ಬೋಳು ತಲೆಗೆ ಮೆಂತ್ಯ ಮದ್ದು!
ಟೀವಿ ಚಾನೆಲ್‌ಗಳಲ್ಲಿ ಗಂಟೆಗಟ್ಟಲೆ ತೋರಿಸುವ, ಪತ್ರಿಕೆಯ ಕೊನೆಯ ಪುಟದಲ್ಲಿ ಬಣ್ಣ ಬಣ್ಣಗಳಿಂದ ರಾರಾಜಿಸುವ 'ಬೊಕ್ಕ ತಲೆ ನಿವಾರಣೆಗೆ' ಎಂಬ ಜಾಹೀರಾತುಗಳು ಇಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅದರ ಫಲಶ್ರುತಿ ಎಷ್ಟು ಜನರಿಗೆ ಸಿಕ್ಕಿದೆಯೋ ಗೊತ್ತಿಲ್ಲ. ಹೋಗಲಿ ಬಿಡಿ, ಈಗೇನೋ ಆ ಅತ್ಯಾಧುನಿಕ ಔಷಧಗಳಿವೆ. ಆದರೆ, ಹಿಂದಿನ ಕಾಲದಲ್ಲಿ ಬೊಕ್ಕತಲೆ ನಿವಾರಣೆಗೆ ಏನು ಮಾಡುತ್ತಿದ್ದರು?
ಮೆಂತ್ಯವನ್ನೇ ಬಳಸುತ್ತಾರೆ. ಭಾರತದಲ್ಲಿ ಇಂಥ ಔಷಧೋಪಚಾರ ಇಲ್ಲದೇ ಇದ್ದರೂ ಜಾವಾ, ಇಂಡೋನೇಷ್ಯಾಗಳಲ್ಲಿ ಮೆಂತ್ಯವನ್ನು ಕೇಶವರ್ಧಕ ಔಷಧಗಳಲ್ಲಿ ಬಳಸುತ್ತಾರೆ. ಅಲ್ಲದೆ, ಕಾಂತಿವರ್ಧಕವಾಗಿಯೂ ಉಪಯೋಗಿಸುತ್ತಾರೆ.
ಮೆಂತ್ಯದ ಮಜಾ ಇನ್ನೂ ಇದೆ. ಉತ್ತರ ಆಫ್ರಿಕ, ಮಧ್ಯಪ್ರಾಚ್ಯದ ಹೆಂಗಸರು ದುಂಡನೆ ಶರೀರ ಹೊಂದಲು ಮೆಂತ್ಯವನ್ನೇ ರಾಮಬಾಣವಾಗಿ ಬಳಸಿಕೊಳ್ಳುತ್ತಾರಂತೆ!
ಕುದುರೆಗಳ ಮೈ ಕಾಂತಿಯುತವಾಗಿ ಕಾಣಲು ಕೆಲವರು ಹರಳೆಣ್ಣೆಯಿಂದ ಮಸಾಜ್ ಮಾಡುತ್ತಾರೆ. ಆದರೆ, ಮೆಂತ್ಯ ಪುಡಿ ಅದಕ್ಕಿಂತ ಪರಿಣಾಮಕಾರಿ. ಮೆಂತ್ಯದಲ್ಲಿರುವ ಸ್ಥಿರ ಎಣ್ಣೆಗೆ ಸೆಲರಿಯನ್ನು ಹೋಲುವ ಗಾಢ ವಾಸನೆ ಇರುತ್ತದೆ. ಹೀಗಾಗಿ, ಇದು ಇತ್ತೀಚೆಗೆ ಸುಗಂಧದ ಹಾದಿಯನ್ನೂ ಹಿಡಿಯುತ್ತಿದೆ.
