ಬೈಟುಕಾಫಿ

ತಪ್ಪೊಪ್ಪಿಕೊಂಡು ದೊಡ್ಡವರಾಗಿ (ರನ್ ವೇ)

Published On :

ಎಷ್ಟೋ ಸಂದರ್ಭ ಹಾಗೆ ಬಂದು ಬಿಡುತ್ತವೆ. ಸತ್ಯ ಹೇಳಲಿಕ್ಕಾಗುವುದಿಲ್ಲ. ಹೇಳದೇ ಮುಚ್ಚಿಟ್ಟುಕೊಳ್ಳಲೂ ಆಗುವುದಿಲ್ಲ. ಸಂದಿಗ್ಧ ಅಂದರೆ ಬಹುಶಃ ಅದೇ ಇರಬೇಕು. ಅದನ್ನು ಧರ್ಮ ಸಂಕಟ ಎಂತಲಾದರೂ ಅನ್ನಿ. ಬಿಸಿ ತುಪ್ಪ ಅಂತಾದರೂ ಅನ್ನಿ... ಒಟ್ಟಾರೆ ಅದು ಅರಗಿಸಿಕೊಳ್ಳಲಾಗದ ವಿಷಯ. ಹಾಗೆಂದು ಅದು ಬೇಕೆಂದೇ ತಂದುಕೊಳ್ಳುವುದೇನೂ ಅಲ್ಲ. ಇಂಥದ್ದೇ ಕಾರಣಕ್ಕೆ ಅಂಥ ಸನ್ನಿವೇಶ ಎದುರಾಗುತ್ತದೆ ಅಂತಲೂ ಅಲ್ಲ. ಅದನ್ನು ಕೆಲವೊಮ್ಮೆ ನಿರೀಕ್ಷಿಸಲೂ ಸಾಧ್ಯ ಇಲ್ಲ. ಹಾಗೆಂದು ಒಂದಷ್ಟು ವಿವೇಚನೆ ಉಪಯೋಗಿಸಿದರೆ ಖಂಡಿತಾ ಅದನ್ನು ಎದುರಿಸಲು ಸಾಧ್ಯ. ನಿಜವಾಗಿ ಮನುಷ್ಯನ ಅಸಲೀ ವ್ಯಕ್ತಿತ್ವ ದರ್ಶನವಾಗುವುದೇ ಅಲ್ಲಿ. ತೀರಾ ಸಂದಿಗ್ಧದ ಸನ್ನಿವೇಶವನ್ನು ಆತ ಹೇಗೆ ಎದುರಿಸುತ್ತಾನೆ ಎಂಬುದರ ಮೇಲೆಯೇ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಬಹುತೇಕ ಇಂಥ ಸಮಯದಲ್ಲಿ ಹಲವರು ಧೈರ್ಯ ಕೆಟ್ಟು ಕುಳಿತುಬಿಡುತ್ತಾರೆ. ಅಂಥ ಅಧೀರತೆ ನಮ್ಮ ವಿವೇಚನೆಯನ್ನು ತಿಂದು ಹಾಕಿಬಿಡುತ್ತದೆ. ಹಾಗೆ ಅಸಹಾಯಕತೆ ಬಂದಾಗಲೇ ಏನೇನೋ ಹೇಳಿಬಿಡುತ್ತೇವೆ, ಎಂಥದ್ದೋ ಮನಸ್ಸಿಗೆ ತೋಚಿದ್ದು ಮಾಡಿಬಿಡುತ್ತೇವೆ. ಏನೋ ಒಂದು, ಸದ್ಯಕ್ಕೆ ಇದರಿಂದ ಪಾರಾದರಾಯಿತು ಎಂಬ ಮನೋಭಾವದಲ್ಲಿ, ವಿವೇಚಿಸಲೇ ಹೋಗುವುದಿಲ್ಲ. ನಮಗೆ ನಾವು ಮಾಡುತ್ತಿರುವುದು ತಪ್ಪು, ಹೇಳುತ್ತಿರುವುದು ಸುಳ್ಳು ಎಂಬುದು ಸ್ಪಷ್ಟವಾಗಿ ಗೊತ್ತಿರುತ್ತದೆ. ಆದರೆ ಸತ್ಯವನ್ನು ಹೇಳಿ ಅದನ್ನು ಒಪ್ಪಿಸುವ ಧೈರ್ಯ, ತಾಳ್ಮೆ, ಬುದ್ಧಿವಂತಿಕೆ ಯಾವುದೂ ಇರುವುದಿಲ್ಲ. ಆದರೆ, ಅದೇ ನಮ್ಮ ವ್ಯಕ್ತಿತ್ವವನ್ನು ಪಾತಾಳಕ್ಕೆ ಕೊಂಡೊಯ್ಯುವುದು. ಮತ್ತೊಂದು ವಿಶೇಷ ಗೊತ್ತೇ? ಅಂಥ ತಪ್ಪಿನ ಸಂದರ್ಭದಲ್ಲೇ ಬಲು ಬೇಗ ಸಿಕ್ಕಿಹಾಕಿಕೊಳ್ಳುವುದು. ಅಂಥದ್ದನ್ನು ಇನ್ನೊಬ್ಬರು ಬೊಟ್ಟು ಮಾಡಿ ತೋರಿದಾಗಲೂ ಅದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿರುವುದಿಲ್ಲ. ಅದು ನಮಗೆ ಬೇಕಿರುವುದಿಲ್ಲವೋ, ಅಥವಾ ನಾವು ಸಣ್ಣವರಾಗಿ ಬಿಡುತ್ತೇವೆ ಎಂಬ ಭಯದಿಂದಲೋ ಅಂತೂ ಆಗಲೂ ಮತ್ತೆ ತಪ್ಪು ಮಾಡುತ್ತೇವೆ. ಆಗ ಅಸಹಾಯಕತೆ ನಮ್ಮನ್ನು ಇನ್ನಷ್ಟು ಕಾಡುವುದರಿಂದ ಒಂದೋ ಅಳು ಬರುತ್ತದೆ, ಇಲ್ಲವೇ ಕೋಪ ನಮ್ಮನ್ನಾವರಿಸಿಕೊಳ್ಳುತ್ತದೆ. ನಿಜವಾಗಿ ಸುಧಾರಿಸಿಕೊಳ್ಳಲು ಸಿಗುವ ಮತ್ತೊಂದು ಅವಕಾಶ ಅದಾಗಿರುತ್ತದೆ. ಕೊನೇ ಪಕ್ಷ ಆಗಲಾದರೂ ಸತ್ಯವನ್ನು ಒಪ್ಪಿಕೊಂಡು ದೊಡ್ಡತನ ಮೆರೆಯಬೇಕು. ತಪ್ಪು ಮಾಡುವುದು ಮನುಷ್ಯ ಸಹಜ ಗುಣ. ಅದನ್ನು ಒಪ್ಪಿ, ತಿದ್ದಿಕೊಳ್ಳುವುದು ಮನುಷ್ಯನಿಗೆ ಮಾತ್ರ ಸಿಗುವ ಅವಕಾಶ. ದುರಂತವೆಂದರೆ ಬಹುತೇಕರು ಕೊನೆಗೂ ಅಂಥ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದೇ ಇಲ್ಲ. ತಪ್ಪನ್ನು ಒಮ್ಮೆ ಒಪ್ಪಿಕೊಂಡು ನೋಡಿ, ನೀವೆಷ್ಟು ಹಗುರಾಗಿ ಎತ್ತರಕ್ಕೇರಿರುತ್ತೀರಿ. <

-  ಸಹನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.