1000 ಕನಸು

ಬಹುಶಃ ಆ ಕಂಗಾಲು ಅವರಿಗೂ ಕಾಡಿದೆ. ಬರಡಾಗುವ ಆತಂಕದಿಂದ ಬಿಕ್ಕಳಿಸುತ್ತಿರುವ ಪಶ್ಚಿಮಘಟ್ಟ. ಪ್ರಾಣಿ- ಪಕ್ಷಿಗಳ ಹಸಿವಿನಿ ಚೀರಾಟ. ರೈತರ ನೂರೆಂಟು ಸಮಸ್ಯೆ... ಇವಕ್ಕೆಲ್ಲ ಪರಿಹಾರ ಬೇಕಲ್ಲವೇ? ಶಿವಮೊಗ್ಗ ಜಿಲ್ಲೆಯ ನಗರದ ಬಾಯಾರ್ ಫೌಂಡೇಷನ್‌ಗೂ ಹಾಗೆಯೇ ಅನ್ನಿಸಿದೆ.
ಈ ಎಲ್ಲ ಸಮಸ್ಯೆಗೆ ಪರಿಹಾರವಾಗಿದ್ದು ಹಲಸು. ಮಹತ್ವದ ಆಶಯದೊಂದಿಗೆ ಪರಿಸರ ಕಾಳಜಿಯನ್ನೂ ಬೆರೆಸಿ, 1000 ಹಲಸಿನ ಗಿಡಗಳನ್ನು ನೆಡುವ ಹೊಂಗನಸು ಈ ಬಾಯಾರ್ ಬಳಗದ್ದು. ರಾಜ್ಯದಲ್ಲಿ ಹಬ್ಬಿದ 320 ಕಿ.ಮೀ. ಉದ್ದದ ಪಶ್ಚಿಮಘಟ್ಟ ಪ್ರದೇಶದ ತಪ್ಪಲಲ್ಲಿ 'ಹಸಿರು ಹಲಸಿನ ಚಾವಡಿ' ನಿರ್ಮಿಸುವ ಮಹಾಯೋಜನೆ ಇವರದ್ದು.
ಏಕೆ ಈ ನಿರ್ಧಾರ?
ಆಗುಂಬೆ, ಬಾಳೆಬರೆ, ಕೊಲ್ಲೂರು ಘಾಟ್ ಮತ್ತಿತರೆ ಪ್ರದೇಶಗಳಲ್ಲಿ ಮಂಗಗಳ ದಾಳಿ ಮಾಮೂಲಿ. ಹೆಸರಿಗೆ ಮಾತ್ರ ಹಸಿರಿರುವ ಕಾಡಿನಲ್ಲಿ ತಿನ್ನಲು ಹಣ್ಣುಹಂಪಲು ಸಿಗದ ಕಾರಣ ಹಸಿವು ನೀಗಿಸಿಕೊಳ್ಳಲು ಪ್ರಾಣಿ ಪಕ್ಷಿಗಳು ರೈತರ ಜಮೀನು, ಹೊಲಗದ್ದೆಗೆ ನುಗ್ಗಿ ದಾಂಧಲೆ ನಡೆಸುತ್ತವೆ. ಏಕಜಾತಿಯ ನೆಡುತೋಪುಗಳಿಂದ ಯಾವುದೇ ಪ್ರಯೋಜವೂ ಇಲ್ಲ. ತ್ವರಿತ ಲಾಭದ ಐಷಾರಾಮಿ ಬದುಕಿಗೆ ಕಾಡು ನಾಶವಾಗುತ್ತಿದೆ. ನೈಸರ್ಗಿಕ ಸಸ್ಯಗಳನ್ನು ಬೆಳೆಸುವ ಆಶಯ ಸಂಸ್ಥೆಯದ್ದಾಗಿದ್ದು, ಇವಕ್ಕೆಲ್ಲ ಸಣ್ಣ ಪರಿಹಾರದ ಪ್ರಯತ್ನ ಎಂಬಂತೆ ಸರ್ವಋತು ಹಲಸು ಬೆಳೆಸಲು ಒತ್ತು ನೀಡಿದೆ.
