ಅನುದಿನದ ಪ್ರತಿಬಾಣ

ಕವಯತ್ರಿಪ್ರತಿಭಾ ನಂದಕುಮಾರ್ ಎಂದರೆ ನೇರಾನೇರ. ಅಲ್ಲಿ ಮುಚ್ಚಿಡೋದು ಏನೂ ಇಲ್ಲ. ಸಾಹಿತ್ಯಪ್ರಿಯರು ಅದನ್ನೆಲ್ಲ 'ಅನುದಿನದ ಅಂತರಗಂಗೆ'ಯಲ್ಲಿ ಕಂಡು ಮಿಂದಿರಬಹುದು. 'ನಿಮ್ಮಿ ಕಾಲಂ'ನಲ್ಲೂ ಇಣುಕಿ ನೋಡಿರಬಹುದು. ಪುರುಸೊತ್ತೇ ಇಲ್ಲ ಅಂತ ಹೇಳುತ್ತಲೇ ಪ್ರತಿಭಾ 'ಬೈಟು ಕಾಫಿ' ಜತೆ ಮಾತುಕತೆಗೆ ಕೂತರು. ಅಲ್ಲಿ ಎದ್ದ ಅಂತರಗಂಗೆಯ ಮಾತಿನ ತೊರೆಗನ್ನು ನೀವೇ ಓದಿ...
ಪ್ರತಿಭಾ ಅಂದರೆ ಏನು? ಗಂಡಸಾ ಅಥವಾ ಹೆಂಗಸಾ?
ಬರೀ ಹೆಂಗ್ಸಲ್ಲಾ, ಅಪ್ಪಟ ಹೆಂಗ್ಸು!
ಪ್ರತಿಭಾ ಬರೆದ 'ಅನುದಿನದ ಅಂತರಗಂಗೆ'ಗೆ ನಂದಕುಮಾರ್ ಹೇಳಿದ್ದೇನು?
ನನ್ನ ಬರವಣಿಗೆಗೆ ಯಾವತ್ತೂ ಅವರು ತಲೆಕೆಡಿಸಿಕೊಂಡಿಲ್ಲ. ಅದು ನನ್ನ ಬರವಣಿಗೆ. ಒಂದು ಸಲ ಅವರ ಗೆಳೆಯರೊಬ್ಬರು 'ಏನೋ ನಿನ್ನ ಹೆಂಡತಿ ಪುಸ್ತಕದಲ್ಲಿ ಏನೇನೋ ಬರೆದಿದ್ದಾಳೆ?' ಅಂತ ಕೇಳಿದರಂತೆ. ಅದಕ್ಕವರು, 'ಅವಳು ಎಲ್ಲಾ ನನ್ನ ಕೇಳಿ, ಪರ್ಮಿಶನ್ ತಗೊಂಡೇ ಬರೆದಿದ್ದಾಳೆ, ಹೋಗೋ' ಅಂದರಂತೆ!
ಮಹಿಳೆಯರಿಗೋಸ್ಕರ ಏನಾದರೂ ಮಾಡಬೇಕು ಅನ್ನಿಸಿಲ್ವಾ?
ಆ್ಛಡ್ಡಿಛಟಟಣ ನನಗೆ ಈ ಪುರುಷರ ಬಗ್ಗೆ ಏನಾದರೂ ಮಾಡಬೇಕು ಅನ್ನಿಸ್ತಿದೆ!
ನಿರ್ದೇಶನಕ್ಕೂ ಕೈಹಾಕಿದ್ದೀರಲ್ಲಾ! ಅಲ್ಲಿ ಯಾವುದಾದರೂ ಬಾಂಬ್ ಸಿಡಿಸುವ ನಿರೀಕ್ಷೆ ಇದೆಯಾ?
