ಜೀನುಗೂಡು

ಬಳ್ಳಾರಿಯಲ್ಲಿ ಬೆಂಗಳೂರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜೀನ್ಸ್ ಉದ್ದಿಮೆ ಇರುವುದರಿಂದ ಸಾಮಾನ್ಯ ವರ್ಗದವರಿಗೂ ಅದು ಕಿಸೆಗೆ ನೆಮ್ಮದಿ ತರುವ ದರಗಳಲ್ಲಿ ದೊರೆಯುತ್ತದೆ. ಈಗ ಅಲ್ಲಿ ಜವಳಿ ಪಾರ್ಕ್ ಕೂಡ ಬರಲಿದೆ.
400 ಜೀನ್ಸ್ ಪ್ಯಾಂಟ್ ಉತ್ಪಾದನಾ ಘಟಕಗಳು ಬಳ್ಳಾರಿಯಲ್ಲಿವೆ
10,000 ಜನರಿಗೆ ಜೀನ್ಸ್ ಉದ್ದಿಮೆಯಿಂದ ಬಳ್ಳಾರಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ
2,000 ಉದ್ಯೋಗಗಳು ಜವಳಿ ಪಾರ್ಕ್ ಸ್ಥಾಪನೆಯಿಂದ ಸೃಷ್ಟಿ
12,000 ಮಂದಿಗೆ ಪಾರ್ಕ್ ಆಶ್ರಯ
400-450 ಕೋಟಿ ರು. ಬಳ್ಳಾರಿಯ ಜೀನ್ಸ್ ಉದ್ದಿಮೆಯ ಅಂದಾಜು ವಹಿವಾಟು.
ಶೇ.5-10ಲಾಭ ಹೆಚ್ಚಳ ನಿರೀಕ್ಷೆ
ಉದ್ಯಮಿಗಳಿಗೆ ಏನು ಲಾಭ?
ಜವಳಿ ಪಾರ್ಕ್‌ನಿಂದಾಗಿ ಉದ್ಯಮಿಗಳಿಗೆ ಶೇ.20 ಸಬ್ಸಿಡಿಯಲ್ಲಿ ರು. 20 ಲಕ್ಷ ವರೆಗೆ ಸಾಲ
ಅಲ್ಪಸಂಖ್ಯಾತರು, ಮಹಿಳೆಯರು, ಎಸ್‌ಸಿ, ಎಸ್‌ಟಿ ವರ್ಗದ ಉದ್ಯಮಿಗಳಿಗೆ ಶೇ.25ರಷ್ಟು ಸಬ್ಸಿಡಿ ಸಿಗಲಿದೆ.
ಜೀನ್ಸ್ ಪ್ಯಾಂಟ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಅದು ಬೇಕೇ ಬೇಕು. ನಾವು ನೀವೆಲ್ಲರೂ ಪ್ರಮುಖ ಕಂಪನಿಗಳ ಷೋರೂಮ್‌ಗಳಿಂದ ಖರೀದಿಸುತ್ತಿರುವ ಜೀನ್ಸ್ ಪ್ಯಾಂಟ್‌ಗಳಿಗೂ ರಾಜ್ಯದ ಪ್ರಮುಖ ಸ್ಥಳದ ಜತೆ ಅವಿನಾಭಾವ ಸಂಬಂಧ ಇದೆ. ಅಂದ ಹಾಗೆ ಆ ಸ್ಥಳ ಯಾವುದೆಂದರೆ ಬಳ್ಳಾರಿ. ಇಲ್ಲಿಂದ ಸಿದ್ಧಗೊಳ್ಳುವ ಜೀನ್ಸ್ ಪ್ಯಾಂಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ಭಾರತಕ್ಕೆ ಮತ್ತು ವಿದೇಶಗಳಿಗೆ ಪೂರೈಕೆಯಾಗುತ್ತದೆ.
ಎಲ್ಲೆಲ್ಲಿ ಬೇಡಿಕೆ?
