪದ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಖ್ಯಾತ ನಟಿ ವಿನಯಾಪ್ರಸಾದ್ ಈ ಕಾರ್ಯಕ್ರಮದ ನಿರೂಪಣೆ ಮಾಡ್ತಿದಾರೆ.
ಮುಕ್ಕೋಟಿ ದೇವರುಗಳು
ಸಾಲುಗಟ್ಟಿ ನಿಂತರೂ
ನಿನಗೆಂದೂ ಸಾಟಿಯಿಲ್ಲವಮ್ಮ
ನೀ ತೂಗೋ ಜೋಲಿಯಲ್ಲಿ ಹೊಲಿದಿರೋ ದಾರಗಳ
ಎಣಿಸುತ್ತ ಕಳೆಯಬೇಕು ಜನ್ಮ
ಎನ್ನುವ ಅರ್ಥಪೂರ್ಣ ಸಾಲುಗಳನ್ನು ಕಾರ್ಯಕ್ರಮದ ಶೀರ್ಷಿಕೆ ಗೀತೆಗೆ ಕೆ. ಕಲ್ಯಾಣ್ ರಚಿಸಿ ಸ್ವರ ಸಂಯೋಜಿಸಿದ್ದಾರೆ. ಗೀತೆಯನ್ನ ಬದ್ರಿಪ್ರಸಾದ್, ಕಾರ್ತಿಕ್ ಮತ್ತು ಅರ್ಚನಾ ರವಿ ಮಧುರವಾಗಿ ಹಾಡಿದ್ದಾರೆ. ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ಕಾರ್ಯಕ್ರಮಕ್ಕೆ ಅಂದವಾದ ಸೆಟ್ ರಚಿಸಿದ್ದಾರೆ. ರವೀಂದ್ರ ಮುದ್ದಿ ನಿರ್ದೇಶನ. ಇಂಥ ವಿಭಿನ್ನ ಕಾರ್ಯಕ್ರಮದಲ್ಲಿ ಗಣ್ಯರಾದ ಸುಧಾ ಮೂರ್ತಿ, ಸಂತೋಷ್ ಹೆಗ್ಡೆ, ಶಂಕರ್ ಬಿದರಿ, ಪ್ರೇಮ್, ಗುರುಪ್ರಸಾದ್, ಸಚಿವ ಸುರೇಶ್‌ಕುಮಾರ್ ಮುಂತಾದವರು ಭಾಗವಹಿಸಿ ತಮ್ಮ ಬದುಕಿನಲ್ಲಿ ಅಮ್ಮನ ಪಾತ್ರ ಎಂಥದ್ದು ಎನ್ನುವ ನೆನಪಿನ ಸವಿಯನ್ನ ಸವಿದಿದ್ದಾರೆ.
ಒಟ್ಟಿನಲ್ಲಿ ಅಮ್ಮ ಕಾರ್ಯಕ್ರಮ ತ್ಯಾಗದ ಬದುಕಿಗೆ ಕೊಟ್ಟ ಒಂದು ಪುಟ್ಟ ಉಡುಗೊರೆ ಎನ್ನಬಹುದು. ಇದೇ ಜನವರಿ 26ರಿಂದ ರಾತ್ರಿ 8 ಗಂಟೆಗೆ ನಿಮ್ಮ ಮನೆಮನಗಳಲ್ಲಿ ಬೇರೂರಿ ಅರಳುವ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಹಾರೈಕೆ ಇರಲಿ.
ಇದು ತಾಯಿಯ ಬಗೆಗಿನ ಅದೆಷ್ಟನೆಯ ಹಾಡಾಗಿದ್ದರೂ ಬರೆಯುವಾಗ ಸಮಸ್ಯೆ ಎನಿಸಲಿಲ್ಲ. ಏಕೆಂದರೆ ತಾಯಿಯ ವಿಷಯ ಎಂದರೆ ಮೊಗೆದಷ್ಟೂ ಸಿಗುವ ಅಮೃತಧಾರೆ. ಹಾಡಿನ ಬಗ್ಗೆ ಚರ್ಚೆ ನಡೆಯುವಾಗಲೇ ಒಂದು ಹಾಂಟಿಂಗ್ ಆಗಿರುವ ಹಾಡು ಮಾಡಬೇಕು ಎಂದು ನಿರ್ಧಾರವಾಗಿತ್ತು. ಹಾಗಾಗಿ ಮೊದಲು ಟ್ಯೂನ್ ಹಾಕಿದೆ. ಅದಾದ ಮೇಲೆ ಮೊದಲು 'ಗರ್ಭದ ಒಳಗೆ ಗಂಧವ ಹಚ್ಚಿ ಸ್ನಾನವ ಮಾಡಿಸಿದೆ' ಎನ್ನುವ ಚರಣದ ಸಾಲು ಬರೆದೆ. ಆ ನಂತರ ಅದಕ್ಕೆ ಜೋಗುಳದ ಹಮ್ಮಿಂಗ್ ಸೇರಿಸಿದೆ. ಅದೆಲ್ಲ ಆದಮೇಲೆ ಕೊನೆಗೆ ಬರೆದಿದ್ದು 'ಸುವ್ವಾಲಿ ಸುವ್ವಾಲಿ ಹಾಡೇ ಅಮ್ಮ, ಕೇಳುತ್ತಾ ಕಳೆಯಲಿ ಜನ್ಮ, ನಾ ನಿನ್ನ ತಾಯಾಗಿ ಮತ್ತೆ ಹುಟ್ಟೋ ಹಾಗೆ, ತಿದ್ದಿ ಬರೆಯಲಿ ಬ್ರಹ್ಮ' ಎಂಬ ಪಲ್ಲವಿ. ಈ ಹಾಡನ್ನು ಹಾಡಿರುವವರು ಬದ್ರಿಪ್ರಸಾದ್. ಅವರ ಜೊತೆಗೆ ಪಲ್ಲವಿಗೆ ಮುಂಚಿನ ಕೆಲವು ಸಾಲುಗಳನ್ನು ಕಾರ್ತಿಕ್ ಹಾಡಿದ್ದಾರೆ.
- ಕೆ. ಕಲ್ಯಾಣ್
'ಅಮ್ಮ' ರಿಯಾಲಿಟಿ ಶೋನ ಶೀರ್ಷಿಕೆ ಗೀತೆಯ ಸಂಗೀತ ನಿರ್ದೇಶಕ ಮತ್ತು ಸಾಹಿತಿ
- ಬೆಳಗೆರೆ ಶ್ರೀಕಂಠಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