ಪುರಾತನ ಈಜಿಪ್ಟಿನ ಗೋರಿಗಳಲ್ಲಿ ಸಿಕ್ಕಿದ ವೈದ್ಯಕೀಯ ಓಲೆಗಳ ಪ್ರಕಾರ, ಮೆಂತ್ಯವನ್ನು ಆಗಿನ ಕಾಲದಲ್ಲಿ ಆಹಾರವಾಗಿಯೂ, ಜ್ವರ ನಿವಾರಣೆಗಾಗಿಯೂ ಬಳಸಿಕೊಳ್ಳಲಾಗುತ್ತಿತ್ತಂತೆ. ಮೆಂತ್ಯಗೆ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಸಾಮರ್ಥ್ಯ ಇದೆ. ಜಲೋದರ ರೋಗ, ಪಿತ್ತಜನಕಾಂಗ ಮತ್ತು ಗುಲ್ಮ ದೊಡ್ಡದಾಗಿರುವುದು, ರಿಕೆಟ್ಸ್, ಗೌಟ್ ಮತ್ತು ಮಧುಮೂತ್ರ ವ್ಯಾಧಿಗಳಲ್ಲಿ ಬಳಸುತ್ತಾರೆ.
ಮೆಂತ್ಯ ಎಷ್ಟು ತಂಪು ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಸಾಮಾನ್ಯವಾಗಿ ಬೇಸಿಗೆಯ ಸೆಖೆಗೆ ಶುರುವಾಗುವ ಸಿಡುಬನ್ನು ಸಹಿಸಿಕೊಳ್ಳುವುದೇ ಯಮಹಿಂಸೆ. ಅಂಥ ಸಿಡುಬನ್ನು ತಂಪು ಮಾಡುವ ಸಾಮರ್ಥ್ಯ ಈ ಮೆಂತ್ಯಗಿದೆ. ಸಿಡುಬು ರೋಗಿಗಳಿಗೆ ಇದರ ತಂಪು ಪಾನೀಯ ದೇಹಕ್ಕೆ ಉಲ್ಲಾಸ ತಂದುಕೊಡುತ್ತದೆ.
ಇಂಗ್ಲೆಂಡಿನಲ್ಲಿ ಮೆಂತ್ಯ ಮೇಲೆ ಇತ್ತೀಚೆಗೊಂದು ಸಂಶೋಧನೆ ನಡೆಸಲಾಯಿತು. ಮೆಂತ್ಯದಲ್ಲಿ ಡಯಾಸ್‌ಜಿನಿನ್ ಎಂ ಸ್ಪೀರಾಯಿಡಲ್ ಪದಾರ್ಥ ಹೆಚ್ಚಿನ ಪ್ರಮಾಣದಲ್ಲಿ ಇದೆಯೆಂದು ತಿಳಿದುಬಂದಿದೆ. ಇದನ್ನು ಹಾರ್ಮೋನ್ ಮತ್ತು ಬಾಯಿಯಿಂದ ತೆಗೆದುಕೊಳ್ಳುವ ಗರ್ಭನಿರೋಧಕ ತಯಾರಿಕೆಯಲ್ಲಿ ಬಳಸುತ್ತಾರೆ. ಈಗ ಡಯಾಸ್‌ಜಿನಿನ್ ಪದಾರ್ಥವನ್ನು ಮೆಕ್ಸಿಕೋ ಮತ್ತು ಮಧ್ಯ ಅಮೆರಿಕಗಳಲ್ಲಿ ಬೆಳೆಸುವ ಒಂದು ಜಾತಿಯ ಸುವರ್ಣ ಗಡ್ಡೆಗಳಿಂದ ಪಡೆಯಲಾಗುತ್ತಿದೆ. ಈ ಬೆಳೆ ಹೆಚ್ಚುಕಾಲದ ಮತ್ತು ಖರ್ಚಿನ ಬೆಳೆ. ಅಂದಹಾಗೆ, ಮೆಂತ್ಯವನ್ನು ಕಡಿಮೆ ಕಾಲದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ಹಾಗೆಯೇ ಹೆಚ್ಚು ಇಳುವರಿಯನ್ನೂ ಪಡೆಯಬಹುದು. ಭಾರತೀಯ ಹೆಂಗಸರು ಮೆಂತ್ಯವನ್ನು ಮೊಲೆಹಾಲು ವೃದ್ಧಿಗೆ ಬಳಸುತ್ತಾರೆ.
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

