ಬೈಟುಕಾಫಿ

ವಿಶ್ವರೂಪಾ

ವಿಶ್ವರೂಪಾ
Published On :

ಕ್ಯಾನ್ಸರ್ ಅಂದ್ರೆ ಎಲ್ಲರೂ ಬೆಚ್ಚಿ ಬೀಳ್ತಾರೆ. ಬದುಕುವ ಆಸೆಯೇ ಕರಗಿ ನೀರಾಗುತ್ತೆ. ಅದರಲ್ಲೂ ವಯಸ್ಸಾದವರಿಗೆ ಬಂದುಬಿಟ್ಟರೆ ಮುಗಿದೇ ಹೋಯಿತು. ಹಾಗೆಯೇ, ಕ್ಯಾನ್ಸರ್ ಕಾಯಿಲೆಯನ್ನೇ ಸವಾಲಾಗಿ ಸ್ವೀಕರಿಸಿ ಬದುಕುವ ಆಸೆ ಗಟ್ಟಿಗೊಳಿಸಿಕೊಂಡ ಅನೇಕ ನಿದರ್ಶನಗಳು ನಮ್ಮ ಮುಂದಿವೆ.
ಅಂಥವರಲ್ಲಿ ಸಾಫ್ಟ್‌ವೇರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ರೂಪಾ ವೆಂಕಟೇಶ್ ಒಬ್ಬರು. ನಾಲ್ಕು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು ಇದೀಗ ಕಾಯಿಲೆಯಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲ, ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 'ಪಿಂಕ್ ಗ್ರೂಫ್ ಸಪೋರ್ಟ್‌' ಎನ್ನುವ ಸಂಘಟನೆ ಕಟ್ಟಿ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕ್ಯಾನ್ಸರ್ ವಿರುದ್ಧ ಜಾಗೃತಿ ಮತ್ತು ಅರಿವು ಮೂಡಿಸುವ ಅವರ ಕಾಯಕ ಇಷ್ಟಕ್ಕೇ ಸೀಮಿತವಾಗಿಲ್ಲ. ಬದಲಾಗಿ, ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಮಾಹಿತಿ ನೀಡುವ ಉದ್ದೇಶದಿಂದ ತಾವೇ ಸ್ವತಃ ಕೃತಿ ರಚಿಸಿದ್ದಾರೆ. 'ಕ್ಯಾನ್ಸರ್- ಎ ಕಾಮಾ, ನಾಟ್ ಎ ಫುಲ್‌ಸ್ಟಾಪ್‌' ಇಂಗ್ಲಿಷ್ ಕೃತಿಯಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ. ಇದೀಗ ಆ ಕೃತಿ ಕನ್ನಡಕ್ಕೆ ಅನುವಾದಗೊಂಡಿದ್ದು 'ಕ್ಯಾನ್ಸರ್- ಅಲ್ಪವಿರಾಮ, ಪೂರ್ಣ ವಿರಾಮವಲ್ಲ' ಎನ್ನುವ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಿದೆ.

ಅಕ್ಕನನ್ನು ಕಳೆದುಕೊಂಡ ದುಃಖ
ಸ್ತನ ಕ್ಯಾನ್ಸರ್ ರೂಪಾ ವೆಂಕಟೇಶ್ ಅವರಿಗೆ ಅನುವಂಶೀಯವಾಗಿ ಬಂದ ಕಾಯಿಲೆ. ಇದಕ್ಕೂ ಮುನ್ನ ಅಜ್ಜಿ ಮತ್ತು ಅಕ್ಕ ರಜಿನಿ ಅವರಿಗೂ ಸ್ತನ ಕ್ಯಾನ್ಸರ್ ಅನುವಂಶಿಯವಾಗಿ ಎದುರಾಗಿತ್ತು. ಅಜ್ಜಿ ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದರೆ ಹೊರತು, ಅಕ್ಕ ಬದುಕುಳಿಯಲಿಲ್ಲ. ಕಾಯಿಲೆ ಆವರಿಸುವ ನಂತರದ ಸರದಿ ರೂಪಾ ಅವರದ್ದಾಗಿತ್ತು, ಇದ್ದ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಕಳೆದುಕೊಂಡು ದುಃಖದಲ್ಲಿದ್ದ ತಂದೆ ತಾಯಿಗೆ ಮತ್ತಷ್ಟು ನೋವು ನೀಡುವುದು ಸರಿಯಲ್ಲ ಎಂದು ರೂಪಾ ನಿರ್ಧರಿಸಿದ್ದರು.
ಆದರೆ, ಸಮಸ್ಯೆ ಬಗ್ಗೆ ಯಾರ ಬಳಿ ಉತ್ತರ ಕೇಳುವುದು. ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ತಮಗೆ ಕಾಯಿಲೆ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ವೈದ್ಯರು ತರಹೇವಾರಿ ಸಲಹೆ ನೀಡುತ್ತಾರೆ. ಸಂಬಂಧಿಕರ ಬಳಿ ಹೇಳಿಕೊಂಡರೆ, ಮಾಹಿತಿಗಿಂತ ಜೀವವನ್ನು ಮತ್ತಷ್ಟು ಕುಗ್ಗಿಸುವ ಮಮಕಾರದ ಸಲಹೆಗಳು. ಇದು ರೂಪಾ ಅವರನ್ನು ಮತ್ತಷ್ಟು ಖಿನ್ನರನ್ನಾಗಿಸಿತ್ತು. ಆದ್ದರಿಂದ ತಮ್ಮ ಚಿಕಿತ್ಸೆಯ ದಿನಗಳಲ್ಲಿ ಎದುರಾದ ಸಮಸ್ಯೆ ಮತ್ತು ಅವುಗಳಿಗೆ ಕಂಡುಕೊಂಡ ಪರಿಹಾರಗಳನ್ನು ಕೃತಿಯಲ್ಲಿ ದಾಖಲಿಸಿದ್ದಾರೆ.