ನಾನು ಸುಮಾರು ಎಪ್ಪತ್ತೈದು ಡಾಕ್ಯುಮೆಂಟರಿಗಳಿಗೆ ಅನೇಕ
ವಿಧಗಳಲ್ಲಿ ಕೆಲಸ ಮಾಡಿದ್ದೀನಿ. ದೂರದರ್ಶನಕ್ಕೆ ಹಲವು ಟೆಲಿಫಿಲಂಸ್ ಮಾಡಿಕೊಟ್ಟಿದ್ದೀನಿ. ನಿತ್ಯದ ಧಾರಾವಾಹಿಗಳಿಗೆ ಹತ್ತಾರು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೀನಿ. ನಾಗಾಭರಣ, ಕಾರ್ನಾಡ, ಟಿ.ಎಸ್. ರಂಗಾ, ಕೃಷ್ಣ ಮಾಸಡಿ, ಜಿ.ಎಸ್. ಕುಮಾರ್ ಮುಂತಾದವರ ಹೆಸರು ಉದಾಹರಣೆಗೆ ಹೇಳಿದೆ. ನಾನು ಭಾಷಾಂತರ ಕೆಲಸ ಬಿಟ್ಟ ಮೇಲೆ ನನ್ನದೇ ಆದ ಸೂರ್ಯ ಕ್ರಿಯೇಟಿವ್ ಸರ್ವಿಸಸ್ ಎಂಬ ಮೀಡಿಯಾ ಏಜೆನ್ಸಿ ಮಾಡಿಕೊಂಡು ಎನ್‌ಜಿಒಗಳೊಂದಿಗೆ ಕೆಲಸ ಮಾಡಿದೆ. 3 ದಶಕಗಳಿಂದ ನಿರ್ದೇಶನದಲ್ಲಿ ತೊಡಗಿಕೊಂಡಿದ್ದೇನೆ. ಆದರೆ ಕೆ.ವಿ. ಆನಂದ್ ಅವರ ತಮಿಳಿನ 'ಮಾಟ್ರಾನ್' ಸಿನೆಮಾದಲ್ಲಿ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ ನಂತರವಷ್ಟೇ ಎಲ್ಲರೂ ಗುರುತಿಸುತ್ತಿದ್ದಾರೆ.
'ಮಾಟ್ರಾನ್'ನ ಅನುಭವ ಹೇಳಿ...
ಅದೊಂದು ಯಶಸ್ವಿ ಚಿತ್ರ. ಈ ಮೊದಲು ನಾನು 'ಡೆಕ್ಕನ್ ಹೆರಾಲ್ಡ್'ನಲ್ಲಿ ಕೆಲಸ ಮಾಡುವಾಗಲೇ ಆನಂದ್ ಅವರ 'ಕೊ' ಸಿನೆಮಾಕ್ಕೆ ಬೆಂಗಳೂರಿನ ಶೆಡ್ಯೂಲ್‌ಗೆ ಸಹಾಯ ಮಾಡಿದ್ದೆ. ಆ ನಂತರ ಅವರು ನನಗೆ ಆಫರ್ ನೀಡಿದರು. ಕೆಲಸ ಬಿಟ್ಟು ಸೀದಾ ಚೆನ್ನೈಗೆ ಹೋದೆ. ನಂತರದ ದಿನಗಳಲ್ಲಿ 'ಮಾಟ್ರಾನ್' ಹುಟ್ಟಿಕೊಂಡಿತು.
ಇತ್ತೀಚೆಗೆ ನೀವು ಮಾಡಿದ ಕಿರುಚಿತ್ರ ಯಾವುದರ ಕುರಿತು?
'ಸ್ವಾಹಾ' ಎಂಬ ಕಿರುಚಿತ್ರ. ಇದು ಜರ್ಮನಿಯ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ತಂದೆಯ ಸಂಪ್ರದಾಯಕ್ಕೆ ಮಗನ ವೈಚಾರಿಕತೆಯ ನಡುವೆ ಉಂಟಾಗುವ ಘರ್ಷಣೆ ಕುರಿತು ಇರುವ ಕಿರುಚಿತ್ರ ಇದು.