ಬೆಂಗಳೂರಿನಲ್ಲಿ ಜೀನ್ಸ್ ಉದ್ಯಮ ಇದ್ದರೂ ಅದು ದುಬಾರಿ. ಬಳ್ಳಾರಿಯಲ್ಲಿ ಬೆಂಗಳೂರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜೀನ್ಸ್ ಉದ್ದಿಮೆ ಇರುವುದರಿಂದ ಸಾಮಾನ್ಯ ವರ್ಗದವರಿಗೂ ಅದು ಕಿಸೆಗೆ ನೆಮ್ಮದಿ ತರುವ ದರಗಳಲ್ಲಿ ದೊರೆಯುತ್ತದೆ. ಇದಕ್ಕಾಗಿಯೇ ಬಳ್ಳಾರಿ ಜೀನ್ಸ್‌ಗೆ ದಕ್ಷಿಣ ಭಾರತ ಮತ್ತು ವಿದೇಶಗಳಲ್ಲಿ ಬೇಡಿಕೆ ಇದೆ. ಕೊಲಂಬೋ, ಮಲೇಷ್ಯಾ, ಸಿಂಗಾಪುರ, ಸೌದಿ ಅರೇಬಿಯಾದಲ್ಲೂ ಭಾರಿ ಬೇಡಿಕೆ ಇದೆ.
ಶೇ.30 ರಿಯಾಯಿತಿ
ಬಹುತೇಕ ಸಗಟು ವ್ಯಾಪಾರಸ್ಥರು ಇರುವುದರಿಂದ ಪ್ಯಾಂಟ್‌ಗಳು ಎಂಆರ್‌ಪಿ ದರಕ್ಕಿಂತ ಶೇ. 30ರಷ್ಟು ಕಡಿಮೆಗೆ ದೊರೆಯುತ್ತವೆ. ಹೀಗಾಗಿ ಬೆಂಗಳೂರಿನಲ್ಲಿ ಪ್ಯಾಂಟ್‌ಗೆ ರು. 1 ಸಾವಿರ ಇದ್ದರೆ ಅದು ಬಳ್ಳಾರಿಯಲ್ಲಿ ರು. 400-1 ಸಾವಿರಕ್ಕೆ ದೊರೆಯುತ್ತದೆ.
ಆಗಲಿದೆ 'ಫಿಟ್'
ಇದುವರೆಗೆ ಕಡಿಮೆ ಬೆಲೆಯಲ್ಲಿ ಪೂರೈಕೆಯಾಗುತ್ತಿರುವ ಜೀನ್ಸ್ ಇನ್ನೂ 'ಫಿಟ್' ಆಗಲಿದೆ. ಅಂದರೆ ಹೆಚ್ಚಿನ ಗುಣಮಟ್ಟದಲ್ಲಿ ಸಿದ್ಧಗೊಂಡು ಗ್ರಾಹಕರನ್ನು ಕೈಬೀಸಿ ಕರೆಯಲಿದೆ. ಇಂಥ ಗುಣಮಟ್ಟ ತರುವುದಕ್ಕಾಗಿಯೇ ಜಿಲ್ಲೆಯಲ್ಲಿ ಒಂದು ಜವಳಿ ಪಾರ್ಕ್ ಸ್ಥಾಪನೆಯಾಗಲಿದೆ. ಇದಾದ ಬಳಿಕ ಇಲ್ಲಿ ಸಿದ್ಧಗೊಳ್ಳುವ ಪ್ಯಾಂಟ್‌ಗಳ ಬೆಲೆ ಕೊಂಚ ಏರಿಕೆಯಾಗಬಹುದು. ಈಗಾಗಲೇ ಬಳ್ಳಾರಿ ಜೀನ್ಸ್‌ನ ದರ ಶೇ.10-15 ಏರಿಕೆಯಾಗಿದೆ. ಏಪ್ರಿಲ್‌ನಿಂದ ಇನ್ನೂ ಶೇ.10 ಹೆಚ್ಚಾಗಲಿದೆ.
ಏನು ಕಾರಣ?
ಜೀನ್ಸ್ ಉದ್ಯಮಕ್ಕೆ ಬಳಸುವ ಕಚ್ಚಾ ಬಟ್ಟೆ ಬೆಲೆ ಶೇ.10ರಷ್ಟು ಏರಿಕೆ
ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯನ್ನು 2012ರ ಆಗಸ್ಟ್‌ನಲ್ಲಿ ಶೇ.4- ಶೇ.5.5ಕ್ಕೆ ಹೆಚ್ಚಿಸಿರುವುದು.
2 ವರ್ಷಗಳಿಂದ ಅಬಕಾರಿ ಸುಂಕದ ಶೇ.12.3ಕ್ಕೆ ಹೆಚ್ಚಳ
ಪರಿಣಾಮವೇನು?