ಎಲ್ಲಿಂದ ಶುರು?
ಆರಂಭದಲ್ಲಿ ನಗರದ ಚಿಕ್ಕಪೇಟಯ ಪಂಚಮುಖಿ ದೇಗುಲದಿಂದ ಕೊಲ್ಲೂರು ಘಾಟ್‌ನ ನಾಗೋಡಿವರೆಗಿನ 30 ಕಿ.ಮೀ. ಉದ್ದದ ರಸ್ತೆಯ ಇಕ್ಕೆಲದಲ್ಲಿ ಸಾವಿರ ಹಲಸು ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಪರಿಸರ ಪ್ರೇಮಿಗಳಾದ ಕಿರುಗುಳಿಗೆ ಸತ್ಯನಾರಾಯಣರಾವ್, ಬೈಸೆ ತಿಮ್ಮಪ್ಪಗೌಡರಿಂದ ಗಿಡ ನೆಡಿಸುವ ಮೂಲಕ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಲಾಗಿದೆ.
ಹಲಸೇ ಏಕೆ?
ವರ್ಷಪೂರ್ತಿ ಹಣ್ಣು ಬಿಡುವ ಹಲಸನ್ನು ಐದು ವರ್ಷ ಪೋಷಿಸಿ, ಸಂರಕ್ಷಿಸಿದರೆ ಸುಮಾರು 500 ವರ್ಷಗಳ ವರೆಗೆ ಫಲ ನೀಡುತ್ತವೆ. ಇದರ ಒಣಗಿದ ಎಲೆಗಳು ಜಾನುವಾರುಗಳಿಗೆ ಉತ್ತಮ ಮೇವು. ಅಧಿಕ ಪ್ರಮಾಣದ ಆಮ್ಲಜನಕ ಬಿಡುಗಡೆ ಮಾಡುವ ಕೆಲವೇ ಸಸ್ಯಗಳಲ್ಲಿ ಹಲಸೂ ಒಂದು. ಇದಕ್ಕೆ ಅತಿವೃಷ್ಟಿ, ಅನಾವೃಷ್ಟಿ ಭೀತಿಯಿಲ್ಲ. ರಾಸಾಯನಿಕ, ಕೀಟನಾಶಕ, ಶಿಲೀಂಧ್ರನಾಶಕ, ರಸಗೊಬ್ಬರದ ಅಗತ್ಯವೂ ಇಲ್ಲ. ಮಲೆನಾಡಿದಲ್ಲಿ ಹುಲುಸಾಗಿ ಬೆಳೆಯುವ ಸಸ್ಯ. ಮರ ಸತ್ತರೂ ಬೆಲೆ ಬಾಳುತ್ತದೆ. ಇದರ ಬೇರು, ಕಾಂಡ, ರೆಂಬೆಕೊಂಬೆಗಳು ಮರದ ಕೆತ್ತನೆಗೆ ಉತ್ತಮ.
ನಿರ್ವಹಣೆ ಹೇಗೆ?
ವಾತಾವರಣ ಹಸಿರಾಗಿಸುವ, ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸುವ, ಅಲ್ಲದೆ ಉತ್ತಮ ಪರಿಸರಕ್ಕೆ ಹಲವು ಕೊಡುಗೆ ನೀಡುವ ವರ್ಷಋತು ಹಲಸು ಬೆಳೆಸಲು ಪರಿಸರಾಸಕ್ತರೂ ಕೈಜೋಡಿಸಬಹುದು. 'ಹಸಿರು ಹಲಸಿನ ಚಾವಡಿ' ನಿರ್ಮಾಣಕ್ಕೆ ಕೈಜೋಡಿಸುವವರು 9480566790, 9449501972ಕ್ಕೆ ಸಂಪರ್ಕಿಸಬಹುದು.
- ರವಿ ಬಿದನೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