ನಿಮ್ಮ ಬಾಯ್‌ಫ್ರೆಂಡ್ ಸ್ಕೂಟರ್ ಮಾರಾಟ ಮಾಡುವ ಇರಾದೆ ಇದೆಯಾ?
ಚಾನ್ಸೇ ಇಲ್ಲ. ಸ್ಕೂಟರ್ ಮಾರಲ್ಲ. ಇನ್ನೂ ಓಡ್ತಾ ಇದ್ದಾನೆ ಅವನು!
ಪ್ರತಿಭಾ ನಂದಕುಮಾರ್‌ಳನ್ನು ಅಂದಿನ 'ನಿಮ್ಮಿ ಕಾಲಂ'ನಲ್ಲಿ ಅರ್ಥೈಸಹೊರಟರೆ ಹೇಗಿರುತ್ತೆ!?
'ನಿಮ್ಮಿ' ಲಂಕೇಶ್ ಅವರ ಮನಸ್ಸಿನಲ್ಲಿ ನಿರ್ಮಾಣಗೊಂಡ ಪಾತ್ರ. ಲಂಕೇಶರಿಗೆ ನಿಮ್ಮಿ ಬಗ್ಗೆ ಒಂದು ವಿಶೇಷ ಆಸ್ಥೆ, ಸಂವೇದನೆ ಇತ್ತು. ಅಂದು ಲಂಕೇಶರಿಗೆ ಅರವತ್ತು ವರ್ಷ ತುಂಬಿದಾಗ ಮೈಸೂರಿನ ರಾಮದಾಸ್ ಒಂದು ದೊಡ್ಡ ಕಾರ್ಯಕ್ರಮ ನಡೆಸಿದ್ದರು. ಅಲ್ಲಿ ಪದ್ಯ ಓದಲು ನನಗೂ ಆಹ್ವಾನ ಬಂದಿತ್ತು. ಮೈಸೂರಿನ ವೇದಿಕೆಯಲ್ಲಿ ನಾನು 'ಅಂಕಲ್ ಉವಾಚ' ಎಂಬ ಕವಿತೆ ಓದಿದೆ. ಅದನ್ನು ವೇದಿಕೆಯಲ್ಲೇ ಲಂಕೇಶರ ಬಳಿಗೆ ಹೋಗಿ, 'ಇದು ನಿಮಗೆ ಅರ್ಪಣೆ' ಎಂದೂ ಹೇಳಿ ಅವರ ಕೈಗೆ ನೀಡಿದ್ದೆ. ವೇದಿಕೆಯಲ್ಲಿದ್ದ ಕೆಲವರು ಈ ಬಗ್ಗೆ ಕುಹಕವಾಡಿದರು. ವಾಪಸು ಬಂದಾಗ ಈ ಕುರಿತು ಲಂಕೇಶ್ 'ಮರೆಯುವ ಮುನ್ನ'ದಲ್ಲಿ ನನ್ನ ಬಗ್ಗೆ ಬರೆದರು. ಆಗ ನಾನು ನಿಮ್ಮಿ ಬರೆದ ಹಾಗೆ ಒಂದು ಪತ್ರ ಬರೆದು ಕೊಟ್ಟೆ. ಅದನ್ನವರು ಎಷ್ಟು ಇಷ್ಟಪಟ್ಟರು ಎಂದರೆ ಮರುವಾರ ಅದನ್ನೇ ಪ್ರಕಟ ಮಾಡಿಬಿಟ್ಟರು. 'ಇನ್ನು ಮೇಲೆ ನೀನೇ ನಿಮ್ಮಿ ಕಾಲಂ ಬರಿ' ಅಂದ್ರು. ಎರಡು ವರ್ಷ ಬರೆದೆ. 