ಬೈಟುಕಾಫಿ

ಮುತ್ತುಗ ಮಾತು

ದಟ್ಟ ಕಾಡುಗಳಲ್ಲಿ ಪಾಲಾಶ ಅಥವಾ ಮುತ್ತುಗ ಮರಗಳು ಎಲೆ ಉದುರಿಸಿ ಹೂ ಬಿಟ್ಟು ಅರಳಿದಾಗ ಬೆಂಕಿ ಬಿದ್ದಂತೆಯೇ ತೋರುತ್ತದೆ...

ಮುತ್ತುಗ ಮಾತು
Published On :

ದಟ್ಟ ಕಾಡುಗಳಲ್ಲಿ ಪಾಲಾಶ ಅಥವಾ ಮುತ್ತುಗ ಮರಗಳು ಎಲೆ ಉದುರಿಸಿ ಹೂ ಬಿಟ್ಟು ಅರಳಿದಾಗ ಬೆಂಕಿ ಬಿದ್ದಂತೆಯೇ ತೋರುತ್ತದೆ. ಐದು ಎಸಳುಗಳಿಂದ ಕೂಡಿದ ಈ ಹೂವು ಅತ್ಯಂತ ಸುಂದರ. ಇಂಗ್ಲಿಷ್‌ನಲ್ಲಿ ಇದನ್ನು ಫ್ಲೇಮ್ ಆಫ್ ದಿ ಫಾರೆಸ್ಟ್ ಅಂತಲೇ ಇದಕ್ಕೆ ಹೆಸರು.
ಪಾಲಾಶ ಎಂಬ ಹೆಸರಿನಿಂದ ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಮುತ್ತುಗ 10- 15 ಮೀಟರ್ ಎತ್ತರ ಬೆಳೆಯುವ ಮರ. ಸಂಸ್ಕೃತದಲ್ಲಿ ಇದನ್ನು 'ರಕ್ತ ಪುಷ್ಪಕ' ಅಂತಾರೆ. ಬುಟೆಯಾ ಮೋನೋಸ್ಪರ್ಮ ವೈಜ್ಞಾನಿಕ ಹೆಸರು. ಫಾಬಸಿಯೆ ಫ್ಯಾಮಿಲಿಗೆ ಸೇರಿದ ಮುತ್ತುಗ ದೇಶದ ಎಲ್ಲೆಡೆ ಕಂಡುಬರುತ್ತದೆ. ಫೆಬ್ರವರಿಯಿಂದ ಮಾರ್ಚ್ ಹೂ ಬಿಡುವ ಕಾಲ. ಚಪ್ಪಟೆ ಬೂದಿ ಬಣ್ಣದ ಕಾಯಿಗಳು ಇದರ ಮತ್ತೊಂದು ಆಕರ್ಷಣೆ.
ಮುತ್ತುಗ ಉತ್ತರ ಪ್ರದೇಶದ 'ನಾಡಪುಷ್ಪ'. ಬಂಗಾಳದಲ್ಲಿ ಈ ಮರಗಳು ಹೂ ಬಿಡಲು ಪ್ರಾರಂಭಿಸಿದಾಗ ವಸಂತ ಋತುವಿನ ಪ್ರಾರಂಭದ ಮುನ್ಸೂಚನೆ ಎಂದು ತಿಳಿಯಲಾಗುತ್ತದೆ. ಅಲ್ಲಿ ಬಸಂತ ಪಂಚಮಿ ದಿನದಂದು ಸರಸ್ವತಿ ಪೂಜೆಗೆ ಮುತ್ತುಗದ ಹೂವನ್ನೇ ಬಳಸುತ್ತಾರೆ. ಆಂಧ್ರಪ್ರದೇಶದಲ್ಲಿ ಶಿವರಾತ್ರಿಯಂದು ಶಿವನ ಪೂಜೆಗೆ ಈ ಹೂವಿನಿಂದಲೇ ವಿಶೇಷ ಅರ್ಚನೆ. ಮುತ್ತುಗದ ಮರ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾಗಳಲ್ಲೂ ಕಂಡುಬರುತ್ತದೆ. ಮುತ್ತುಗದ ತೊಗಟೆಯನ್ನು ಅಲ್ಸರ್ ನಿವಾರಣೆಗೆ ಬಳಸುತ್ತಾರೆ. ತೊಗಟೆಯಲ್ಲಿ ಹೆಚ್ಚಿರುವುದು ನಾರೇ. ಟೊಂಗೆಯ ರಸವನ್ನು ಬಟ್ಟೆಗೆ ಬಣ್ಣ ಹಾಕಲು ಬಳಸುತ್ತಾರೆ. ಯಜ್ಞ ಯಾಗಾದಿಗಳಲ್ಲಿ ಸಮಿತ್ತಿಗಾಗಿ ಪಲಾಶ ಕಡ್ಡಿಗಳನ್ನು ಬಳಸಲಾಗುತ್ತದೆ. ಆದ್ದರಿಂದ 'ಬ್ರಹ್ಮ ವೃಕ್ಷ' ಎಂಬ ಹೆಸರೂ ಇದಕ್ಕಿದೆ.
ಮಾರುಕಟ್ಟೆಯಲ್ಲಿ ದೊರೆಯುವ ಊಟದ ಎಲೆಯಿಂದಾಗಿ ಪಾಲಾಶ ಬಹುತೇಕ ಎಲ್ಲರಿಗೂ ಪರಿಚಿತ. ಹಳ್ಳಿಗಳಲ್ಲಿ ಮುತ್ತುಗದ ಎಲೆಗಳನ್ನು ಒತ್ತೊತ್ತಾಗಿ ಹೆಣೆದು ಊಟದ ಎಲೆಯನ್ನು ತಯಾರಿಸಿ ಮಾರೋದು ಮಾಮೂಲಿ. ಹಬ್ಬ ಹರಿದಿನಗಳಲ್ಲಿ ಪ್ರಸಾದ ವಿತರಿಸಲು ಎಲೆಗಳನ್ನು ದೇವಾಲಯಗಳಲ್ಲಿ ವ್ಯಾಪಕವಾಗಿ ಬಳಸುವುದುಂಟು. ಎಳೆಯ ಹೂವುಗಳನ್ನು ಆಹಾರವಾಗಿ ಬಳಸುವ ಮಂದಿ ಮಲೆನಾಡಿನ ಭಾಗದಲ್ಲಿ ಸಿಗುತ್ತಾರೆ. ಮೈ ಕೈ ತುರಿಕೆಗೆ , ಚರ್ಮರೋಗಕ್ಕೆ ಇದರ ಎಳೆ ಹೂವು ರಾಮಬಾಣ. ಎಲೆ ಚಿಗುರಿನ ತಂಬುಳಿಯ ರುಚಿ ಅದ್ಭುತ. ವಾತ ರೋಗ, ಹೊಟ್ಟೆ ನೋವು, ಚರ್ಮರೋಗಗಳಲ್ಲಿ ಇದರ ಪ್ರಯೋಜನವಿದೆ. ಕಾಂಡದಿಂದ ಸುರಿಯುವ ಅಂಟು ಕೂಡ ಔಷಧವಾಗಿ ಬಳಕೆಯಾಗುವಂಥದ್ದು.
ಎಳೆಯ ಎಲೆಯನ್ನು ಮಜ್ಜಿಗೆಯಲ್ಲಿ ಅರೆದು ಕುಡಿಸಿದರೆ ಮೂಲವ್ಯಾಧಿ ಮಾಯ. ಮುತ್ತುಗ ಬೇರಿನ ರಸ ಕಣ್ಣಿನ ರೋಗಗಳಲ್ಲಿ ಪ್ರಯೋಗಿಸುತ್ತಾರೆ. ಬಲಿತ ಬೀಜದ ಪುಡಿಯಿಂದ ಹೊಟ್ಟೆ ಹುಳು ನಿವಾರಣೆ ಸಾಧ್ಯ. ಒಣ  ಹವೆಯ ಬಂಜರು ಪ್ರದೇಶದಲ್ಲಿಯೂ ಮುತ್ತುಗ ಸಮೃದ್ಧವಾಗಿ ಬೆಳೆಯುವುದು ಮತ್ತೊಂದು ವಿಶೇಷ.

-ರಮೇಶ್ ಕೈಂತಜೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.