ಪಿಂಕ್ ಸಪೋರ್ಟ್ ಗ್ರೂಪ್
ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಸಹಾಯ ನೀಡುವ ಉದ್ದೇಶದಿಂದ ರೂಪಾ ಅವರು ಪಿಂಕ್ ಸಪೋರ್ಟ್ ಗ್ರೂಪ್ ಸಂಘಟನೆ ಹುಟ್ಟು ಹಾಕಿದ್ದಾರೆ. ಪ್ರಸ್ತುತ ಸಂಘಟನೆ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಆಪ್ತ ಸಮಾಲೋಚನೆ, ಸಮಸ್ಯೆಗಳಿಗೆ ಪರಿಹಾರ, ಚಿಕಿತ್ಸೆ ಪಡೆಯಲು ಅಶಕ್ತರಾದವರಿಗೆ ಸಹಾಯ ಮಾಡುವ ಕಾರ್ಯದಲ್ಲಿ ನಿರತವಾಗಿದೆ. 
ಪ್ರಸ್ತುತ ಸಂಘಟನೆಯಲ್ಲಿ 120ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ಪ್ರಸ್ತುತ ರೂಪಾ ವೆಂಕಟೇಶ್ ಅವರು ಟಿ 8 ಅಡ್ವಾನ್ಸ್‌ಡ್ ಬ್ಯಾಂಕಿಂಗ್ ಟೆಕ್ನಾಲಜಿ ಸಾಫ್ಟ್‌ವೇರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರು ಸ್ಥಾಪಿಸಿರುವ ಕಂಪನಿಯಲ್ಲಿ 27ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದು, ವರ್ಷಕ್ಕೆ ರು. 2.5 ಕೋಟಿಗೂ ಅಧಿಕ ವಹಿವಾಟು ಹೊಂದಿದೆ.

'ಕ್ಯಾನ್ಸರ್- ಎ ಕಾಮಾ...'
'ಕ್ಯಾನ್ಸರ್- ಅಲ್ಪ ವಿರಾಮ, ಪೂರ್ಣ ವಿರಾಮವಲ್ಲ' ಕೃತಿ ಸ್ತನ ಕ್ಯಾನ್ಸರ್ ಬಗ್ಗೆ ಸಮಗ್ರ ಮಾಹಿತಿಯನ್ನೊಳ ಗೊಂಡಿದೆ. ಕಾಯಿಲೆಯ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು, ಸ್ತನ ಕ್ಯಾನ್ಸರ್‌ಗೆ ಕಾರಣ,ನಿವಾರಣೋಪಾಯ, ಚಿಕಿತ್ಸೆ, ಕಿಮೋಥೆರಪಿ ಸಮಯದಲ್ಲಿ ಎದುರಾಗುವ ಸಮಸ್ಯೆ, ರೂಪಾ ಅವರು ಎದುರಿಸಿದ ಸಮಸ್ಯೆಗಳು, ಸರ್ಜರಿಯ ವಿಧಗಳು, ಪ್ಯಾಥೋಲಜಿ, ಚಿಕಿತ್ಸಾ ಸಮಯದಲ್ಲಿ ಎದುರಾಗುವ ಸಂದಿಗ್ಧ ಸನ್ನಿವೇಶ, ಕಿಮೋಥೆರಪಿಯ ಅಡ್ಡ ಪರಿಣಾಮಗಳು, ಕಣ್ಣು, ಚರ್ಮ, ನಿದ್ರೆಯ ಮೇಲೆ ಪರಿಣಾಮ, ಕೂದಲು ಉದುರುವಿಕೆ, ವೈದ್ಯರ ಸಲಹೆಗಳು, ಕ್ಯಾನ್ಸರ್ ಗುಣಮುಖವಾದ ನಂತರದ ದಿನಗಳು, ಯೋಗ, ಧ್ಯಾನ, ರೇಡಿಯೇಷನ್, ಹಾರ್ಮೋನಲ್ ಥೆರಪಿ ಸೇರಿದಂತೆ ಅನೇಕ ಮಾಹಿತಿಗಳನ್ನು ಕೃತಿ ಒಳಗೊಂಡಿದೆ.

ಕ್ಯಾನ್ಸರ್ ಎಂದರೆ ಎಲ್ಲರೂ ಬೆಚ್ಚಿಬೀಳುತ್ತಾರೆ. ಇದು ಗುಣಪಡಿಸಬಹುದಾದ ಕಾಯಿಲೆ ಎನ್ನುವ ಅರಿವು ಮೂಡಿಸಿ, ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಆತ್ಮಸ್ಛೈರ್ಯ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ರೂಪಾ ವೆಂಕಟೇಶ್ (ಮೊಬೈಲ್: 98451 68404).

-ರವಿಕುಮಾರ್ ಭದ್ರಾವತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.