'ನಿಮ್ಮಿ' ಯಾವಾಗಲೂ ಹದಿನಾರರ ಹುಡುಗಿನೇ. ಈಗಲೂ ನಾನು 'ನಿಮ್ಮಿ ಕಾಲಂ' ಬರೆದರೆ ಹಾಗೆಯೇ ಬರೆಯಲು ಸಾಧ್ಯ ಹೊರತು, ಇನ್ನ್ಯಾವ ರೀತಿಯಲ್ಲೂ ಬರೆಯಲು ಸಾಧ್ಯವಿಲ್ಲ. ಆದರೆ ಮುಂದೆ ನೂರಾರು ನಿಮ್ಮಿಗಳು ಹುಟ್ಟಿಕೊಂಡು ಅಂಕಣ ಬರೆದರು. ಆದರೂ ನಿಮ್ಮಿಯನ್ನು ನಕಲು ಮಾಡಲು ಸಾಧ್ಯವಿಲ್ಲ. ನಿಮ್ಮಿ ಹೆಸರಿಗೆ ಲಂಕೇಶ್ ಪತ್ರಿಕೆ ಕಚೇರಿಗೆ ಸಾವಿರಾರು ಪತ್ರಗಳು ಬರುತ್ತಿದ್ದವು. ಹಿರಿಯ ನಟಿ ಲೀಲಾವತಿ ಅವರ ಮಗ ಕೂಡಾ ನಾನು ನಿಮ್ಮಿಯನ್ನು ವಿವಾಹವಾಗು ತ್ತೇನೆ ಎಂದು ಹುಡುಕಿದ್ದರು!
ಪ್ರೀತಿಗೆ ಕಾಮದ ಗೋಜಿಲ್ಲ, ಹಾಗಿದ್ದರೂ ಇಂದಿನ ಯುವಕರ ಪ್ರೀತಿ ದೇಹ ವಾಸನೆಯ ಸುತ್ತ ಸಾಯುತ್ತದಲ್ಲಾ! ಏನಂತಿರಿ?
ಪ್ರೀತಿಗೆ ಕಾಮದ ಗೋಜಿಲ್ಲ ಅಂತ ಯಾರು ಹೇಳಿದ್ದು? ಅದು ಶುದ್ಧ ತಪ್ಪು. ಹರೆಯದ ವಯಸ್ಸಲ್ಲಿ ಪ್ರೀತಿ ವ್ಯಕ್ತವಾಗೋದೇ ಕಾಮದಲ್ಲಿ. ಯಾವಾಗ ಪ್ರೀತಿ ಕಾಮವಲ್ಲ ಎನ್ನಬಹುದು ಎಂದರೆ ಕಾಮವೆಲ್ಲ ದೇಹದಿಂದ ಸೋರಿ ಹೋದಾಗ, ಕಾಮವಿಲ್ಲದ Platanic loveಆಗಬಹುದು. ಯಾರಾದರೂ ಚಿಕ್ಕವಯಸ್ಸಿನಲ್ಲಿ 'ಪ್ರೀತಿಸುತ್ತಿದ್ದೀನಿ' ಅಂದರೆ ಅದು ಕಾಮವಿಲ್ಲದೆ ಕಷ್ಟ. ಅದರೊಂದಿಗೆ ಹೆಣ್ಣಿಗೆ ಸಮರ್ಪಣಾ ಭಾವ ಜಾಸ್ತಿ. ಸಮರ್ಪಣೆ ಮಾಡಿಯಾದರೂ ಗಳಿಸಿಕೊಳ್ಳುವ ಛಾತಿ ಹೆಣ್ಣಿಗೆ ಒಲಿದಿರುವುದರಿಂದ ಪ್ರೀತಿ- ಕಾಮ ಜೊತೆಜೊತೆಗೆ ಸಾಗುತ್ತದೆ. ಎಲ್ಲಿಯವರೆಗೆ ಆಕೆ ದೈಹಿಕವಾಗಿ ಫಿಟ್ ಇರುತ್ತಾಳೋ ಅಲ್ಲಿಯತನಕ Infatuation ಅನ್ನೋದನ್ನೇ ಲವ್ ಅಂದುಕೊಂಡಾಗ ಈ ರೀತಿಯ ಗೊಂದಲ ಸಹಜ.
ಇಂದಿನ ಜಗತ್ತಿನ (ಕಾಮ) ಕುರಿತು ಏನಾದರೂ...?
