ಆಲೆಲೆಲೆ...
ಆಲೆಮನೆ ಎಂದಾಕ್ಷಣ ಮಲೆನಾಡಿಗರ ಬಾಯಲ್ಲಿ ನೀರೂರಿಸುವುದು ನೊರೆಬೆಲ್ಲ. ಕುಡಿದಷ್ಟೂ ಬೇಕೆನಿಸುವ ಕಬ್ಬಿನ ಹಾಲು. ಕಬ್ಬಿನಹಾಲಿನಿಂದ ಮಾಡುವ ಬಗೆಬಗೆಯ ತಿನಿಸುಗಳು.

ಆಲೆಮನೆ ಅಂದರೇ ಒಂದು ರೀತಿಯಲ್ಲಿ ಹಬ್ಬ. ಆದರೆ ಆ ಸಂಭ್ರಮ ಮನೆಮಂದಿ, ಊರವರು, ಬಂಧು-ಮಿತ್ರರಿಗಷ್ಟೇ ಸೀಮಿತ. ಆಲೆಮನೆಯ ಉದ್ದೇಶವೂ ಬೆಲ್ಲ ಮಾಡುವುದಷ್ಟೇ. ಇಂಥ ಆಲೆಮನೆಗೆ ವಾಣಿಜ್ಯ ಸ್ವರೂಪ ನೀಡುವ ಮೂಲಕ ಕಬ್ಬಿನ ಮೌಲ್ಯವರ್ಧನೆಗೆ ಪ್ರಯತ್ನಿಸಿದರೆ ಹೇಗೆ ಎನ್ನುವ ಆಲೋಚನೆಯಿಂದ ಉತ್ತರ ಕನ್ನಡದ ಶಿರಸಿ ತಾಲ್ಲೂಕಿನ ಗೋಣಘಟ್ಟ ಗ್ರಾಮದಲ್ಲಿ ನಡೆದದ್ದು 'ಆಲೆಮನೆ ಹಬ್ಬ'.
ಶಿರಸಿಯ ಕದಂಬ ಮಾರ್ಕೆಟಿಂಗ್ ಸೊಸೈಟಿಯ ಪರಿಕಲ್ಪನೆಯಲ್ಲಿ ಹೊರಬಂದಿದ್ದೇ ಆಲೇಮನೆ ಹಬ್ಬ. ಕದಂಬ ಮಾರ್ಕೆಟಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಹೆಗಡೆಯವರು ಈ ಹಬ್ಬಕ್ಕೊಂದು ಚೌಕಟ್ಟು ಕಟ್ಟಿದರು. ವಾಣಿಜ್ಯವಾಗಿ ಆಲೆಮನೆ ಮಾಡಿದರೆ ಕಬ್ಬು ಬೆಳೆದ ರೈತರಿಗೆ ಉತ್ತಮ ಲಾಭ ಸಿಗಬಹುದೆನ್ನುವ ವಿಶ್ವಾಸದೊಂದಿಗೆ ಹಬ್ಬಕ್ಕೆ ಮೊದಲಿಟ್ಟರು. ಇದು ಯಶಸ್ವಿಯೂ ಆಯಿತು. ಈಗ ಜಿಲ್ಲೆಯಲ್ಲಿ ಆಲೆಮನೆ ಹಬ್ಬದ ಕುರಿತ ಚರ್ಚೆ ಆರಂಭಗೊಂಡಿದೆ. ಶಿರಸಿ ತಾಲೂಕಿನಲ್ಲಿಯೇ ಇನ್ನೊಂದು ಆಲೆಮನೆ ಹಬ್ಬಕ್ಕೆ ತಯಾರಿ ನಡೆದಿದೆ.