ಬೆಲೆ ಏರಿಕೆಯಿಂದಾಗಿ ಬಳ್ಳಾರಿ ಜೀನ್ಸ್‌ಗೆ ಶೇ.10ರಿಂದ 15ರಷ್ಟು ಬೇಡಿಕೆ ಕಡಿಮೆಯಾಗಿದೆ. ಇದರಿಂದಾಗಿ ಈ ಕ್ಷೇತ್ರದ ಉದ್ಯಮಿಗಳು ಚಿಂತಾಕ್ರಾಂತರಾಗಿದ್ದಾರೆ. ತಮ್ಮ ಮೇಲಿನ ತೆರಿಗೆ ಭಾರವನ್ನು ಗ್ರಾಹಕರ ಮೇಲೆ ಹೊರಿಸಲು ಮುಂದಾಗಿದ್ದಾರೆ.
ಗುಣಮಟ್ಟದ ಪ್ಯಾಂಟ್
ಬಳ್ಳಾರಿ ಜೀನ್ಸ್ ದೇಶ, ವಿದೇಶಗಳಲ್ಲಿ ಪ್ರಸಿದ್ಧಿಯಾಗಿದ್ದರೂ, ಒಂದು ಬ್ರಾಂಡ್ ಇರಲಿಲ್ಲ. ಸಗಟು ಮಾರುಕಟ್ಟೆಯಲ್ಲಿ ಸಿಗುವ ಪ್ಯಾಂಟ್‌ಗಳನ್ನು ಖರೀದಿಸಿ, ಕೆಲವರು ತಮ್ಮದೇ ಹೆಸರು/ಬ್ರಾಂಡ್ ನೀಡಿ ಹೇರಳ ಲಾಭ ಗಳಿಸುತ್ತಿದ್ದಾರೆ. ಇದಕ್ಕೆಲ್ಲ ಜವಳಿ ಪಾರ್ಕ್ ಸ್ಥಾಪನೆ ತಡೆಯಾಗಲಿದೆ. ಮಾತ್ರವಲ್ಲದೆ ಸ್ಟಿಚಿಂಗ್ ಯುನಿಟ್‌ಗಳಿಗೆ ಆಧುನಿಕತೆ ಸ್ಪರ್ಶ ನೀಡಲಾಗುತ್ತದೆ. ಇದರಿಂದಾಗಿ ಕಷ್ಟಪಟ್ಟು ದುಡಿಯುವ ಯೂನಿಟ್‌ನವರಿಗೆ ಹೆಚ್ಚಿನ ಲಾಭ ಬರುವ ನಿರೀಕ್ಷೆ ಇದೆ. ಆಧುನಿಕ ಮೆಷಿನ್‌ಗಳ ಮೂಲಕ ಉತ್ತಮ ಸ್ಟಿಚಿಂಗ್ ಜೀನ್ಸ್ ಉಡುಪುಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು ಜವಳಿ ಪಾರ್ಕ್ ಪ್ರಮುಖ ಉದ್ದೇಶ. ಜೀನ್ಸ್ ಬಟ್ಟೆ ಕಟಿಂಗ್, ಸ್ಟಿಚಿಂಗ್, ವಾಷಿಂಗ್, ಫಿನಿಷಿಂಗ್, ಐರನ್ ಬೇರೆ ಬೇರೆ ಕಡೆ ನಡೆಯುತ್ತಿದೆ. ಇಂತಹ ಫಜೀತಿ ಹೋಗಿ ಒಂದೇ ಸೂರಿನಡಿ ಪ್ಯಾಂಟ್ ಉತ್ಪಾದನೆಯಾಗಿ ಹೊರಬಂದರೆ, ಉತ್ತಮ ಗುಣಮಟ್ಟದ ಪ್ಯಾಂಟ್ ತಯಾರಿಕೆ ಸಾಧ್ಯವಾಗುತ್ತದೆ.
