ನಿಮ್ಮೊಂದಿಗೆ ಮಾತನಾಡಿಕೊಳ್ಳಿ
ನಿಮ್ಮೊಂದಿಗೆ ನೀವು ಯಾವಾಗಲಾದರೂ ಮಾತನಾಡಿಕೊಳ್ಳುತ್ತೀರಾ? ಅಥವಾ ಹೊರಗಿನ ಪ್ರಪಂಚದ ಗದ್ದಲದಲ್ಲಿ ಕರಗಿ ಹೋಗ್ತೀರಾ? ಬರೀ ಗದ್ದಲವೇ ತುಂಬಿ ಹೋದರೆ, ನೀವು ಮಾನಸಿಕವಾಗಿ ಒಂಟಿಯಾಗುತ್ತ, ದುರ್ಬಲರಾಗುತ್ತ ಸಾಗಿದ್ದೀರಿ ಎಂದರ್ಥ.
ಕೆಲವೊಮ್ಮೆ ಹಾಗಾಗುತ್ತದೆ. ಏನು ಮಾಡಲೂ ಬೇಸರ. ಯಾವ ಕೆಲಸದಲ್ಲೂ ಆಸಕ್ತಿಯೇ ಬರುವುದಿಲ್ಲ. ಕಚೇರಿಯಂತೂ ಬೋರೆದ್ದು ಹೋಗುತ್ತದೆ. ಮನೆಗೆ ಬಂದರೂ ಅದೇ ಭಾವ. ಎಲ್ಲೂ ನೆಮ್ಮದಿಯೇ ಇಲ್ಲ. ಆಗ ಉಕ್ಕುತ್ತದೆ ನೋಡಿ, ಒಂದು ರೀತಿಯ ರೋಷ. ಅದಕ್ಕೆ ಬುದ್ಧಿಯನ್ನು ಕೊಟ್ಟರೆ ಸಂಸಾರದ ನೆಮ್ಮದಿಯನ್ನೇ ನಾಶ ಮಾಡುವ ತಾಕತ್ತು ಇರುತ್ತದೆ. ಅದರ ಬದಲು ಹೀಗೆ ಮಾಡೋಣವೇ? ಸುಮ್ಮನೆ ಒಂದೆಡೆ ಕುಳಿತುಕೊಳ್ಳಿ. ಮನೆ ಬೇಡ. ಏಕೆಂದರೆ, ನಿಮ್ಮದೇ ಮನದೊಳಗೆ ಇಳಿಯಲು ಅವಕಾಶ ನೀಡದಂತೆ ಆಗುವ ಸನ್ನಿವೇಶವೇ ಅಲ್ಲಿ ಹೆಚ್ಚು. ಹೀಗಾಗಿ ಯಾವುದಾದರೂ ಶಾಂತ ಪರಿಸರದಲ್ಲಿ ಕುಳಿತುಕೊಂಡು 'ಯಾಕೆ ಬದುಕು ನಿಂತ ನೀರಂತೆ ಭಾಸವಾಗ್ತಿದೆ?' ಎಂದು ಪ್ರಶ್ನಿಸಿಕೊಳ್ಳಿ. ಅಂತರಾಳಕ್ಕೆ ಇಳಿಯಿರಿ. ಅಲ್ಲೂ 'ಅದು ಮಾಡಬೇಕು', 'ಇದು ಮಾಡಬೇಕು' ಎಂಬಂಥ ಕೆಲಸಗಳನ್ನು ಅಥವಾ ನಿಮ್ಮ ಮಹತ್ವಾಕಾಂಕ್ಷೆಗಳನ್ನು ನೆನಪಿಸಿಕೊಳ್ಳಬೇಡಿ. ಸುಮ್ಮನೆ ತಾಳ್ಮೆಯಿಂದ ಮನವನ್ನು ನಿಯಂತ್ರಿಸಿ, ಪ್ರಶ್ನಿಸಿಕೊಳ್ಳಿ. ಉತ್ತರ ದೊರೆಯಿತಾ ಖುಷಿ ಪಡಿ. ಬೇಸರಕ್ಕೆ ಏನಾದರೂ ಕಾರಣ ಅಂತ ಸಿಕ್ಕರೆ ನೆಮ್ಮದಿಯೇ. ಏಕೆಂದರೆ, ಅದನ್ನು ಬಗೆಹರಿಸಲು ಯತ್ನಿಸಬಹುದು. ಆದರೆ, ಕಾರಣವೇ ಇಲ್ಲದೇ ಅಂಥ ಭಾವನೆ ಬರ್ತಾ ಇದ್ದರೆ, ಅದಕ್ಕೆ ಕಾರಣ ನೀವೇ. ಹೌದು. ಆಗಾಗ ಮನಸ್ಸಿಗೆ ಆಗುವ ಬೇಸರವನ್ನು ಪರಿಹರಿಸಿ ಫ್ರೆಶ್ ಮಾಡದೇ ಬಿಟ್ಟು ಬಿಟ್ಟು ಅದು ಇಷ್ಟು ಪಾತಾಳಕ್ಕೆ ಕುಸಿಯಲು ಮೂಲ ಕಾರಣ ನೀವೇ ಆಗಿದ್ದೀರಿ.
ಬರಿಯ ಪ್ರಾಪಂಚಿಕ ಗದ್ದಲದಲ್ಲಿ ಇದ್ದು ಇದ್ದು ನಮ್ಮನ್ನು ನಾವು ಮಾತನಾಡಿಸಿಕೊಳ್ಳದೇ ಇದ್ದರೆ ಕೆಲಕಾಲದ ಬಳಿಕ ಮನಸ್ಸು ಭಾರವಾಗಿ ಬಿಡುತ್ತದೆ. ಆಗಾಗ ಅದನ್ನು ಮಾತನಾಡಿಸಿ, 'ಕುಶಲವೇ? ಕ್ಷೇಮವೇ?' ಅಂತ ಕೇಳ್ತಾ ಇರೋದೇ ಅದಕ್ಕೆ ಪರಿಹಾರ. ಮತ್ತೇನಿಲ್ಲ. ಹಾಗೆ ಮಾಡಿ ನೋಡಿ, ಎಷ್ಟು ರಿಲ್ಯಾಕ್ಸ್ ಆಗ್ತೀರಿ ಅಂತ. ಅಷ್ಟಕ್ಕೂ ಅಭ್ಯಾಸ ಮಾಡಿಕೊಂಡರೆ ಸಂತೆಯಲ್ಲೂ ಇಂಥ ಧ್ಯಾನಸ್ಥ ಮನಸ್ಥಿತಿಯನ್ನು ಅನುಭವಿಸಬಹುದು. ಅದಕ್ಕೆ ಸ್ವಲ್ಪ ಸಿದ್ಧತೆ ಬೇಕು ಅಷ್ಟೇ. ಹಾಗೆ ಮಾಡಿಕೊಂಡರೆ, ಮನಸ್ಸು ಯಾವಾಗಲೂ ಹಗುರವಾಗಿ ಹಾರಾಡುತ್ತಿರುತ್ತದೆ. ಆಗ ಯಾವ ಕೆಲಸವನ್ನೂ ಖುಷಿಯಿಂದ ಮಾಡಲು ಸಾಧ್ಯ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