ಜಗತ್ತಿನ ಇತರ ಎಲ್ಲಾ ಜೀವಿಗಳೂ ಬೆದೆ ಬಂದಾಗ ಮಾತ್ರ ಸಂತಾನೋತ್ಪತ್ತಿಗಾಗಿ ಸೇರುತ್ತವೆ. ಆದರೆ, ಮನುಷ್ಯನ ಜಗತ್ತು ಅದಿಲ್ಲದೆಯೂ ಸುಮ್ಮನೆ ತೆವಲಿಗಾಗಿ ಕಾಮದ ಸುತ್ತಾ ಗಿರಕಿ ಹೊಡೆಯುತ್ತಿದೆ. ಹಾರ್ಮೋನ್ ನಿಯಂತ್ರಿತ ಜಗತ್ತು ಇದು. ಹಿಂದೆ ದೇವರು- ನೀತಿ- ಸಮಾಜದ ಭಯ ಇತ್ತು. ಇಂದು ನಿರ್ಭಯತೆ ಕೆಟ್ಟ ರೀತಿಯಲ್ಲಿ ಬಂದಿದೆ. ಗಂಡಸರಲ್ಲಿ ನೈತಿಕ ಭಯ ಹೊರಟು ಹೋಗಿದೆ. ಗಂಡಸರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಯೋಚನೆ ಮಾಡದಷ್ಟು ಕೀಳು ಬೌದ್ಧಿಕ ಮಟ್ಟಕ್ಕೆ ಇಳಿದಿದ್ದಾರೆ. ಇಂದಿನ ಪೀಳಿಗೆಗೆ ಕಾಮ- ಪ್ರೇಮದ ಬಗ್ಗೆ ಗೊಂದಲಗಳಿವೆ. ನಾನು ಪ್ರೀತಿ ಬಗ್ಗೆ ಬರೆದರೆ ಅದನ್ನು ಅವರು ಸರಿಯಾಗಿ ಅರ್ಥೈಸಿಕೊಳ್ಳುತ್ತಿಲ್ಲ.Adult rape ಹಾಗಿರಲಿ Child rapeನಡೆಯುತ್ತಾ ಇದೆ. ಭಾವನಾತ್ಮಕವಾಗಿ ಸುಭದ್ರವಾಗಿದ್ದೇವೆ ಅಂದಾಗ ನಮ್ಮ ಸಮಾಜ ಇದಕ್ಕೆ ಯಾವ ರಕ್ಷಣೆ ನೀಡುತ್ತಾ ಬಂದಿದೆ ಎಂಬ ಪ್ರಶ್ನೆ ಕಾಡುತ್ತದೆ. ಒಂದು ಮುಗ್ಧ ಹುಡುಗಿಯ ಪ್ರೀತಿಗೆ ಎಲ್ಲರೂ ಮರ್ಯಾದೆ ನೀಡಬೇಕು. ಆದರೆ ಪ್ರೀತಿಗೆ ಪಾತ್ರನಾದವನೇ ಮರ್ಯಾದೆ ನೀಡುತ್ತಿಲ್ಲ. ಇದು ಕೆಟ್ಟ ಸಮಯ. ಮಾಧ್ಯಮಗಳು, ಸಿನೆಮಾ ಪ್ರೀತಿ ಎಂಬ ಚಿತ್ರಣ ನೀಡ್ತಾ ಇವೆ. ಆಧುನಿಕ ಹೆಂಗಸರು ಎಲ್ಲಾ ರೀತಿಯಲ್ಲೂ ಮುಂದುವರಿದಿದ್ದಾರೆ. ಗಂಡಸರು ಹಿಂದೆ ಇದ್ದಾರೆ.
ಮೂವತ್ತರಲ್ಲಿ ಅರವತ್ತರ ವಯಸ್ಸಿನವರ ಜತೆ ಲವ್ ಅಂತ ಹೇಳಿದ್ದೀರಲ್ಲಾ! ಆಗ, ಈಗ ಯಾರನ್ನಾದರೂ ಪ್ರೀತಿಸುತ್ತಿದ್ದೀರಾ?
ಪ್ರೀತಿ, ವ್ಯಾಖ್ಯಾನ ಪಡೆದುಕೊಳ್ಳೋದು ತುಂಬಾ ಪ್ರೀತಿಸಿರುವಾಗ. ಅದು ದೈಹಿಕವಾಗಿ ದಕ್ಕದೇ ಹೋಗಬಹುದು. ಹೃದಯ, ಪ್ರೀತಿಸಿದೋರನ್ನು ಎಂದಿಗೂ ಮರೆಯುವುದೇ ಇಲ್ಲ. ಎ.ಕೆ. ರಾಮಾನುಜನ್ ಅವರನ್ನು ನಾನು ಎಷ್ಟೊಂದು ಪ್ರೀತಿಸಿದೆ. ಆದರೆ ಅವರೊಂದಿಗೆ ಜೀವನ ಹಂಚಿಕೊಳ್ಳಲಿಲ್ಲ. ಆದರೂ ಅದು ಪ್ರೀತಿಯ ಸಾರ್ಥಕ್ಯ. ಅದಕ್ಕಿಂತ ಹೆಚ್ಚಿನದೇನೂ ಬೇಕಾಗಲಿಲ್ಲ! ಪ್ರೀತಿ ಎಲ್ಲಕ್ಕಿಂತ ಹೊರತಾದುದು, ಲೋಕಾರೂಢಿಗೆ ಭಿನ್ನ ಅಂತಲ್ಲಾ. ಪ್ರೀತಿಸುವಾಗ ಜಟಜಢಛಡಿಜಜ ಡಡಿಛಡಿಜ ್ಟಜಿ ಟ್ಝಟಿಜ ಇರತ್ತೆ. ಆಗ ನಾವೇ ದೇವರಾಗ್ತೇವೆ. ಅದನ್ನೇ ಸೂಫಿಗಳು ಹೇಳ್ತಾರೆ. ಅದನ್ನ ಅರ್ಥಮಾಡಿಕೊಳ್ಳದೇ ಕಟ್ಟಳೆಗಳು, ಚೌಕಟ್ಟುಗಳು, ಮಿತಿಗಳನ್ನು ಹೇರಿದಾಗ ಕೆಲವರಿಗೆ ಪ್ರೀತಿ ಅನುಸಂಧಾನವಾಗುತ್ತದೆ. ಮತ್ತೆ ಕೆಲವರಿಗೆ ಹೋರಾಟ, ಹೊಂದಾಣಿಕೆ ಹೀಗೆ ಆದರೂ ಅದು ಎಲ್ಲವನ್ನು ಮೀರುತ್ತದೆ. ಈ ರೀತಿಯ ಪ್ರತಿಕ್ರಿಯೆ ಞ್ಡಜ್ಜಜಟಜಟಿಡಿಛಟ ಆಗಬಾರದು. 'ನನ್ನ ಪುಸ್ತಕ ಓದಿದೋರು ಇವಳು ಇಷ್ಟೇ' ಅಂತ ಅಂದ್ಕೊಬಾರದು. ಯಾರೇ ಬರೆದಿರುವ ಪುಸ್ತಕ ಓದಿದರೂ ಅವರು ಅಷ್ಟೇ ಅಲ್ಲ. ನನ್ನ ಪುಸ್ತಕ ನನ್ನ ಬದುಕಿನ ಕೆಲವು ಸಂದರ್ಭಗಳ ಚಿತ್ರಣ. ಎಲ್ಲೋ ಒಂಚೂರು ಬರೆಯಲಾಗಿದೆ ಅಷ್ಟೇ. ನನ್ನ ಬದುಕಿನ ಸ್ವಲ್ಪ ಭಾಗದ ಕಥೆ ಅಷ್ಟೇ ಇದು. ಅದಷ್ಟೇ ನನ್ನ ಬದುಕಲ್ಲ!!! ನನ್ನ ಜೀವನಕ್ಕೆ ಸಿಲಬಸ್ ಇಲ್ಲ. ಸಿಲಬಸ್ ಫಾಲೋ ಮಾಡಿ ಜೀವನ ಮಾಡೋದಿಕ್ಕಾಗಲ್ಲ!