'ಆಲೆಮನೆ ಹಬ್ಬ'ದಲ್ಲಿ ಶುಂಠಿ ಮಿಶ್ರಿತ ಕಬ್ಬಿನ ಹಾಲು, ಕಿತ್ತಳೆಹಣ್ಣು ಮಿಶ್ರಿತ ಹಾಲು, ಲವಂಗ ಮಿಶ್ರಿತ, ಲಿಂಬು ಮಿಶ್ರಿತ, ಏಲಕ್ಕಿ ಮಿಶ್ರಿತ, ಮಜ್ಜಿಗೆ ಹುಲ್ಲು ಮಿಶ್ರಿತ ಕಬ್ಬಿನ ಹಾಲು ತಯಾರಿಸಿ ಬಂದವರಿಗೆ ನೀಡಲಾಯಿತು. ಒಬ್ಬರಿಗೆ ನೂರು ರು. ದರ ನಿಗದಿಪಡಿಸಲಾಗಿತ್ತು. ಶಿರಸಿ ತಾಲೂಕಿನ
ಜನರಲ್ಲದೇ ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಹೊನ್ನಾವರ ಮುಂತಾದ ಊರುಗಳ 900ಕ್ಕೂ ಅಧಿಕ ಜನರು ಈ ಹಬ್ಬದಲ್ಲಿ ಪಾಲ್ಗೊಂಡು ಕಬ್ಬಿನ ಹಾಲಿನ ಸವಿ ಸವಿದರು. ಕಬ್ಬಿನ ಹಾಲಿನಿಂದ ಮಾಡುವ ತೊಡೆದೇವು, ಮಣ್ಣಿ, ದೋಸೆ, ಸುಟ್ಟೇವು ಮತ್ತಿತರ ತಿನಿಸುಗಳನ್ನು ಚಪ್ಪರಿಸಿದರು. ವಿದೇಶಿಯರೂ ಹಬ್ಬದ ಸವಿಯನ್ನುಂಡರು.
6 ದಿನಗಳ ಹಬ್ಬದಲ್ಲಿ ಬೆಳೆಗಾರ ಕಂಡದ್ದು ಸಾಮಾನ್ಯ ಆಲೆಮನೆಗಿಂತ 12 ಸಾವಿರ ರು. ಹೆಚ್ಚಿನ ಆದಾಯ. 1,488 ಲೀಟರ್ ಕಬ್ಬಿನ ಹಾಲು ಮಾರಾಟವಾಗಿದೆ. ಈ ಹಬ್ಬದಿಂದಾಗಿ ಕಬ್ಬು ಬೆಳೆಗಾರನಿಗೆ ಆಲೆಮನೆಯನ್ನು ಬೆಲ್ಲಕ್ಕಷ್ಟೇ ಸೀಮಿತಗೊಳಿಸದೆ ಈ ರೀತಿಯಲ್ಲಿಯೂ ಕಬ್ಬಿನ ಲಾಭದ ಮುಖ ನೋಡಬಹುದು ಎನ್ನುವುದು ರೈತರಿಗೆ ಮನವರಿಕೆಯಾಯಿತು.
ಉತ್ತರಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಈಗ ಪ್ರವಾಸಿಗರ ಹಂಗಾಮು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಆಲೆಮನೆ ಹಬ್ಬ ಆಕರ್ಷಣೆ ಮತ್ತು ಆಸಕ್ತಿಯ ತಾಣವಾಗಿತ್ತು. ಇಲ್ಲಿಯ ಆಲೆಮನೆ ಸೊಬಗೇ ಬೇರೆ. ಸಂಜೆಯಾಗುತ್ತಿದ್ದಂತೆ ಆಲೆಮನೆ ಕಳೆಕಟ್ಟುತ್ತದೆ. ಈ ಹಿಂದೆ ಕೋಣನ ಬಳಸಿ ಕಬ್ಬು ಅರೆಯಲಾಗುತ್ತಿತ್ತು. ಆದರೆ ಈಗ ಆಧುನಿಕ ತಂತ್ರಜ್ಞಾನದಲ್ಲಿ ಕಬ್ಬನ್ನು ಅರೆಯಲಾಗುತ್ತದೆ. ರುಚಿಯಲ್ಲಿ ವ್ಯತ್ಯಾಸವಿಲ್ಲ. ಆದ್ದರಿಂದ ಹಬ್ಬದ ಮೂಲಕ ಕಬ್ಬು ಬೆಳೆಗಾರರಿಗೆ ಅಧಿಕ ವರಮಾನಕ್ಕೆ ಮುನ್ನುಡಿ ಬರೆದಂತಾಗಿದೆ.
ವಿಶ್ವಾಮಿತ್ರ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