ಸಿಗಲಿದೆ ಆಧುನಿಕ ಸ್ಪರ್ಶ
ಗಾರ್ಮೆಂಟ್ಸ್ ಉದ್ಯಮದಲ್ಲಿ ಬೆಂಗಳೂರು ಬಿಟ್ಟರೆ ಬಳ್ಳಾರಿಗೆ ಎರಡನೆ ಸ್ಥಾನ. ಇಲ್ಲಿನ ಗಾರ್ಮೆಂಟ್ಸ್ ಉದ್ದಿಮೆಯ ಅಭಿವೃದ್ಧಿಗೆ 'ಜೀನ್ಸ್ ಸ್ಟಿಚಿಂಗ್ ಯೂನಿಟ್ಸ್' ಅನ್ನು ಒಂದೇ ಸೂರಿನಡಿಯಲ್ಲಿ ತರಲಾಗುತ್ತದೆ. ಈ ಮೂಲಕ ಉತ್ತಮ ಬ್ರಾಂಡ್‌ನ ಜೀನ್ಸ್ ಉಡುಪು ಸಿದ್ಧಪಡಿಸಲು ಜವಳಿಪಾರ್ಕ್ ಸ್ಥಾಪನೆಗೆ ಸರ್ಕಾರ ಅನುಮತಿ ಕೊಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದು ಜವಳಿ ಪಾರ್ಕ್ ಸ್ಥಾಪನೆಯಾದರೆ ಬಳ್ಳಾರಿ ಜೀನ್ಸ್ ವಿನೂತನ, ಬ್ರಾಂಡೆಡ್ ಮಾದರಿಯಲ್ಲಿ ಗ್ರಾಹಕರ ಮುಂದೆ ಬರಲಿದೆ.
ಉದ್ಯಮಿಗಳ ಅಭಿಮತ
ಕೀ ಜೀನ್ಸ್ ಮಾಲೀಕ ಪುಕ್‌ರಾಜ್ ಜೈನ್ ಪ್ರಕಾರ ತೆರಿಗೆ ಹಾಗೂ ಕಚ್ಚಾ ವಸ್ತು ಏರಿಕೆಯಿಂದಾಗ ಜೀನ್ಸ್ ಬೆಲೆ ಏರಿಕೆ ಅನಿವಾರ್ಯ. ಇಲ್ಲದಿದ್ದರೆ ಉದ್ಯಮ ನೆಲಕಚ್ಚುತ್ತದೆ ಎನ್ನುತ್ತಾರೆ. ವಾಕರ್ ಜೀನ್ಸ್‌ನ ಉಮೇದ್ ಮಲ್ ಏಪ್ರಿಲ್‌ನಿಂದ ಶೇ. 10ರಷ್ಟು ಬೆಲೆ ಹೆಚ್ಚಿಸಲಾಗುತ್ತಿದೆ ಎಂದಿದ್ದಾರೆ.
ಪಾರ್ಕ್ ಸ್ಥಾಪನೆ ಎಲ್ಲಿ?
ಬಳ್ಳಾರಿಯ ಆಲ್ದಳ್ಳಿಯ 51 ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಸ್ಥಾಪನೆಯಾಗಲಿದೆ. ಸದ್ಯ ಅಲ್ಲಿ 1 ಸಾವಿರಕ್ಕೂ ಹೆಚ್ಚು ಸ್ಟಿಚಿಂಗ್ ಯುನಿಟ್ ಇದ್ದರೂ, ಬ್ರಾಂಡೆಡ್ ಉಡುಪು ದೊರೆಯುತ್ತಿಲ್ಲ.
ಅನುದಾನ
ಪಾರ್ಕ್ ಸ್ಥಾಪನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ 78 ಕೋಟಿ ಪ್ರಸ್ತಾವನೆ ಕಳುಹಿಸಲಾಗಿದೆ. ಜವಳಿ ಪಾರ್ಕ್ ಸ್ಥಾಪನೆಯಾದಲ್ಲಿ ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಏಕೀಕೃತ ಜವಳಿ ಯೋಜನೆ ಅಡಿಯಲ್ಲಿ ಪಾರ್ಕ್ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಬರಲಿದೆ. ಇದರಲ್ಲಿ ಟೆಸ್ಟಿಂಗ್ ಮೆಷಿನ್ ಹಾಗೂ ಸಾಮಾನ್ಯವಾಗಿ ಉಪಯೋಗಿಸುವ ಮೆಷಿನ್‌ಗಳು ಬರಲಿದೆ.
ಯಾವ ಬ್ರಾಂಡ್?
ಕೀ, ವಾಕರ್, ಪಾಯಿಂಟ್ ಬ್ಲಾಕ್ ಜೀನ್ಸ್‌ಗಳು ಹೆಚ್ಚು ಜನಪ್ರಿಯ.
ಮೂರು ವರ್ಷಗಳ ಹಿಂದೆ ಜವಳಿ ಪಾರ್ಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಿಂದಾಗಿ ಜೀನ್ಸ್ ಉದ್ದಿಮೆಗೆ ಆಧುನಿಕ ಸ್ಪರ್ಷ ದೊರೆಯಲಿದೆ.
-ಶ್ರೀಧರ ನಾಯಕ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ
-ಶಶಿಧರ ಮೇಟಿ
-kpshashibellary@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


