ಮಾಬಿಗೆ
ಈ ಗ್ರಾಮ ಇಂದು ನೂರಕ್ಕೆ ನೂರು ವೃದ್ಧಾಶ್ರಮವಾಗಿಯೇ ಬದಲಾಗಿದೆ!

ವನದೇವಿ 250 ಎಕರೆ ವಿಸ್ತೀರ್ಣದ ಈ ಊರಿಗೆ ಹಸಿರ ಹೊದಿಕೆ ಹಾಸಿದ್ದಾಳೆ; ಇದನ್ನು ಸವಿಯುವ ಕಣ್ಣುಗಳಿಗೆ ಚಾಳೀಸು ಕವಿದಿದೆ. ಆಕರ್ಷಕ ಅಡಕೆ ಮರಗಳ ಚಾವಣಿ ಇದೆ; ಅಷ್ಟೆತ್ತರಕ್ಕೇರುವ ಕಸುವು ಯಾರಿಗೂ ಉಳಿದಿಲ್ಲ. ನೂರು ಮಂದಿ ಬಂದರೂ ಒಟ್ಟಿಗೆ ಕುಳಿತು ಊಟ ಮಾಡಿ ಹರಟೆ ಹೊಡೆಯುವಂತಹ ಅಂಗಳವಿದೆ; ಬರುವವರೇ ಇಲ್ಲ. ಇದ್ದ ಹುಡುಗರು ಊರು ತೊರೆದಿದ್ದಾರೆ. ಹತ್ತಾರು ತಂಡಗಳು ಒಟ್ಟಿಗೆ ಚಿನ್ನಿ ದಾಂಡು ಆಡಿದರೂ ಮುಗಿಯದ ವಿಷಾಲ ಗದ್ದೆ ಬಯವಿದೆ; ಆಡುವ ಮನಸು, ವಯಸು ಇಲ್ಲಿನವರಿಗಿಲ್ಲ. ಹೌದು, ಈ ಊರಿನಲ್ಲಿ ಒಟ್ಟು 80 ಕುಟುಂಬಗಳು ನೆಲೆಸಿವೆ. ಎಲ್ಲರೂ ವೃದ್ಧರೇ. ಹುಡುಕಿದರೂ ಒಬ್ಬ ಜವ್ವನಿಗ ಕಾಣ ಸಿಗನು!
ಹಳ್ಳಿಗಳು ವೃದ್ಧಾಶ್ರಮವಾಗಿ ಬದಲಾಗುತ್ತಿರುವುದು ಇವತ್ತು ನಿನ್ನೆಯ ಸಂಗತಿಯಲ್ಲ. ಅದು ಇತ್ತೀಚಿನವರೆಗೂ ಕೇವಲ ಸಾಂಕೇತಿಕ ಮಾತಾಗಿತ್ತು. ಆದರೆ ಈ ಗ್ರಾಮ ಇಂದು ನೂರಕ್ಕೆ ನೂರು ವೃದ್ಧಾಶ್ರಮವಾಗಿಯೇ ಬದಲಾಗಿದೆ! ಆಧುನಿಕ ಯುಗದ ದುರಂತಕ್ಕೆ ಇದಕ್ಕಿಂಥ ಸಾಕ್ಷಿ ಬೇಕೇ? ಯಾಂತ್ರಿಕ ಬದುಕಲ್ಲಿ ಕಳಚಿದ ಸಂಬಂಧಗಳ ಕೊಂಡಿಗೆ ಇನ್ಯಾವ ಪುರಾವೆ ಸಿಕ್ಕೀತು?
ಆ ಊರಿನ ಹೆಸರು 'ಮಾಬಿಗೆ'.
'ಮಾಬಿಗೆ'ಯ ಯುವಕರು ಉದ್ಯೋಗ ಅರಸಿ ಶಹರದತ್ತ ಮುಖ ಮಾಡಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ಉಳಿದಿರುವವರು ವೃದ್ಧರು ಮಾತ್ರ. ಇನ್ನು ಶಹರದಲ್ಲಿ ನಿವೃತ್ತಿ ಹೊಂದಿದವರು ಮಾತ್ರ ಮತ್ತೆ ಹಳ್ಳಿಗಳತ್ತ ಮುಖಮಾಡುವವರು. ಹವ್ಯಾಸಿ ಕೃಷಿಯತ್ತ ಆಸಕ್ತಿ ಹೊಂದಿ ಅಥವಾ ಪರ್ಯಾಯ ಬದುಕಿನ ಹಾದಿಯಲ್ಲಿ ಗ್ರಾಮಗಳತ್ತ ನಿವೃತ್ತರು ಹೆಜ್ಜೆ ಹಾಕುತ್ತಲಿದ್ದಾರೆ. ಎಲ್ಲ ಹಳ್ಳಿಗಳ ಕಥೆಯೂ ಇದೇ ಆಗಿದ್ದರೂ 'ಮಾಬಿಗೆ' ಗ್ರಾಮ ಇಂಥ ಎಲ್ಲ ಹಳ್ಳಿಗಳ ಪ್ರತಿನಿಧಿಯಾಗಿ ನಿಂತಿದೆ.