ಹದಿನಾಲ್ಕು
ಅಂತೂ ಇಂತೂ ಹದಿನಾಲ್ಕು ಕಳೆದೇ ಹೋಯಿತು. ಕಳೆದ ಹದಿನಾಲ್ಕು ವರ್ಷಗಳಿಂದ ಇರುತ್ತಿದ್ದ ಸಂಭ್ರಮ, ಉಲ್ಲಾಸ ಈ ಹದಿನಾಲ್ಕರಲ್ಲಿರಲಿಲ್ಲ. ಅಂದು ಅವಳ ಸುಳಿವಿಲ್ಲ, ಅವಳ ನಸುನಗುವಿಲ್ಲ, ಅವಳ ಮುದ್ದಾದ ಮಾತಿಲ್ಲ. ಈ ಹದಿನಾಲ್ಕಕ್ಕೆ ಕೇವಲ ಅವಳ ನೆನಪೇ ಉಡುಗೊರೆ. ಅವಳು ಬರುವುದಿಲ್ಲವೆಂದು ಹದಿನಾಲ್ಕು ದಿನ ಮೊದಲೇ ತಿಳಿದಿತ್ತು. ನನ್ನ ಪುಟ್ಟ ತಂಗಿಯ ಕನ್ನಡ ಪುಸ್ತಕದ ಹದಿನಾಲ್ಕನೇ ಪುಟದಲ್ಲಿ ಗುಟ್ಟಾಗಿ ಬಚ್ಚಿಟ್ಟುಕೊಂಡಿದ್ದ ಪತ್ರದ ಆ ಹದಿನಾಲ್ಕು ಸಾಲುಗಳು ನನಗೆ ಎಲ್ಲವನ್ನೂ ಖಚಿತಪಡಿಸಿದ್ದವು. ಅವಳೇನೋ ತನ್ನ ಮನದಲ್ಲಿದ್ದ ಮಾತುಗಳನ್ನು, ತೆಗೆದುಕೊಂಡಿದ್ದ ನಿರ್ಧಾರವನ್ನು ಹದಿನಾಲ್ಕು ಸಾಲುಗಳಲ್ಲಿ ಹೊರಹಾಕಿದ್ದಳು. ಆದರದು ನನಗೆ ಹದಿನಾಲ್ಕು ಯುಗಗಳಿಗೆ ಆಗುವಷ್ಟು ನೋವನ್ನು ತಂದಿತ್ತು. ಅಂದು ಹದಿನಾಲ್ಕು ನಿಮಿಷ ತಡವಾಗಿ ಬಂದ ಬಸ್ಸಿನಲ್ಲಿದ್ದ ಹದಿನಾಲ್ಕು ಪ್ರಯಾಣಿಕರಲ್ಲಿ ಅವಳಿರಲಿಲ್ಲ. ಆದರೂ ಹದಿನಾಲ್ಕು ಕಳೆದಿತ್ತು. ಈ ಹದಿನಾಲ್ಕು ನನ್ನ ಜೀವನದ ದುಃಖದ ಸಂಕೇತವಾಯಿತೇನೊ ಎಂಬಂತೆ ಪತ್ರವನ್ನು ಹದಿನಾಲ್ಕನೇ ಬಾರಿಗೆ ಓದಿ ಅದನ್ನು ಹದಿನಾಲ್ಕು ಚೂರುಗಳನ್ನಾಗಿಸಿದೆ. ಅವಳ ಮದುವೆಗೆ ಇನ್ನು ಹದಿನಾಲ್ಕು ದಿನ ಮಾತ್ರ ಇತ್ತು!
-ತ್ರಿವಿಕ್ರಮ
-ನಳಿನಾ ಡಿ.
nalina200082@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