ಈ ಊರಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಶಿರಸಿಯಿಂದ 45 ಕಿ.ಮೀ, ಕುಮಟಾದಿಂದ 48 ಕಿ.ಮೀ., ಅಂಕೋಲಾದಿಂದ 46 ಕಿ.ಮೀ., ಯಲ್ಲಾಪುರದಿಂದ 60 ಕಿ.ಮೀ. ಅಂತರದಲ್ಲಿರುವ 'ಮಾಬಿಗೆ' ಅಕ್ಷರಶಃ ವೃದ್ಧಧಾಮ. ನಾಲ್ಕು ತಾಲೂಕುಗಳ ಕೊಂಡಿಯಾಗಿರುವ ಈ ಗ್ರಾಮ ಅಂಕೋಲಾ ವ್ಯಾಪ್ತಿಗೆ ಸೇರಿದರೂ ಅಲ್ಲಿನ ಜನತೆಯ ವ್ಯವಹಾರಗಳು ಕುದುರುವದು ಯಲ್ಲಾಪುರದಲ್ಲಿ.
ಶತಮಾನಗಳ ಇತಿಹಾಸ ಹೊಂದಿದ ಕರಿವಕ್ಕಲಿಗ ಜನಾಂಗದವರು ಇಲ್ಲಿ ಅಧಿಕವಾಗಿದ್ದಾರೆ. ಅನಕ್ಷರಸ್ಥರ ನಡುವೆ ಅಕ್ಷರಸ್ಥರೂ ಕಾಣಬರುತ್ತಾರೆ. ಇತ್ತೀಚೆಗೆ ಹುಟ್ಟಿಕೊಂಡಿರುವ ಸ್ತ್ರೀ ಶಕ್ತಿ ಸಂಘ ಶಿಕ್ಷಣಕ್ಕೂ ಮಹತ್ವ ನೀಡಿದೆ ಎನ್ನುತ್ತಾರೆ ಮಾಬಿಗೆಯ ಮಾದೇವಿ.
ಮಾಬಿಗೆ ಗ್ರಾಮಸ್ಥರು ತಮಗೆ ಬೇಕಾದ ತರಕಾರಿ, ಕಾಯಿಪಲ್ಲೆಗಳನ್ನು ಸ್ವತಃ ಬೆಳೆದುಕೊಳ್ಳುತ್ತಾರೆ. ಇಲ್ಲಿ ಮಧ್ಯಮ ವರ್ಗದವರೇ ಅಧಿಕ. ಈ ಗ್ರಾಮದ ಕೆಲವೆಡೆ ಕರೆಂಟ್ ಕೂಡ ಬಂದಿಲ್ಲ. ಮಾಬಿಗೆಯ ಪ್ರತಿ ಮನೆಯಲ್ಲಿಯೂ ಎರಡೆರಡು ನಾಯಿಗಳಿವೆ. ತೋಟಗಳಿಗೆ ನುಗ್ಗಿ ಪಸಲು ನಾಶ ಮಾಡುವ ಕೋತಿಗಳ ಕಾಟಕ್ಕೆ ಕಡಿವಾಣ ಹಾಕಲು ಇವು ಸಹಕಾರಿ. ಕೊಟ್ಟಿಗೆಯಲ್ಲಿ ಆಕಳು, ಎಮ್ಮೆಗಳಿವೆ. ಇವು ಪ್ರತಿದಿನ ಹಾಲು ನೀಡುವ ಕಾಮಧೇನುಗಳು. ಸುತ್ತಲೂ ದಟ್ಟ ಕಾಡನ್ನು ಹೊಂದಿದ ಗ್ರಾಮಕ್ಕೆ ಕಾಡು ಪ್ರಾಣಿಗಳ ಆಗಮನವೂ ಆಗುತ್ತದೆ. ಕಾಡುಹಂದಿ, ಹುಲಿ, ಮೊಲ ಇಲ್ಲಿ ಸದಾ ಕಾಣಬರುತ್ತವೆ. ಆದರೆ ಇದುವರೆಗೆ ಕಾಡು ಪ್ರಾಣಿಗಳಿಂದ ಯಾವುದೇ ಹಾನಿ ಉಂಟಾಗಿಲ್ಲ ಎನ್ನುವುದು ಇನ್ನೊಂದು ವಿಶೇಷ. ಅದೆಷ್ಟೋ ಕುಟುಂಬಗಳಿಗೆ ಮಕ್ಕಳ ಕೊರತೆಯನ್ನು ಇಲ್ಲಿನ ಪ್ರಾಣಿಗಳೇ ನೀಗಿಸುತ್ತವೆ.
ಕೃಷಿ ಕಾಯಕದಲ್ಲಿ ಮಾನಸಿಕ ನೆಮ್ಮದಿಯಿದ್ದರೂ ಆರ್ಥಿಕ ಅಭಿವೃದ್ಧಿ, ಸದೃಢವಾಗಲು ಅಧಿಕ ಪರಿಶ್ರಮ ಅಗತ್ಯ. ನಾವು ಪಟ್ಟ ಕಷ್ಟ ನಮ್ಮ ಮುಂದಿನ ತಲೆಮಾರಿಗೆ ಬಾರದಿರಲಿ ಎಂದು ಮಕ್ಕಳ ಯಾಂತ್ರಿಕ ಬದುಕಿಗೆ ಒಪ್ಪಿಕೊಂಡಿರುವುದಾಗಿ ಹೇಳುತ್ತಾರೆ ಓಮಿಗೌಡ.
-ಅಚ್ಯುತಕುಮಾರ ಯಲ್ಲಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


